ಸೋಮವಾರ, ಜೂನ್ 1, 2020
27 °C

ನೋವಿಗೆ ಒಲವು ಸವರಿದ ಕಾವ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡದಲ್ಲಿ ಗಝಲ್‌ ಬರೆಯುವವರ ಸಂಖ್ಯೆ ಬೆಳೆಯುತ್ತಲೇ ಇದೆ. ಅದರಲ್ಲೂ ಉರ್ದು ಮತ್ತು ಹಿಂದಿ ಹೃದಯಕ್ಕೆ ಹತ್ತಿರವಾಗಿರುವ ಉತ್ತರ ಕರ್ನಾಟಕದಲ್ಲಿ ಗಝಲ್‌ ಬರೆಯುವವರ ದೊಡ್ಡದೊಂದು ದಂಡೇ ಇದೆ. ಕನ್ನಡ ಕಾವ್ಯದ ಜೊತೆಗೆ ಸ್ತನಪಾನದ ಸಂಬಂಧ ಇಟ್ಟುಕೊಂಡೇ ಉರ್ದು ಗಝಲ್‌ಗಳನ್ನು ಪ್ರೀತಿಸುತ್ತಿರುವುದು ಈ ದಂಡಿನಲ್ಲಿ ಎದ್ದು ಕಾಣುವ ಸಂಗತಿ. ಉರ್ದು ಗಝಲ್‌ನ ಮೋಹಕ್ಕೆ ಸಿಕ್ಕು ಕನ್ನಡದಲ್ಲಿ ಗಝಲ್‌ ಬರೆಯುವವರು ಎರಡೂ ಭಾಷೆಗಳ ಕಾವ್ಯದ ಅಧ್ಯಯನ ನಡೆಸುತ್ತಿರುವುದು ಗಮನಾರ್ಹ.

ಸುಮ್ಮನೆ ಲಹರಿಗೆ ಬಿದ್ದು ಕನ್ನಡದ ಗಝಲ್‌ ಬರೆಯುವವರಿಗಿಂತ ಭಿನ್ನವಾಗಿ, ಮತ್‌ಲಾ, ರದೀಫ್‌, ಕಾಫಿಯಾ, ರವೀಗಳ ಛಂದೋಬದ್ಧ ಅಧ್ಯಯನ ನಡೆಸಿ ಗಝಲ್ ಬರೆಯುತ್ತಿರುವ ಕನ್ನಡ ಕವಿಗಳ ಗುಂಪೊಂದಿದೆ. ಈ ಗುಂಪಿಗೆ ಹೊಸ ಸೇರ್ಪಡೆ ನಿರ್ಮಲಾ ಶೆಟ್ಟರ. ’ನಿನ್ನ ಧ್ಯಾನಿಸಿದ ಮೇಲೂ‘ ಎನ್ನುವ ಅವರ ಈ ಗಝಲ್‌ ಸಂಕಲನದ ಕವಿತೆಗಳು ಪದೇ ಪದೇ ಧ್ಯಾನದೊಳಗಿನ ಜ್ಞಾನವನ್ನೂ ಎತ್ತಿ ತೋರುತ್ತವೆ. ಮುನ್ನುಡಿಯಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಗುರುತಿಸಿದಂತೆ ಇಲ್ಲಿರುವ ’ಗಝಲ್‌ ದೇಹದಲ್ಲಿ ಕನ್ನಡದ ರಕ್ತ ಮಾಂಸ ಪ್ರಾಣ ಸಂಚಾರ’ ಗಮನ ಸೆಳೆಯುತ್ತದೆ.

’ಈಗೀಗ ನಾನು ಮಲ್ಲಿಗೆ ಮುಡಿಯುವುದ ಬಿಟ್ಟಿರುವೆ/ ನಿನ್ನ ಬೆವರು ಅಂಟಿದ ಮೇಲೆ ಗಿಡ ನೆಡುವುದ ಬಿಟ್ಟಿರುವೆ..‘ ಎಂದು ಪ್ರೇಮಿಯ ಜೊತೆಗೆ ನೇರ ಮಾತನಾಡುವಂತೆಯೇ, ’ಹಸಿರುಡುವ ಭೂತಾಯಿ ನಂಜುಂಡ ಗರ್ಭದಲಿ / ಕಣ್ಣು ಆಡಿಸಿದಲ್ಲೆಲ್ಲಾ ಹಸಿವು ವಿಷವಾಗಿ ಕಾಡುತ್ತಿದೆ..‘ ಎಂದು ಸಾಮಾಜಿಕ ಎಚ್ಚರವನ್ನೂ ಪ್ರಕಟಿಸುತ್ತಾರೆ. ಒಟ್ಟು 54 ಗಝಲ್‌ಗಳ ಈ ಗುಚ್ಛ ಕಾವ್ಯಮೋಹಿಗಳ ದಾರಿಯ ನೋವಿನಲಿ ಹೆಗಲ ನೀಡಿದ ಹೆಜ್ಜೆಗಳಂತಿವೆ. ಗಝಲ್‌ ಬರೆಯುವುದಲ್ಲ, ಅದೊಂದು ಕಟ್ಟುವ ಕ್ರಿಯೆ ಎನ್ನುವುದನ್ನು ನಿರ್ಮಲಾ ಅವರು ಬಹು ಎಚ್ಚರದಿಂದ ಪಾಲಿಸಿದ್ದಾರೆ. ಮೊದಲ ಕವನ ಸಂಕಲನ ಪ್ರಕಟಿಸಿದ 10 ವರ್ಷಗಳ ಬಳಿಕ ಎರಡನೆಯದಾಗಿ ಗಝಲ್‌ ಸಂಕಲನವನ್ನು ಹೊರತಂದಿರುವ ಈ ಕವಯತ್ರಿ ಈ ಮೂಲಕ ತನ್ನ ಮುಂದಿನ ಕವನ ಸಂಕಲನದ ಬಗ್ಗೆ ಹೊಸ ನಿರೀಕ್ಷೆಯನ್ನೂ ಹುಟ್ಟುಹಾಕಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು