ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಸಾಗರ ಮಹಾಭಾರತ

Last Updated 2 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಹಿಂದೆ ಕುರುವಂಶದಲ್ಲಿ ಪರೀಕ್ಷಿತ ಎಂಬ ಮಹಾರಾಜನಿದ್ದ. ಅವನು ಪರಾಕ್ರಮಿ, ರಣವೀರ ಅಭಿಮನ್ಯುವಿನ ಪುತ್ರ. ಒಮ್ಮೆ ಮಹಾರಾಜ ಮೃಗಯಾವಿಹಾರಕ್ಕೆ ಹೋದ. ಬೇಟೆಯಾಡುತ್ತ ಜಿಂಕೆಯೊಂದಕ್ಕೆ ಬಾಣಬಿಟ್ಟ. ಅವನು ಅದರ ಬೆನ್ನಟ್ಟಿ ಅರಣ್ಯದ ಉದ್ದಗಲ ಅಲೆದಾಡಿದ. ಬಳಲಿ ಬಾಯಾರಿದರೂ ಜಿಂಕೆಯ ಬೆಂಬಟ್ಟಿ ಅಲೆದಾಡುತ್ತಲೇ ಇದ್ದ. ಬೇಟೆಯ ಈ ಓಡಾಟದಲ್ಲಿ ಹಠಾತ್ತನೆ ಋಷಿಯೊಬ್ಬ ಅವನ ಕಣ್ಣಿಗೆ ಬಿದ್ದ. ದೊರೆ ಋಷಿಯ ಬಳಿಗೆ ಹೋಗಿ ತನ್ನ ಪ್ರವರ ಹೇಳಿಕೊಂಡು ತನ್ನ ಬೇಟೆಯಾದ ಜಿಂಕೆ ಏನಾದರೂ ಇತ್ತ ಬಂದುದನ್ನು ಕಂಡಿರಾ ಎಂದು ಕೇಳಿದ. ಋಷಿ ಮೌನವ್ರತ ಆಚರಿಸುತ್ತಿದ್ದು ಮಾತನಾಡಲಿಲ್ಲ. ದೊರೆಗೆ ಸಿಟ್ಟು ಬಂತು. ನೆಲದ ಮೇಲೆ ಬಿದ್ದಿದ್ದ ಮೃತ ಸರ್ಪವೊಂದನ್ನು ಎತ್ತಿ ಅದನ್ನು ಋಷಿಯ ಕೊರಳಿಗೆ ಮಾಲೆಯಂತೆ ತೊಡಿಸಿದ. ಆಗಲೂ ಋಷಿ ಮಾತಾಡಲಿಲ್ಲ. ಧ್ಯಾನಮಗ್ನನಾಗಿದ್ದ. ದೊರೆಗೆ ಪಶ್ಚಾತ್ತಾಪವಾಯಿತು. ರಾಜಧಾನಿಗೆ ಹಿಂದಿರುಗಿದ. ಋಷಿ ದೊರೆಯ ತಪ್ಪನ್ನು ಉಪೇಕ್ಷಿಸಿದ. ದೊರೆ ಸತ್ಕುಲೀನ ವಂಶಜನಾಗಿದ್ದು ಧರ್ಮಪಾಲಕನಾಗಿದ್ದಾನೆಂಬುದು ಋಷಿಗೆ ತಿಳಿದಿತ್ತು.

ಶೃಂಗಿ ಋಷಿಪುತ್ರ. ಶೃಂಗಿ ತಪಸ್ಸಿನಿಂದ ಅಗಾಧವಾದ ಶಕ್ತಿ ಸಾಮರ್ಥ್ಯಗಳನ್ನು ಸಂಪಾದಿಸಿದ್ದ. ತಂದೆಯ ಕೊರಳಲ್ಲಿ ಮೃತಸರ್ಪವನ್ನು ಕಂಡದ್ದೇ ಶೃಂಗಿಗೆ ಭಯಂಕರ ಕೋಪ ಬಂತು. ಈ ಅಪರಾಧವನ್ನು ಎಸಗಿದವನ್ಯಾರೆಂಬುದು ಗೆಳೆಯನಿಂದ ತಿಳಿದು ಬಂತು. ಅವನು ಶಾಪವಿತ್ತ: ‘ಈ ಕೃತ್ಯವೆಸಗಿದ ದುರಹಂಕಾರಿ ದೊರೆಯನ್ನು ಕಾರ್ಕೋಟಕ ವಿಷಸರ್ಪ ತಕ್ಷಕನು ಕಡಿದು ಅವನು ಇನ್ನು ಏಳು ದಿನಗಳಲ್ಲಿ ಸಾಯಲಿ’. ತಾನಿತ್ತ ಶಾಪವನ್ನು ತಂದೆಗೆ ಅರುಹಿದ. ಋಷಿ ತಂದೆಗೆ ಅಸಮಾಧಾನವಾಯಿತು. ನೀನು ಆತುರಪಟ್ಟೆ ಎಂದು ಹೇಳಿದ.

ಅನಂತರ ಋಷಿ ಸಂಭವಿಸಲಿರುವ ವಿಪತ್ತನ್ನು ಅರುಹಲು ಶಿಷ್ಯನೊಬ್ಬನನ್ನು ದೊರೆಯ ಬಳಿಗೆ ಕಳುಹಿಸಿದ. ಶಾಪ ತಿಳಿದು ಪರೀಕ್ಷಿತ ಮಹಾರಾಜ ಭೀತಿಯಿಂದ ತತ್ತರಿಸಿಹೋದ. ತನ್ನ ಹತ್ತಿರ ಯಾರೂ ಸುಳಿಯದಂತೆ ರಕ್ಷಣೆಯ ಕೋಟೆ ಕಟ್ಟಿಕೊಂಡು ಶಾಪವನ್ನು ನಿಷ್ಕ್ರಿಯಗೊಳಿಸಲು ಪರೀಕ್ಷಿತ ನಿರ್ಧರಿಸಿದ. ಮನುಷ್ಯರು ಅಥವಾ ಜೀವಜಂತುಗಳು ಪ್ರವೇಶಿಸಲಾಗದಂಥ ಉಪ್ಪರಿಗೆಯ ಅಭೇದ್ಯ ಅರಮನೆಯೊಂದನ್ನು ಕಟ್ಟಿಸಿದ. ಅರಮನೆಯನ್ನು ಎಂಥ ಕೌಶಲದಿಂದ ನಿರ್ಮಿಸಲಾಗಿತ್ತೆಂದರೆ, ಅದರೊಳಕ್ಕೆ ಪ್ರವೇಶಿಸಿದ ಗಾಳಿಯೂ ಹೊರಹೋಗುವಂತಿರಲಿಲ್ಲ. ದೊರೆಗೆ ತಿಳಿಸದೆ ಯಾರೂ ಅವನನ್ನು ಕಾಣುವಂತಿರಲಿಲ್ಲ. ತಾನಿನ್ನು ಹಾವಿನ ಕಡಿತದಿಂದ ಮುಕ್ತ ಎಂದು ದೊರೆ ಭಾವಿಸಿದ.ತಕ್ಷಕ ಸರ್ಪ ಸಾಧುಸಂತರ ರೂಪದಲ್ಲಿ ಕೆಲವು ಹಾವುಗಳನ್ನು ಪರೀಕ್ಷಿತನ ಬಳಿಗೆ ಕಳುಹಿಸಿದ. ದೊರೆಗೆ ಗೌರವ ಸಮರ್ಪಣೆಯಾಗಿ ಹೂವುಹಣ್ಣುಗಳನ್ನೂ ಕಳುಹಿಸಿದ್ದ. ತಕ್ಷಕ ಈ ಹಣ್ಣುಗಳಲ್ಲಿ ಒಂದರಲ್ಲಿ ಅವಿತುಕೊಂಡಿದ್ದ. ಮಹಾರಾಜನು ಹಣ್ಣೊಂದನ್ನು ತಿನ್ನುತ್ತಿದ್ದಾಗ ತಕ್ಷಕ ಹೊರಬಂದು ಕಾಳಿಂಗ ಸರ್ಪದ ರೂಪ ಧರಿಸಿ ದೊರೆಯ ಮೈಗೆ ಸುತ್ತಿಕೊಂಡು ಅವನನ್ನು ಕಚ್ಚಿದ. ದೊರೆ ಪರೀಕ್ಷಿತ ಮರಣ ಹೊಂದಿದ.

ಅವನ ಪುತ್ರ ಜನಮೇಜಯನಿಗೆ ಪಟ್ಟಾಭಿಷೇಕ ಮಾಡಲಾಯಿತು. ಕಿರೀಟಧಾರಣೆಯಾದದ್ದೇ ಜನಮೇಜಯ ಹಾವಿನ ಕುಲದ ಮೇಲೆ ಮತ್ಸರ ತಾಳಿದ. ಸೇಡು ತೀರಿಸಿಕೊಳ್ಳುವ ಛಲ ತೊಟ್ಟ. ಅರಮನೆಯ ಪಂಡಿತ ಪುರೋಹಿತರನ್ನು ಕರೆಸಿ, ತಕ್ಷಕನನ್ನು ಅಗ್ನಿಗೆ ಆಹುತಿ ನೀಡಬಹುದಾದಂಥ ಯಾಗ-ಯಜ್ಞಗಳು ಇವೆಯೇ ಎಂದು ಕೇಳಿದ. ಪುರೋಹಿತರು ಉಂಟೆಂದು ಸರ್ಪಯಜ್ಞದ ಸಲಹೆ ಮಾಡಿದರು. ದೊರೆ ಜನಮೇಜಯ ಸರ್ಪಯಜ್ಞಕ್ಕೆ ಸಿದ್ಧತೆ ನಡೆಸಿದ. ಯಜ್ಞದಲ್ಲಿ ಪಾಲ್ಗೊಳ್ಳಲು ಶ್ರದ್ಧಾಭಕ್ತಿಯುಳ್ಳ ಬ್ರಾಹ್ಮಣ ಶ್ರೇಷ್ಠರನ್ನೂ ಯಾಜ್ಞಿಕರನ್ನೂ ಆಮಂತ್ರಿಸಲಾಯಿತು. ಯಾಜ್ಞಿಕರ ಮಂತ್ರಶಕ್ತಿ ಇಡೀ ಸರ್ಪಕುಲವನ್ನು ಹೋಮಾಗ್ನಿಗೆ ಸೆಳೆದು ತಂದಿತು. ಸಾವಿರಾರು ಹಾವುಗಳ ಆಹುತಿಯಾಯಿತು.

ಪರಮಪೂಜ್ಯರಾದ ವ್ಯಾಸ ಮಹರ್ಷಿಗಳೂ ಈ ಸರ್ಪಯಜ್ಞವನ್ನು ವೀಕ್ಷಿಸಲು ಆಗಮಿಸಿದ್ದರು. ವ್ಯಾಸ ಮಹರ್ಷಿಗಳನ್ನು ಕಂಡು ಜನಮೇಜಯ ಆನಂದತುಂದಿಲನಾದ. ಪೂಜ್ಯರು ಸರ್ಪಯಜ್ಞದಲ್ಲಿ ಭಾಗಿಯಾಗಿ ಅನುಗ್ರಹಿಸಬೇಕೆಂಬ ದೊರೆಯ ಗೌರವಾದರದ ಆಮಂತ್ರಣವನ್ನು ಪುರಸ್ಕರಿಸಿದ್ದರು. ಜನಮೇಜಯ ಭಕ್ತಿಪೂರ್ವಕವಾಗಿ ವ್ಯಾಸ ಮಹರ್ಷಿಗಳನ್ನು ಸ್ವಾಗತಿಸಿ ಸುವರ್ಣಖಚಿತ ಸಿಂಹಾಸನದಲ್ಲಿ ಕುಳ್ಳಿರಿಸಿದ್ದ. ಆಸನ ನೀಡಿದ ನಂತರ ಮಹಾಭಾರತದ ಕಥೆಯನ್ನು ಹೇಳುವಂತೆ ಮನವಿ ಮಾಡಿದ.

ಹಾಭಾರತ ಮಹಾಸಾಗರವಿದ್ದಂತೆ ಎಂದು ನುಡಿದ ವ್ಯಾಸ
ಮುನಿಗಳು ಕೆಲವೊಂದು ಮುತ್ತುರತ್ನಗಳನ್ನು ಆರಿಸಿ ಮಹಾಭಾರತದ ಕಥನ ಮಾಡುವಂತೆ ಶಿಷ್ಯ ವೈಶಂಪಾಯನನಿಗೆ ಆದೇಶಿಸಿದರು. ವೈಶಂಪಾಯನರು ಮಹಾಭಾರತದ ಕಥೆಯನ್ನು ಬಿತ್ತರಿಸಿದರು.

ಯಯಾತಿ ಮತ್ತು ಅವನ ಪುತ್ರರು

ಕೇಳು ಜನಮೇಜಯ, ಬ್ರಹ್ಮನು ನಿರಾಕಾರ ಪರಬ್ರಹ್ಮ ಸಂಜಾತನು. ವಿಷ್ಣು ನಾಭೀಸಂಭೂತನು. ಬ್ರಹ್ಮನ ಹೆಬ್ಬೆರಳಿನಿಂದ ದಕ್ಷ ಪ್ರಜಾಪತಿಯೂ, ಕಣ್ಣಿನಿಂದ ಮರೀಚಿಯೂ ಜನಿಸಿದರು. ಮರೀಚಿಯ ಮಗ ಕಶ್ಯಪ ದಕ್ಷನ ಪುತ್ರಿಯನ್ನು ಮದುವೆಯಾದನು. ಅವರ ಸಂತಾನ ಸೂರ್ಯ. ವೈವಸ್ವತ ಮನು ಸೂರ್ಯನ ಪುತ್ರ. ಅನಂತರ ಪುರೂರವ, ಆಯು ಮತ್ತು ನಹುಷ ಹುಟ್ಟಿದರು. ನಹುಷನ ಪುತ್ರ ಯಯಾತಿ. ಯಯಾತಿಯ ಕಥೆ ಸ್ಮರಣೀಯವಾದದ್ದು.

ಮೂರು ಲೋಕಗಳನ್ನೂ ಜಯಿಸಿ ಆಳಬೇಕೆಂಬುದು ದೇವತೆಗಳು ಮತ್ತು ಅಸುರರು ಇಬ್ಬರ ಇಚ್ಛೆಯೂ ಆಗಿತ್ತು. ಹೀಗಾಗಿ ಸುರರು ಮತ್ತು ಅಸುರರ ನಡುವೆ ದೀರ್ಘಕಾಲದಿಂದ ಕ್ರೂರ ಕಾಳಗ ನಡೆದಿತ್ತು. ಬೃಹಸ್ಪತಿಗಳು ದೇವಗುರುಗಳು, ಶುಕ್ರಾಚಾರ್ಯರು ಅಸುರರ ಗುರುಗಳು. ಮೃತರಿಗೆ ಮರಳಿ ಜೀವಕೊಡುವ ಸಂಜೀವಿನಿ ವಿದ್ಯೆಯನ್ನು ಶುಕ್ರಾಚಾರ್ಯರು ಕರಗತ ಮಾಡಿಕೊಂಡಿದ್ದರು. ಹೀಗಾಗಿ ಯುದ್ಧದಲ್ಲಿ ಮಡಿದ ಅಸುರರೆಲ್ಲ ಮತ್ತೆ ಜೀವಂತರಾಗಿ ರಣರಂಗಕ್ಕೆ ಮರಳಿ ಬರುತ್ತಿದ್ದರು. ಇದರಿಂದಾಗಿ ದೇವತೆಗಳು ಹತಾಶರಾಗಿದ್ದರು.

ಕಚ, ಬೃಹಸ್ಪತಿಯ ಕುವರ. ಸುರರೆಲ್ಲ ಕಚನ ಬಳಿಗೆ ಹೋಗಿ ಸಂಜೀವಿನಿ ವಿದ್ಯೆ ಕಲಿತು ತಮ್ಮನ್ನು ಪಾರುಗಾಣಿಸುವಂತೆ ಬೇಡಿದರು. ಶುಕ್ರಾಚಾರ್ಯರಿಗೆ ದೇವಯಾನಿ ಎಂಬ ಪುತ್ರಿಯೊಬ್ಬಳಿರುವ ಸಂಗತಿಯನ್ನು ಅವರು ಕಚನಿಗೆ ಅರುಹಿದರು. ಕಚ ಸ್ಫುರದ್ರೂಪಿಯಾದ ಯುವಕ. ದೇವಯಾನಿಯನ್ನು ಆಕರ್ಷಿಸಿ ಅವಳ ಮುಖೇನ ಸಂಜೀವಿನಿ ವಿದ್ಯೆ ಕಲಿಯಬಹುದೆಂದೂ ದೇವತೆಗಳು ಸೂಚಿಸಿದರು. ಅಲ್ಲದೆ ಹಿರಿತನದ ಗೌರವ ಮರ್ಯಾದೆಗಳನ್ನು ತೋರುವ ಕಚನು ಶುಕ್ರಾಚಾರ್ಯರನ್ನೂ ಒಲಿಸಿಕೊಳ್ಳಬಹುದಿತ್ತು.

ಕಚ ಒಪ್ಪಿಕೊಂಡು ಶುಕ್ರಾಚಾರ್ಯರ ಕುಟೀರ ತಲುಪಿದ. `ನಾನು ದೇವಗುರು ಬೃಹಸ್ಪತಿಗಳ ಜ್ಯೇಷ್ಠಪುತ್ರ’ ಎಂದು ಪರಿಚಯಿಸಿಕೊಂಡ. ಶಿಷ್ಯವೃತ್ತಿಗಾಗಿ ನಿವೇದನೆಮಾಡಿಕೊಂಡ. ಶಿಷ್ಯನೊಬ್ಬ ಗುರುವಿಗೆ ಸಲ್ಲಿಸಬೇಕಾದ ಸೇವಾಕಾರ್ಯ ಕರ್ತವ್ಯಗಳನ್ನು ಸಲ್ಲಿಸುವುದಾಗಿ ತಿಳಿಸಿದ. ಕಚನ ನಡವಳಿಕೆ ತುಂಬ ಗೌರವಯುತವಾಗಿತ್ತು. ಅವನ ಮಾತುಗಳು ಕರ್ತವ್ಯಪ್ರಜ್ಞೆಯನ್ನು ಸೂಸುತ್ತಿದ್ದವು. ಶುಕ್ರಾಚಾರ್ಯರು ಸಂತುಷ್ಟರಾದರು. ಕಚ ಸುಮಧುರ ಕಂಠದ ಗಾಯಕ, ಹಾಡುತ್ತಿದ್ದ. ಸಂಗೀತವಾದ್ಯಗಳನ್ನು ನುಡಿಸುತ್ತಿದ್ದ. ದೇವಯಾನಿಯೊಂದಿಗೆ ವಿನೋದಲೀಲೆಗಳಲ್ಲಿ, ಆಟಗಳಲ್ಲಿ ತೊಡಗುತ್ತಿದ್ದ. ಅವಳಿಗೆ ಸುವಾಸನಾಯುಕ್ತವಾದ ಹೂವುಗಳನ್ನು ತಂದು ಸಮರ್ಪಿಸುತ್ತಿದ್ದ. ಸುದ್ದಿ ಸಮಾಚಾರ ಮುಟ್ಟಿಸುವ ಓಲೆಕಾರನಂತೆ ಎಡತಾಕುತ್ತ ಅವಳ ಹೃದಯವನ್ನು ಗೆದ್ದ.

ಆದರೆ ಕಾಲಕ್ರಮೇಣ ಅಸುರರಿಗೆ ಕಚ ಯಾರೆಂಬುದು ಪತ್ತೆಯಾಯಿತು. ಅವನ ಉದ್ದೇಶವೂ ತಿಳಿಯಿತು. ಕಚ ಒಂಟಿಯಾಗಿ ಗೋವುಗಳನ್ನು ಮೇಯಿಸುತ್ತಿದ್ದಾಗ ಅಸುರರು ಅವನ ಮೇಲೆ ಮುಗಿಬಿದ್ದರು. ಅವನ ದೇಹವನ್ನು ತುಂಡುತುಂಡಾಗಿ ಕತ್ತರಿಸಿದರು.

ಸೂರ್ಯಾಸ್ತವಾಯಿತು. ಕಚ ಹಿಂದಿರುಗಿ ಬರಲಿಲ್ಲ. ದೇವಯಾನಿಗೆ ಕಳವಳವಾಯಿತು. ಕಚನಿಗೆ ಏನೋ ಕೇಡು ಸಂಭವಿಸಿದೆ ಎಂದು ಅವಳು ಆತಂಕಗೊಂಡಳು. ಕಚನಿಲ್ಲದೆ ತಾನು ಬದುಕಲಾರೆ ಎಂದು ತಂದೆಗೆ ಅರುಹಿದಳು. ದೇವಯಾನಿ ಶುಕ್ರಾಚಾರ್ಯರ ಏಕೈಕ ಸಂತಾನ. ಅವಳು ಅವರ ಜೀವದುಸಿರಾಗಿದ್ದಳು. ಅಸುರರು ಕಚನ ದೇಹವನ್ನು ನಾಯಿಗಳಿಗೆ ಉಣಬಡಿಸಿದ್ದರು. ಶುಕ್ರಾಚಾರ್ಯರು ಸಂಜೀವಿನಿ ವಿದ್ಯೆಯನ್ನು ಪ್ರಯೋಗಿಸಿದರು. ಕಚ ನಾಯಿಗಳ ಹೊಟ್ಟೆ ಸೀಳಿಕೊಂಡು ಜೀವಂತ ಮಾನವನಾಗಿ ಹೊರಬಂದು ದೇವಯಾನಿಯ ಬಳಿಗೆ ಬಂದ. ದೇವಯಾನಿಗೆ ಎಲ್ಲವೂ ಗೊತ್ತಾಯಿತು.

ಮತ್ತೊಂದು ಮುಂಜಾನೆ ದೇವಯಾನಿಗೆ ಹೂಗಳನ್ನು ಕೊಯ್ದು ತರಲು ಕಚ ಹೂದೋಟಕ್ಕೆ ಹೋದಾಗ, ಅಸುರರು ಅವನನ್ನು ಕೊಂದು ದೇಹವನ್ನು ಸಮುದ್ರಕ್ಕೆಸೆದರು. ಶುಕ್ರಾಚಾರ್ಯರು ಮತ್ತೊಮ್ಮೆ ಅವನಿಗೆ ಜೀವದಾನ ಮಾಡಿದರು. ಮೂರನೆಯ ಸಲ ಅಸುರರು ಕಚನ ಸಂಹಾರ ಮಾಡಿ, ಅವನ ದೇಹವನ್ನು ಸುಟ್ಟು ಬೂದಿ ಮಾಡಿದರು. ಚಿತಾಭಸ್ಮವನ್ನು ಶುಕ್ರಾಚಾರ್ಯರು ಪಾನ ಮಾಡುವ ಸುರೆಯಲ್ಲಿ ಬೆರೆಸಿದರು. ಶುಕ್ರಾಚಾರ್ಯರು ಆ ಸುರೆಯನ್ನು ಪಾನ ಮಾಡಿದರು.

ದೇವಯಾನಿ ಪ್ರಿಯಕರನಿಗಾಗಿ ವ್ಯರ್ಥ ಕಾದಳು. ಕೊನೆಗೆ ತಂದೆಯ ಬಳಿಗೆ ಹೋಗಿ ದುಃಖತಪ್ತಳಾಗಿ ಬಿಕ್ಕಿ ಬಿಕ್ಕಿ ಅತ್ತಳು. ಶುಕ್ರಾಚಾರ್ಯರಿಗೆ ತಕ್ಷಣ ಭಯಾನಕ ಸತ್ಯದ ಅರಿವಾಗಲಿಲ್ಲ. ‘ನಾನು ಅವನನ್ನು ಎರಡು ಸಲ ಬದುಕಿಸಿದ್ದೇನೆ. ಆದರೆ ಅಸುರರು ಅವನನ್ನು ಸಂಹರಿಸಿರುವುದು ಖಚಿತ. ಅಗಲಿದವನಿಗಾಗಿ ದುಃಖಿಸುವುದರಲ್ಲಿ ಅರ್ಥವಿಲ್ಲ’ ಎಂದು ಶುಕ್ರಾಚಾರ್ಯರು ಸಮಾಧಾನದ ನುಡಿಗಳನ್ನು ಆಡಿದರು. ಆದರೆ ದೇವಯಾನಿಯ ಶೋಕ ನಿಲ್ಲಲಿಲ್ಲ. ಕಚನಿಲ್ಲದೆ ತಾನು ಬದುಕಿರಲಾರೆ ಎಂದು ತಂದೆಯ ಮುಂದೆ ವಿರಹವೇದನೆ ತೋಡಿಕೊಂಡಳು. ಆಚಾರ್ಯರು ಕಚನ ಆವಾಹನೆ ಮಾಡಿದರು. ಕೂಡಲೇ ಕಚ ಜೀವಂತನಾದ. ಅವನಿಗೆ ಪ್ರಜ್ಞೆ ಬಂದಿತ್ತು. ಶುಕ್ರಾಚಾರ್ಯರ ಸಂಜೀವಿನಿ ಶಕ್ತಿ ಅಷ್ಟು ಅದ್ಭುತವಾದದ್ದು. ‘ನಾನು ನಿಮ್ಮ ಹೊಟ್ಟೆಯೊಳಗಿದ್ದೇನೆ’ ಎಂದು ಪೂಜ್ಯ ಭಾವನೆಯಿಂದ ಆಚಾರ್ಯರಿಗೆ ನಿವೇದನೆ ಮಾಡಿದ. ಕಚ ತನ್ನ ಹೊಟ್ಟೆ ಸೀಳಿಕೊಂಡು ಮಾತ್ರ ಹೊರಬರಲು ಸಾಧ್ಯ ಎಂದು ಶುಕ್ರಾಚಾರ್ಯರು ಮಗಳಿಗೆ ತಿಳಿಸಿದರು. ದೇವಯಾನಿ ಈಗ ತಂದೆ- ಪ್ರಿಯಕರ ಇಬ್ಬರಲ್ಲಿ ಒಬ್ಬರನ್ನು ಉಳಿಸಿಕೊಳ್ಳಬೇಕಾಗಿತ್ತು, ಮತ್ತೊಬ್ಬರನ್ನು ಬಲಿಕೊಡಬೇಕಾಗಿತ್ತು..!

ಇಂಗ್ಲಿಷ್ ಮೂಲ: ಪ್ರೊ. ಎಲ್.ಎಸ್. ಶೇಷಗಿರಿ ರಾವ್
ಕನ್ನಡಕ್ಕೆ: ಜಿ.ಎನ್. ರಂಗನಾಥ ರಾವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT