ಭಾನುವಾರ, ಜುಲೈ 3, 2022
27 °C

ಪುಸ್ತಕ ವಿಮರ್ಶೆ: ಗಾಂಧಿ ಭಾರತದಲ್ಲಿ ‘ಮೋನು’ವಿನ ಸತ್ಯಾನ್ವೇಷಣೆ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Prajavani

ಮೋನು ಎನ್ನುವುದು ಮುದ್ದಿನ ಮಗನಿಗೆ ಅಮ್ಮ ಕರೆಯುತ್ತಿದ್ದ ಹೆಸರು. ಈ ಮುದ್ದಿನ ಮಗ ಬೊಳುವಾರು ಮಹಮದ್ ಕುಂಞಿ ಅವರ ‘ಮೋನು ಸ್ಮೃತಿ’ ಆತ್ಮಕಥನ ‘ಮೋಹನ ಸ್ಮೃತಿ’ಯಂತೆಯೂ ಕೇಳಿಸುತ್ತದೆ. ಬೊಳುವಾರರಿಗೆ ಗಾಂಧಿಯ ಬಗ್ಗೆ ಇನ್ನಿಲ್ಲದ ಆಕರ್ಷಣೆ, ಪ್ರೀತಿ. ಆ ಸೆಳೆತದ ಕಾರಣದಿಂದಾಗಿ ಮೋನುವಿನ ನೆನಪುಗಳಲ್ಲಿ ‘ಗಾಂಧಿಪ್ರಜ್ಞೆ’ ಸೇರಿಕೊಂಡಿದ್ದರೆ ಆಶ್ಚರ್ಯವೇನೂ ಇಲ್ಲ. 

ಗಾಂಧಿಪ್ರಜ್ಞೆ  ಕೃತಿಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಮುಸ್ಲಿಂ ಸಮುದಾಯದ ಬಗ್ಗೆ ಗಾಂಧಿ ತೋರಿಸಿದಷ್ಟು ಪ್ರೀತಿ–ಕಾಳಜಿಯನ್ನು ಈ ದೇಶದ ಮತ್ತೊಬ್ಬ ನಾಯಕ ತನ್ನ ಮಾತು–ಕೃತಿಯಲ್ಲಿ ತೋರಿಸಿದ ಉದಾಹರಣೆಯಿಲ್ಲ. ಇಂಥ ಗಾಂಧಿಭೂಮಿಯಲ್ಲಿನ ವ್ಯಕ್ತಿಯೊಬ್ಬ ತಾನು ಮುಸಲ್ಮಾನನಾಗಿರುವ ಕಾರಣಕ್ಕೆ ದೇಶಭಕ್ತಿಯನ್ನು ಮತ್ತೆ ಮತ್ತೆ ಸಾಬೀತುಪಡಿಸಬೇಕಾದ ಸಾಮಾಜಿಕ ಸಂದರ್ಭ ಇಂದಿನದು. ಈ ಸಂಕ್ರಮಣ ಸಂದರ್ಭದಲ್ಲಿ ಸಂವೇದನಾಶೀಲ ಮುಸಲ್ಮಾನನೊಬ್ಬ ತಾನು ಬದುಕುತ್ತಿರುವ ಸಮಾಜದೊಂದಿಗೆ ನಡೆಸಿದ ಪ್ರಯೋಗದಂತೆ ‘ಮೋನು ಸ್ಮೃತಿ’ ಕಾಣಿಸುತ್ತದೆ. ಬದಲಾದ ಸಾಮಾಜಿಕ ಸಂದರ್ಭದಲ್ಲಿ ಇದೂ ಒಂದು ಬಗೆಯ ಸತ್ಯಾನ್ವೇಷಣೆಯೇ! 

ಮುಸಲ್ಮಾನ ಮತ್ತು ಭಾರತೀಯ ಎನ್ನುವ ಚಹರೆಗಳ ಜಿಜ್ಞಾಸೆ ಕೃತಿಯ ‘ಸಮರ್ಪಣೆ...’ಯಿಂದಲೇ ಆರಂಭವಾಗುತ್ತದೆ. ‘ಜನ್ಮಭೂಮಿ’ಯನ್ನು ಅರ್ಜಿ ಗುಜರಾಯಿಸುವ ಮೂಲಕ ಆಯ್ದುಕೊಳ್ಳುವ ಅವಕಾಶವಿರುತ್ತಿದ್ದರೂ, ಈ ‘ಮೋನು’ ಹಿಂದೂಸ್ತಾನವನ್ನೇ ಆಯ್ದುಕೊಳ್ಳುತ್ತಿದ್ದ ಎಂಬುದನ್ನು ಎಪ್ಪತ್ತು ವರ್ಷಗಳ ಹಿಂದೆಯೇ ಸರಿಯಾಗಿ ಊಹಿಸಿ, ಈ ದೇಶದ ನಾಗರಿಕನಾಗುವ ಅರ್ಹತೆಗಳೆಲ್ಲವೂ ‘ಅತ್ಯುತ್ತಮ ಸ್ಥಿತಿಯಲ್ಲಿವೆ’ ಎಂಬುದಾಗಿ, ನನ್ನ ಹಣೆಗೆ ಶಾಶ್ವತವಾದ ‘ಐ.ಎಸ್‌.ಐ. ಮಾರ್ಕ್‌’ ಗುದ್ದಿದವರಿಗೆ’ ಎನ್ನುವ ಬೊಳುವಾರರ ಮಾತು ಔಪಚಾರಿಕ ಅರ್ಪಣೆಯಾಗಿರದೆ, ತನ್ನನ್ನು ಅಥವಾ ಓರ್ವ ಮುಸಲ್ಮಾನನನ್ನು ಭಾರತೀಯ ಸಂದರ್ಭದಲ್ಲಿ ಹೇಗೆ ಗ್ರಹಿಸಬೇಕು ಎನ್ನುವುದರ ಸೂಚನೆ–‍ಅಪೇಕ್ಷೆಯೂ ಆಗಿದೆ. ಹಾಗೆಯೇ, ಭಾರತೀಯ ಮುಸಲ್ಮಾನನೊಬ್ಬ ಈ ಹೊತ್ತು ಅನುಭವಿಸುತ್ತಿರುವ ತೊಳಲಾಟದ ಅಭಿವ್ಯಕ್ತಿಯೂ ಆಗಿದೆ.

ಬೊಳುವಾರರ ಕಿರಿಯ ಸಹೋದರ ಉಮ್ಮರ್‌ ಕುಂಞಿ ಪ್ರಸಂಗಕ್ಕೂ ಗಾಂಧಿಯ ಹಿರಿಯ ಮಗ ಹರಿಲಾಲನ ಬದುಕಿನ ದುರಂತಕ್ಕೂ ಸಾಮ್ಯತೆಯಿರುವುದನ್ನೂ ಮೋಹನ–ಮೋನುವಿನ ನಂಟಿನ ಉದಾಹರಣೆಯಾಗಿ ನೋಡಬಹುದು. ಅಣ್ಣನ ಮಾತನ್ನು ಕೇಳದ ಸಹೋದರ ಕುಟುಂಬದಿಂದ ಅಂತರ ಕಾಯ್ದುಕೊಳ್ಳುವುದು, ಉಮೇಶ ಕುಮಾರನಾಗಿ ಧರ್ಮಾಂತರ ಹೊಂದುವುದು, ಕೊನೆಗೆ ನಿರ್ಗತಿಕನಂತೆ ಸಾವಿಗೀಡಾಗುವುದು –  ಇವೆಲ್ಲ ಗಾಂಧಿ ಕುಟುಂಬದ ಕಥನದ ಹೊಸ ಅವತರಣಿಕೆಯೂ ಹೌದು.

ಮೋನು ಸ್ಮೃತಿಯಲ್ಲಿ ಬೊಳುವಾರರ ಬಾಲ್ಯದ ನೆನ‍ಪುಗಳು ಹೆಚ್ಚಿಲ್ಲ. ಪಿ.ಯು.ಸಿ. ಬಳಿಕ ಓದು ನಿಲ್ಲಿಸಿ ಜವಳಿ ಅಂಗಡಿಯೊಂದರಲ್ಲಿ ಸೇಲ್ಸ್‌ಮನ್‌, ಜೀನಸಿನ ಅಂಗಡಿಯಲ್ಲಿ ಸಹಾಯಕನಾಗಿ ದುಡಿಯುವ ಹುಡುಗನ ಚಿತ್ರಣದಾಚೆಗೆ ಅವರ ಬಾಲ್ಯದ ನೆನಪುಗಳಿಗೆ ಹೆಚ್ಚಿನ ಅವಕಾಶ ದೊರೆತಿಲ್ಲ. ಅಬ್ದುಲ್‌ ಖಾದರ್‌ ಹಾಜಿಯೆನ್ನುವ ಮಹನೀಯರ ‘ಇತರ ಹುಡುಗರಂತೆ ನಮ್ಮ ಸಮುದಾಯದ ಹುಡುಗರೂ ಮುಂದಕ್ಕೆ ಬರಬೇಕಾದರೆ ಚೆನ್ನಾಗಿ ಓದಿ ಗವರ್ನಮೆಂಟ್‌ ಆಫೀಸರ್‌ ಆಗಬೇಕು’ ಎನ್ನುವ ಆಶಯದ ಫಲವಾಗಿ ಬೊಳುವಾರರು ಡಿಗ್ರಿ ಕಾಲೇಜು ಮೆಟ್ಟಿಲು ಹತ್ತುವಂತಾಯಿತು. ಉಗ್ಗುವ ಹುಡುಗ ಸಿಂಡಿಕೇಟ್‌ ಬ್ಯಾಂಕ್‌ ಸೇರಿದ್ದು, ಕಥೆಗಾರನಾಗಿ ರೂಪುಗೊಂಡಿದ್ದು, ಬ್ಯಾಂಕಿನ ಆಡಳಿತ ಮಂಡಳಿಯ ಗಮನಸೆಳೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ಸೈ ಅನ್ನಿಸಿಕೊಂಡಿದ್ದು, ‘ಬಂಡಾಯ’ ಸಂಘಟನೆಯ ಭಾಗವಾದದ್ದು, ನಾಟಕ ಮತ್ತು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದು – ಹೀಗೆ ಬೊಳುವಾರರ ಬದುಕಿನ ಹಲವು ಸ್ಮೃತಿಗಳನ್ನು ಈ ಕೃತಿ ಓದುಗರಿಗೆ ಪರಿಚಯಿಸುತ್ತದೆ.

ಕಾವ್ಯಶಕ್ತಿಯ, ಮನಸ್ಸನ್ನು ಆರ್ದ್ರಗೊಳಿಸುವ ಹಾಗೂ ಖಿನ್ನಗೊಳಿಸುವ ಕೆಲವು ಪ್ರಸಂಗಗಳು ‘ಮೋನು ಸ್ಮೃತಿ’ಯಲ್ಲಿವೆ, ಅವು ಕೃತಿಯ ಘನತೆಯನ್ನು ಹೆಚ್ಚಿಸಿವೆ. ಅಂಥದೊಂದು ಪ್ರಸಂಗ, 1992ರ ಡಿ.6ರಂದು ದೆಹಲಿಯಲ್ಲಿ ನಡೆದ ರಾಜೀವ ತಾರಾನಾಥರ ಕಛೇರಿಯದ್ದು. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿ ಬಿದ್ದದ್ದಕ್ಕೆ ಪ್ರತಿಕ್ರಿಯೆ ಎನ್ನುವಂತೆ ರಾಜೀವರ ಸಿತಾರಿನ ತಂತಿಗಳು ಕಡಿದುಹೋಗಿ ಹೊಮ್ಮಿದ ಅಪಶ್ರುತಿ, ಆ ಕ್ಷಣವನ್ನು ಮೀರಿ ಶಾಶ್ವತವಾಗಿ ಉಳಿದಿದ್ದನ್ನು ಬೊಳುವಾರರು ಕಾವ್ಯದ ಧ್ವನಿಯಲ್ಲಿ, ಕಥನದ ತೀವ್ರತೆಯಲ್ಲಿ ಚಿತ್ರಿಸಿದ್ದಾರೆ. ಸಿತಾರಿನ ತಂತಿ ಹರಿದಷ್ಟೇ ತೀವ್ರವಾದ, ಮತ್ತೂ ದಾರುಣವಾದ ಪ್ರಸಂಗ – ದೆಹಲಿಯಲ್ಲಿ ಬಾಡಿಗೆ ಮನೆ ನಿರಾಕರಣೆಯದು. ಬೊಳುವಾರರ ಪುಟ್ಟ ಮಗಳನ್ನು ನೋಡಿದ ಮನೆಯ ಯಜಮಾನನ ವೃದ್ಧ ತಾಯಿ ವಿಚಿತ್ರವಾಗಿ ವರ್ತಿಸುತ್ತಾಳೆ. ಎದುರಿಗೆ ನಿಂತ ಪುಟಾಣಿಯ ವಯಸ್ಸಿನವಳೇ ಆದ ತನ್ನ ಮಗಳ ಮೇಲೆ, ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಅತ್ಯಾಚಾರದ ಕ್ರೌರ್ಯ ಆ ತಾಯಿಗೆ ಮತ್ತೆ ನೆನಪಾಗಿ ತಲ್ಲಣಿಸುತ್ತಾಳೆ. ಬೊಳುವಾರರ ಮಗಳು ಎದುರಿಗಿದ್ದರೆ ತನ್ನಮ್ಮ ಪ್ರತಿದಿನವೂ ಕರುಳಕುಡಿಯನ್ನು ಕಳೆದುಕೊಂಡ ಸಂಕಟವನ್ನು ಅನುಭವಿಸಬೇಕಾಗಬಹುದು ಎನ್ನುವ ಕಾರಣಕ್ಕಾಗಿ ಮನೆಯ ಯಜಮಾನ ಬೊಳುವಾರರ ಕುಟುಂಬವನ್ನು ದೂರವಿರಿಸಲಿಕ್ಕೆ ಬಯಸುತ್ತಾನೆ. ಚರಿತ್ರೆಯ ಕ್ರೌರ್ಯ ವರ್ತಮಾನದಲ್ಲಿ ಮೈದೋರುವುದಕ್ಕೆ ಏನೆಲ್ಲ ಅರ್ಥಗಳಿವೆ?

ತಮ್ಮ ಬದುಕಿನಲ್ಲಿ ಎದುರಾದ ಅನೇಕ ಸುಂದರ ಮನಸ್ಸುಗಳನ್ನು ಬೊಳುವಾರರು ನೆನಪಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ಬೊಳುವಾರರು ಸಂಪಾದಿಸಿಕೊಟ್ಟ ‘ಶತಮಾನದ ಕನ್ನಡ ಕತೆಗಳು’ ಸಂಕಲನದ ಯೋಜನಾ ಸಂಪಾದಕರಾದ ಜಿ.ಎಸ್. ಶಿವರುದ್ರಪ್ಪ, ‘ಕಾಮಧೇನು ಪ್ರಕಾಶನ’ದ ಡಿ.ಕೆ. ಶ್ಯಾಮಸುಂದರ ರಾವ್‌, ಸಿಂಡಿಕೇಟ್‌ ಬ್ಯಾಂಕಿನ ಅಧ್ಯಕ್ಷರಾದ ಕೆ.ಕೆ. ಪೈ, ಪತ್ರಕರ್ತರಾಗಿದ್ದ ಬನ್ನಂಜೆ ಗೋವಿಂದಾಚಾರ್ಯ, ರಾಜೀವ ತಾರಾನಾಥ – ಇವರುಗಳ ನಡವಳಿಕೆ ಮನುಷ್ಯತ್ವದ ಘನತೆಯ ಮಾದರಿಗಳಾಗಿ ಗಮನಸೆಳೆಯುತ್ತವೆ.

ಬೊಳುವಾರರ ಕೃತಿಯ ಮತ್ತೊಂದು ವಿಶೇಷ, ಪತ್ರಿಕೆ ಮತ್ತು ಪತ್ರಕರ್ತರ ಕುರಿತ ಸ್ಮೃತಿಗಳು. ಮಾಧ್ಯಮಗಳು ಹಾಗೂ ಪತ್ರಕರ್ತರನ್ನು ಸಾಮಾಜಿಕ ಕಟಕಟೆಯಲ್ಲಿ ನಿಲ್ಲಿಸುವ ಪ್ರಸಂಗಗಳೇ ಹೆಚ್ಚು ಕಾಣಿಸುತ್ತಿರುವ ಸಮಕಾಲೀನ ಸಂದರ್ಭದಲ್ಲಿ, ಬೊಳುವಾರರು ತಮ್ಮ ಜೀವನದ ಹಲವು ಪ್ರಮುಖ ಘಟನೆಗಳಿಗೆ ಪತ್ರಿಕೆಗಳಿಗೆ–ಪತ್ರಕರ್ತರಿಗೆ ಸಲ್ಲಿಸಿರುವ ಕೃತಜ್ಞತೆ ವಿಶೇಷವಾಗಿದೆ. ಕೆಲವು ಘಟನೆಗಳ ನಿರೂಪಣೆಗೆ ಪತ್ರಿಕೆಗಳ ವರದಿಗಳನ್ನೇ ಯಥಾವತ್ತು ಬಳಸಿಕೊಂಡಿರುವ ತಂತ್ರವೂ ಚೆನ್ನಾಗಿದೆ.

ಬೊಳುವಾರರದು ವ್ಯಂಗ್ಯದೊಂದಿಗೆ ಕಸಿಗೊಂಡ ಚುರುಕು ಭಾಷೆ. ಈ ವ್ಯಂಗ್ಯ ಬರವಣಿಗೆಯ ರುಚಿ ಹೆಚ್ಚಿಸಿದೆಯಾದರೂ, ಕೆಲವೊಮ್ಮೆ ‘ವಿಕಟ ವಿನೋದ’ದ ರೂಪವನ್ನೂ ಪಡೆದುಕೊಂಡಿದೆ. ‘ಹೆಣ್ಣುಮಕ್ಕಳ ‘ಸಿ.ಡಿ.’ ಮಾಡುವ ಬೆದರಿಕೆ!’ ಎನ್ನುವ ಶೀರ್ಷಿಕೆ ಧ್ವನಿಸುವ ಅರ್ಥಕ್ಕೂ ನಂತರದ ವಿವರಣೆಗೂ ಸಂಬಂಧ ಇಲ್ಲದಿರುವುದು, ಮೊಬೈಲ್‌ ಇಲ್ಲದ ಕಾಲವನ್ನು ಅನಾಗರಿಕ ಎನ್ನುವುದು – ಬರವಣಿಗೆಯನ್ನು ರೋಚಕಗೊಳಿಸುವ ಲೇಖಕರ ಪ್ರಯತ್ನಕ್ಕೆ ಎರಡು ಉದಾಹರಣೆಗಳಷ್ಟೆ. ‘ಸರಹದ್ದುಗಳು ಅನ್ವಯಿಸುವುದಿಲ್ಲ’ ಎಂದು ಲೇಖಕರು ಘೋಷಿಸಿಕೊಂಡಿದ್ದರೂ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಚೌಕಟ್ಟುಗಳಲ್ಲೇ ಉಳಿದ ಪ್ರಸಂಗಗಳೂ ಕೃತಿಯಲ್ಲಿವೆ. ಮದುವೆಯ ಸಂದರ್ಭದಲ್ಲಿ ಅನೇಕ ಷರತ್ತುಗಳನ್ನು ಏಕಮುಖವಾಗಿ ಹೇರುವ ವರ ಮಹಾಶಯ, ವಧುವಿನ ಭಾವನೆಗಳನ್ನು ಮುಖ್ಯವೆಂದು ಭಾವಿಸಿದಂತೆ ಕಾಣುವುದಿಲ್ಲ. ಕಥಾನಾಯಕ ತನ್ನ ನವವಧುವನ್ನು ಪ್ರತಿದಿನ ಸಂಜೆ ಉಡುಪಿಯ ಅದಮಾರು ಮತ್ತು ಪೇಜಾವರ ಮಠಗಳ ನಡುವಿರುವ ಓಣಿಯ ‘ತಡಮೆ’ ಬಳಿ ಎರಡು ತಾಸು ಒಂಟಿಯಾಗಿ ಬಿಟ್ಟು ಕಣ್ಮರೆಯಾಗುವುದು ಕೂಡ ಪುರುಷ ಯಜಮಾನಿಕೆಯ ದ್ಯೋತಕವಾಗಿಯೇ ಕಾಣಿಸುತ್ತದೆ. ಕಿರಿಯ ತಮ್ಮ ಹಾಗೂ ತಾಯಿಯ ಕುರಿತು ಮಾತನಾಡುವಾಗ ಬೊಳುವಾರರ ವ್ಯಂಗ್ಯ ಕುಂಟತೊಡಗಿ, ವಿಷಾದದ ನೆರಳು ಕಾಣಿಸುವುದನ್ನೂ ಗಮನಿಸಬೇಕು.

ಕನ್ನಡದ ಉತ್ತಮ ಆತ್ಮಕಥೆಗಳ ಸಾಲಿನಲ್ಲಿ ‘ಮೋನು ಸ್ಮೃತಿ’ಗೆ ವಿಶೇಷ ಸ್ಥಾನವಿದೆ. ಸ್ವಾತಂತ್ರ್ಯೋತ್ತರ ಭಾರತದ ‘ಆತ್ಮ’ಕಥನದ ಒಂದು ಭಾಗವಾದಂತೆಯೂ ಬೊಳುವಾರರ ಕಥನವನ್ನು ಓದಿಕೊಳ್ಳಬಹುದು. ಕನ್ನಡದ ಪ್ರಮುಖ ಕಥೆಗಾರರಲ್ಲೊಬ್ಬರ ಬದುಕಿನ ಕಥನವಾಗಿ, ಮುಸ್ಲಿಂ ಲೇಖಕನ ತವಕತಲ್ಲಣವಾಗಿ, ಅಷ್ಟು ಮಾತ್ರವಲ್ಲ, – ಸಾಮಾಜಿಕ ಸಾಂಸ್ಕೃತಿಕ ಪಠ್ಯದ ರೂಪದಲ್ಲೂ ‘ಮೋನು ಸ್ಮೃತಿ’ಗೆ ಮಹತ್ವವಿದೆ.

ಕೃತಿ: ಮೋನು ಸ್ಮೃತಿ

ಲೇ: ಬೊಳುವಾರು ಮಹಮದ್ ಕುಂಞಿ

ಪ್ರ: ನವಕರ್ನಾಟಕ ಪ್ರಕಾಶನ

ಸಂ: 080–22161900 / 2216901

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು