ಗುರುವಾರ , ಜುಲೈ 7, 2022
23 °C

ಪುಸ್ತಕ ವಿಮರ್ಶೆ: ಗಾಂಧಿ ಹಾದಿಯಲ್ಲಿ ದಣಿವರಿಯದ ಪಯಣ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Prajavani

‘ಗಾಂಧಿ ಮಹಾತ್ಮರಾದುದು: ದಕ್ಷಿಣ ಆಫ್ರಿಕಾ ದಿನಗಳು’ ಹಾಗೂ ‘ಬಾ‍ಪೂ ನಂತರದ ಭಾರತ’ ಸಂಪುಟಗಳ ಖ್ಯಾತಿಯ ರಾಮಚಂದ್ರ ಗುಹ ಅವರ ‘ಗಾಂಧಿಧ್ಯಾನ’ದ ಹೊಸ ಕೃತಿ – ‘ಗಾಂಧಿ: ಪ್ರಪಂಚವನ್ನು ಬದಲಾಯಿಸಿದ ಆ ವರ್ಷಗಳು, 1914–1948’. ಎರಡು ಸಂಪುಟಗಳಲ್ಲಿನ ಈ ಬಾಪೂ ಕಥನ, ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಗಾಂಧಿ ಮರಳಿದ ದಿನದಿಂದ ಅವರ ಬದುಕಿನ ಕೊನೆಯವರೆಗಿನ ಕಥನವನ್ನು ಒಳಗೊಂಡಿದೆ. 

ಭಾರತದ ಸ್ವಾತಂತ್ರ್ಯ ಚಳವಳಿಯ ನಿರ್ಣಾಯಕ ಘಟ್ಟದ ಚರಿತ್ರೆಯೊಂದಿಗೆ ಪ್ರತ್ಯೇಕವಾಗಿ ನೋಡಲು ಸಾಧ್ಯವಾಗದ ಗಾಂಧಿಯ ಬದುಕಿನ ಕಥೆ ಈ ಕೃತಿಗಳಲ್ಲಿದೆ. ಸ್ವಾತಂತ್ರ್ಯ–ಸ್ವರಾಜ್ಯದ ಸಾಧನೆಯೊಂದಿಗೆ, ಜಡಗಟ್ಟಿದ ಸಮಾಜದಲ್ಲಿ ಚಲನೆಯುಂಟು ಮಾಡಲು ಗಾಂಧೀಜಿ ನಡೆಸಿದ ಮಾನವೀಯ–ನೈತಿಕ ಪ್ರಯತ್ನ–ಪ್ರಯೋಗಗಳು ಗುಹ ಅವರ ಆಸಕ್ತಿಯ ಕೇಂದ್ರವಾಗಿವೆ. ಸ್ವಾತಂತ್ರ್ಯ ಚಳವಳಿಯಲ್ಲಿ ವಿದ್ಯಾರ್ಥಿಗಳು ಹಾಗೂ ಮಹಿಳೆಯರನ್ನು ಗಣನೀಯ ಸಂಖ್ಯೆಯಲ್ಲಿ ತೊಡಗಿಸುವ ಮೂಲಕ ಚಳವಳಿಗೆ ವ್ಯಾಪಕತೆಯನ್ನು ತಂದುಕೊಟ್ಟ ಗಾಂಧೀಜಿ, ರಾಜಕೀಯ ಚಲನೆಯ ಜೊತೆಜೊತೆಯಲ್ಲಿಯೇ ಭಾರತೀಯ ಸಮಾಜದಲ್ಲಿನ ತರತಮಗಳ ನಿವಾರಣೆಯೂ ಆಗಬೇಕೆಂದು ಶ್ರಮಿಸಿದವರು. ಹಿಂದೂ–ಮುಸಲ್ಮಾನರನ್ನು ಒಟ್ಟಿಗೆ ಕರೆದೊಯ್ಯಲು ಹಾಗೂ ಅಸ್ಪೃಶ್ಯರನ್ನು ಸಮಾಜದ ಮುಖ್ಯವಾಹಿನಿಯೊಂದಿಗೆ ಉಳಿಸಿಕೊಳ್ಳಲು ಅವರು ನಡೆಸಿದ ಪ್ರಯತ್ನಗಳ ಯಶಸ್ಸು ಹಾಗೂ ವೈಫಲ್ಯ ಎರಡರ ವಿಶ್ಲೇಷಣೆಗೂ ಈ ಕೃತಿಗಳು ಒತ್ತು ನೀಡಿವೆ. 

ಗುಹ ಅವರ ನಿರೂಪಣೆ ಗಾಂಧಿಯ ಗೆಲುವಿನ ಕಥನವಷ್ಟೇ ಆಗಿಲ್ಲ, ಗಾಂಧಿ ಮತ್ತು ಅವರು ನೆಚ್ಚಿದ್ದ ತತ್ವಗಳ ಸೋಲಿನ ಕಥನವೂ ಆಗಿದೆ. ಗಾಂಧಿ ಬದುಕನ್ನು ನಿರೂಪಿಸುತ್ತಲೇ, ಅವಕಾಶ ಸಿಕ್ಕಾಗಲೆಲ್ಲ ಮಹಾತ್ಮನ ನಡವಳಿಕೆಗಳ ಬಗ್ಗೆ ಗುಹ ಅವರು ತಮ್ಮ ವಿಮರ್ಶಾತ್ಮಕ ಅಭಿಪ್ರಾಯವನ್ನೂ ದಾಖಲಿಸಿದ್ದಾರೆ. ಗಾಂಧಿಯ ಬಗೆಗಿನ ತಪ್ಪುಕಲ್ಪನೆಗಳನ್ನು ನಿವಾರಿಸುವ ಸಂದರ್ಭದಲ್ಲಿ ಮಹಾತ್ಮನ ವಕ್ತಾರರ ಉತ್ಸಾಹ ಮೈದುಂಬಿಕೊಳ್ಳುವ ಅವರು, ಉಳಿದಂತೆ ತಾವು ಬಹುವಾಗಿ ಮೆಚ್ಚುವ ವ್ಯಕ್ತಿತ್ವವನ್ನು ವಿಮರ್ಶಿಸುವ ಸಾಧ್ಯತೆಯನ್ನು ಬಿಟ್ಟುಕೊಟ್ಟಿಲ್ಲ. ಆ ಕಾರಣದಿಂದಾಗಿಯೇ ಈ ಕೃತಿಗೆ ವಿಶಿಷ್ಟವಾದ ವಸ್ತುನಿಷ್ಠತೆ ಲಭ್ಯವಾಗಿದೆ. ಗಾಂಧಿಯನ್ನು ವಿಮರ್ಶಿಸುವ ಸಂದರ್ಭದಲ್ಲೂ ಬಾಪೂ ಎನ್ನುವ ವ್ಯಕ್ತಿತ್ವ ಎಲ್ಲ ಅಳತೆಗೋಲುಗಳನ್ನು ಮೀರಿದ ಒಂದು ವಿಶಿಷ್ಟ ವಿದ್ಯಮಾನ ಎನ್ನುವ ಅರಿವು ಲೇಖಕರಿಗಿದೆ. ಈ ಅರಿವಿಗೆ, ‘ಗಾಂಧಿ ಪ್ರಪಂಚವನ್ನು ಬದಲಿಸಿದ ಆ ವರ್ಷಗಳು’ ಶೀರ್ಷಿಕೆಯನ್ನೇ ಉದಾಹರಣೆಯಾಗಿ ಗಮನಿಸಬಹುದು. ಗಾಂಧಿಯನ್ನು ಅವರ ಮಿತಿಗಳೊಂದಿಗೇ ಅರ್ಥ ಮಾಡಿಕೊಳ್ಳುವ, ಒಪ್ಪುವ ಇಲ್ಲವೇ ಚರ್ಚಿಸುವ ‘ಗುಹ ವಿಧಾನ’ ಮಹಾತ್ಮನನ್ನು ಓದುಗರಿಗೆ ಇನ್ನಷ್ಟು ಆತ್ಮೀಯವಾಗಿಸುವ ಬಗೆಯೂ ಆಗಿದೆ.

ಗಾಂಧಿಯನ್ನು ಮಹಾತ್ಮನ ಚೌಕಟ್ಟಿನಲ್ಲಿ ವಿಶ್ಲೇಷಿಸುವ ಈ ಕಥನ, ಗಾಂಧಿಯನ್ನು ‘ಮಹಾತ್ಮ’ನನ್ನಾಗಿ ಉಳಿಸಿಕೊಳ್ಳಲಿಕ್ಕಾಗಿ ಅವರ ಸಹಚರರು ಪಟ್ಟ ಪಡಿಪಾಟಲುಗಳನ್ನೂ ವಿಶದವಾಗಿ ದಾಖಲಿಸಿದೆ. ಕಸ್ತೂರ್‌ ಬಾ, ಮಹದೇವ ದೇಸಾಯಿ, ರಾಜಾಜಿ, ಮೀರಾ ಬೆನ್‌, ಸಿ.ಎಫ್‌. ಆ್ಯಂಡ್ರೂಸ್‌, ರವೀಂದ್ರನಾಥ ಟ್ಯಾಗೋರ್ ಮೊದಲಾದವರು ಗಾಂಧಿಯ ಆಪ್ತವಲಯದವರಷ್ಟೇ ಆಗಿರಲಿಲ್ಲ, ಆತ್ಮಸಾಕ್ಷಿಯ ರೂಪದಲ್ಲೂ ಗಾಂಧಿಯನ್ನು ಸ್ವವಿಮರ್ಶೆಗೆ ಒಡ್ಡಬಲ್ಲ ಶಕ್ತಿಗಳಾಗಿದ್ದರು. ತಾನೊಬ್ಬ ಪರಿವರ್ತಿತ ಅಸ್ಪೃಶ್ಯ ಎಂದು ಗಾಂಧಿ ಹೇಳಿಕೊಳ್ಳುವಂತಾಗಲು, ಅಸ್ಪೃಶ್ಯರ ಸಂಕಟಗಳಿಗೆ ಅವರು ಸ್ಪಂದಿಸುವಂತಾಗಲು ಆ್ಯಂಡ್ರೂಸ್‌ ಅವರ ಒತ್ತಾಸೆಯೊಂದಿಗೆ, ಅಂಬೇಡ್ಕರ್‌ ಅವರೊಂದಿಗಿನ ತಾತ್ವಿಕ ಸಂಘರ್ಷವೂ ಪ್ರಮುಖ ಕಾರಣ. ಸರಳಾದೇವಿ ಚೌಧುರಾಣಿ ಅವರೊಂದಿಗೆ ಗಾಂಧೀಜಿ ಹೊಂದಿದ್ದ ಮಾನಸಿಕ ಸಾಮೀಪ್ಯ ಅವರ ಸಾರ್ವಜನಿಕ ವರ್ಚಸ್ಸಿಗೆ ಧಕ್ಕೆಯುಂಟು ಮಾಡಬಹುದೆನ್ನುವ ಆತಂಕದಿಂದ, ತಮ್ಮ ಪ್ರಶ್ನಾತೀತ ನಾಯಕನೊಂದಿಗೆ ನಿರ್ದಾಕ್ಷಿಣ್ಯವಾಗಿ ನಡೆದುಕೊಳ್ಳಲು ರಾಜಾಜಿ ಮತ್ತು ಮಹದೇವ ದೇಸಾಯಿ ಹಿಂಜರಿಯಲಿಲ್ಲ. ಈ ಇಬ್ಬರು ಮಹನೀಯರಿಗೆ, ಸ್ವಾತಂತ್ರ್ಯ ಚಳವಳಿ ಮತ್ತು ಸತ್ಯದೊಂದಿಗಿನ ಪ್ರಯೋಗದಲ್ಲಿ ತೊಡಗಿಕೊಳ್ಳುವಲ್ಲಿ ಗಾಂಧೀಜಿ ಅವರ ಮನಸ್ಸು ವಿಚಲಿತವಾಗದಂತೆ ನೋಡಿಕೊಂಡ ಶ್ರೇಯಸ್ಸು ಸಲ್ಲಬೇಕು. ಅಂದರೆ, ಗಾಂಧೀಜಿ ‘ಮಹಾತ್ಮ’ ಎನ್ನಿಸಿಕೊಂಡ ಪ್ರಕ್ರಿಯೆ ವೈಯಕ್ತಿಕ ಸಾಧನೆಯಷ್ಟೇ ಆಗಿರಲಿಲ್ಲ; ಅದು ಸಂಘಟಿತ ಪ್ರಯತ್ನವೂ ಆಗಿತ್ತು. ಬಾಪೂ ಮಹಾತ್ಮನಾದುದು ಕಾಲಘಟ್ಟವೊಂದರ ಹಂಬಲವೂ ಆಗಿತ್ತು ಎನ್ನುವುದನ್ನು ಗುಹ ಬಹು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ತಮ್ಮ ನಿರೂಪಣೆ–ವಿಶ್ಲೇಷಣೆ ಭಾವುಕ ನೆಲೆಗಟ್ಟಿನಲ್ಲಿರದೆ, ಚಾರಿತ್ರಿಕ ಸತ್ಯಗಳನ್ನು ಆಧರಿಸಿರಬೇಕು ಎನ್ನುವ ಎಚ್ಚರ ಅವರಿಗಿದೆ. ಪ್ರತಿ ಪುಟದಲ್ಲೂ ಅವರು ಉಲ್ಲೇಖಿಸಿರುವ ದಾಖಲೆಗಳು ‘ಗಾಂಧಿ ಕಥನ’ದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿವೆ ಹಾಗೂ ಚರಿತ್ರೆಯನ್ನು ಕಟ್ಟಬೇಕಾದ ಸರಿಯಾದ ಮಾದರಿಯನ್ನು ನಮ್ಮ ಮುಂದಿರಿಸಿವೆ. 

ಗುಹ ಅವರ ಈ ಎರಡು ಸಂಪುಟಗಳ ವಿಶೇಷ ಇರುವುದು, ಗಾಂಧಿ ಅವರ ಪತ್ರಸಂಗ್ರಹವನ್ನು ಬಳಸಿಕೊಂಡಿರುವುದರಲ್ಲಿ. ಈ ಮೊದಲಿನ ಚರಿತ್ರಕಾರರು ಗಾಂಧಿ ಜೀವನಚರಿತ್ರೆಯನ್ನು ಕಟ್ಟಲು ‘ಕಲೆಕ್ಟೆಡ್‌ ವರ್ಕ್ಸ್‌’ನ 97 ಸಂಪುಟಗಳಿಗೆ ಋಣಿಯಾಗಿದ್ದಾರೆ. ಗುಹ ಅವರು ಆ ಸಂಗ್ರಹಗಳ ಜೊತೆಗೆ, ಪ್ಯಾರೇಲಾಲ್‌ ನಯ್ಯರ್‌ ಅವರು ಸಂಗ್ರಹಿಸಿದ್ದ, ಈಗ ‘ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ’ದ ಭಾಗವಾಗಿರುವ ಗಾಂಧೀಜಿಯವರ ಪತ್ರ ವ್ಯವಹಾರದ ಬಹುದೊಡ್ಡ ಸಂಗ್ರಹ ಬಳಸಿಕೊಂಡಿದ್ದಾರೆ. ಆ ಸಂಗ್ರಹವನ್ನು ಬಳಸಿಕೊಂಡ ‘ಮೊದಲ ಗಾಂಧಿ ಚರಿತ್ರಕಾರ’ ಎಂದು ಗುಹ ತಮ್ಮನ್ನು ಕರೆದುಕೊಂಡಿರುವುದಕ್ಕೆ ಸಾಕ್ಷ್ಯಗಳು ಕೃತಿಯುದ್ದಕ್ಕೂ ಇವೆ.

ಗುಹ ಅವರ ಈ ಸಂಪುಟಗಳು ನಾವು ಈಗಾಗಲೇ ಅರಿತಿರುವ ಗಾಂಧಿಯನ್ನು ಮತ್ತಷ್ಟು ಆಳವಾಗಿ ಅರ್ಥೈಸಿಕೊಳ್ಳಲು ನೆರವು ನೀಡುತ್ತವೆ. ವ್ಯಕ್ತಿಯಾಗಿ ಮಾತ್ರವಲ್ಲದೆ, ಮೌಲ್ಯಗಳ ಸಂಘರ್ಷದ ರೂಪದಲ್ಲಿ ಚಿತ್ರಣಗೊಂಡಿರುವ ಈ ಕೃತಿ, ಗಾಂಧಿ ಕಥನದ ಜೊತೆಗೆ ಭಾರತದ ಸ್ವಾತಂತ್ರ್ಯ ಚಳವಳಿ ಗಳಿಸಿದ್ದು ಹಾಗೂ ಬಿಟ್ಟುಕೊಟ್ಟಿದ್ದರ ವಿಶ್ಲೇಷಣೆಯೂ ಆಗಿದೆ. ಅಸಂಖ್ಯ ಜನರ ತ್ಯಾಗ–ಬಲಿದಾನದ ಸ್ವಾತಂತ್ರ್ಯ ಚಳವಳಿ ವೈಯಕ್ತಿಕ ಹಿತಾಸಕ್ತಿಗಳ ಹೋರಾಟವೂ ಆಗಿದ್ದುದನ್ನು ಕೃತಿ ಕಾಣಿಸುತ್ತದೆ. ಸ್ವಾತಂತ್ರ್ಯ ಚಳವಳಿಯೊಂದಿಗೆ ಸತ್ಯ–ಅಹಿಂಸೆಯ ಮೌಲ್ಯಗಳನ್ನು ಕಸಿ ಮಾಡಿದ್ದ ಗಾಂಧೀಜಿ ಎನ್ನುವ ಜಾದೂಗಾರ, ತನ್ನ ಬೆಳೆ ತನ್ನ ಕಣ್ಣಮುಂದೆಯೇ ಗಾಸಿಗೊಳ್ಳುವುದನ್ನು ಹತಾಶನಾಗಿ ನೋಡುವುದನ್ನು ಹಾಗೂ ಭರವಸೆಗಳೆಲ್ಲ ಹುಸಿಯಾದ ಸಂದರ್ಭದಲ್ಲೂ ಮತ್ತೆ ಮತ್ತೆ ಕನಸು ಕಾಣುತ್ತ ಮುನ್ನಡೆಯುವ ಅಪೂರ್ವ ಕಥನವನ್ನು ಗುಹ ಚಿತ್ರಿಸುತ್ತಾರೆ. ಜೀಸಸ್‌ನಂತೆ, ಬುದ್ಧನಂತೆ ಕಾಣಿಸುವ ಗಾಂಧಿಯನ್ನು ಕಪಟ ವೇಷಧಾರಿಯಾಗಿ, ಸರ್ವಾಧಿಕಾರಿಯಾಗಿ, ಕುಟಿಲ ರಾಜಕಾರಣಿಯಾಗಿ ಕಂಡವರೂ ಇದ್ದಾರೆ. ಗಾಂಧಿಯ ಸಮರ್ಥಕರೊಂದಿಗೆ ಟೀಕಾಕಾರರ ಅಭಿಪ್ರಾಯಗಳಿಗೂ ಅವಕಾಶ ದೊರಕಿಸಿಕೊಡುವ ಮೂಲಕ, ಓದುಗರು ಗಾಂಧಿಯ ಕುರಿತ ತಮ್ಮ ನಂಬಿಕೆಗಳನ್ನು ಒರೆಗೆ ಹಚ್ಚಿಕೊಳ್ಳುವ ಅವಕಾಶವೊಂದನ್ನು ಲೇಖಕರು ಮುಕ್ತವಾಗಿಟ್ಟಿದ್ದಾರೆ.

ಗಾಂಧಿಯನ್ನು ಹೀಗಳೆವವರು ಅವರ ಜೀವಿತ ಕಾಲದಲ್ಲಿ ಸಾಕಷ್ಟಿದ್ದರಷ್ಟೆ. ಆ ಪರಂಪರೆ ಈಗಲೂ ಜೀವಂತವಾಗಿರುವುದನ್ನು ‘ಗುಹ ಕಥನ’ ಅಪರೋಕ್ಷವಾಗಿ ಓದುಗರ ಗಮನಕ್ಕೆ ತರುತ್ತದೆ. ಹಿಂದೂ– ಮುಸ್ಲಿಂ ಸಮುದಾಯದ ಸಹನಡಿಗೆಯಲ್ಲಿ ದೇಶದ ಹಿತ ಅಡಗಿದೆ ಎನ್ನುವ ಗಾಂಧಿಯ ನಂಬಿಕೆ ಅವರ ಜೀವಿತ ಕಾಲದಲ್ಲಿಯೇ ಮತ್ತೆ ಮತ್ತೆ ಪರೀಕ್ಷೆಗೊಳಗಾದುದನ್ನು ದಾಖಲಿಸಿದ್ದಾರೆ. ಈ ವಿರೋಧಾಭಾಸದ ಕಥನ, ಗಾಂಧಿ ಮನುಕುಲಕ್ಕೆ ಏಕೆ ಅಗತ್ಯ ಎನ್ನುವುದನ್ನು ಸೂಚಿಸುವುದರೊಂದಿಗೆ, ಮತೀಯವಾದ ಜೀವನದ ಭಾಗವೇ ಆಗಿರುವಂತಿರುವ ಸಂದರ್ಭದಲ್ಲಿ ದೇಶ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವುದರ ಹೊಳಹುಗಳೂ ಗಾಂಧಿ ಕಥನದಲ್ಲಿ ನಿಚ್ಚಳವಾಗಿ ಕಾಣಿಸುತ್ತದೆ. ಹೊಸ ತಲೆಮಾರಿಗೆ ಅಗತ್ಯವಾಗಿದ್ದ ಗಾಂಧಿಯ ನಿರ್ವಚನವೂ ಗುಹ ಅವರ ಮೂಲಕ ಸಾಧ್ಯವಾಗಿದೆ.

ಗಾಂಧಿ ಕಥನವನ್ನು ಕನ್ನಡಕ್ಕೆ ಸರಳವಾಗಿ ತರಲು ಪ್ರಯತ್ನಿಸಿರುವ ಅನುವಾದಕರಾದ ಎಂ.ಸಿ. ಪ್ರಕಾಶ್‌ ಅವರ ಶ್ರಮ ಮೆಚ್ಚುಗೆಗೆ ಅರ್ಹ. ಆದರೆ, ಉದ್ದಕ್ಕೂ ಎದುರಾಗುವ ಉದ್ದುದ್ದದ ವಾಕ್ಯಸರಣಿಗಳು ಹಾಗೂ ತಪ್ಪಿಸಬಹುದಾಗಿದ್ದ ಪುನರಾವರ್ತನೆಗಳು ದೀರ್ಘ ಓದಿನ ಓಟಕ್ಕೆ ನಿಯಂತ್ರಕಗಳಂತಿವೆ. ಇದನ್ನು ಅನುವಾದದ ಮಿತಿಯೆನ್ನುವುದರ ಬದಲು, ಕನ್ನಡ ಪುಸ್ತಕಲೋಕ ವೃತ್ತಿಪರ ಸಂಪಾದಕರನ್ನು ಹೊಂದಬೇಕಾದ ಅಗತ್ಯದ ಸೂಚನೆಯಾಗಿದೆ ಎನ್ನುವುದೇ ಹೆಚ್ಚು ಸೂಕ್ತ.

ಗಾಂಧಿ- ಪ್ರಪಂಚವನ್ನು ಬದಲಾಯಿಸಿದ ಆ ವರ್ಷಗಳು, 1914–1948 (ಎರಡು ಸಂಪುಟ)

ಲೇ: ರಾಮಚಂದ್ರ ಗುಹ, ಅ: ಎಂ.ಸಿ. ಪ್ರಕಾಶ್

ಪ್ರ: ವಸಂತ ಪ್ರಕಾಶನ ಫೋನ್: 7892106719.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು