ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಗಾಯಗೊಂಡಿದೆ ಇರುಳು, ಮೂಕವಾಗಿದೆ ಕೊರಳು

Last Updated 7 ಜನವರಿ 2023, 19:30 IST
ಅಕ್ಷರ ಗಾತ್ರ

ಕೃತಿ: ಭಾಗ್ಯಳ ತಂದೆ
ತಮಿಳು ಮೂಲ: ಇಮೈಯಮ್
ಕನ್ನಡಕ್ಕೆ: ಕನಕರಾಜ್ ಆರನಕಟ್ಟೆ
ಪು: 52; ಬೆ: ರೂ. 65
ಪ್ರ: ಅಹರ್ನಿಶಿ, ಶಿವಮೊಗ್ಗ.
ಫೋನ್: 9449174662

***

ಮೂರು ವರ್ಷಗಳ ಕುದಿಮೌನದ ನಂತರ ಮಗಳೊಂದಿಗೆ ಮಾತನಾಡುವ ಅಪ್ಪ ಹೇಳುವ ಮಾತು – ‘ಊಟ ಮಾಡು’. ಅಪ್ಪ ಮುಂದಿಟ್ಟ ತಟ್ಟೆಯಿಂದ ತುತ್ತು ಬಾಯಿಗಿಡಲು ಮಗಳಿಗೆ ಧೈರ್ಯವಿಲ್ಲ. ಅನ್ನದಲ್ಲಿ ಅಪ್ಪ ವಿಷ ಕಲೆಸಿರಬಹುದೆ?

ಈ ರಾತ್ರಿ ಮಗಳನ್ನು ಮುಗಿಸಿಯೇ ಮುಗಿಸುತ್ತೇನೆ ಎಂದು ಅಪ್ಪ ತನ್ನ ಪಂಚೆಯನ್ನು ದಾಟಿ ಆಣೆ ಮಾಡಿ ಊರಿಗೆ ಮಾತು ಕೊಟ್ಟು ಬಂದಿರುವುದು ಮಗಳಿಗೆ ಗೊತ್ತಿದೆ. ಇದಕ್ಕೆ ಮೊದಲು ಕೂಡ ಮಗಳು ಸಾಯಲೆಂದು ವಿಷದ ಬಾಟಲಿ ಹಾಗೂ ಹಗ್ಗವನ್ನು ಅಪ್ಪ ಎದುರಿಗಿಟ್ಟುಹೋದುದು ಅವಳಿಗೆ ನೆನಪಿದೆ. ಈಗ ಊಟದ ತಟ್ಟೆ ಎದುರಿಗಿದೆ.

ಅಪ್ಪ ಮತ್ತೆ ಹೇಳುತ್ತಾನೆ: ‘ಅಳಬೇಡ. ತಿನ್ನೋವಾಗ ಕಣ್ಣಲ್ಲಿ ನೀರ್‌ ಸುರಿಸಬಾರ್ದು... ಈ ಮನೇಲಿ ನಿನಗೆ ಇದೇ ಕೊನೆ ಊಟ. ತಿನ್ನು’.

ಮಗಳು ಊಟ ಮಾಡುತ್ತಾಳೆ; ಅನ್ನದೊಂದಿಗೆ ಕಣ್ಣೀರನ್ನೂ ಬೆರೆಸಿಕೊಂಡು.

ಊಟ ಮುಗಿಯುವ ವೇಳೆಗೆ ಅಪ್ವ ಮತ್ತು ಮಗಳು ಸತ್ತು ಮತ್ತೆ ಹುಟ್ಟುತ್ತಾರೆ. ಅಪ್ಪನ ಹೆಸರು ಪಳನಿ. ಮಗಳು ಭಾಗ್ಯ.

ಕನಕರಾಜ್‌ ಆರನಕಟ್ಟೆ ಕನ್ನಡಕ್ಕೆ ತಂದಿರುವ ‘ಭಾಗ್ಯಳ ತಂದೆ’, 2022ರ ‘ಕುವೆಂಪು ರಾಷ್ಟ್ರೀಯ ಪ್ರಶಸ್ತಿ’ ಪಡೆದ ತಮಿಳು ಲೇಖಕ ಇಮೈಯಮ್‌ ಅವರ ಕಥೆ.

ಕಥೆಯಲ್ಲಿರುವ ಮುಖ್ಯ ಪಾತ್ರಗಳು ಐದು. ಪಳನಿ–ಸಾಮಿಯಮ್ಮಾ ದಂಪತಿ. ಮಕ್ಕಳಾದ ಭಾಗ್ಯ ಹಾಗೂ ಸೆಲ್ವರಾಣಿ. ಪಳನಿಯ ತಾಯಿ ತುಳಸಿ. ಸೆಲ್ವರಾಣಿಗೆ ಕಾಲು ಐಬು. ಊರಿಗೆ ಜಾತಿಯ ಐಬು. ಪ್ರೇಮವನ್ನು ಐಬೆನ್ನಬಹುದೆ?

ಕೇರಿಯ ಹುಡುಗನನ್ನು ಭಾಗ್ಯ ಪ್ರೇಮಿಸುವುದರೊಂದಿಗೆ ಊರಿನಲ್ಲಿ ಉರಿ ಶುರುವಾಗಿದೆ. ಈ ಪ್ರೇಮಪ್ರಕರಣ, ಗಂಡಸರಿಗೆ ಪಂಚೆ ಉಟ್ಟುಕೊಂಡು ಓಡಾಡಲು ಅವಮಾನ ಎನ್ನಿಸಿದೆ. ಹೆಂಗಸರ ಸೆರಗಿನ ಪಾವಿತ್ರ್ಯದ ಬಗ್ಗೆ ಶಂಕೆ ಉಂಟಾಗಿದೆ. ಊರಿಗೆ ಮರ್ಯಾದೆ ಮರಳಬೇಕೆಂದರೆ, ಭಾಗ್ಯ ಸಾಯಬೇಕು. ‘ಮಗಳನ್ನು ಸಾಯಿಸಿ ಊರಿನ ಮರ್ಯಾದೆ ಉಳಿಸು. ಇಲ್ಲವೇ, ಕುಟುಂಬದೊಂದಿಗೆ ಬಲಿಯಾಗು’. ಪಳನಿ ಮೊದಲ ಆಯ್ಕೆಯನ್ನೇ ಒಪ್ಪಿಕೊಳ್ಳುತ್ತಾನೆ. ಒಪ್ಪಿಕೊಳ್ಳದೆ ಹೋದರೆ, ಅಕ್ಕಪಕ್ಕದ ಊರುಗಳಲ್ಲಿ ಏನೇನಾಗಿದೆ ಎನ್ನುವ ಉದಾಹರಣೆಗಳು ಅವನಿಗೆ ನೆನಪಿನಲ್ಲಿವೆ.

ಮಗಳನ್ನು ಕೊಲ್ಲುವುದಾಗಿ ಪಂಚಾಯಿತಿಗೆ ಮಾತು ಕೊಟ್ಟು ಬಂದ ಆ ರಾತ್ರಿ, ಪಳನಿಯೊಳಗಿನ ಅಪ್ಪ ಹಾಗೂ ಭಾಗ್ಯಳೊಳಗಿನ ಮಗಳು ಜಾಗೃತಗೊಳ್ಳುತ್ತಾರೆ. ಆದರೆ, ಊರು ಬದಲಾಗುವುದಿಲ್ಲವೆನ್ನುವುದು ಎಲ್ಲರಿಗೂ ಗೊತ್ತು.

ಯಾವ ಪಂಚೆಯ ಮರ್ಯಾದೆಯ ಮೇಲೆ ಪಳನಿ ಆಣೆ ಮಾಡಿದ್ದನೋ, ಅದೇ ಪಂಚೆಯನ್ನು ಮಗಳಿಗೆ ಸುತ್ತಿ, ‘ಎಲ್ಲೋ ಬದುಕಿಕೋ ಹೋಗು’ ಎಂದು ಕಳಿಸುತ್ತಾನೆ.

ಇದು ಕಥೆ. ಒಂದು ಸುದೀರ್ಘ ಇರುಳಿನ ಕಥೆ. ಕೊನೆಗಾದರೂ ಬೆಳಕು ಹರಿಯುತ್ತದಾ? ಹೌದೆನ್ನುವ ಧೈರ್ಯ ಕಥೆಯನ್ನು ಓದುವ ಯಾರಿಗೂ ಬರುವುದಿಲ್ಲ.

‘ಭಾಗ್ಯಳ ತಂದೆ’ ಕಥೆ ಏನನ್ನೂ ಹೇಳುವುದಿಲ್ಲ, ಕಾಣಿಸುತ್ತದೆ. ಇದು ಮಾನವೀಯತೆಗೆ ವಿಷವುಣ್ಣಿಸುವ ಕಥೆ. ಹೆಣ್ಣನ್ನು ಗಂಡಿನ ಪಂಚೆಯ ಬಿಳುಪೆಂದು ಭಾವಿಸಿದ ಪುರುಷ ಅಹಂಕಾರ, ಜಾತಿಯ ಠೇಂಕಾರವನ್ನು ಕಥೆ ಕಾಣಿಸುತ್ತದೆ. ನಾವು ಈಗಾಗಲೇ ಹಲವು ಬಾರಿ ಕೇಳಿರುವ ಕಥೆಯನ್ನೇ ಇಮೈಯಮ್‌ರ ಮೂಲಕ ಮತ್ತೆ ಓದುತ್ತಿದ್ದರೂ, ಇದು ಮುಗಿಯದ ಕಥೆ ಎನ್ನಿಸುತ್ತದೆ. ಊರಿನ ಕ್ರೌರ್ಯದ ಕಥೆಯಷ್ಟೇ ಆಗದೆ, ತಂದೆ–ಮಗಳ ಕಳ್ಳುಬಳ್ಳಿಯ ಕಥೆಯಾಗಿರುವುದು, ಕುಟುಂಬದ ಕಥೆಯಾಗಿರುವುದು ‘ಭಾಗ್ಯಳ ತಂದೆ’ಯನ್ನು ಹೆಚ್ಚು ಆಪ್ತವಾಗಿಸಿದೆ.

ಕಥೆಯಲ್ಲಿನ ನತದೃಷ್ಟ ಕುಟುಂಬದ ಪ್ರತಿಯೊಬ್ಬರೂ ಪರಸ್ಪರ ಶಾಪ ಹಾಕಿಕೊಳ್ಳುತ್ತಾರೆ. ಅಸಹಾಯಕತೆಯಿಂದ ಶಪಿಸಿಕೊಳ್ಳುತ್ತಲೇ ಪ್ರೇಮವನ್ನು ಅಭಿವ್ಯಕ್ತಿಸುತ್ತಾರೆ. ಮನೆಯವರ ಬದುಕಿಗಾಗಿ ತಮ್ಮನ್ನು ತಾವೇ ಕೊಂದುಕೊಳ್ಳಲು ಬಯಸುತ್ತಾರೆ.

‘ಭಾಗ್ಯಳ ತಂದೆ’ ಏನನ್ನೂ ಉಪದೇಶಿಸುವುದಿಲ್ಲ. ಒಂದೂರು, ನಮ್ಮದೇ ಆಗಿರಬಹುದಾದ ಊರು, ಹೀಗಿದೆ ನೋಡಿ ಎಂದು ಹೇಳುತ್ತಾ, ಆ ಊರಿನಲ್ಲಿ ನಮ್ಮನ್ನು ಕೈಹಿಡಿದು ನಡೆಸುತ್ತದೆ. ಮಗಳ ಮುಂದೆ ಅಪ್ಪ ಅನ್ನದ ತಣಿಗೆಯಿಟ್ಟ ಮನೆಗೆ ನಮ್ಮನ್ನು ಕರೆದೊಯ್ಯುತ್ತದೆ. ಭಾಗ್ಯಳ ಕುಟುಂಬದ ಕಣ್ಣೀರು ನಮ್ಮ ಕಣ್ಣುಗಳನ್ನೂ ಹನಿಗೂಡಿಸುತ್ತದೆ.

ಆ ಗಾಯಗೊಂಡ ಇರುಳಿನಲ್ಲಿ ಭಾಗ್ಯ ಮತ್ತು ಪಳನಿಯೊಂದಿಗೆ ನಾವೂ ತಡವರಿಸಿ ನಡೆಯದೆ, ಕಳೆದುಹೋಗದೆ ವಿಧಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT