ಶುಕ್ರವಾರ, ನವೆಂಬರ್ 22, 2019
20 °C

ಮೈಲಾರಲಿಂಗನ ಸಾಂಸ್ಕೃತಿಕ ಬದುಕಿನ ರೋಚಕ ಕಥೆ

Published:
Updated:
Prajavani

ಸಾಂಸ್ಕೃತಿಕ ವೀರ ಮೈಲಾರಲಿಂಗ
ಲೇ:
ಡಾ.ಚಿಕ್ಕಣ್ಣ ಯಣ್ಣೆಕಟ್ಟೆ
ಪ್ರ: ಗಡಿನಾಡ ಜಾನಪದ ಸಂಪರ್ಕಾಧ್ಯಯನ ಕೇಂದ್ರ ಪ್ರತಿಷ್ಠಾನ, ಕಾಳಿದಾಸ ನಗರ, ಶಿರಾ
ಮೊ: 99459 75509

**

ಮೈಲಾರಲಿಂಗ ಸಾಂಸ್ಕೃತಿಕ ವೀರ, ಜನಪದ ದೈವ, ಶಿವನ ಅವತಾರ ಎನ್ನುವ ನಂಬಿಕೆ ಜನರಲ್ಲಿ ಒಂದೊಂದು ಕಡೆ, ಒಂದೊಂದು ಬಗೆಯಲ್ಲಿದೆ. ದೇಶದಾದ್ಯಂತ ಈ ದೈವಕ್ಕೆ ಜಾತಿ–ಮತದ ಭೇದವಿಲ್ಲದೆ ಒಕ್ಕಲುಗಳಿವೆ. ಮಹಾರಾಷ್ಟ್ರವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಕೋಟ್ಯಂತರ ಜನರಿಗೆ ಮೈಲಾರಲಿಂಗ ಮನೆದೈವ ಆಗಿದ್ದಾನೆ. ಈ ಮೈಲಾರಲಿಂಗನ ಮೂಲ ನೆಲೆ ಇರುವುದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರದಲ್ಲಿ.  

ದೈವತ್ವಕ್ಕೆ ಏರಿದ ಅಥವಾ ದೈವದ ಪ್ರತಿರೂಪವೇ ಎಂದು ನಂಬಲಾಗಿರುವ ಮೈಲಾರಲಿಂಗನ ಸಾಂಸ್ಕೃತಿಕ ಬದುಕು ಕೂಡ ಅಷ್ಟೇ ರೋಚಕವಾಗಿದೆ. ಮಾರ್ತಾಂಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಮಲ್ಲಾಸುರನೆಂಬ ರಾಕ್ಷಸನನ್ನು ಸಂಹರಿಸಿದವನು ಈ ಮೈಲಾರಲಿಂಗ. ಹಾಗಾಗಿಯೇ ಈ ವೀರನಿಗೆ ಮೈಲಾರ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ. ಇನ್ನು ಈ ಮೈಲಾರನಿಗೂ ತಿರುಪತಿ ತಿಮ್ಮಪ್ಪನಿಗೂ ನೆಂಟಸ್ತಿಕೆ. ತಿಮ್ಮಪ್ಪನ ಮಗಳನ್ನು ಮೈಲಾರಲಿಂಗ ಮದುವೆಯಾಗಿ, ವಧು ‌ದಕ್ಷಿಣೆಯಾಗಿ ನೀಡಬೇಕಿದ್ದ ಏಳುಕೋಟಿ ಹೊನ್ನಿನ ಸಾಲ ಉಳಿಸಿಕೊಂಡಿದ್ದ. ಸಾಲ ತೀರಿಸದಿದ್ದಕ್ಕೆ ಮೈಲಾರನ ಭಕ್ತರು ‘ಏಳು ಕೋಟಿ’ ಎನ್ನುವಂತೆ ತಿಮ್ಮಪ್ಪ ಶಾಪ ನೀಡಿದ ಎನ್ನುವ ನಂಬಿಕೆ ಇದೆ. ಇನ್ನೂ ಕೆಲವು ವಿದ್ವಾಂಸರು ಮೈಲಾರನಿಗೆ ಏಳು ಕೋಟಿಗೂ ಅಧಿಕ ಭಕ್ತರಿದ್ದಾರೆ, ಹಾಗಾಗಿ ಏಳು ಕೋಟಿ ಮೈಲಾರ ಎನ್ನುವ ಹೆಸರು ಬಂತೆನ್ನುತ್ತಾರೆ.

ಹಾಗೆಯೇ ಈ ಮಾಯಕಾರ ಮೈಲಾರ, ತಿಮ್ಮಪ್ಪನಿಗೆ ನಿನ್ನ ಭಕ್ತರೆಲ್ಲರೂ ‘ಗೋವಿಂದ ಗೋವಿಂದ’ ಎನ್ನಲಿ ಎಂದು ಪ್ರತಿಶಾಪ ನೀಡಿದ ಎನ್ನುವ ನಂಬಿಕೆಯೂ ಇದೆ. ಇದನ್ನು ಸಾಕ್ಷೀಕರಿಸುವಂತೆ ಈ ಎರಡು ದೇವರ ಒಕ್ಕಲಿನವರು ಪರಸ್ಪರ ದೇವರುಗಳಿಗೆ ಪೂಜೆ ಸಲ್ಲಿಸುವುದಿಲ್ಲ. ಇಂತಹ ಅನೇಕ ಪುರಾಣಪ್ರಸಿದ್ಧ ಕಥೆಗಳಿಗೆ ಲೇಖಕ ಚಿಕ್ಕಣ್ಣ ಯಣ್ಣೆಕಟ್ಟೆ ಕ್ಷೇತ್ರ ಕಾರ್ಯಾಧಾರಿತ ಅಧ್ಯಯನದಲ್ಲಿ ಸಂಗ್ರಹಿಸಿರುವ ಮಾಹಿತಿಗಳು ಒತ್ತುಸಾಕ್ಷಿ ನೀಡುವಂತೆ ಇವೆ.

ಇನ್ನೂ ಮೈಲಾರ ಪರಂಪರೆಯ ಬಹುದೊಡ್ಡ ಆಚರಣೆ ಕಾರಣೀಕೋತ್ಸವ. ಮಲ್ಲಾಸುರ ರಾಕ್ಷಸನನ್ನು ಮೈಲಾರಲಿಂಗ ಸಂಹರಿಸಿ, ಲೋಕಕ್ಕೆ ಶಾಂತಿ, ನೆಮ್ಮದಿಯ ಸಂದೇಶ ನೀಡಿದ ಪ್ರತೀಕವಾಗಿ ಪ್ರತಿ ವರ್ಷ ರಥಸಪ್ತಮಿಯ ಪಾಡ್ಯಮಿಯಂದು ಸಂಜೆ ಕಾರಣೀಕೋತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಗೊರವಪ್ಪ ನುಡಿಯುವ ವರ್ಷ ಭವಿಷ್ಯವಾದ ಕಾರಣಿಕಕ್ಕೆ ಇಡೀ ನಾಡು ಕಾದುಕುಳಿತಿರುತ್ತದೆ. ಇಷ್ಟೆಲ್ಲ ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧವಾದ ಮೈಲಾರಲಿಂಗನ ಪುರಾಣವನ್ನು ಶಾಸನ, ಶಾಸ್ತ್ರಗ್ರಂಥ, ಜಾನಪದ ಕಥೆಗಳನ್ನು ಆಧರಿಸಿ ಲೇಖಕರು ಸೊಗಸಾಗಿ ಚಿತ್ರಿಸಿದ್ದಾರೆ.

ಸಾಂಸ್ಕೃತಿಕ ಕಲೆಯ ಮಹತ್ವ ದಕ್ಕಿಸಿಕೊಂಡು ಜನಪ್ರಿಯಗೊಂಡಿರುವ ಗೊರವರ ಕುಣಿತ, ಮೈಲಾರ ಜಾತ್ರೆ, ದೋಣಿ ಸೇವೆ, ಸರ್ಪಣಿ ಪವಾಡ, ಮೈಲಾರ ಗೊರವರು ಮತ್ತು ಕಲೆಯ ಸಾಧಕರ ವಿವರಗಳೆಲ್ಲವೂ ಈ ಕೃತಿಯ ಅಧ್ಯಯನ ವ್ಯಾಪ್ತಿಯನ್ನು ವಿಸ್ತರಿಸಿವೆ. ಸಂಸ್ಕೃತಿ ಚಿಂತಕರು, ಇತಿಹಾಸ ಅಧ್ಯಯನಕಾರರಿಗೂ ಇದೊಂದು ಆಕರಗ್ರಂಥವಾಗಿದ್ದು, ಓದು– ಮರು ಓದಿಗೂ ಒಡ್ಡಿಸಿಕೊಳ್ಳುತ್ತದೆ. ಸಂಗ್ರಹಯೋಗ್ಯ ಕೃತಿಯೂ ಎನಿಸಿದೆ.

ಪ್ರತಿಕ್ರಿಯಿಸಿ (+)