ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಕಥೆಗೆ ‘ಮ್ಯಾನ್‌ ಬೂಕರ್‌’ ಗರಿ

Last Updated 26 ಮೇ 2019, 10:47 IST
ಅಕ್ಷರ ಗಾತ್ರ

ಲಂ ಡನ್ನಿನ ರೌಂಡ್‌ಹೌಸ್‌ ಸಭಾಂಗಣದಲ್ಲಿ ತಲೆಗೊಂದು ಹಿಜಬ್‌ ಹೊದ್ದು, ಒಂದು ಕೈಯಲ್ಲಿ ಪುಸ್ತಕ, ಮತ್ತೊಂದು ಕೈಯಲ್ಲಿ ಟ್ರೋಫಿ ಹಿಡಿದು ನಿಂತಿದ್ದ ಜೋಖಾ ಅಲ್ಹರ್ತಿ ಅವರಿಗೆ ಜಗತ್ತನ್ನೇ ಗೆದ್ದ ಸಂಭ್ರಮ. ಅರೆಬಿಕ್‌ ಭಾಷೆಗೆ ಮೊದಲ ಮ್ಯಾನ್‌ ಬೂಕರ್‌ ಇಂಟರ್‌ನ್ಯಾಷನಲ್‌ ಪ್ರಶಸ್ತಿಯನ್ನು ತಂದದ್ದೇನು ಸಣ್ಣ ಸಾಧನೆಯೇ ಮತ್ತೆ?

ಒಮನ್‌ ದೇಶದ ಈ ಯುವ ಲೇಖಕಿ ಅರೆಬಿಕ್‌ ಭಾಷೆಯಲ್ಲಿ ಬರೆದ ‘ಸೆಲೆಸ್ಟಿಯಲ್‌ ಬಾಡೀಸ್‌’ (ಸ್ವರ್ಗದ ಕಾಯಗಳು?) ಕೃತಿ, ಇಂಗ್ಲಿಷ್‌ಗೆ ಅನುವಾದಗೊಂಡು ‘ಮ್ಯಾನ್‌ ಬೂಕರ್‌’ ಪ್ರಶಸ್ತಿಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಅನ್ಯಭಾಷೆಯಿಂದ ಇಂಗ್ಲಿಷ್‌ಗೆ ಅನುವಾದಗೊಂಡ ಕೃತಿಗೆ ಈ ಪ್ರಶಸ್ತಿ ಮೀಸಲಾಗಿದೆ. ಅಂದಹಾಗೆ, ವಸಾಹತುಶಾಹಿ ಯುಗಾಂತ್ಯದ ಬಳಿಕ ಒಮನ್‌ ದೇಶದ ರೂಪಾಂತರ ಹೊಂದುತ್ತಾ ಬಂದ ಬಗೆಯೇ ಈ ಕೃತಿಯ ಕಥಾವಸ್ತು.

‘ಅರೆಬಿಕ್‌ನ ಶ್ರೀಮಂತ ಸಂಸ್ಕೃತಿ ಜಗತ್ತಿಗೆ ತೆರೆದುಕೊಂಡಿದ್ದಕ್ಕೆ ಭರಿಸಲಾಗದಷ್ಟು ಹರ್ಷವಾಗಿದೆ’ ಎನ್ನುತ್ತಾರೆ ಜೋಖಾ. ಎಡಿನ್‌ಬರೊ ವಿಶ್ವವಿದ್ಯಾಲಯದಲ್ಲಿ ಶಾಸ್ತ್ರೀಯ ಅರೆಬಿಕ್‌ ಕಾವ್ಯಗಳ ಮೇಲೆ ಅಧ್ಯಯನ ಮಾಡಿರುವ ಅವರು, ಮಸ್ಕತ್‌ನ ಸುಲ್ತಾನ್‌ ಕಬೂಸ್‌ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿ. ‘ಸೆಲೆಸ್ಟಿಯಲ್‌ ಬಾಡೀಸ್‌’ ಕೃತಿಗೂ ಮುನ್ನ ಮೂರು ಕಾದಂಬರಿಗಳು, ಎರಡು ಸಣ್ಣ ಕಥೆಗಳ ಸಂಕಲನಗಳನ್ನು ಅವರು ಹೊರತಂದಿದ್ದಾರೆ. ಮಕ್ಕಳ ಸಾಹಿತ್ಯಕ್ಕೂ ಒಂದು ಚೆಂದನೆಯ ಕೃತಿಯನ್ನು ಕೊಟ್ಟಿದ್ದಾರೆ.

‘ಒಮನ್‌ನಲ್ಲಿ ಈ ಕೃತಿಗೆ ಸಿಕ್ಕಿರುವ ಪ್ರೀತಿಯಿಂದ ನಾನು ವಿನೀತಳಾಗಿದ್ದೇನೆ. ಪುಸ್ತಕದಲ್ಲಿರುವ ಮಾನವೀಯ ಮೌಲ್ಯಗಳು ಹಾಗೂ ಅದು ಪ್ರತಿಪಾದಿಸುವ ಪ್ರೀತಿ ಮತ್ತು ಸ್ವಾತಂತ್ರ್ಯದ ಕಾರಣಕ್ಕಾಗಿ ಅದು ಜಗತ್ತಿನ ಬೇರೆ ದೇಶಗಳ ಓದುಗರಿಗೂ ಇಷ್ಟವಾಗುತ್ತದೆ ಎನ್ನುವ ನಂಬಿಕೆ ಇದೆ’ ಎಂದು ಹೇಳುತ್ತಾರೆ ಜೋಖಾ.

‘ನಾನು ತುಂಬಾ ಹಿಂದೆಯೇ ಈ ಕಥೆಯನ್ನು ಬರೆಯಲು ಉದ್ದೇಶಿಸಿದ್ದೆ. ಆದರೆ, ಒಮನ್‌ನಲ್ಲಿ ಇದ್ದಾಗ ಸಾಧ್ಯವಾಗಲೇ ಇಲ್ಲ. ಎಡಿನ್‌ಬರೊ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಊರಿನ ನೆನಪುಗಳು ಬಲವಾಗಿ ಕಾಡುತ್ತಿದ್ದವು. ದೇಶ ಬಿಟ್ಟುಬಂದ ಏಕಾಂಗಿತನದ ನೋವಿನಿಂದ ಹೊರಬರುವುದಕ್ಕಾಗಿ ನಾನು ಬರೆಯಲು ಶುರು ಮಾಡಿದೆ. ಬರವಣಿಗೆ ನನ್ನ ದುಗುಡವನ್ನು ಹಗುರ ಮಾಡಿತು’ ಎಂದು ಕಥೆ ಹುಟ್ಟಿದ ಕ್ಷಣಗಳನ್ನು ಅವರು ಕಟ್ಟಿಕೊಡುತ್ತಾರೆ. ಪ್ರಶಸ್ತಿಯು 50 ಸಾವಿರ ಪೌಂಡ್‌ (₹ 44 ಲಕ್ಷ) ನಗದು ಬಹುಮಾನ ಹೊಂದಿದ್ದು, ಕೃತಿಯ ಮೂಲ ಲೇಖಕಿ (ಜೋಖಾ) ಹಾಗೂ ಅದರ ಅನುವಾದಕಿ (ಮರ್ಲಿನ್‌ ಬೂತ್‌) ಇಬ್ಬರಿಗೂ ಬಹುಮಾನದ ಮೊತ್ತ ಸಮಾನವಾಗಿ ಹಂಚಿಕೆಯಾಗಿದೆ.

‘ಈ ಕೃತಿಯಲ್ಲಿ ಸೃಜನಶೀಲತೆ ಮಡುವುಗಟ್ಟಿದ್ದು, ಕಾವ್ಯಾತ್ಮಕ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಅದರೊಟ್ಟಿಗೆ ಸಮಾಜ ಬದಲಾಗುತ್ತಾ ಬಂದ ಬಗೆಯನ್ನು ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ’ ಎಂದು ಪ್ರಶಸ್ತಿ ಆಯ್ಕೆ ಸಮಿತಿಯು ‘ಸೆಲೆಸ್ಟಿಯಲ್‌ ಬಾಡೀಸ್‌’ ಕೃತಿಯನ್ನು ಹಾಡಿಹೊಗಳಿದೆ. ಈ ಸಲದ ಪ್ರಶಸ್ತಿಗೆ ನಡೆದ ಸ್ಪರ್ಧೆಯ ವಿಶೇಷವೆಂದರೆ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಐದೂ ಕೃತಿಗಳ ಕರ್ತೃಗಳು ಮಹಿಳೆಯರೇ ಆಗಿದ್ದುದು.

‘ಅರಬ್‌ ಕಥಾ ಜಗತ್ತು ಎಷ್ಟು ಸೊಗಸಾಗಿದೆ ಗೊತ್ತಾ’ ಎಂಬ ಪ್ರಶ್ನೆ ಮುಂದಿಡುತ್ತಾ ಜೋಖಾ ಕುತೂಹಲ ಹುಟ್ಟಿಸುತ್ತಾರೆ. ಈಜಿಪ್ಟ್‌, ಪ್ಯಾಲೆಸ್ಟೇನ್‌, ಲೆಬನಾನ್‌ ಹಾಗೂ ಮೊರೊಕ್ಕೊದಲ್ಲಿ ಎಂತಹ ಅದ್ಭುತ ಕಥೆಗಳು ಜನ್ಮತಾಳಿವೆ. ಅವುಗಳೆಲ್ಲ ಅರಬ್‌ ಜಗತ್ತಿನ ಆಚೆಗೂ ತಮ್ಮ ಸುಗಂಧವನ್ನು ಬೀರಬೇಕಿದೆ ಎಂದು ಅವರು ಹೇಳುತ್ತಾರೆ.

ಈ ಕೃತಿಯಲ್ಲಿ ಏನಿದೆ?

ಅದು 20ನೇ ಶತಮಾನದ ಕಾಲಘಟ್ಟ. ಆ ಅವಧಿಯಲ್ಲಿ ಒಮನ್‌ನಲ್ಲಿದ್ದ ಒಂದು ಪುಟ್ಟ ಹಳ್ಳಿ ಅಲ್‌ ಅವಾಫಿ. ಮಯ್ಯಾ, ಆಸ್ಮಾ ಮತ್ತು ಖಾವ್ಲಾ ಆ ಗ್ರಾಮದ ಮೂವರು ಸಹೋದರಿಯರು. ಈ ಯುವತಿಯರ ಸುತ್ತ ಬೆಳೆಯುವ ಕಥೆ, ಸಮಾಜದಲ್ಲಿ ಬೇರೂರಿದ್ದ ಗುಲಾಮಗಿರಿ, ಲಿಂಗ ತಾರತಮ್ಯ ಹಾಗೂ ಇವುಗಳಿಂದ ಮುಕ್ತರಾಗಲು ಸಮಾಜದಲ್ಲಿ ಮೌನವಾಗಿ ನಡೆದ ಹೋರಾಟವನ್ನು ಬಿಚ್ಚಿಡುತ್ತಾ ಹೋಗುತ್ತದೆ.

ಮೊದಲ ಬಾರಿಗೆ ಅರೆಬಿಕ್‌ ಭಾಷೆಗೆ ಒಲಿದ ಮ್ಯಾನ್‌ ಬೂಕರ್‌ ಪ್ರಶಸ್ತಿಯು ಈ ಗಲ್ಫ್‌ ದೇಶದುದ್ದಕ್ಕೂ ಸಂಭ್ರಮದ ಅಲೆ ಎಬ್ಬಿಸಿದೆ. ‘ನಮ್ಮ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣ. ನಮ್ಮ ಸಾಹಿತ್ಯ ಎತ್ತ ಸಾಗುತ್ತಿದೆ ಎಂಬುದರ ದಿಕ್ಸೂಚಿಯೂ ಇದಾಗಿದೆ’ ಎಂದು ಒಮನ್‌ನ ಹೆಸರಾಂತ ಲೇಖಕ ಸೈಫ್‌ ಅಲ್‌ ರಬಿ ಹೇಳುತ್ತಾರೆ.

‘ನೀವು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಪ್ರೀತಿ, ಗೆಳೆತನ, ಸಾವು, ನೋವಿನ ಭಾವನೆಗಳು ಒಂದೇ ಆಗಿರುತ್ತವೆ, ಅಲ್ಲವೆ’ ಎನ್ನುವ ಜೋಖಾ ಅವರ ಪ್ರಶ್ನೆ ಎಷ್ಟೊಂದು ಅರ್ಥಗರ್ಭಿತವಾಗಿದೆ. ಅಲ್ಲವೇ ಮತ್ತೆ, ಮಾನವೀಯತೆಗೆ ದೇಶ, ಕಾಲಗಳ ಹಂಗಿಲ್ಲ. ಭಾಷೆ, ಗಡಿಗಳ ಚೌಕಟ್ಟಿನಲ್ಲೂ ಅದನ್ನು ಬಂಧಿಸಿಡಲಾಗದು. ಜಗತ್ತಿನ ವಿವಿಧ ಭಾಷೆಗಳ ಮಾನವೀಯ ಕಥೆಗಳ ಸುಗಂಧ ಎಲ್ಲೆಡೆ ಹರಡಲು ನೆರವಾಗುತ್ತಿರುವ ಸಾರ್ಥಕ ಭಾವ ಇಂತಹ ಪ್ರಶಸ್ತಿಗಳದ್ದು.

ಮರ್ಲಿನ್‌ ಹೇಳುವುದೇನು?

ಮೂಲ ಅರಬ್‌ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದ ಮಾಡಿರುವ ಮರ್ಲಿನ್‌ ಬೂತ್‌ ಅವರಿಗೆ ಜೋಖಾ ಅವರ ಬರಹ ತುಂಬಾ ಖುಷಿ ಕೊಟ್ಟಿದೆಯಂತೆ. ಒಮನ್‌ನ ರಾಜಕೀಯ ಹಾಗೂ ಸಾಮಾಜಿಕ ಇತಿಹಾಸದ ಹಿನ್ನೆಲೆ ಇಟ್ಟುಕೊಂಡು ಸುಂದರ ಕುಂಟುಂಬವೊಂದರ ಸಂಬಂಧಗಳಿಗೆ ಜೀವ ಕೊಟ್ಟಿದ್ದಾರೆ ಜೋಖಾ ಎಂದು ಅವರು ಹೇಳುತ್ತಾರೆ. ಒಮನ್‌ ಕುರಿತು ಸಮಗ್ರವಾದ ಅರಿವು ಹೊಂದಿದವರನ್ನು ಮಾತ್ರ ದೃಷ್ಟಿಯಲ್ಲಿ ಇಟ್ಟುಕೊಂಡು ಮೂಲಕೃತಿ ರಚಿಸಲಾಗಿದೆ. ಅಲ್ಲಿ ಬರುವ ಸಂಗತಿಗಳ ಕುರಿತು ವಿವರಣೆ ನೀಡುವ ಸವಾಲೂ ನನ್ನ ಮೇಲಿತ್ತು ಎಂದು ಮರ್ಲಿನ್‌ ವಿವರಿಸುತ್ತಾರೆ.

‘ಸೆಲೆಸ್ಟಿಯಲ್‌ ಬಾಡೀಸ್‌’ ಕೃತಿಯಿಂದ ಓದುಗರಿಗೆ ದಕ್ಕುವುದೇನು ಎಂಬ ನೇರ ಪ್ರಶ್ನೆಗೆ ಮರ್ಲಿನ್‌ ಉತ್ತರಿಸುವುದು ಹೀಗೆ: ‘ಸಮಾಜ ಹಾಗೂ ಇತಿಹಾಸದ ಕುರಿತು ಇನ್ನಷ್ಟು ಮತ್ತಷ್ಟು ತಿಳಿದುಕೊಳ್ಳುವಂತೆ ಈ ಕೃತಿ ಓದುಗರನ್ನು ಪ್ರೇರೇಪಿಸುತ್ತದೆ. ಗುಲಾಮಗಿರಿಯಲ್ಲಿ ನಲುಗಿದ ಮಹಿಳೆಯರ ಬದುಕಿನ ಮೇಲೆ ಹೊಸ ಬೆಳಕು ಚೆಲ್ಲುತ್ತದೆ’.

ಅರಬ್‌ ರಾಷ್ಟ್ರಗಳಲ್ಲಿ ಒಮನ್‌ ಸಾಹಿತ್ಯ ತನ್ನ ಅಸ್ತಿತ್ವವನ್ನು ಢಾಳವಾಗಿ ಎತ್ತಿ ತೋರಿಸಲು ಸಹ ಈ ಕೃತಿ ನೆರವಿಗೆ ಬರಲಿದೆ ಎಂದು ಮರ್ಲಿನ್‌ ವಿಶ್ಲೇಷಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT