ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಲೋಕನ: ಮಕ್ಕಳಿಗಾಗಿ ರೇಖೆಯಿಂದೆದ್ದ ಗಾಂಧೀಜಿ

Last Updated 18 ಡಿಸೆಂಬರ್ 2022, 1:40 IST
ಅಕ್ಷರ ಗಾತ್ರ

ಮಗುವೊಂದು ಸ್ಟ್ಯಾಂಡಿಂಗ್‌ ಲೈನ್‌, ಸ್ಲೀಪಿಂಗ್‌ ಲೈನ್‌, ಜಿಗ್‌ಜಾಗ್‌ ಲೈನ್‌ ಎನ್ನುತ್ತಾ ಬೆರಳಾಡಿಸುವಾಗ ಮನಸ್ಸಿನಲ್ಲಿ ಉಳಿಯುವ ರೇಖೆಯ ನೆನಪು ಶಾಶ್ವತ. ರೇಖೆಗಳಲ್ಲಿ ಸಾವಿರಾರು ಪದಗಳು ಅಡಗಿರುತ್ತವೆ. ಇವನ್ನು ಹುಡುಕುವ ಆಸಕ್ತಿ ಇರಬೇಕಷ್ಟೆ. ಹೀಗಾಗಿಯೇ ಚಿತ್ರವೊಂದು ಸಾವಿರ ಪದಗಳಿಗೆ ಸಮ ಎನ್ನುವುದು. ಇಂತಹ ರೇಖೆಗಳಿಂದಲೇ ಮಹಾತ್ಮ ಗಾಂಧಿಯ ಅಥವಾ ಮಕ್ಕಳ ನೆಚ್ಚಿನ ಬಾಪುವಿನ ಕಥೆಯನ್ನು ಹೇಳಲು ಹೊರಟಿದ್ದಾರೆ ಬಿ.ಜಿ.ಗುಜ್ಜಾರಪ್ಪ.

ಗುಜ್ಜಾರ್‌ ಎಂದೇ ಪ್ರಸಿದ್ಧಿ ಪಡೆದಿರುವ ರೇಖೆಗಳ ಜತೆ ಆಟವಾಡುವ ಈ ಕಲೆಗಾರ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ರೇಖೆಗಳ ಲೋಕಕ್ಕೆ ಧುಮುಕಿದವರು. ‘ಪ್ರಜಾವಾಣಿ’ ಸೇರಿದಂತೆ ಮಾಧ್ಯಮ ಲೋಕದಲ್ಲಿ 37 ವರ್ಷ ರೇಖೆಗಳೊಳಗೆ ಕಥೆಗಳನ್ನು ಹೇಳುತ್ತಾ ಹೊರಟ ಇವರು ಸದ್ಯ ಚಿತ್ರಕಲೆ ಲೋಕದಲ್ಲಿ ಈಜುತ್ತಿದ್ದಾರೆ. ಮಕ್ಕಳಿಗಾಗಿ ಕಾಮಿಕ್ಸ್‌, ಸಚಿತ್ರ ಪುಸ್ತಕಗಳನ್ನು ರೂಪಿಸಿರುವ ಇವರ ಹೊಸ ಸಾಹಸವೇ ಗಾಂಧೀಜಿಯನ್ನು ರೇಖೆಗಳಲ್ಲಿ ಕಟ್ಟಿರುವುದು.

ಗಾಂಧೀಜಿಯ ಬಾಲ್ಯದ ಕಥೆ, ಅವರ ಹೋರಾಟದ ಬದುಕು, ಜೀವನವೃತ್ತಾಂತಗಳ ಕುರಿತ ನೂರಾರು ಕೃತಿಗಳು ಈಗಾಗಲೇ ಬಂದಿವೆ. ಆದರೆ ಇವುಗಳನ್ನು ಮಕ್ಕಳ ಕೈಗಿಟ್ಟರೆ ಇವು ಆ ಕೈಗಳಿಗೆ, ಮನಸ್ಸಿಗೆ ಭಾರವಾದೀತೇ ಹೊರತು ಗಾಂಧೀಜಿಯತ್ತ ಆಕರ್ಷಿಸಲಾರವು. ಹೀಗಾಗಿಯೇ ಮಕ್ಕಳನ್ನು ಸೆಳೆಯುವ ವಸ್ತುವನ್ನಿಟ್ಟುಕೊಂಡೇ ಗುಜ್ಜಾರ್‌, ಕಿಂದರಿ ಜೋಗಿಯಂತೆ ರೇಖೆಗಳನ್ನೆಳೆಯುತ್ತಾ ಸಾಗಿದ್ದಾರೆ. ಈ ಕೃತಿ ಒಂದು ರೀತಿಯಲ್ಲಿ ಗಾಂಧೀಜಿಯ ಉಕ್ತಿಗಳ ಸಂಗ್ರಹ. ಹೀಗಿದ್ದರೂ ಆತ್ಮಕಥೆಯ ಸಾರಾಂಶದಂತೆ ಇದು ಮೂಡಿಬಂದಿದೆ. ಮಕ್ಕಳ ಬದುಕಿಗೆ ಗಾಂಧೀಜಿಯ ಪ್ರವೇಶಿಕೆಯಂತೆ ಈ ಕೃತಿ ರೂಪುಗೊಂಡಿದೆ. ಗಾಂಧೀಜಿಯ ಸರಳ ಮಾತುಗಳೇ ಇಲ್ಲಿನ ಪಾಠ. ಇದಕ್ಕೆ ಪೂರಕವಾಗಿ ಗುಜ್ಜಾರ್‌ ಅವರ ಕಲೆ, ಪುಟಗಳನ್ನು ಮತ್ತಷ್ಟು ಆಕರ್ಷಕವಾಗಿಸಿದೆ.

ಒಟ್ಟು 95 ಚಿತ್ರಗಳು ಇಲ್ಲಿವೆ. ಆದರೆ ವಿಶೇಷವಾಗಿ ಗಮನಿಸಬೇಕಾಗಿರುವುದು ಗಾಂಧೀಜಿಯ ಗೈರುಹಾಜರಿ! ಕೃತಿಯನ್ನು ಮಕ್ಕಳಿಗಾಗಿ ಸಿದ್ಧಪಡಿಸಿರುವ ಗುಜ್ಜಾರ್‌, ತಮ್ಮ ರೇಖೆಗಳಲ್ಲಿ ಗಾಂಧೀಜಿಯ ನೀತಿಪಾಠ ಹೇಳಲು ಮಕ್ಕಳನ್ನೇ ಆಯ್ದುಕೊಂಡಿದ್ದಾರೆ. ಹೀಗಾಗಿ ಗಾಂಧೀಜಿಯನ್ನು ಕೆಲವೆಡೆಯಷ್ಟೇ ರೇಖೆಗಿಳಿಸಿದ್ದಾರೆ. ಮಕ್ಕಳ ಮನಸ್ಸನ್ನು ಹತ್ತಿರದಿಂದ ಅರ್ಥ ಮಾಡಿಕೊಂಡ ಕಲಾವಿದನಿಗಷ್ಟೇ ಇದು ಸಾಧ್ಯ. ಪ್ರಸ್ತುತ ಸಮಾಜದಲ್ಲಿ ಇರುವ ಧರ್ಮದ್ವೇಷ, ಪ್ರಕೃತಿಯ ಮೇಲಿನ ಅತ್ಯಾಚಾರ, ಹಿಂಸೆಯ ಹುಳುಕನ್ನು ಸರಿಪಡಿಸುವ ದೃಷ್ಟಿಯಿಂದ ಕೂಡಿದ ಉಕ್ತಿಗಳನ್ನೂ ಕೃತಿ ಹೊಂದಿದೆ.

ಕೃತಿಯ ಅಂತ್ಯದಲ್ಲಿ ‘ನನ್ನ ಜೀವನವೇ ನನ್ನ ಸಂದೇಶ’ ಎನ್ನುತ್ತಾ ಉಕ್ತಿಗಳಿಂದಲೇ ಸುದೀರ್ಘವಾದ ಮೌಲ್ಯ ಶಿಕ್ಷಣವನ್ನು ನೀಡಲಾಗಿದೆ. ಕೊನೆಯಲ್ಲಿ ಇಳಿಸಂಜೆಯಲ್ಲಿ ಗಾಂಧೀಜಿ ಏಕಾಂತದಲ್ಲಿ ಹೆಜ್ಜೆ ಹಾಕುತ್ತಿರುವುದು, ಎಳೆಯ ಮನಸ್ಸುಗಳನ್ನು ಬಾಪೂ ತನ್ನ ವಿಚಾರಗಳತ್ತ ಕರೆದೊಯ್ಯುತ್ತಿರುವಂತಿದೆ.

ಕೃತಿ: ಮಕ್ಕಳಿಗಾಗಿ ಗಾಂಧೀಜಿ

ರಚನೆ: ಗುಜ್ಜಾರ್‌

ಅನುವಾದ: ಜಿ.ಡಬ್ಲ್ಯು.ಕಾರ್ಲೊ

ಪ್ರ: ಬಹುರೂಪಿ

ಸಂ: 7019182729

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT