ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಹಿಯಾ ವ್ಯಕ್ತಿತ್ವ ವೈವಿಧ್ಯದ ಪ್ರತಿಬಿಂಬ

Last Updated 21 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕನ್ನಡದಲ್ಲಿ ರಾಮಮನೋಹರ ಲೋಹಿಯಾ ಕುರಿತು ಗಮನಾರ್ಹ ಸಂಖ್ಯೆಯ ಪುಸ್ತಕಗಳು ಬಂದಿವೆ. ಲೋಹಿಯಾ ಪ್ರಭಾವಕ್ಕೆ ಒಳಗಾದ ರಾಜಕಾರಣಿಗಳ ಸಂಖ್ಯೆಯೂ ನಮ್ಮಲ್ಲಿ ದೊಡ್ಡದಿದೆ. ನವ್ಯೋತ್ತರದ ಹಲವು ಕನ್ನಡ ಸಾಹಿತಿಗಳ ಮೇಲೂ ಲೋಹಿಯಾ ಪ್ರಭಾವ ಬಿದ್ದಿದೆ. ಲೋಹಿಯಾ ಪ್ರಭಾವಕ್ಕೆ ಒಳಗಾದ ಪ್ರಕಾಶಕರ ಪೈಕಿ ಬಳ್ಳಾರಿಯ ಸಿ.ಚನ್ನಬಸವಣ್ಣ ಪ್ರಮುಖರು. ಕಳೆದ 15 ವರ್ಷಗಳಲ್ಲಿ ಈ ಪ್ರಕಾಶನವು 180 ಕೃತಿಗಳನ್ನು ಹೊರ
ತಂದಿದ್ದು, ಅವುಗಳಲ್ಲಿ 30 ಕೃತಿಗಳು ಲೋಹಿಯಾ/ ಸಮಾಜವಾದದ ಕುರಿತೇ ಇವೆ. ಲೋಹಿಯಾ ಹುಟ್ಟುಹಬ್ಬಕ್ಕೆ ಸರಿಯಾಗಿ (ಮಾರ್ಚಿ 23) ಪುಸ್ತಕಗಳನ್ನು ಪ್ರಕಟಿಸಿ 10–12 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡುತ್ತಿದ್ದವರು ಚನ್ನಬಸವಣ್ಣ. ಕಳೆದ ಐದು ವರ್ಷಗಳಿಂದ ಲೋಹಿಯಾ ಪ್ರಕಾಶನ ಚಟುವಟಿಕೆ ನಿಲ್ಲಿಸಿದೆ. ಆದರೆ ಚನ್ನಬಸವಣ್ಣ ಅವರ ಲೋಹಿಯಾ ಸಾಹಿತ್ಯ ಕುರಿತ ಮೋಹ ಕಡಿಮೆಯಾಗಿಲ್ಲ. ಅವರ ತಂದೆ–ತಾಯಿಯವರ ದತ್ತಿಯ ನೆರವಿನಿಂದ ಪ್ರತಿವರ್ಷ ಲೋಹಿಯಾ ಕುರಿತ ಒಂದು ಕೃತಿ ಪ್ರಕಟಿಸುತ್ತಿದ್ದಾರೆ. ಈಗ ಮತ್ತೆ ಲೋಹಿಯಾ ಪ್ರಕಾಶನದಿಂದಲೇ ಎರಡು ಹೊಸ ಪುಸ್ತಕಗಳು ಹೊರಬಂದಿವೆ. ಎರಡಕ್ಕೂ ಡಿ.ಎಸ್‌.ನಾಗಭೂಷಣ ಸಂಪಾದಕರು.

‘ರಸಿಕ ರುದ್ರತಪಸ್ವಿ ಲೋಹಿಯಾ’ ಕೃತಿಯಲ್ಲಿ ಲೋಹಿಯಾ ಕುರಿತ ಎಂಟು ಅನುವಾದಿತ ಲೇಖನಗಳಿವೆ. ಮರಾಠಿಯ ಪ್ರಸಿದ್ಧ ಲೇಖಕ, ಪು.ಲ. ದೇಶಪಾಂಡೆ ಮತ್ತು ಹಿಂದಿಯ ಪ್ರಸಿದ್ಧ ಕಥೆಗಾರ, ಪತ್ರಕರ್ತ ಧರ್ಮವೀರ ಭಾರತಿ ಲೋಹಿಯಾ ಜೊತೆಗಿನ ಒಡನಾಟದ ಹಿನ್ನೆಲೆಯಲ್ಲಿ ಬರೆದ ಲೇಖನಗಳು ಆರಂಭದಲ್ಲಿವೆ. ಹಿಂದಿಯ ಹಿರಿಯ ಲೇಖಕರು ಲೋಹಿಯಾ ವ್ಯಕ್ತಿತ್ವ ಮತ್ತು ತಾತ್ವಿಕತೆಯ ಕುರಿತು ವಿಮರ್ಶಿಸಿದ ಬರಹಗಳಿವೆ. ಕೊನೆಯಲ್ಲಿ ಲೋಹಿಯಾ ಅವರೇ ಬರೆದ ‘ಭಾರತದ ವಿಭಜನೆಯ ಅಪರಾಧಿಗಳು’ ಕೃತಿಯ ಆಯ್ದ ಭಾಗವಿದೆ.

ನೆಹರೂರ ಕಟುಟೀಕಾರರಾಗಿದ್ದ ಲೋಹಿಯಾ ಇವತ್ತಿಗೂ ಭಾರತೀಯ ರಾಜಕಾರಣದಲ್ಲಿ ಆಕರ್ಷಣೆಯ ಬಿಂದುವಾಗಿರುವುದಕ್ಕೆ ಅವರ ಸಮಾಜವಾದಿ ಸಿದ್ಧಾಂತ ಮಾತ್ರವಲ್ಲ, ಸ್ವತಂತ್ರ ವೈವಿಧ್ಯಮಯ ವ್ಯಕ್ತಿತ್ವದ ಪ್ರಖರತೆಯೂ ಕಾರಣ ಎನ್ನುವುದನ್ನು ಇಲ್ಲಿರುವ ಲೇಖನಗಳು ಸಾರಿಹೇಳುತ್ತವೆ. ಮೊದಲ ಎರಡು ಲೇಖನಗಳು ಮತ್ತು ಯೋಗೇಂದ್ರ ಯಾದವ್‌ ಅವರ ಕೊನೆಯ ಲೇಖನ ಮತ್ತೆ ಮತ್ತೆ ಓದುವಂತಿವೆ. ಅಷ್ಟೂ ಅನುವಾದಗಳು ಕನ್ನಡದ್ದೇ ಕೃತಿ ಎನ್ನುವಂತಿವೆ. ಒಟ್ಟು 120 ಪುಟಗಳ ಈ ಪುಸ್ತಕವನ್ನು ಪ್ರಕಾಶಕರು ₹ 51ಕ್ಕೆ ನೀಡಿರುವುದು, ಕನ್ನಡದ ಇತ್ತೀಚಿನ ‘ಗ್ರಂಥಾಲಯಮುಖೀ’ ಪ್ರಕಾಶಕರ ಕಣ್ಣು ತೆರೆಸಬೇಕು.

ಎಂ.ಪಿ.ಪ್ರಕಾಶ್‌ರ ದೂರದರ್ಶಿತ್ವದಿಂದಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಲೋಹಿಯಾ ಕೃತಿಗಳ ಕನ್ನಡ ಅನುವಾದ ಪ್ರಕಟಿಸುತ್ತಿದೆ. ಇಲಾಖೆಯು ಈ ಜವಾಬ್ದಾರಿಯನ್ನು ಬಳಿಕ ಕುವೆಂಪು ಭಾಷಾ ಭಾರತಿಗೆ ವಹಿಸಿದೆ. ಆದರೆ 20 ವರ್ಷಗಳ ಹಿಂದೆಯೇ ಅನುವಾದಗೊಂಡಿರುವ ಹತ್ತಾರು ಹೊಸ ಕೃತಿಗಳ ಹಸ್ತಪ್ರತಿಗಳು ಇನ್ನೂ ಪ್ರಕಟವಾಗದೆ ಮೂಲೆಗುಂಪಾಗಿರುವುದು ವಿಷಾದದ ಸಂಗತಿ. ಅವುಗಳಿಗೆ ಈಗಲಾದರೂ ಪ್ರಕಟಣೆ ಭಾಗ್ಯ ದೊರಕಬಹುದೆ?

-ರಸಿಕ ರುದ್ರತಪಸ್ವಿ ಲೋಹಿಯಾ/ ಸಂ: ಡಿ.ಎಸ್‌.ನಾಗಭೂಷಣ/ ಲೋಹಿಯಾ ಪ್ರಕಾಶನ, ಬಳ್ಳಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT