ಶನಿವಾರ, ಜೂನ್ 25, 2022
22 °C

‘ನಗರ ನರಕ’ದಲ್ಲಿ ಜೀವನ್ಮುಖಿ ಪಯಣ

ಎಚ್. ದಂಡಪ್ಪ Updated:

ಅಕ್ಷರ ಗಾತ್ರ : | |

Prajavani

ಕಾಲಯಾತ್ರೆ
ಲೇ: ಕೃಷ್ಣಮೂರ್ತಿ ಹನೂರು
ಪ್ರ: ಅಂಕಿತ ಪುಸ್ತಕ, 080 26617100
ಪುಟಗಳು: 120, ಬೆಲೆ: 120

ಕೃಷ್ಣಮೂರ್ತಿ ಹನೂರರ ಇಲ್ಲಿಯವರೆಗಿನ ಕಥೆ, ಕಾದಂಬರಿಗಳು ಗ್ರಾಮೀಣ ಬದುಕು ಮತ್ತು ಸಂಸ್ಕೃತಿಯನ್ನು ಹಿಡಿದಿಟ್ಟರೆ, ‘ಕಾಲಯಾತ್ರೆ’ ಕಾದಂಬರಿಯು ನಗರ ಪ್ರದೇಶದಲ್ಲಿ ಹಳ್ಳಿಗರು ಅನುಭವಿಸುವ ಕಷ್ಟ ಕೋಟಲೆಗಳನ್ನು ಅನಾವರಣಗೊಳಿಸುತ್ತದೆ. ಬದುಕನ್ನು ಕಟ್ಟಿಕೊಳ್ಳಬೇಕೆಂಬ ಹಂಬಲದಿಂದ ವಲಸೆ ಬಂದವರನ್ನು ಆಧುನಿಕತೆಯ ಹೊಡೆತ ಅಪ್ಪಚ್ಚಿ ಮಾಡುತ್ತದೆ. ತಮ್ಮ ಬದುಕಿನಲ್ಲಿ ಬಂದ ನೋವು, ಸಂಕಟ, ದುಃಖದುಮ್ಮಾನಗಳ ನಡುವೆ ನಿರ್ಲಿಪ್ತವಾಗಿ ಬದುಕುವ ಮುಗ್ಧರ ದಾರುಣವಾದ ಸ್ಥಿತಿಯನ್ನು ಈ ಕಾದಂಬರಿ ಕಲಾತ್ಮಕವಾಗಿ ಹಿಡಿದಿಟ್ಟಿದೆ.

ದೂರದ ಜೇವರ್ಗಿಯಿಂದ ಮಾರುತಿ ತಳವಾರ, ಅವನ ಹೆಂಡತಿ ಯೆರಿ ಲಕ್ಷ್ಮಮ್ಮ, ಪುಟ್ಟ ಮಗಳು ಸರಸಿ, ಮುಗ್ಧನಾದ ಅಲ್ಲಾಭಕ್ಷ ಲಗಾಟಿ, ನಾಯಿ ಸಿಂಗ ಇವರೆಲ್ಲ ಬದುಕು ಅರಸುತ್ತಾ ಬೆಂಗಳೂರಿಗೆ ಬರುತ್ತಾರೆ. ಪೀಣ್ಯದ ಲಾರಿ ಕಂಪನಿಯಲ್ಲಿ ಮಾರುತಿ ಡ್ರೈವರ್ ಆಗಿ ಕೆಲಸ ನಿರ್ವಹಿಸಿದರೆ, ಬುದ್ಧಿ ಇಲ್ಲದ ಲಗಾಟಿ ಅಲ್ಲಿಯೇ ಕ್ಲೀನರ್. ಮಾರುತಿ, ಲಾರಿಯಲ್ಲಿ ಹೊರಗೆ ಹೋದರೆ ತಿಂಗಳಾನುಗಟ್ಟಲೆ ಬರುತ್ತಿರಲಿಲ್ಲ.

ಮನೆ ನಿರ್ವಹಣೆಗಾಗಿ ಯೆರಿ ಲಕ್ಷ್ಮಮ್ಮ ಲಾರಿ ಕಚೇರಿಯ ಮ್ಯಾನೇಜರ್‌ನಿಂದ ಹರಿಶ್ಚಂದ್ರ ಘಾಟಿನಲ್ಲಿ ಕೆಲಸ ದೊರಕಿಸಿಕೊಳ್ಳುತ್ತಾಳೆ. ಸ್ಮಶಾನದಲ್ಲಿ ಅವರ ಸಂಸಾರ ನೆಲೆಯೂರುತ್ತದೆ. ಒಂದು ದಿನ ಸಂಸ್ಕಾರ ಮಾಡಿದ್ದ ಶ್ರೀಮಂತನೊಬ್ಬನ ಹೆಣದ ಕಳ್ಳತನದ ಆರೋಪದಿಂದ ಮಾರುತಿ ಮತ್ತು ಲಗಾಟಿ ಪೊಲೀಸ್ ಸ್ಟೇಷನ್‌ ಸೇರಬೇಕಾಗುತ್ತದೆ. ಇವರಿಬ್ಬರೂ ಅಮಾಯಕರೆಂದು ಅರಿತ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬ ಅವರನ್ನು ಬಿಡುಗಡೆ ಮಾಡುತ್ತಾನೆ. ಇದು ಸ್ಥೂಲವಾದ ಕಥೆ.

ಈ ಕಾದಂಬರಿಯಲ್ಲಿ ಮುಖ್ಯವಾಗಿ ನಾಲ್ಕು ನೆಲೆಗಳಲ್ಲಿ ಕಥನವನ್ನು ನಿರ್ವಹಿಸಲಾಗಿದೆ. ಮನುಷ್ಯನಿಗೂ ಅವನ ಕಣ್ಣಿಗೆ ಕಾಣುವ ಹೊರಜಗತ್ತಿಗೂ ಇರುವ ಸಂಬಂಧ, ಮನುಷ್ಯನಿಗೂ ಇತರ ಮನುಷ್ಯರಿಗೂ ಇರುವ ಸಂಬಂಧ, ಮನುಷ್ಯನಿಗೂ ಲೋಕದ ಇತರ ಅದೃಶ್ಯವಾಗಿರುವ ಶಕ್ತಿಗಳಿಗೂ ಇರುವ ಸಂಬಂಧ ಹಾಗೂ ಮನುಷ್ಯನ ಅಂತರಂಗ ಜಗತ್ತಿನ ಅನಾವರಣ –ಈ ಕಥನ ಶೈಲಿ ಕೃತಿಯ ವೈಶಿಷ್ಟ್ಯ.

ಹಣವೇ ಪ್ರಧಾನವಾದ ನಗರಗಳ ನಾಗರಿಕತೆಯಲ್ಲಿ ಮನುಷ್ಯ ಸಂಬಂಧಗಳಿಗೆ ಬೆಲೆಯೇ ಇಲ್ಲ. ಇಂತಹ ವ್ಯವಸ್ಥೆಯಲ್ಲಿ ಮುಗ್ಧ ಜೀವಿಗಳು ಬಲಿಯಾಗುತ್ತಿರುತ್ತಾರೆ. ಆಧುನಿಕತೆಯ ಸಂದರ್ಭದಲ್ಲಿ ಹಣ ಮನುಷ್ಯನ ಬುದ್ಧಿ ಮತ್ತು ಹೃದಯಗಳ ಮೇಲೆ ಆಕ್ರಮಣ ಮಾಡುತ್ತದೆ. ದಯೆ, ಸ್ನೇಹ, ಸತ್ಯ, ಸೌಜನ್ಯ ಮೈಗೂಡಿಸಿಕೊಂಡ ಅಮಾಯಕರು ಕಷ್ಟಪಡುವಂತಾಗುತ್ತದೆ.

ಮಾರುತಿ, ಯೆರಿ ಲಕ್ಷ್ಮಮ್ಮ ಲಗಾಟಿಯಂತಹವರ ಬದುಕೇ ಇಲ್ಲಿ ಶಿಥಿಲವಾದದ್ದು, ಮಾನಸಿಕವಾಗಿ ಅತಂತ್ರವಾದದ್ದು. ಆಳದಲ್ಲಿ ಇವರು ದುಃಖಿಗಳಾಗಿದ್ದರೂ ಅತೃಪ್ತರಲ್ಲ. ಅವರು ತಮ್ಮ ಬಡತನದ ಆ ಸ್ಥಿತಿಯಲ್ಲಿಯೇ ಸಂತೋಷ ಕಾಣುವಂತಹವರು. ಪೊಲೀಸ್ ಸ್ಟೇಷನ್ನಿನಲ್ಲೂ ಅವರು ಹಾಡುತ್ತಾ ತಮ್ಮ ನೋವು ಮರೆಯುತ್ತಾರೆ. ಅಷ್ಟೇ ಏಕೆ, ಸ್ಮಶಾನದಲ್ಲಿ ಕುಳಿತಿರುವಾಗಲೂ ನಾಟಕದ ಹಾಡುಗಳು, ಕತೆಗಳು, ಪ್ರಯಾಣದ ಅನುಭವಗಳು ಅವರ ನೆರವಿಗೆ ಬರುತ್ತವೆ. ಕಾರಂತರ ‘ಚೋಮನದುಡಿ’ ಕಾದಂಬರಿಯಲ್ಲಿ ದುಡಿಯನ್ನು ಬಾರಿಸುತ್ತಾ ಚೋಮ ತನ್ನ ನೋವನ್ನು ಮರೆಯುವ ಸನ್ನಿವೇಶ ಇಲ್ಲಿ ನೆನಪಾಗುತ್ತದೆ. ನಗರದ ಹೊಸ ಅನುಭವವನ್ನು ಮಾರುತಿಯ ಕುಟುಂಬ ಸೃಜನಾತ್ಮಕವಾಗಿ ಎದುರಿಸುತ್ತದೆ. ತಪ್ಪಿಸಿಕೊಳ್ಳುವುದಿಲ್ಲ. ಇದು ಬಹಳ ಮುಖ್ಯವಾದದ್ದು.

ಕಾದಂಬರಿಯ ‘ರೂಪ’ ಭಿನ್ನವಾಗಿದೆ. ಜನಪದ ಮಹಾಕಾವ್ಯಗಳ ಕಥನದ ಧಾಟಿಯಲ್ಲಿ ಇಲ್ಲಿಯ ನಿರೂಪಣೆ ಇದೆ. ಇಲ್ಲಿನ ಘಟನೆಗಳು ಕಾಲಕ್ರಮದ ಸಾತತ್ಯದಲ್ಲಿ ನಡೆಯುತ್ತವೆ. ಆಧುನಿಕತೆಯಿಂದ ಉಂಟಾಗಿರುವ ವರ್ಗ ತಾರತಮ್ಯ, ಬಡತನ ರೇಖೆಗಿಂತ ಕೆಳಗಿರುವವರ ಸ್ಥಿತಿಗತಿ, ನಮ್ಮ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಪರಿಸ್ಥಿತಿಗಳ ಒತ್ತಡಗಳಲ್ಲಿ ಈ ಕಾದಂಬರಿಯ ರೂಪ ಮೈತಳೆದಿದೆ. ಪಾತ್ರ ಸೃಷ್ಟಿ, ಘಟನೆಗಳು, ವಾಸ್ತವಿಕ / ಕಲ್ಪಿತ ವರ್ಣನೆಗಳು ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ಬರುತ್ತವೆಯಾದ್ದರಿಂದ ಕೆಲವೊಮ್ಮೆ ಘಟನೆಗಳು ಸಾಂಕೇತಿಕ, ಪ್ರತಿಮಾತ್ಮಕ ಸ್ವರೂಪ ಪಡೆದು ಕಾದಂಬರಿ ಧ್ವನಿಪೂರ್ಣವಾಗಿ ಓದುಗನ ಸ್ಪಂದನೆಯನ್ನು ರೂಪಿಸುತ್ತದೆ.

ಯೆರಿ ಲಕ್ಷ್ಮಮ್ಮ ಈ ಕಾದಂಬರಿಯ ಏಕೈಕ ಪ್ರಧಾನ ಸ್ತ್ರೀಪಾತ್ರ. ಈಕೆ ಜಡ ಸ್ವಭಾವದವಳಲ್ಲ. ಸದಾ ಕ್ರಿಯಾಶೀಲತೆಯನ್ನು ಒಳಗೊಂಡಂತಹ ಚೈತನ್ಯಶೀಲ ಸ್ವಭಾವದವಳು. ಬದುಕಬೇಕು, ತನ್ನ ಮಗಳನ್ನು ಓದಿಸಿ ಆಧುನಿಕತೆಯ ಪರಿಸರದಲ್ಲಿ ಅವಳು ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಎಲ್ಲವನ್ನೂ ಸಹನೆಯಿಂದ ಎದುರಿಸುತ್ತಾಳೆ.

ಮಗಳನ್ನು ಓದಿಸಬೇಕೆಂಬ ಉದ್ದೇಶದಿಂದಲೇ ಲಾರಿ ಕಂಪನಿಯ ಮ್ಯಾನೇಜರ್‌ಗೆ ತನ್ನ ಗಂಡ ಅನೈತಿಕ ಮಾರ್ಗ ಹಿಡಿದು ಹಣ ಕಳೆದುಕೊಳ್ಳುತ್ತಿರುವುದಾಗಿ ಸುಳ್ಳುಹೇಳಿ ಕೆಲಸ ದೊರಕಿಸಿಕೊಳ್ಳುತ್ತಾಳೆ. ಅದೇ ಅವಳ ಗಂಡ ಕೆಲಸ ಕಳೆದುಕೊಳ್ಳುವುದಕ್ಕೆ ಕಾರಣವಾಗುತ್ತದೆ. ತನ್ನ ಗಂಡ ಕೆಲಸ ಕಳೆದುಕೊಂಡಿದ್ದಾನೆ ಎಂದು ತಿಳಿದಾಗಲೂ ಅವಳು ನಿರ್ಲಿಪ್ತಳಾಗಿಯೇ ಗಂಡನ ಭಾರವಾದ ಪೆಟ್ಟಿಗೆಯನ್ನು ಹೊತ್ತು ಮನೆಗೆ ಬರುತ್ತಾಳೆ. ಎದೆಗುಂದದೆ, ಬದುಕಿನ ಅಸ್ತಿತ್ವಕ್ಕಾಗಿ ದುಡಿಯಬೇಕು ಎಂಬ ಅಚಲ ನಿರ್ಧಾರ ಮಾಡಿಕೊಳ್ಳುತ್ತಾಳೆ. ಮಾತೃತ್ವದ ಶಕ್ತಿಯ ಸಂಕೇತವಾಗಿ ಆಕೆ ಕಾಣಿಸಿಕೊಂಡಿದ್ದಾಳೆ.

ಈ ಕಾದಂಬರಿಯಲ್ಲಿ ಬರುವ ನಾಯಿ ಸಿಂಗನ ಪಾತ್ರ ವಿಶಿಷ್ಟವಾದದ್ದು. ಜಾರ್ಜ್ ಆರ್ವೆಲ್ ಅವರ ‘ಅನಿಮಲ್ ಫಾರಂ’ ಎಂಬ ಕಾದಂಬರಿಯಲ್ಲಿ ಪ್ರಾಣಿಕತೆಯ ಆಯಾಮವನ್ನು ವಿಸ್ತರಿಸಿ ತನ್ನ ಸಮಕಾಲೀನ ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳನ್ನು ಅನ್ಯೋಕ್ತಿಗೆ ಬಳಸಿಕೊಂಡಂತೆ ಇಲ್ಲಿ ನಾಯಿಯ ಪಾತ್ರ ಬರುತ್ತದೆ. ಮಾರುತಿ ಮತ್ತು ಲಗಾಟಿಯ ಜೀವನಕ್ಕೆ ಅಂಟಿಕೊಂಡೇ ಬರುವ ಸಿಂಗ ಕಾದಂಬರಿಯ ಕೆಲವು ಘಟನೆಗಳನ್ನು ನಿರೂಪಣೆ ಮಾಡುತ್ತದೆ.

ನಗರದ ಬಡತನ ರೇಖೆಗಿಂತ ಕೆಳಗಿನವರ ಬದುಕಿನ ಸ್ವರೂಪವನ್ನು ಅನಾವರಣಗೊಳಿಸುತ್ತದೆ. ಸಿಂಗನ ಪಾತ್ರ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ನಾಯಿ ಹುಲಿಯಾ ಮತ್ತು ಗುತ್ತಿ ಹಾಗೂ ಲಾರೆನ್ಸ್‌ನ ಕಾದಂಬರಿ St. Mawarನಲ್ಲಿ ಕುದುರೆ ಹಾಗೂ `ಲೊ’ಳಿಗಿರುವ ಸಂಬಂಧಗಳು ಓದುಗರ ಮುಂದೆ ಸುಳಿದು ಹೋಗುತ್ತವೆ. ಸಿಂಗ ಪಾತ್ರವು ಸಾಂಕೇತಿಕವಾಗಿದ್ದು ಕಾದಂಬರಿಯ ಅರ್ಥ ಸಾಧ್ಯತೆಗಳನ್ನು ವಿಸ್ತರಿಸಲು ನೆರವಾಗಿದೆ.

ಸಾಹಿತ್ಯ ಕೃತಿಯಲ್ಲಿ ಬರುವ ಕಲ್ಪನೆಗಳು ಮನುಷ್ಯ ತನ್ನನ್ನು ಮತ್ತು ತನ್ನ ಸುತ್ತ ಬದುಕುತ್ತಿರುವ ಮನುಷ್ಯರನ್ನು ತಿಳಿದುಕೊಳ್ಳುವ ಮಹತ್ವದ ಸಾಧನವಾಗಿವೆ. ಕಲ್ಪನೆಗಳಲ್ಲಿ ಎರಡು ವಿಧ. ಮೊದಲನೆಯದು, ನಮ್ಮನ್ನು ಮತ್ತು ನಮ್ಮ ಸುತ್ತಲಿನ ಮನುಷ್ಯರ ವರ್ತನೆಗಳನ್ನು ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡುವ ಕಲ್ಪನೆ. ಎರಡನೆಯದು, ನಮ್ಮ ಆಸೆ ಆಕಾಂಕ್ಷೆಗಳನ್ನು ಒಳ್ಳೆಯ ರೀತಿಯಲ್ಲಿ ನೆರವೇರಿಸಿಕೊಂಡು ಆತಂಕಗಳಿಂದ ಬಿಡುಗಡೆಗೊಳಿಸಿಕೊಳ್ಳುವ ಕಲ್ಪನೆ. ಮೊದಲನೆಯದಕ್ಕೆ ಸಿಂಗ ಉದಾಹರಣೆಯಾದರೆ ಎರಡನೆಯದಕ್ಕೆ ಮಾರುತಿ, ಲಗಾಟಿ ಉದಾಹರಣೆಯಾಗುತ್ತಾರೆ.

ಈ ಕಾದಂಬರಿಯು ಧ್ವನಿಸುವ ಮುಖ್ಯವಾದ ವಿಚಾರವೆಂದರೆ ಅಕ್ಷರಜ್ಞಾನದ ಮಹತ್ವ - ಅಕ್ಷರ ಜ್ಞಾನ ಪಡೆದವರೇ ಸಂಸ್ಕೃತಿವಂತರು, ಅಕ್ಷರ ಜ್ಞಾನವಿಲ್ಲದವರು ಸಂಸ್ಕೃತಿಹೀನರು ಎಂಬ ವಾದವೊಂದು ಇದೆ. ಇದು ಸಮಾನತೆಯನ್ನು ಹೇಳುವುದಿಲ್ಲ. ಅಕ್ಷರ ಜ್ಞಾನದಿಂದ ವಂಚಿತರಾದ ಕೂಲಿಕಾರರು, ಕೃಷಿ ಕಾರ್ಮಿಕರು, ಸ್ತ್ರೀಯರಲ್ಲಿಯೂ ಸಂಸ್ಕೃತಿ ಇರುತ್ತದೆ. ಕಾದಂಬರಿಯ ಕೊನೆಯಲ್ಲಿ ಈ ವಿಚಾರ ಸಾಂಕೇತಿಕವಾಗಿ ಬಂದಿದೆ. ಮಗಳು ಸರಸಿಯು, ಅಪ್ಪ ಕತೆಗಳಲ್ಲಿ ಹೇಳುತ್ತಿದ್ದ ವಜ್ರಗಳು, ಮಣಿಗಳು, ಮುತ್ತು ರತ್ನಗಳು ತನ್ನ ಅಪ್ಪನ ಪೆಟ್ಟಿಗೆಯಲ್ಲಿರಬಹುದೆಂದು ಭಾವಿಸಿರುತ್ತಾಳೆ. ಆದರೆ, ಪೆಟ್ಟಿಗೆ ತೆರೆದು ನೋಡಿದಾಗ ಅದರಲ್ಲಿ ಬರೀ ಪುಸ್ತಕಗಳೇ ಇರುತ್ತವೆ. ಪುಸ್ತಕದೊಳಗೆ ಇರುವ ಅಕ್ಷರಗಳು ಜ್ಞಾನದ ಮಹತ್ವವನ್ನು ಸಂಕೇತಿಸುತ್ತವೆ. ಮಾರುತಿ, ಲಗಾಟಿ, ಲಕ್ಷ್ಮಮ್ಮನವರ ಮುಂದಿನ ಪೀಳಿಗೆ ಅಕ್ಷರ ಕಲಿತು ಸಮಾನತೆ ಗಳಿಸಬೇಕೆಂಬ ಆಶಯವನ್ನು ಕಾದಂಬರಿ ಧ್ವನಿಸುತ್ತದೆ. ಅಲ್ಲದೆ ಕಾದಂಬರಿ ಬಗೆಗಿನ ಮೀಮಾಂಸೆಯ ಸಾಂಸ್ಕೃತಿಕ ಸಂವಾದವನ್ನು ರೂಪಿಸುವ ಲಕ್ಷಣಗಳು ಹನೂರರ ಈ ಕೃತಿಯಲ್ಲಿ ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು