ಕಲ್ಯಾಣ ಕ್ರಾಂತಿಯ ಕೊನೆಯ ರಾತ್ರಿಗಳು

7
Koneya mooru ratrigalu

ಕಲ್ಯಾಣ ಕ್ರಾಂತಿಯ ಕೊನೆಯ ರಾತ್ರಿಗಳು

Published:
Updated:
Prajavani

ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯನ್ನು ಆಧರಿಸಿದ ನಾಟಕ ‘ಕೊನೆಯ ಮೂರು ರಾತ್ರಿಗಳು’. ನಾಟಕಕಾರ ಡಾ.ಎನ್.ಎಂ. ಗಿರಿಜಾಪತಿ ರಚಿಸಿರುವ ಈ ನಾಟಕ, ವಚನ ಚಳವಳಿ, ಜಾತಿ ವಿಮೋಚನೆ ಮತ್ತು ಬಸವಣ್ಣನವರ ಕೊನೆಯ ದಿನಗಳನ್ನು ಒಳಗೊಂಡಿದೆ.

ಕಲ್ಯಾಣ ಕ್ರಾಂತಿಯ ಪೂರ್ವಯೋಜಿತ ಸಂಕಥನಗಳನ್ನು ಕಟ್ಟಿಕೊಡುವ ಪ್ರಯತ್ನ ನಾಟಕಕಾರದ್ದು. ಬಸವಣ್ಣ ಮತ್ತು ವಚನ ಚಳವಳಿಯ ಕುರಿತು ಈಗಾಗಲೇ ಕನ್ನಡದಲ್ಲಿ ‘ಕೆಟ್ಟಿತ್ತು ಕಲ್ಯಾಣ’ (ಡಾ.ಎಂ.ಎಂ. ಕಲಬುರ್ಗಿ), ‘ಸಂಕ್ರಾಂತಿ’ (ಪಿ. ಲಂಕೇಶ್‌), ‘ತಲೆದಂಡ’ (ಗಿರೀಶ ಕಾರ್ನಾಡ) ಮತ್ತು ‘ಮಹಾಚೈತ್ರ’ (ಎಚ್‌.ಎಸ್.ಶಿವಪ್ರಕಾಶ) ನಾಟಕಗಳು ಬಂದಿವೆ. ಈ ನಾಟಕಗಳ ಅಧ್ಯಯನ ಮತ್ತು ಆಸಕ್ತಿಯ ಫಲವೇ ‘ಕೊನೆಯ ಮೂರು ರಾತ್ರಿಗಳು’.  ಬಸವಣ್ಣನವರ ನೇತೃತ್ವದ ವಚನ ಚಳವಳಿಯ ಸ್ಫೋಟದ ಹಿಂದಿನ ಬಹುಕಾರಣಗಳ ಚಿತ್ರಣಗಳನ್ನು ಕಟ್ಟಿಕೊಡಲು ಗಿರಿಜಾಪತಿ ಪ್ರಯತ್ನಿಸಿದ್ದಾರೆ. 

ನುಡಿದದ್ದನ್ನು ನಡೆಸಿ ತೋರುವ ಛಲವಿರುವ ಬಸವಣ್ಣ, ಅಂತರ್ಜಾತಿ ವಿವಾಹ ಮಾಡಿಸುವಾಗ ಉಂಟಾದ ಸಂದಿಗ್ಧತೆಗಳು ನಾಟಕಕ್ಕೆ ತಿರುವು ನೀಡುತ್ತವೆ. ಬಿಜ್ಜಳ ಮಹಾರಾಜ ಮತ್ತು ಬಸವಣ್ಣನ ನಡುವೆ ನಡೆಯುವ ಸಂಭಾಷಣೆಗಳು ಕುತೂಹಲಕರವಾಗಿವೆ. ಪ್ರಭುತ್ವ ಮತ್ತು ಕ್ರಾಂತಿಯ ನಡುವೆ ಗೊಂದಲಕ್ಕೀಡಾಗುವ ಬಿಜ್ಜಳನನ್ನು ‘ಮೂರ್ಖತ್ವವನ್ನು ತಿದ್ದುವುದೇ ಶರಣ ಸಂಸ್ಕೃತಿಯ ತಿರುಳು. ಇಂದಲ್ಲ ನಾಳೆ ಎಲ್ಲವೂ ಅರಿವಿಗೆಟಕೀತು’ ಎಂದು ಬಸವಣ್ಣ ತಿಳಿ ಹೇಳುತ್ತಾನೆ.

ಬಸವಣ್ಣನ ವ್ಯಕ್ತಿತ್ವದ ಮೋಹಕ್ಕೆ ಸಿಲುಕುವ ಬಿಜ್ಜಳನಿಗೆ ಬಸವ ಗೆಳೆಯನೋ, ವೈರಿಯೋ ಎನ್ನುವ ಸಂದಿಗ್ಧ ಸನ್ನಿವೇಶಗಳು ನಾಟಕದಲ್ಲಿವೆ. ಕಲ್ಯಾಣದ ಕ್ರಾಂತಿಯನ್ನು ಸಹಿಸದ ಅತೃಪ್ತ, ಆತ್ಮಗಳ ಸಮಾಜಕ್ಕೆ ಅಂತರ್ಜಾತಿ ಮದುವೆಯೇ ನೆಪವಾಗುತ್ತದೆ. ಅದೇ ನೆಪದಲ್ಲಿ ಜೈನ ಮತ್ತು ಬ್ರಾಹ್ಮಣ ಪಂಡಿತರು ಬಿಜ್ಜಳನ ಮೇಲೆ ವಾಗ್ದಾಳಿ ನಡೆಸುತ್ತಾರೆ. ಕಲ್ಯಾಣ ಕ್ರಾಂತಿಯಲ್ಲಿ ಬಸವಣ್ಣ, ಬಿಜ್ಜಳರ ಅಂತ್ಯವಾಗುತ್ತದೆ. ಸರಳ ಭಾಷೆ ಮತ್ತು ಮನತಟ್ಟುವ ಸಂಭಾಷಣೆಗಳ ಮೂಲಕ ನಾಟಕ ಓದಿಸಿಕೊಂಡು ಹೋಗುತ್ತದೆ. ಕ್ರಾಂತಿಯ ಕೊನೆಯ ಮೂರು ರಾತ್ರಿಗಳ  ಕುರಿತು ನಾಟಕ ವಿವರವಾಗಿ ಕಟ್ಟಿಕೊಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !