ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಾಟು

Last Updated 22 ಜೂನ್ 2019, 19:30 IST
ಅಕ್ಷರ ಗಾತ್ರ

ಉಮರನ ಆಧ್ಯಾತ್ಮದಂಗಡಿಯ ರುಬಾಯಿಗಳು

ಅನುವಾದ: ಡಾ.ಕೆ.ಬಿ. ಬ್ಯಾಳಿ

ಪ್ರ: ತಾಯಿ ಪ್ರಕಾಶನ, ಕುಕನೂರು

ಮೊ: 9449689567

ಈ ಜಗದಲ್ಲಿ ಕಣ್ತೆರೆದು ಕೊಂಡಿರಬೇಕು

ಈ ಲೋಕ ಕಾರ್ಯಾಗಳಲ್ಲಿ ಮೌನಿಯಾಗಿರಬೇಕು,

ಕಣ್ಣು, ನಾಲಿಗೆ, ಕಿವಿಗಳು ನಮ್ಮಲ್ಲಿರುವತನಕ

ಇವಾವು ನಮ್ಮಲ್ಲಿಲ್ಲದಂತಿರಬೇಕು.

– ಇದು ಉಮರಖಯ್ಯಾಮನ ರುಬಾಯಿಗಳಲ್ಲಿ ಬರುವ ಸಾಲುಗಳು. ರುಬಾಯಿ ಎಂದರೆ ನಾಲ್ಕು ಸಾಲಿನ ಪದ್ಯ. ಇಂತಹ ಸಾವಿರಾರು ರುಬಾಯಿಗಳನ್ನು ಉಮರ ಬರೆದಿದ್ದಾನೆ.ಉಮರನ ರುಬಾಯಿಗಳನ್ನು ಓದುತ್ತಿದ್ದರೆ ಮತ್ತೆ ಓದಬೇಕೆನಿಸುತ್ತವೆ. ಅವು ಮನಸಿಗೆ ಆನಂದವನ್ನೂ ಕೊಡುತ್ತವೆ. ಉಮರಖಯ್ಯಾಮಪರ್ಷಿಯಾದ ಪ್ರಸಿದ್ಧ ಗಣಿತಜ್ಞ, ತತ್ತ್ವಶಾಸ್ತ್ರಜ್ಞ, ಭೌತ ವಿಜ್ಞಾನಿ ಹಾಗೂ ಕವಿಯಾಗಿದ್ದವನು. ರುಬಾಯಿಗಳಲ್ಲಿ ರೂಪಕಗಳ ಪ್ರಯೋಗ, ಜೀವರಸ, ಅಧ್ಯಾತ್ಮ ಇದೆ. ರುಬಾಯಿಗಳು ಸುಖದ ಗೀತೆಗಳಲ್ಲ, ದುಃಖದ ಗೀತೆಗಳು ಎನ್ನುವ ಮಾತಿದೆ. ಎಡ್ವರ್ಡ್‌ ಪಿಟ್ಜ ಜೆರಾಲ್ಡ್‌ಆಂಗ್ಲ ಭಾಷೆಯಲ್ಲಿ ಪ್ರಕಟಿಸಿರುವ ಉಮರನ ರುಬಾಯಿಗಳನ್ನು ಕನ್ನಡಕ್ಕೆ ತರುವ ಪ್ರಯತ್ನಗಳನ್ನು ಹಲವು ಕವಿಗಳು ಮಾಡಿದ್ದಾರೆ. ಹಾಗೆಯೇ ಹಿಂದಿಯಲ್ಲಿದ್ದ ಮತ್ತಷ್ಟುರುಬಾಯಿಗಳನ್ನು ಕನ್ನಡಕ್ಕೆ ಅನುವಾದಿಸಿ ತರುವ ಪ್ರಯತ್ನವನ್ನು ಡಾ.ಕೆ.ಬಿ.ಬ್ಯಾಳಿ ಅವರು ಈ ಕೃತಿ ಮೂಲಕ ಮಾಡಿದ್ದಾರೆ.

***

ತೇಜಸ್ವಿ ನೆನಪಲ್ಲಿ
ಅಲ್ಮೆರಾ ರಿಪೇರಿ

ಲೇ: ಮಲ್ಲಿಕಾರ್ಜುನ ಹೊಸಪಾಳ್ಯ

ಪ್ರ: ಧಾನ್ಯ ಪ್ರಕಾಶನ, ತುಮಕೂರು

ಮೊ: 96861 94641

ನೈಜ ಘಟನೆ ಗಳನ್ನುಕಥೆಯಾಗಿಸಿ ಹೇಳುವಂತೆ ಸರಳ ಶೈಲಿಯಲ್ಲಿವೆ ಈ ಕೃತಿಯಲ್ಲಿನ ಲಘು ಪ್ರಬಂಧಗಳು. ಮರೆಯಾಗುತ್ತಿರುವ ಗ್ರಾಮ ಸಂಸ್ಕೃತಿ ಮತ್ತು ಕೃಷಿ ಸಂಸ್ಕೃತಿಯನ್ನೂ ‌ಮತ್ತೆ ನೆನಪಿಸುವಂತಿವೆ. ಆದರೆ, ಬರಹ ರೋಚಕಗೊಳಿಸುವ ಆತುರಕ್ಕೆ ಬಿದ್ದು ಕೆಲವು ಕಡೆಗಳಲ್ಲಿ ಬಳಸಿರುವ ಪದಗಳ ಪ್ರಯೋಗ ಅನಗತ್ಯವಾಗಿತ್ತು ಎನಿಸುತ್ತದೆ. ‘ಈಚಲು ಮರದ ಕಥೆ’ ಪ್ರಬಂಧದಲ್ಲಿ ಈಚಲು ಮರದಲ್ಲಿ ಹೆಂಡ ಇಳಿಸಲು ಕೊರೆಯುವ ರಂಧ್ರದ ಹೋಲಿಕೆಗೆ ಬೇರೆ ಏನನ್ನಾದರೂ ಉಪಮೆಯಾಗಿ ಕೊಡಬಹುದಿತ್ತು ಎನಿಸುತ್ತದೆ. ‘ತೇಜಸ್ವಿ ನೆನ‍ಪಲ್ಲಿ ಅಲ್ಮೆರಾ ರಿಪೇರಿ’ ಪ್ರಬಂಧ

ಓದುಗರನ್ನು ತೇಜಸ್ವಿಯವರ ನೆನಪಿಗೂ ಜಾರುವಂತೆ ಮಾಡುವುದಿಲ್ಲ. ಆದರೆ,‘ಕಾಯ್ಕಿಣಿ ಕಣ್ಣಲ್ಲಿ ತೇಜಸ್ವಿ’ ಬರಹ ಅತ್ಯಂತ ಆಪ್ತವಾಗಿದೆ. ಇವತ್ತಿಗೂ ಪ್ರಸ್ತುತವೆನಿಸುತ್ತದೆ. ಹಾಗೆಯೇ ‘ಕೆನೆತ್‌ ಅಂಡರ್ಸನ್‌ ಹುಲಿ ಬೇಟೆಯ ಜಾಡಿನಲ್ಲಿ’ ಪ್ರಬಂಧ ಕುತೂಹಲ ಕಾಯ್ದುಕೊಳ್ಳುತ್ತದೆ.

***

ಸಂಧಿಕಾಲ (ಕಾದಂಬರಿ)

ಲೇ: ವಸುಮತಿ ಉಡುಪ

ಪ್ರ: ಅಂಕಿತ ಪುಸ್ತಕ, ಬೆಂಗಳೂರು

ದೂರವಾಣಿ: 080– 26617100

ಜೀವನದ ವಿವಿಧ ಮಜಲುಗಳನ್ನು ಪರಿಚಯಿಸುವ ವಿಶೇಷ ಕಾದಂಬರಿ ಸಂಧಿಕಾಲ.ನೆಮ್ಮದಿ, ಸಂತೋಷಗಳಿಂದ ತುಂಬಿದ್ದ ಸಂಸಾರವೊಂದು ಗಾಳಿಮಾತಿಗೆ ಬಲಿಯಾಗಿ ಸೃಷ್ಟಿಸಿಕೊಂಡ ಕಂದರ, ಅದರ ಹಿಂದಿರುವ ಕಾರಣಗಳು ಕಾದಂಬರಿಯ ವಸ್ತು. ಸರಳ ಭಾಷಾ ಶೈಲಿ ಓದಿನ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದೆಷ್ಟೋ ಸುಂದರ ಸಂಸಾರಗಳು ಯಾವುದೋ ಸಣ್ಣ ಕಾರಣದಿಂದ ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿರುತ್ತವೆ. ಯಾರದೋ ಸಲ್ಲದ ಮಾತಿನಿಂದ ಎದೆಯುದ್ದಕ್ಕೆ ಗೋಡೆಗಳು ಏರಿನಿಲ್ಲುತ್ತವೆ. ಅನುಮಾನದ ಸಣ್ಣ ಸುಳಿಯೊಂದು ಬದುಕನ್ನು ಹಿಂಡುವ ಪರಿ ಮನೋಜ್ಞವಾಗಿ ಚಿತ್ರಿತವಾಗಿದೆ ಈ ಪುಸ್ತಕದಲ್ಲಿ.

ಓದುತ್ತಾ ಹೋದಂತೆ ನಮ್ಮ ಪಕ್ಕದಲ್ಲೇ ಸಂಗತಿಗಳು ಘಟಿಸುತ್ತಿವೆ ಎಂಬ ಭಾವ. ಸಂಬಂಧಗಳು ಎಡವುವುದು ಸಣ್ಣ ಸಣ್ಣ ಕಲ್ಲುಗಳಿಂದಲೇ ಹೊರತು ದೊಡ್ಡ ಬೆಟ್ಟಗಳಿಂದಲ್ಲ ಎಂದು ನಿರೂಪಿಸುವ ಲೇಖಕಿ, ಜೀವನದ ಹಾದಿಯಲ್ಲಿ ಪರಸ್ಪರ ನಂಬಿಕೆ, ವಿಶ್ವಾಸ ಮುಖ್ಯ ಎನ್ನುವುದನ್ನು ತಮ್ಮ ಬರಹದಲ್ಲಿ ಚಿತ್ರಿಸಿದ್ದಾರೆ. ಮಾತ್ರವಲ್ಲ ಈಎಲ್ಲ ಬರಹಗಳಲ್ಲಿ ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ. ಈ ಪುಸ್ತಕ ನಿಜ ಜೀವನಕ್ಕೆ ಹಿಡಿದ ಕೈಗನ್ನಡಿಯಂತಿದೆ.

***

ತುಳು ನಾಟಕ ಪರಂಪರೆ

ಲೇ: ಮುದ್ದು ಮೂಡುಬೆಳ್ಳೆ

ಪ್ರ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

ಮೊ: 82424 59389

‘ತುಳು ನಾಟಕ ಪರಂಪರೆ’ ಹೆಸರೇ ಸೂಚಿಸುವಂತೆ ತುಳು ಭಾಷಾ ರಂಗಭೂಮಿ ಬೆಳೆದುಬಂದ ಹಾದಿಯ ಏಳುಬೀಳುಗಳನ್ನು ಪರಿಚಯಿಸುತ್ತದೆ. ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಇಲ್ಲಿಯವರೆಗಿನ ಅದರ ವಿವಿಧ ಮಜಲುಗಳ ದರ್ಶನವಿದೆ ಇಲ್ಲಿ. ಭಾಷೆಯೊಂದು ತನ್ನ ಅಸ್ಮಿತೆ ಉಳಿಸಿಕೊಳ್ಳುವುದು ಮತ್ತು ಅದರಲ್ಲಿ ರಂಗಕಲೆಯನ್ನು ಕಟ್ಟಿ ಬೆಳೆಸುವ ಕೆಲಸ ಸವಾಲಿನದ್ದಾಗಿರುತ್ತದೆ. ಇದಕ್ಕೆ ಅನೇಕ ವ್ಯಕ್ತಿಗಳ ತ್ಯಾಗ, ಪರಿಶ್ರಮ ಕಾರಣವಾಗಿರುತ್ತದೆ. ತುಳು ರಂಗಭೂಮಿಗಾಗಿ ಶ್ರಮಿಸಿದ ನೂರಾರು ಕಲಾವಿದರು, ಸಂಗೀತಗಾರರು, ನಿರ್ದೇಶಕರನ್ನು ಒಳಗೊಂಡಂತೆ ನೇಪಥ್ಯಕ್ಕೆ ಸರಿದ ರಂಗಕರ್ಮಿಗಳ ಪರಿಚಯವಿದೆ ಈ ಪುಸ್ತಕದಲ್ಲಿ. ಒಟ್ಟು ತುಳು ರಂಗಭೂಮಿಯ ಸಮಗ್ರ ಚರಿತ್ರೆ ಸಂಕ್ಷಿಪ್ತವಾಗಿಯಾದರೂ ದೊರಕಿಸುವ ಕನ್ನಡದ ಅಪರೂಪದ ಕೃತಿಯಿದು. ಅಲ್ಲಲ್ಲಿ ಬಳಸಿರುವ ತುಳು ವಾಕ್ಯಗಳು ಓದನ್ನು ವೈವಿಧ್ಯಗೊಳಿಸಿವೆ. ಜೊತೆಗೆ ಭಾವಚಿತ್ರಗಳನ್ನು ಸೇರಿಸಿರುವುದು ವಿಶೇಷ. ತುಳು ರಂಗ ಕಲಿಕೆ ಹಾಗೂ ಅದರ ಅಧ್ಯಯನ ಬಯಸುವವರಿಗೆ ಈ ಪುಸ್ತಕ ಉಪಯುಕ್ತ ಮಾಹಿತಿ ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT