ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಳ ಕೊರಳ ಹಾಡು’ : ಕರುಳ ದನಿಯಲ್ಲಿ ಮಾನವೀಯತೆಯ ಬನಿ

Last Updated 9 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ನಿಂಗಪ್ಪ ಮುದೇನೂರು ಅವರ ‘ಕರುಳ ಕೊರಳ ಹಾಡು’ ಕೃತಿಯಲ್ಲಿ ಒಟ್ಟಾರೆ 33 ಲೇಖನಗಳಿವೆ. ಇವುಗಳಲ್ಲಿ ಶಿಷ್ಟ ಸಾಹಿತ್ಯಕ್ಕೆ ಸಂಬಂಧಿಸಿದ ನಾಲ್ಕು ಲೇಖನಗಳಿದ್ದರೆ, ಉಳಿದವು ಬುಡಕಟ್ಟು ಜನಪದ ಮಹಾಕಾವ್ಯಗಳು ಮತ್ತು ಜನಪದ ಸಾಹಿತ್ಯ ಸಂಸ್ಕೃತಿಯನ್ನು ಕುರಿತು ಬರೆದಿರುವ ಅಧ್ಯಯನ ಲೇಖನಗಳು.

‘ಕುವೆಂಪು ಅವರ ಶೂದ್ರ ತಪಸ್ವಿ: ಬೆಂಕಿ ಬೆಳಕಾಗುವ ಪರಿ’ ಮತ್ತು ‘ಕುವೆಂಪು ಸಾಹಿತ್ಯದಲ್ಲಿ ಅಲಕ್ಷಿತ ವರ್ಗಗಳ ಚಲನೆ’ ಕ್ರಮವಾಗಿ ಕುವೆಂಪು ಅವರ ನಾಟಕ ಮತ್ತು ಇತರ ಗದ್ಯ ಕೃತಿಗಳ ವಸ್ತುವನ್ನು ಆಧರಿಸಿದ ಅಧ್ಯಯನ ಲೇಖನಗಳಾಗಿವೆ. ಈ ಎರಡೂ ಲೇಖನಗಳಲ್ಲಿ ದಲಿತ ವರ್ಗಗಳು ಕ್ರಿಯಾತ್ಮಕವಾಗಿ ಚಲಿಸುತ್ತವೆಯೋ ಇಲ್ಲವೋ, ಕ್ರಿಯಾತ್ಮಕವಾಗಿ ಚಲಿಸದಿದ್ದರೆ ಅದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಸುದೀರ್ಘವಾಗಿ ಮುದೇನೂರರು ಚರ್ಚಿಸಿ ವಿವರಿಸಿದ್ದಾರೆ. ‘ವತನ: ಕನ್ನಡ ದಲಿತ ಕಥನದ ಅರಿವಿನ ವಿಕಾಸ’ ಮತ್ತು ‘ಜನಪದ ಕಲೆ, ಸಂಸ್ಕೃತಿ: ದಲಿತ ಸಂಸ್ಕೃತಿಯ ಬೇರು ಹುಡುಕುವ ಪ್ರಯತ್ನ’ - ಈ ಎರಡೂ ಲೇಖನಗಳು ಕ್ರಮವಾಗಿ ಎಚ್.ಟಿ. ಪೋತೆಯವರ ಕಥಾ ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಅಧ್ಯಯನ ಕುರಿತು ಬರೆದ ಲೇಖನಗಳಾಗಿವೆ.

ಜಾನಪದವನ್ನು ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ರೋಮಾಂಚನದಿಂದ ನೋಡಲಾಗುತ್ತಿತ್ತು. ಇಂದಿಗೂ ಅದನ್ನೇ ಹೆಚ್ಚಿನವರು ಮುಂದುವರಿಸುತ್ತಿದ್ದಾರೆ. ಆದರೆ, ಕೆಲವು ಜಾನಪದ ತಜ್ಞರು ಸಂಗ್ರಹ ಮಾಡಿದ ಸಾಹಿತ್ಯವನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಮಾನವಶಾಸ್ತ್ರಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆಗೆ ಒಳಪಡಿಸುತ್ತಿದ್ದಾರೆ. ಮತ್ತೆ ಕೆಲವರು ಇನ್ನೂ ಮುಂದಕ್ಕೆ ಹೋಗಿ ಜಾನಪದವನ್ನು ಸಂವಹನ, ಕ್ರಿಯಾತ್ಮಕ, ಚಲನಶೀಲ ನೆಲೆಗಳಲ್ಲಿ ಅಧ್ಯಯನ ಮಾಡಿ, ಅದರ ಸಾಂಸ್ಕೃತಿಕ, ಸಾಮಾಜಿಕ ಮುಂತಾದ ವಿನ್ಯಾಸಗಳನ್ನು ಗುರುತಿಸಿ, ವರ್ತಮಾನದ ಸ್ಥಿತಿಗತಿಗಳನ್ನೂ ಅಧ್ಯಯನ ಮಾಡುತ್ತಿದ್ದಾರೆ. ಇದು ಸಾಂಸ್ಕೃತಿಕ ಚರಿತ್ರೆಯ ಸ್ವರೂಪವನ್ನು ಗುರುತಿಸುವ ಕೆಲಸದಲ್ಲಿ ಮಹತ್ವವಾದದ್ದು. ಈ ದಿಕ್ಕಿನಲ್ಲಿ ಮುದೇನೂರರ ಅಧ್ಯಯನ ನಡೆದಿರುವುದು ಎದ್ದು ಕಾಣುತ್ತದೆ.

‘ಜನಪದ ಮಹಾಕಾವ್ಯಗಳ ನಾಯಕರು: ಅರ್ಥೈಸುವ ಬಗೆ’, ‘ಜನಪದ ಹಾಲುಮತ ಮಹಾಕಾವ್ಯದ ದಲಿತತ್ವ’, ‘ಮೈಲಾರನ ಸಾಂಸ್ಕೃತಿಕ ನೆಲೆಗಳು’, ‘ಕರ್ನಾಟಕದಲ್ಲಿ ಸ್ಕಂದ ಪರಂಪರೆ’ ಮುಂತಾದ ಜನಪದ ಮಹಾಕಾವ್ಯಗಳಿಗೆ ಸಂಬಂಧಿಸಿದ ಲೇಖನಗಳಲ್ಲಿ ಸಾಂಸ್ಕೃತಿಕ ಮಾನವಶಾಸ್ತ್ರ, ಸಮಾಜಶಾಸ್ತ್ರ, ಮಾನವಿಕ, ವಿಜ್ಞಾನ ಮುಂತಾದ ಎಲ್ಲಾ ಜ್ಞಾನ ವಿಜ್ಞಾನಗಳನ್ನು ಅನುಸಂಧಾನಗೊಳಿಸಿ ಜನಪದ ಮಹಾಕಾವ್ಯಗಳನ್ನು ವಿಶ್ಲೇಷಿಸುವುದಕ್ಕೆ ಪ್ರಯತ್ನ ಮಾಡಿರುವುದನ್ನು ಗುರುತಿಸಬಹುದು.

ಜನಪದ ಮಹಾಕಾವ್ಯಗಳು ಶೈವ, ದ್ರಾವಿಡ, ಅವೈದಿಕ ನೆಲೆಗಳನ್ನು ತಮ್ಮಲ್ಲಿ ಗರ್ಭೀಕರಿಸಿಕೊಂಡಿವೆ. ಆಯಾ ಕಾವ್ಯಗಳು ಸೃಷ್ಟಿಯಾಗಿರುವ ಪ್ರದೇಶದ ಆಯಾ ವೃತ್ತಿಯ ಸಾಕು ಪ್ರಾಣಿಗಳು, ಆಹಾರದ ಕ್ರಮ, ಉಡುಗೆ ತೊಡುಗೆ, ಆಚರಣೆ ಇತ್ಯಾದಿ ವಿವರಗಳೆಲ್ಲವೂ ಅಲ್ಲಿ ಇಡುಕಿರಿದಿವೆ. ಹೀಗಾಗಿ ಸಹಜವಾಗಿಯೇ ಈ ಕಾವ್ಯಗಳು ಸಂಸ್ಕೃತಿ-ನಾಗರಿಕತೆಯ ವಿಕಾಸದ ಸ್ವರೂಪವನ್ನು ತಿಳಿಯುವ ಸಾಧನಗಳಾಗಿವೆ. ಉದಾಹರಣೆಗೆ ಕಬ್ಬಿಣದ ಬಗೆಗಿನ ವಿವರಗಳಲ್ಲಿ ಸಂಸ್ಕೃತಿ ಮತ್ತು ನಾಗರಿಕತೆ ವಿಕಾಸವಾಗುವುದರಲ್ಲಿ ಕಬ್ಬಿಣ ಯಾವ ಪಾತ್ರ ವಹಿಸಿತು ಮತ್ತು ಅದರ ಮಹತ್ವವೇನು ಎಂಬುದನ್ನು ವಿವರಿಸಿಕೊಂಡು ವಿಶ್ಲೇಷಿಸಲು ಸಾಧ್ಯವಾಗುತ್ತದೆ.

ಜನಪದ ಮಹಾಕಾವ್ಯಗಳನ್ನು ಕುರಿತ ಲೇಖನಗಳಲ್ಲಿ ಕಬ್ಬಿಣದ ಬಳಕೆ, ಪ್ರಾಣಿಗಳ ಸಾಕಾಣಿಕೆ ಹಾಗೂ ವ್ಯವಸಾಯದ ಬೆಳವಣಿಗೆ ಇತ್ಯಾದಿಗಳ ಬಗ್ಗೆ ಪ್ರಸ್ತಾಪ ಮತ್ತು ಚರ್ಚೆ ಇದೆ. ಈ ಚರ್ಚೆಗೆ ಪೂರಕವಾದ ವಿಚಾರಗಳಿಗೆ ಪಾಶ್ಚಾತ್ಯ, ಭಾರತ ಹಾಗೂ ಕನ್ನಡದ ಜಾನಪದ ಮತ್ತು ಸಂಸ್ಕೃತಿ ಚಿಂತಕರ ಅಭಿಪ್ರಾಯಗಳನ್ನು ಬಳಸಿಕೊಂಡಿರುವುದು ಚರ್ಚೆಗೊಂದು ಅಧಿಕೃತತೆ ಬರಲು ಕಾರಣವಾಗಿದೆ. ಮಹಾಕಾವ್ಯಗಳನ್ನು ಚರ್ಚಿಸುವಾಗ ಭಾಷಾ ಬಳಕೆಗಿಂತ ಹೆಚ್ಚಾಗಿ ವಸ್ತುವನ್ನು ಕುರಿತ ವಿವರವೇ ಹೆಚ್ಚಾಗಿದೆ. ಸಾಂಸ್ಕೃತಿಕ ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವಾಗ ಇದು ಸಹಜವೇ. ಆದರೆ, ಮಹಾಕಾವ್ಯಗಳಲ್ಲಿ ಬರುವ ಐತಿಹ್ಯ, ಪುರಾಣಗಳನ್ನು ಅರ್ಥೈಸುವಾಗ ಭಾಷಾ ವಿನ್ಯಾಸವನ್ನು, ಅದರ ಧ್ವನಿಯನ್ನು ಹಿಡಿದೇ ವಿಶ್ಲೇಷಣೆ ಮಾಡಿ, ಅದರ ಸಾಂಸ್ಕೃತಿಕ ಮಹತ್ವವನ್ನು ಗುರುತಿಸಬೇಕಾಗುತ್ತದೆ. ಮಾನವಶಾಸ್ತ್ರದಲ್ಲಿ ಭಾಷೆಯ ಅಧ್ಯಯನವೂ ಒಂದು ಪ್ರಮುಖವಾದ ಅಂಶವಾಗಿದೆ.

ಜನಪದ ಮಹಾಕಾವ್ಯಗಳ ಮೇಲೆ ಬೌದ್ಧ, ಜೈನ, ಶೈವ, ವೈಷ್ಣವ, ದಾಸಪಂಥ, ಇಸ್ಲಾಂ, ಕ್ರೈಸ್ತ, ನಾಥ, ಸಿದ್ಧ, ಸೂಫಿ ಮುಂತಾದ ಧರ್ಮ, ಪಂಥಗಳು ಪ್ರಭಾವ ಬೀರಿವೆ. ಇವುಗಳನ್ನು ಅಧ್ಯಯನ ಕ್ರಮದಲ್ಲಿ ಅಲ್ಲಲ್ಲಿ ಗುರುತಿಸಿ ವಿವರಿಸಲಾಗಿದೆ. ಬುಡಕಟ್ಟು ಸಂಸ್ಕೃತಿಯನ್ನು ಕುರಿತು ಇಲ್ಲಿ ಹೆಚ್ಚು ಲೇಖನಗಳಿವೆ.ಈ ಲೇಖನಗಳು ಸಾಂಸ್ಕೃತಿಕ ಅಧ್ಯಯನಕ್ಕೊಂದು ಮಾದರಿಯಾಗಿವೆ. ‘ಜನಪದ ಸಾಹಿತ್ಯ: ಇವತ್ತಿನ ಆಗುಹೋಗುಗಳು’ ಎಂಬ ಕೊನೆಯ ಲೇಖನದಲ್ಲಿ ಜನಪದ ಸಾಹಿತ್ಯವನ್ನು ತಾಂತ್ರಿಕ ಯುಗದಲ್ಲಿ ಉಳಿಸಿಕೊಳ್ಳಬೇಕಾದ ಅಗತ್ಯ ಹಾಗೂ ಅಧ್ಯಯನ ಮಾಡಬೇಕಾದ ಕ್ರಮವನ್ನು ಚರ್ಚಿಸಲಾಗಿದೆ.

ಈ ಕೃತಿಯ ಲೇಖನಗಳನ್ನು ಓದಿ ಮುಗಿಸಿದಾಗ ಒಂದು ದೇಶದಲ್ಲಿಯಾಗಲಿ, ಸಮಾಜದಲ್ಲಿಯಾಗಲಿ ತಾನೊಬ್ಬ ಪರಕೀಯ, ಬಡವ, ತಿರಸ್ಕಾರಕ್ಕೆ ಗುರಿಯಾದವನು ಎಂಬ ಭಾವ ಅನುಭವಿಸುತ್ತಿರುವ ವ್ಯಕ್ತಿಯನ್ನು ಒಳಗು ಮಾಡಿಕೊಂಡು ಬದುಕಬೇಕೆಂಬ ಆಶಯವೊಂದು ಥಟ್ಟನೆ ಮನಸ್ಸಿಗೆ ಬರುತ್ತದೆ. ಸಬಾಲ್ಟ್ರನ್ ಚಿಂತನಾಧಾರೆಯೊಂದು ಉದ್ದಕ್ಕೂ ಹರಿಯುತ್ತಿರುವುದು ಕಂಡುಬರುತ್ತದೆ. ಕೆಳಜಾತಿ, ಅದರಲ್ಲೂ ಅಸ್ಪೃಶ್ಯ ಜಾತಿಗಳೇ ಮುಖ್ಯವಾಗಿ, ನಂತರ ಮೇಲ್ಮುಖವಾಗಿ ಚಲಿಸಿದಾಗ ಮಾನವೀಯ ಮೌಲ್ಯಗಳು ನೆಲೆಸಲು ಸಾಧ್ಯ ಎಂದು ಹಾತೊರೆಯುವ ಮನಸ್ಸೊಂದು ಇಲ್ಲಿನ ಲೇಖನಗಳಲ್ಲಿ ಇದೆ.

ಕೃತಿ: ಕರುಳ ಕೊರಳ ಹಾಡು

ಲೇ: ಡಾ. ನಿಂಗಪ್ಪ ಮುದೇನೂರು

ಪ್ರ: ಸಿದ್ಧಲಿಂಗೇಶ್ವರ ಪ್ರಕಾಶನ

ಸಂ: 9448124431

ಪುಟಗಳು: 296 ಬೆಲೆ: 265

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT