ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಆತ್ಮನಿರ್ಭರ ಗ್ರಾ.ಪಂ ಕಟ್ಟಲು ಕೈಪಿಡಿ

Last Updated 11 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

‘ಭಾರತ ಎನ್ನುವುದು ತನ್ನೊಳಗಿನ ಹಳ್ಳಿಗಳಿಂದ ಜೀವಿಸುತ್ತಿದೆಯೇ ವಿನಾ ನಗರಗಳಿಂದಲ್ಲ ಎನ್ನುವ ವಿಷಯವನ್ನು ಕಾಲೇಜುಗಳಲ್ಲಿ ಕಲಿಯುತ್ತಿರುವ ನಾವು ಮರೆಯುತ್ತಿರುವುದು ವಿಷಾದನೀಯ. ಭಾರತದಲ್ಲಿ ಏಳು ಲಕ್ಷ ಹಳ್ಳಿಗಳಿದ್ದು, ನಗರಗಳಲ್ಲಿ ಸಮೃದ್ಧವಾದ ಶಿಕ್ಷಣ ಪಡೆದ ನೀವು ಈ ಶಿಕ್ಷಣವನ್ನು ಅಥವಾ ಅದರ ಫಲವನ್ನು ಈ ಹಳ್ಳಿಗಳಿಗೆ ತಲುಪಿಸುವ ಹೊಣೆ ಹೊಂದಿದ್ದೀರಿ...’ ದಿನಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಗಾಂಧೀಜಿ ಹೀಗೆ ಉಲ್ಲೇಖಿಸಿದ್ದರು. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯ ಮೂಲ ಎಂದು ಪ್ರತಿಪಾದಿಸುತ್ತ ಬಂದಿದ್ದ ಗಾಂಧೀಜಿಯ ಉದ್ದೇಶಗಳನ್ನು ಈಡೇರಿಸುವಂತೆ ‘21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿ’ ಕೃತಿ ಮೂಡಿಬಂದಿದೆ.

ಐಐಟಿ ಕಾನ್ಪುರದಿಂದ ಎಂ.ಟೆಕ್‌ ಪದವಿ ಪಡೆದು ಅಮೆರಿಕದಲ್ಲಿ ಪಿಎಚ್.ಡಿ ಪೂರ್ಣಗೊಳಿಸಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿರುವ ಶಂಕರ ಪ್ರಸಾದ್‌ ಅವರು ತಮ್ಮ ತಾಂತ್ರಿಕ ಜ್ಞಾನಕ್ಕೆ ಗ್ರಾಮಗಳ ಜನರ ಜೊತೆ ಒಡನಾಡಿದ ಅನುಭವಗಳನ್ನು ಬೆರೆಸಿ ಈ ಕೃತಿ ರಚಿಸಿದ್ದಾರೆ. ಹೀಗಾಗಿ ಇದು ಅನುಭಾವದ ಕೃತಿಯಾಗಿ ಹೊರಹೊಮ್ಮಿದೆ.

ತಂತ್ರಜ್ಞಾನವು ಇಂದು 5ಜಿ ವೇಗದಲ್ಲಿ ಹೆಜ್ಜೆ ಇಟ್ಟಿದ್ದು, ದೇಶದ ಬಹುತೇಕ ಹಳ್ಳಿಗಳು ಅಂತರ್ಜಾಲದ ಸಂಪರ್ಕ ಪಡೆದಿವೆ. ನಾಗರಿಕ ಸೇವೆಗಳೂ ಅಂಗೈಯಲ್ಲಿ ಇರುವ ಮೊಬೈಲ್‌ಗಳಲ್ಲೇ ದೊರಕುತ್ತಿವೆ. ಆದರೆ ಇವುಗಳು ಸೂಕ್ತ ರೀತಿಯಲ್ಲಿ ಫಲಾನುಭವಿಗೆ ತಲುಪುತ್ತಿವೆಯೇ ಎನ್ನುವುದು ಅಷ್ಟೇ ಮುಖ್ಯ. ಗ್ರಾಮಗಳಲ್ಲಿ ತಂತ್ರಜ್ಞಾನದ ಅರಿವು ಇಂದಿನ ಅಗತ್ಯ. ಈ ಕಾರ್ಯದತ್ತ ಕೃತಿಯು ಗಮನಹರಿಸಿದೆ.

ಇಲ್ಲಿನ 39 ಅಧ್ಯಾಯಗಳಲ್ಲಿ ಪಂಚಾಯಿತಿ ಆಡಳಿತದಲ್ಲಿ ದಿಕ್ಸೂಚಿ, ಜಿಪಿಎಸ್‌, ಸಿಕ್ಸ್‌ ಸಿಗ್ಮಾ ಮುಂತಾದ ಡಿಜಿಟಲ್‌ ತಂತ್ರಜ್ಞಾನದ ಬಳಕೆ ಹಾಗೂ ಅದರ ಉಪಯೋಗ, ಪಂಚಾಯಿತಿಯ ಸೇವೆಗಳನ್ನು ಹೇಗೆ ಆನ್‌ಲೈನ್‌ ಮೂಲಕ ಪಡೆಯಬಹುದು, ಬಡತನ ನಿರ್ಮೂಲನೆ, ಆಹಾರ ಭದ್ರತೆ, ಆರೋಗ್ಯ ಸೇವೆ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಗ್ರಾಮ ಪಂಚಾಯಿತಿಗಳು ಏನೇನು ಮಾಡಬಹುದು, ರಾಷ್ಟ್ರಮಟ್ಟದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅವುಗಳ ಜವಾಬ್ದಾರಿ ಹಾಗೂ ಪಾತ್ರ ಏನು ಎಂಬುದರ ಬಗ್ಗೆ ವಿವರಣೆಯಿದೆ. ಬಹುತೇಕ ಎಲ್ಲ ವಿಷಯಗಳು ತಾಂತ್ರಿಕ ಮಾಹಿತಿಯನ್ನು ಒಳಗೊಂಡಿರುವ ಕಾರಣ, ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಇವುಗಳು ಸೂಕ್ತ. ತಂತ್ರಜ್ಞಾನ ವಿಷಯದಲ್ಲಿ ಸೂಕ್ತವಾದ ಕನ್ನಡ ಪದಗಳ ಕೊರತೆ ಹೊಸದೇನಲ್ಲ. ಇಲ್ಲಿಯೂ ಹೆಚ್ಚಿನ ತಾಂತ್ರಿಕ ಪದಗಳು ಆಂಗ್ಲ ಭಾಷೆಯಲ್ಲೇ ಇದ್ದು, ಇದು ವಿಷಯವನ್ನು ಅರ್ಥೈಸಿಕೊಳ್ಳುವಲ್ಲಿ ತಡೆಯಾಗಬಹುದು.

ಹೀಗಾಗಿಯೇ ಈ ಕೃತಿ ಯಾರಿಗಾಗಿ ಎನ್ನುವ ಪ್ರಶ್ನೆಗೆ ಲೇಖಕರು ಆರಂಭದಲ್ಲೇ ಸ್ಪಷ್ಟ ಉತ್ತರ ನೀಡಿದ್ದಾರೆ. ಗ್ರಾಮದ ಅಭಿವೃದ್ಧಿಯ ಜವಾಬ್ದಾರಿ ಹೊತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನೇ ಈ ಕೃತಿಯ ಮೊದಲ ಓದುಗರನ್ನಾಗಿ ಲೇಖಕರು ಆಯ್ಕೆ ಮಾಡಿದ್ದಾರೆ. ಜೊತೆಗೆ ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಕಾರ್ಯದರ್ಶಿಗಳಿಗೂ ಇದು ಮಾರ್ಗದರ್ಶಿಯಾಗಬಲ್ಲದು. ಜೊತೆಗೆ ಇಲ್ಲಿರುವ ವಿಷಯಗಳನ್ನು ಅರಿತರೆ ಗ್ರಾಮದ ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳು ಹಾಗೂ ತನ್ನ ಗ್ರಾಮಕ್ಕೆ ಸಿಗಬೇಕಾದ ಸವಲತ್ತುಗಳ ಬಗ್ಗೆ ಸ್ಥಳೀಯ ಸರ್ಕಾರಕ್ಕೆ ಆಗ್ರಹಿಸಬಹುದಾಗಿದೆ.

ಬರವಣಿಗೆ ಸಂವಾದದ ರೂಪದಲ್ಲಿದ್ದು, ಪ್ರಶ್ನೋತ್ತರಗಳ ಮಾದರಿಯಲ್ಲಿ ಇಡೀ ಕೃತಿಯಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳ ಸಭೆಯಿಂದ ಆರಂಭವಾಗುವ ಮೊದಲ ಅಧ್ಯಾಯ ಪರಸ್ಪರ ಸಂವಾದದ ರೀತಿಯಲ್ಲೇ ಸಾಗುತ್ತದೆ. ಓದುಗನಿಗೆ ಉದ್ಭವಿಸಬಹುದಾದ ಅನುಮಾನಗಳನ್ನು ಊಹಿಸಿ, ಪ್ರಶ್ನೆಗಳಾಗಿ ಪರಿವರ್ತಿಸಿ ಸ್ವತಃ ಉತ್ತರ ನೀಡುವ ಈ ಶೈಲಿ, ಓದುಗನಿಗೆ ಮಾಹಿತಿ ದಾಟಿಸುವಲ್ಲಿ ಯಶಸ್ವಿಯಾಗಿದೆ. ಹಳ್ಳಿಯನ್ನು ನೋಡುವ ದೃಷ್ಟಿಕೋನದಲ್ಲಿ ಆಗಬೇಕಾದ ಬದಲಾವಣೆಗಳನ್ನೂ ಸೂಕ್ಷ್ಮವಾಗಿ ‘ಸಾಫ್ಟ್‌ವೇರ್‌ ಸೋಮು’ ಪಾತ್ರದ ಮುಖಾಂತರ ಲೇಖಕರು ಇಲ್ಲಿ ಹೇಳಿದ್ದಾರೆ.

ಗ್ರಾಮ ಪಂಚಾಯಿತಿಗಳು ಇದನ್ನು ಕೈಪಿಡಿಯಾಗಿ ಬಳಸಿದರೆ ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡಲು ಸಾಧ್ಯ. ಲೇಖಕರ ಸುದೀರ್ಘ ಕ್ಷೇತ್ರಪ್ರವಾಸದ ಅನುಭವಕ್ಕೆ ಕೃತಿಯ ಗಾತ್ರವೇ ಸಾಕ್ಷ್ಯ.

***

ಕೃತಿ: 21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿ
ಲೇ: ಶಂಕರ ಕೆ.ಪ್ರಸಾದ್‌
ಪ್ರ: ಸಂಪೂರ್ಣ ಸ್ವರಾಜ್‌ ಫೌಂಡೇಶನ್‌, ಬೆಂಗಳೂರು
ಸಂ: 9845049970

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT