ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾಕುಮಾರಿಗೆ ನೂರರ ಸಂಭ್ರಮ

Last Updated 23 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಬೇಂದ್ರೆಯವರ ಮೊದಲ ಪ್ರಕಟಿತ ಕೃತಿ ಕೃಷ್ಣಾಕುಮಾರಿ ಒಂದು ಖಂಡ ಕಾವ್ಯ. ಅದು 1922ರಲ್ಲಿ ಪ್ರಕಟವಾಯಿತು. ಅದನ್ನು ಧಾರವಾಡದ ‘ಶಾರದಾ ಮಂಡಲ ಪುಸ್ತಕ ಮಾಲೆ’ಯಿಂದ ಪ್ರಕಟಿಸಿದವರು ಆಲೂರು ವೆಂಕಟರಾಯರು. ಅವರು ಅದರ ‘ಬಿನ್ನಹ’ದಲ್ಲಿ, ‘ಈ ಅರೆ ಅರಳಿದ ಮೊಗ್ಗೆಯ ಸುವಾಸನೆಯನ್ನು ಅರಸಿಕರು ಕೂಡಾ ಮೂಸಿಸಿ ಮೋದಪಡಲೆಂದು ಹಾರೈಸುವ’ ಎಂದಿದ್ದಾರೆ.

ಬೇಂದ್ರೆಯವರನ್ನು ಸೆಳೆದು ಆಡಿಸಿದ ಕವಿ ಲಕ್ಷ್ಮೀಶ. ಆತನ ಕಾವ್ಯ ರಚನಾ ಶೈಲಿ, ಶಬ್ದಪ್ರಯೋಗ ಚಾತುರ್ಯ, ಪ್ರತಿಮಾ ಕೌಶಲಗಳನ್ನು ‘ಕೃಷ್ಣಾಕುಮಾರಿ’ಯಲ್ಲಿ ಕಾಣಬಹುದು. ಈ ಕೃತಿಯನ್ನು ಅವರು ‘ಪಾಮರರನ್ನು ರಂಜಿಸಿದ ಕವಿ ಲಕ್ಷ್ಮೀರಮಣನಾಸ್ಯಚಂದ್ರನಿಗೆ ಈ ನಕ್ಷತ್ರ ಮಾಲೆಯನ್ನು ಸಮರ್ಪಿಸುವೆನು’ ಎಂದು ಅರ್ಪಿಸಿದ್ದಾರೆ. ನಕ್ಷತ್ರಮಾಲೆ ಎಂಬ ನುಡಿಗೆ ತಕ್ಕಂತೆ ಕಾವ್ಯದಲ್ಲಿ 27 ವಾರ್ಧಕ ಷಟ್ಪದಿಗಳಿವೆ. ಇದರಲ್ಲಿ ಇಪ್ಪತ್ತಾರು ವಯಸ್ಸಿನ ಯುವಕವಿಯ ಕಾವ್ಯ ಪ್ರಯೋಗದ ಉತ್ಸಾಹ, ಆದರ್ಶ, ಹೆಣ್ಣಿನ ಬಗೆಗಿನ ಗೌರವ ಅಂತಃಕರಣದ ಪ್ರಕಾಶವಿದೆ.

ಬೇಂದ್ರೆಯವರು ಆ ಖಂಡಕಾವ್ಯಕ್ಕೆ ಆಧರಿಸಿರುವುದು ಲೆ.ಕ. ಜೇಮ್ಸ್‌ಟಾಡ್‌ ಅವರ Annals and antiquities of Rajasthan (1929) ಮತ್ತು ಚ.ವಾಸುದೇವಯ್ಯ ಅವರ ಆರ್ಯಕೀರ್ತಿ (1896) ಪುಸ್ತಕಗಳು ಎಂದು ತಿಳಿಸಿದ್ದಾರೆ. ಅದರ ಕಥೆಯನ್ನು ಖಂಡಕಾವ್ಯದ ಪ್ರಾರಂಭದಲ್ಲಿ ಗದ್ಯರೂಪದಲ್ಲಿ ನೀಡಿದ್ದಾರೆ. ಹಾಗಾಗಿ ಅದು ಚಂಪೂ ಕಾವ್ಯಲಕ್ಷಣವನ್ನು ಹೊಂದಿದೆ. ಆ ಕಥೆ ಹೀಗಿದೆ:

ಉದಯಪುರದ ರಾಣಾ ಭೀಮಸಿಂಹನು ತನ್ನ ಪ್ರೀತಿಯ ಸುಂದರ ಮಗಳು ಕೃಷ್ಣಾಕುಮಾರಿಯನ್ನು ಜೋಧಪುರದ ರಾಜನಿಗೆ ಕೊಡಬೇಕು ಎಂದು ಮೊದಲೇ ಗೊತ್ತು ಮಾಡಿದ್ದ. ಅಕಸ್ಮಾತ್ತಾಗಿ ಜೋಧಪುರದ ರಾಜ ತೀರಿಹೋಗಲು ಜಯಪುರದ ಜಗತ್‌ಸಿಂಹನು ಕೃಷ್ಣಾಕುಮಾರಿಯನ್ನು ತನಗೆ ವಿವಾಹ ಮಾಡಿಕೊಡಲು ಭೀಮಸಿಂಹನಿಂದ ಒಪ್ಪಿಗೆ ಪಡೆದ.

ಅದೇ ಸಮಯದಲ್ಲಿ ಜೋಧಪುರದ ರಾಜನ ಸ್ಥಾನಕ್ಕೆ ಬಂದ ಮಾನಸಿಂಹನು ತಾನು ಕೃಷ್ಣಾಕುಮಾರಿಗೆ ತಕ್ಕ ವರನೆಂದು ಭೀಮಸಿಂಹನಿಗೆ ಹೇಳಿ ಕಳುಹಿಸಿದ. ಸಿಂಧ್‌ ಪ್ರ್ಯಾಂತದ ರಾಜನು ಮಾನಸಿಂಹನ ಬೆಂಬಲಕ್ಕೆ ನಿಂತು ಜಗತ್‌ಸಿಂಹನನ್ನು ಸೋಲಿಸಿದ. ಅದೇ ಸಮಯಕ್ಕೆ ವಿಧಿ ಅಮೀರ್‌ಖಾನನನ್ನು ಅಲ್ಲಿಗೆ ಕಳುಹಿಸಿತು. ಅವನ ಕ್ರೌರ್ಯಕ್ಕೆ ರಜಪೂತರು ನಡುಗಿಹೋದರು.

ಅಂತಹ ಪರಿಸ್ಥಿತಿಯ ಒಂದು ರಾತ್ರಿ ಕೃಷ್ಣಾಕುಮಾರಿಯು ವಿಷಸೇವಿಸಿ ಕಾಳನಿದ್ರೆಗೆ ವಶವಾದಳು.

ಬೇಂದ್ರೆಯವರು ಕೃಷ್ಣಾಕುಮಾರಿಯ ಸಾವಿನ ರಾತ್ರಿಯನ್ನು ಅಮಾವಾಸ್ಯೆ ಎಂದು ಕಲ್ಪಿಸಿಕೊಂಡಿದ್ದಾರೆ. ಆ ತೆರೆಯ ಹಿಂದೆ ಮೇಳಗೊಂಡಿದ್ದ ಚಿಕ್ಕಿಗಳು ಸೌಂದರ್ಯಶಕ್ತಿಯನ್ನು ಕುರಿತು ಹಾಡಿದವು ಎಂದು ಚಿತ್ರಿಸಿದ್ದಾರೆ.

ಸೌಂದರ್ಯವೆಂಬ ಕಟುವಿಷವೇ ಪೀಯೂಷವೇ!

ಸೌಂದರ್ಯವೆಂಬಮೃತಗರ್ಭ ಬೇವೆ ಮಾವೆ!

ಸೌಂದರ್ಯವೆಂಬ ರತ್ನವ ಹೆಡೆಯೊಳಿಟ್ಟಿರುವ ಹಾವೆ,
ಸುರವಂದ್ಯ ಆವೆ!

ಹೆಣ್ಣಿನ ಸೌಂದರ್ಯ ಅಮೃತ, ಮಾವು, ಕಾಮಧೇನು. ಅಂದವೇ ಅದರ ಐಸಿರಿ. ಆ ಪವಿತ್ರಾತ್ಮಳನ್ನು ಕುಟುಂಬ ಮತ್ತು ಸಮಾಜ ಉತ್ತಮವಾಗಿ ಕಂಡು ಪೋಷಿಸದಿದ್ದರೆ ಆಕೆ ಕಟುವಿಷ, ಬೇವು, ಹಾವು ಆಗುತ್ತಾಳೆ ಎಂಬ ಚಿಂತನೆಯನ್ನು ಸಾರಿದ್ದಾರೆ.

ಕೃಷ್ಣಾಕುಮಾರಿಯು ವಿಷದ ಮೊದಲ ಬಟ್ಟಲನ್ನು ಕುಡಿಯುವಾಗ ತಮೋವಿಕಾರಗಳು ಪ್ರಬಲವಾಗುತ್ತವೆ. ಆಗ ಅವಳು ತನ್ನ ಜನ್ಮ, ಬಾಲ್ಯ, ಯೌವನ, ಹೆಣ್ತನ, ಚೆಲುವನ್ನು ನೆನೆದು ನೋಯುತ್ತಾಳೆ. ಕನ್ಯೆಯಾದ ತನ್ನನ್ನು ರಕ್ಷಿಸಲಾಗದ ರಾಜಪುತ್ರ ಕುಲದ ಷಂಡ ಗಂಡಸುತನಕ್ಕೆ ಥೂ ಎನ್ನುತ್ತಾಳೆ.

ವಿಷದ ಎರಡನೇ ಬಟ್ಟಲನ್ನು ಕುಡಿಯುವಾಗ ರಜೋಗುಣಗಳು ಮೇಲೆದ್ದು ಬರುತ್ತವೆ. ‘ಗರ್ವದಿಂದಿರಾಗು ಕ್ಷತ್ರಿಯನ ಪ್ರೇಮದ ಪುತ್ರಿ’ ಎಂದು ಸಾವನ್ನು ಎದುರಿಸಲು ಸಿದ್ಧಳಾಗುತ್ತಾಳೆ.ವಿಷದ ಮೂರನೇ ಬಟ್ಟಲನ್ನು ಕುಡಿಯುವಾಗ ಸಾತ್ವಿಕ ಬುದ್ಧಿಯು ಪ್ರಬಲವಾಗುತ್ತದೆ. ‘ಸಾಯುವೆನು ಸಂತೋಷದಿಂದ’ ಎಂದು ತೀರ್ಮಾನಿಸುತ್ತಾಳೆ.ಅವಳು ದೇವಸ್ವರೂಪರಾದ ತಾಯಿ ತಂದೆಯರಿಗೆ, ನಾಡಿಗೆ, ಸತ್ಯ ಸ್ವರೂಪದ ಪ್ರೇಮಕ್ಕೆ, ಈಶ್ವರನಿಗೆ ಪಂಚಪ್ರಾಣಗಳನ್ನು ಅರ್ಪಿಸಿದಳು ಎಂದು ಕವಿ ಬಣ್ಣಿಸಿದ್ದಾರೆ.

ಪರಾಂತಃಕರಣ ಪ್ರವೇಶವುಳ್ಳ ಕವಿ ಅಂಬಿಕಾತನಯದತ್ತರು ಕಾವ್ಯನಾಯಿಕೆಯ ನಿರ್ಯಾಣ ಮಂಗಳವನ್ನು ಹೀಗೆ ಹಾಡಿದ್ದಾರೆ.

ಪ್ರೇಮಲತೆ! ಮೂರ್ತಿಮಾನ್‌ ಪ್ರೇಮಲತೆಯೇ! ನಿನ್ನ

ಕಾಮಲತೆಯೆಂದು ಕಾಮಿಸಿದರೌ! ನಿನ್ನನ್ನು

ಹೋಮಿಸಿದರೌ ಕುಸುಮ ಸುಕುಮಾರ ಕುವರಿಯೇ

ಕಾಮಾಗ್ನಿ ಹೋತ್ರದಲ್ಲಿ!

ಕೃಷ್ಣಾಕುಮಾರಿ ಸೌಂದರ್ಯದ ಸಂಕೇತವಾಗಿದ್ದಾಳೆ. ಸೌಂದರ್ಯಕ್ಕೆ ಎಲ್ಲಾದರೂ ಸಾವುಂಟೇ, ದಿವ್ಯಾನುಭವದ (ಸತ್ಯ, ಶಿವ, ಸುಂದರ) ಮೂಲ ಲಕ್ಷಣಗಳಲ್ಲಿ ಒಂದಾದ ಸೌಂದರ್ಯವು ನಾಶವಾಗುತ್ತದೆ ಎನ್ನುವುದಾದರೆ ದಿವ್ಯಾನುಭವದ ಕಲ್ಪನೆಯನ್ನೇ ನಾವು ಮರುವಿವೇಚಿಸಬೇಕಾಗುತ್ತದೆ. ಹಾಗಾಗಿ ಈ ಖಂಡ ಕಾವ್ಯದಲ್ಲಿ ಕೃಷ್ಣಾಕುಮಾರಿ ಅಥವಾ ಸೌಂದರ್ಯ ಸಾಯುವುದಿಲ್ಲ. ಬದಲಾಗಿ ಇಲ್ಲಿ ಸೌಂದರ್ಯವೆಂಬುದು ತನ್ನ ಲೌಕಿಕ ಕೈಂಕರ್ಯವನ್ನು ನೀಗಿಕೊಂಡು ಅಲೌಕಿಕದ ಸೇವೆಗೆ ನಿಲ್ಲುತ್ತದೆ.

ಯಾವನೆನ್ನನು ದಿವ್ಯಗತಿಯ ಸೋಪಾನವನು

ಜೀವಭಾವದ ಬೆರಳುಕೊಟ್ಟು ಹತ್ತಿಸಿದನೋ

ಆ ವರೆಗೆ ಈಶ್ವರಗೆ ಶಾಶ್ವತದಿ

ಈ ಪಂಚಪ್ರಾಣವನರ್ಪಿಸಿದೆನು

ಎಂದು ಹಾಡಿ ದಿವ್ಯ ಜೀವನದ ಹೊಸ್ತಿಲಿಗೆ ಆಕೆ ಬರುತ್ತಾಳೆ. ಕೊನೆಗೂ ಸೌಂದರ್ಯ ಸಾಯುವುದಿಲ್ಲ. ಅರ್ಪಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT