ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ಕಿಣಿ ಕತೆಗಳು ಮಹಾನಗರದ ಬದುಕಿನ ಸಂಭ್ರಮ, ವಿಷಾದ

ಅವಲೋಕನ
Last Updated 16 ಜೂನ್ 2019, 2:18 IST
ಅಕ್ಷರ ಗಾತ್ರ

ಕನ್ನಡದ ಮುಖ್ಯ ಮತ್ತು ಸಮ್ಮೋಹಕ ಕತೆಗಾರ ಜಯಂತ ಕಾಯ್ಕಿಣಿ ಅವರ ಮುಂಬೈ ಮಹಾನಗರ ಭಿತ್ತಿಯಾಗಿರುವ ಕತೆಗಳ ಸಂಕಲನ ‘ನೋ ಪ್ರೆಸೆಂಟ್ಸ್ ಪ್ಲೀಸ್‌’. ಈ ಸಂಕಲನದ ಪ್ರಕಟಣೆಗೊಂದುಹಿನ್ನೆಲೆ ಇದೆ. ದಕ್ಷಿಣ ಏಷ್ಯಾದ ಪ್ರತಿಷ್ಠಿತ ಡಿಎಸ್‌ಸಿಪ್ರಶಸ್ತಿಗೆ ಜಯಂತ ಅವರ ಆಯ್ದ ಮುಂಬೈ ಕತೆಗಳಇಂಗ್ಲಿಷ್‌ಅನುವಾದದ ಸಂಕಲನ ‘ನೋ ಪ್ರೆಸೆಂಟ್ಸ್ ಪ್ಲೀಸ್‌’ ಆಯ್ಕೆಯಾಗಿತ್ತು. ಈ ಕತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದವರು ಕನ್ನಡ ಲೇಖಕಿತೇಜಸ್ವಿನಿ ನಿರಂಜನ. ಕನ್ನಡ ಓದುಗರಿಗಾಗಿ ಅವೇ ಕತೆಗಳನ್ನು ಸಂಕಲಿಸಿ, ಅಂಕಿತ ಪುಸ್ತಕದವರು ಪ್ರಕಟಿಸಿದ್ದಾರೆ.

ದೊಡ್ಡ ಮೊತ್ತದ, ಪ್ರತಿಷ್ಠಿತ ಪ್ರಶಸ್ತಿ ಪಡೆದ ಸಣ್ಣಕತೆಗಳಸಂಕಲನ ಹೇಗಿರಬಹುದು ಎಂಬ ಕುತೂಹಲ ಓದುಗರಿಗಿದ್ದೇ ಇರುತ್ತದೆ. ಜೊತೆಗೆ ಯಾವ ಬಗೆಯ ಕತೆಗಳನ್ನು ಆಯ್ಕೆ ಮಾಡಿ ಅನುವಾದಿಸಲಾಗಿದೆ ಎಂಬುದು ಕೂಡ. ಅಂತಹ ಕುತೂಹಲಿಗಳಿಗೆ ಇದು ಉತ್ತರವಾಗಬಲ್ಲದು. ಜಯಂತಕಾಯ್ಕಿಣಿ ಅವರ ಓದುಗರಿಗೆ ಅವರ ಕತೆಗಳನ್ನೇ ಬೇರೊಂದು ರೀತಿಯಲ್ಲಿ ಈ ಸಂಕಲನ ಪ್ರಸ್ತುತಪಡಿಸುತ್ತದೆ; ಅವರ ಕತೆಗಳನ್ನು ಬೇರೊಂದು ಬಗೆಯಲ್ಲಿ ನೋಡುವಂತೆ ಮಾಡುತ್ತದೆ.

ಈ ಸಂಕಲನ ಕನ್ನಡದ ಮುಖ್ಯ ಲೇಖಕನ ಬರವಣಿಗೆಯ ಒಂದು ಸ್ತರವನ್ನು ಮಾತ್ರ ಓದುಗರಿಗೆ ದರ್ಶಿಸುತ್ತದೆ. ಜಯಂತರಂತಹ ಲೇಖಕರನ್ನು ಪೂರ್ತಿಯಾಗಿಅರಿಯಬೇಕಿದ್ದರೆ ಅವರ ಎಲ್ಲ ಕತೆಗಳಿಗೂ ಹೋಗಬೇಕಾಗುತ್ತದೆ. ಇಲ್ಲಿನ 16 ಕತೆಗಳು ಜಯಂತರ ಪ್ರಾತಿನಿಧಿಕ ಕತೆಗಳೂ ಹೌದು. ಕನ್ನಡದ ಮುಖ್ಯ ಕತೆಗಳೂ ಸಹ.ಇದಲ್ಲದೇ ಇವನ್ನು ಮಹಾನಗರದ ಕತೆಗಳು ಎಂದೇ ಓದಬೇಕಿಲ್ಲ. ಈ ಸಂಕಲನದಲ್ಲಿರುವ‘ಕನ್ನಡಿ ಇಲ್ಲದ ಊರಲ್ಲಿ’, ‘ಬಣ್ಣದ ಕಾಲು’, ‘ದಗಡೂ ಪರಬನ ಅಶ್ವಮೇಧ’, ‘ಸೇವಂತಿ ಹೂವಿನ ಟ್ರಕ್ಕು’, ‘ನೋ ಪ್ರೆಸೆಂಟ್ಸ್‌ ಪ್ಲೀಸ್‌’ ತರಹದ ಕತೆಗಳು ಕನ್ನಡ–ಇಂಗ್ಲಿಷ್‌ ಮಾತ್ರವಲ್ಲ, ಭಾರತದ ಎಲ್ಲ ಭಾಷೆಗಳಿಗೂ ಸಲ್ಲಬಹುದಾದ ಕತೆಗಳಾಗಿವೆ. ಇಲ್ಲಿನ ಕತೆಗಳಲ್ಲಿ ಸಣ್ಣಗೆ ಮಿಡಿಯುತ್ತಿರುವುದುನಾವೆಲ್ಲ ಬೀದಿಯಲ್ಲಿ ಕಾಣುವ ಜನರ ಬದುಕು.

ಅವರೆಲ್ಲ ಗುರುತು–ಪರಿಚಯವಿಲ್ಲದೇ ಅನಾಮಿಕರಾಗಿ ಕರಗಿಹೋಗುವವರು. ಈ ಎಲ್ಲ ಕತೆಗಳ ಸ್ಥಾಯಿ ಭಾವ ಅಥವಾ ಶ್ರುತಿವಿಷಾದವೇ ಆಗಿದೆ. ಇದು ಮಾತ್ರವಲ್ಲದೇ ಮಹಾನಗರದ ಸಂಕೀರ್ಣತೆ, ನಿಗೂಢತೆ ಮತ್ತು ಮನುಷ್ಯ ಸ್ವಭಾವದ ಜಟಿಲತೆಯನ್ನು ತಿಳಿಯಬೇಕಿದ್ದರೆ ಇಲ್ಲಿನ ‘ದಗಡೂ ಪರಬನ ಅಶ್ವಮೇಧ’, ‘ಟಿಕ್ ಟಿಕ್ ಗೆಳೆಯ’, ‘ನೀರು’ ಕತೆಗಳನ್ನು ಓದಬೇಕು.

ಮಹಾನಗರದ ಗಾಳಿ ಬೆಳಕನ್ನು ಉಸಿರಾಡುವ ಬದುಕನ್ನು ಸೃಷ್ಟಿಸಿದ ಬರವಣಿಗೆಗಳನ್ನು ಕೊಟ್ಟ ಲೇಖಕರುಕನ್ನಡದಲ್ಲಿ ಬಹಳಿಲ್ಲ. ಇರುವ ಎರಡೇ ಹೆಸರುಗಳಲ್ಲಿ ಒಂದು ಯಶವಂತ ಚಿತ್ತಾಲರದು; ಇನ್ನೊಂದು ಜಯಂತ ಕಾಯ್ಕಿಣಿಯವರದು. ಉತ್ತರ ಕನ್ನಡ ಜಿಲ್ಲೆಯ ಕುಮಟೆ ತಾಲ್ಲೂಕಿನವರಾದ ಇವರಿಬ್ಬರೂ ಮಹಾನಗರ ಮುಂಬೈಯಲ್ಲಿದ್ದು ಅಲ್ಲಿನ ಅನುಭವವನ್ನು ದಟ್ಟವಾಗಿ ಚಿತ್ರಿಸಿದ್ದಾರೆ.

ಒಂದೇ ನಗರದ ಹಿನ್ನೆಲೆಯ ಕತೆಗಳನ್ನು ಬರೆದರೂ ಈಲೇಖಕರ ಬರವಣಿಗೆ ಭಿನ್ನ, ವಿಶಿಷ್ಟ. ಚಿತ್ತಾಲರ ಬರವಣಿಗೆ ಬದುಕಿನ ಕ್ರೌರ್ಯವನ್ನು, ತಬ್ಬಲಿತನವನ್ನು ಕಣ್ಣಮುಂದೆ ಹಿಡಿದರೆ, ಜಯಂತರ ಕತೆಗಳು ಮಹಾನಗರದಲ್ಲಿ ಬದುಕುವ ಛಲವನ್ನು, ಸಣ್ಣ ಸಣ್ಣಸಂಗತಿಗಳಲ್ಲೇ ಇರುವ ಸಂಭ್ರಮವನ್ನು, ಮಾಹಾನಗರಕ್ಕೇ ಸೀಮಿತವಾದಅಮಾನವೀಯತೆಯನ್ನು ತೋರುತ್ತವೆ. ಕನ್ನಡದ ಈ ಪ್ರಮುಖ ಲೇಖಕರ ಮುಂಬೈ ಬದುಕಿನ ಕತೆಗಳನ್ನೇ ಒಂದೆಡೆ ಇಟ್ಟುಕೊಂಡು ಸಾಹಿತ್ಯ ವಿದ್ಯಾರ್ಥಿಗಳುಅಭ್ಯಾಸ ಮಾಡಿದರೆ ಆ ಲೇಖಕರ ವೈಶಿಷ್ಟ್ಯ ಇನ್ನಷ್ಟು ಒಡೆದು ಕಾಣಬಹುದು.ಅದಕ್ಕೆ ಜಯಂತರ ಈ ಸಂಕಲನ ಅನುವು ಮಾಡಿಕೊಡುತ್ತದೆ.

**

ನೋ ಪ್ರಸೆಂಟ್ಸ್ ಪ್ಲೀಸ್‌(ಕತೆಗಳು)
ಲೇಖಕರು
: ಜಯಂತ ಕಾಯ್ಕಿಣಿ
ಪುಸ್ತಕ: 240 ಬೆ: ರೂ. 250
ಪ್ರಕಾಶನ: ಅಂಕಿತ ಪುಸ್ತಕ, ನಂ, 53, ಶ್ಯಾಮ್‌ಸಿಂಗ್‌ ಕಾಂಪ್ಲೆಕ್ಸ್‌,

ಗಾಂಧಿಬಜಾರ್‌ ಮುಖ್ಯರಸ್ತೆ,

ಬಸವನಗುಡಿ, ಬೆಂಗಳೂರು – 560 004

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT