ಪುಸ್ತಕ ವಿಮರ್ಶೆ | ನಮ್ಮ ನೆಲ, ನಮ್ಮತನದ ಗಟ್ಟಿ ದನಿ

ಜಗತ್ತು ಸುತ್ತಿದರೂ ವಾಪಸ್ ನಮ್ಮ ತಾಯ್ನೆಲದ ಮಣ್ಣನ್ನೇ ನಂಬಿ ಬದುಕು ಕಟ್ಟಿಕೊಳ್ಳಬೇಕು, ಸಾರ್ಥಕವಾಗಬೇಕು ಎಂಬ ಆಶಯವೇ ‘ಭೂಮಿಯ ಋಣ’. ಈ ಕಥೆಗಳ ಗುಚ್ಛದಲ್ಲಿ ಇದೇ ಪ್ರಧಾನ ವಸ್ತು. ಎಲ್ಲ ಕಥೆಗಳೂ ಅಷ್ಟೆ. ನಮ್ಮ ನೆಲ, ನಮ್ಮತನ, ಸೊಗಡಿನ ಬಗ್ಗೆ ಮಾತನಾಡಿವೆ. ಕುಟುಂಬ, ಸಂಬಂಧಗಳ ಮೌಲ್ಯವನ್ನು ತಿಳಿಹೇಳಿವೆ. ಗ್ರಾಮೀಣ ಹೆಣ್ಣುಮಕ್ಕಳ ಬದುಕು– ಬವಣೆಯನ್ನು ತೆರೆದಿಟ್ಟಿವೆ. ದೇವರು– ನಂಬಿಕೆ– ಮೂಢನಂಬಿಕೆಗಳ ಬಗೆಗೂ ಚರ್ಚೆಗಳಿವೆ. ದೇವದಾಸಿ ಪದ್ಧತಿಯ ದರ್ಶನವೂ ಇದೆ. ಮಾತುಗಳಲ್ಲಿ ಪ್ರಾದೇಶಿಕ ಪದಗಳ ನುಡಿಗಟ್ಟುಗಳ ಬಳಕೆ, ಗಾದೆಗಳ ಉಲ್ಲೇಖ, ಮಾತಿನ ಕಸುವು ಇದೆ. ಪ್ರತಿರೋಧದ ಧ್ವನಿ, ಗ್ರಾಮೀಣ ಮಹಿಳೆಯರ ಕ್ಷೀಣ ಒಳದನಿಗಳಿಗೆ ಅಕ್ಷರ ರೂಪ ಕೊಟ್ಟಿದ್ದಾರೆ ಕಥೆಗಾರ್ತಿ.
ಮುನ್ನುಡಿಯಲ್ಲಿ ಎಂ.ಎಸ್. ಆಶಾದೇವಿ ಅವರು ಉಲ್ಲೇಖಿಸಿದಂತೆ, ‘ಬದುಕಿನ ಬಿಕ್ಕಟ್ಟುಗಳನ್ನು ಹೆಣ್ಣು ಎದುರಿಸುವಷ್ಟು ಸ್ಥೈರ್ಯದಿಂದ ಗಂಡು ಆ ಸವಾಲುಗಳನ್ನು ಎದುರಿಸುವುದು ಕಷ್ಟ’. ಅಂಥ ನೋಟಗಳೇ ಈ ಕಥೆಗಳಲ್ಲಿ ಹೆಚ್ಚು ಇವೆ. ಒಂಬತ್ತು ಕಥೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ವಿಜಯಪುರದ ಈ ಗೃಹಿಣಿ ಓದಿದ್ದು ಕೇವಲ ಒಂಬತ್ತನೇ ತರಗತಿವರೆಗೆ. ಬರವಣಿಗೆಯ ಕೃಷಿಯಲ್ಲಿ ತೊಡಗಿದ್ದು ಇತ್ತೀಚೆಗಷ್ಟೆ. ಇದು ಅವರ ಚೊಚ್ಚಿಲ ಕಥಾಸಂಕಲನ. ಆದರೆ, ಅವರ ಕಥೆಗಳನ್ನು ಓದಿದಾಗ ಅವರು ಕಥಾಜಗತ್ತಿಗೆ ಹೊಸಬರು ಎನಿಸುವುದಿಲ್ಲ. ಶೋಭಾ ಅವರ ಜೀವನಾನುಭವವೇ ಅವರ ಕಥೆಗಳ ಕೈ ಹಿಡಿದು ಮುನ್ನಡೆಸಿದೆ.
***
ಕೃತಿ: ಭೂಮಿಯ ಋಣ
ಲೇ: ಶೋಭಾ ಗುನ್ನಾಪೂರ
ಪ್ರ: ವೈಷ್ಣವಿ ಪ್ರಕಾಶನ ಕೆ. ಗುಡದಿನ್ನಿ
ಸಂ: 9620170027
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.