ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ನೆರಳಲ್ಲಿ ಬದುಕಿನ ಬೆಳದಿಂಗಳು

Last Updated 20 ಜುಲೈ 2019, 19:30 IST
ಅಕ್ಷರ ಗಾತ್ರ

ಬದುಕಿನ ಅರ್ಥವನು ಹುಡುಕುತ್ತಾ..

(ವಿಕ್ಟರ್ ಫ್ರಾಂಕ್ಲ್‍ನ "ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್")
ಕನ್ನಡಕ್ಕೆ: ಸುಭಾಷ್ ರಾಜಮಾನೆ
ಆಕೃತಿ ಪುಸ್ತಕ ಬೆಂಗಳೂರು
ದೂರವಾಣಿ: 080-23409479

ಪುಟ 158

ಬೆಲೆ 160

ಎರಡನೇ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ನಾಜಿ ಕ್ಯಾಂಪ್‍ಗಳಲ್ಲಿ ಬಂಧಿತನಾಗಿದ್ದ ವಿಕ್ಟರ್ ಎಮಿಲಿ ಫ್ರಾಂಕ್ಲ್ ಅನುಭವಿಸಿದ ನೋವು, ಹಸಿವು, ವೇದನೆ, ಅವಮಾನ, ಚಿತ್ರಹಿಂಸೆ, ಕ್ರೌರ್ಯ, ದಬ್ಬಾಳಿಕೆಗಳ ನೈಜ ಚಿತ್ರಣವೇ ಈ ಪುಸ್ತಕ. ಹಾಗೆಂದು ವಿಕ್ಟರ್ ಫ್ರಾಂಕ್ಲ್ ಯುದ್ಧ ಕೈದಿ ಆಗಿರಲಿಲ್ಲ. ನರಶಾಸ್ತ್ರಜ್ಞ ಮತ್ತು ಮನೋಚಿಕಿತ್ಸಕನಾಗಿ ದುಡಿದು ಸಮಾಜದಲ್ಲಿ ಗಣ್ಯ ಸ್ಥಾನ ಪಡೆದಿದ್ದ. ವಿಯೆನ್ನಾ ವಿಶ್ವವಿದ್ಯಾಲಯದ ಎಂ.ಡಿ (ಮೆಡಿಸನ್) ಪದವೀಧರ. (ಕೆಲವು ವರ್ಷಗಳ ಬಳಿಕ ಪಿಎಚ್‌.ಡಿಯನ್ನೂ ಮಾಡಿದ.) ಆತನ ಲೊಗೊಥೆರಪಿ ಸಿದ್ಧಾಂತ ಇವತ್ತು ಮನೋವಿಜ್ಞಾನ ಕ್ಷೇತ್ರದಲ್ಲಿ ಅಸ್ತಿತ್ವಾತ್ಮಕ ಚಿಕಿತ್ಸೆಯೆಂದೇ ಪ್ರಸಿದ್ಧವಾಗಿದೆ. ಸಿಗ್ಮಂಡ್ ಫ್ರಾಯ್ಡ್ ಮತ್ತು ಆಲ್ಫ್ರೆಡ್ ಆಲ್ಡರ್ ಬಳಿಕ ಮನೋವಿಜ್ಞಾನ ಕ್ಷೇತ್ರದಲ್ಲಿ ಮೂರನೆಯ ಸಿದ್ಧಾಂತವೊಂದನ್ನು ಪ್ರಚುರಪಡಿಸಿದಾತ ಈ ವಿಕ್ಟರ್ ಫ್ರಾಂಕ್ಲ್.

ಆದರೆ ನಾಜಿಗಳ ಜರ್ಮನಿಯಲ್ಲಿ ಆತ ಯಹೂದಿ ಆಗಿದ್ದುದೇ ಅಪರಾಧವಾಗಿತ್ತು. ಮೂರು ವರ್ಷಗಳ ಕಾಲ ನಾಜಿ ಕ್ಯಾಂಪ್‍ಗಳಲ್ಲಿ (ಇಂತಹ 42,500 ಕ್ಯಾಂಪ್‍ಗಳಿದ್ದುವಂತೆ) ನರಳಿದ ವಿಕ್ಟರ್ ಫ್ರಾಂಕ್ಲ್ ಅಲ್ಲಿಂದ ಬದುಕಿ ಹೊರಬಂದದ್ದೇ ಒಂದು ಪವಾಡ. ಆತನ ತಂದೆ, ತಾಯಿ ಮತ್ತು ಹೆಂಡತಿಯನ್ನು ಅದೇ ಕ್ಯಾಂಪ್‍ನ ಗ್ಯಾಸ್ ಚೇಂಬರ್‌ಗೆ ಜೀವಂತವಾಗಿ ತಳ್ಳಿ ಉಸಿರುಗಟ್ಟಿಸಿ ಕೊಲ್ಲಲಾಗಿತ್ತು. ಆತನ ಜೊತೆಗಿದ್ದ ಸಹಸ್ರಾರು ಜನ ಅಲ್ಲೇ ಪ್ರಾಣಬಿಟ್ಟರು. ಆದರೆ ಫ್ರಾಂಕ್ಲ್ ಬದುಕುಳಿದ. ವಿಶೇಷವೆಂದರೆ, ಮನುಷ್ಯನ ಬದುಕಿನ ನಿಜವಾದ ಅರ್ಥವೇನು ಎನ್ನುವುದನ್ನು ಶೋಧಿಸುತ್ತಲೇ ನರಕಸದೃಶ ವಾತಾವರಣದಲ್ಲಿ ಬದುಕುಳಿದ.

ಫ್ರಾಯ್ಡ್, ಆಡ್ಲರ್ ಮತ್ತು ಫ್ರಾಂಕ್ಲ್ ಸಿದ್ಧಾಂತಗಳ ನಡುವಿನ ವ್ಯತ್ಯಾಸಗಳು ಕುತೂಹಲಕರ. ಮಾನವ ಜೀವನದ ಪರಮೋದ್ದೇಶ ಸುಖಾಪೇಕ್ಷೆ ಎಂದು ಫ್ರಾಯ್ಡ್ ಹೇಳಿದರೆ, ಅಧಿಕಾರ ಲಾಲಸೆ ಎಂದು ಆಡ್ಲರ್ ಹೇಳುತ್ತಾನೆ. ಆದರೆ ಫ್ರಾಂಕ್ಲ್ ಪ್ರಕಾರ ಮಾನವ ಜೀವನದ ಮೂಲ ಉದ್ದೇಶವೇ ಜೀವನ ದರ್ಶನ. ‘ಮನುಷ್ಯನಿಂದ ಏನೆಲ್ಲವನ್ನೂ ಕಿತ್ತುಕೊಳ್ಳಬಹುದು, ಆದರೆ ಆತನ ಆಯ್ಕೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಆಗುವುದಿಲ್ಲ’ ಎನ್ನುತ್ತಾನೆ ಫ್ರಾಂಕ್ಲ್. ಇದು ಆತ ನಾಜಿ ಕಾನ್ಸೆಂಟ್ರೇಷನ್ ಕ್ಯಾಂಪ್‍ಗಳಲ್ಲಿ ಕಂಡುಕೊಂಡ ಸತ್ಯ. ಕ್ಯಾಂಪ್‍ನಲ್ಲಿ ತನ್ನ ಅನುಭವವನ್ನು ಹೇಳುತ್ತಲೇ ಈ ಪುಸ್ತಕದುದ್ದಕ್ಕೂ ಮನುಷ್ಯನ ಜೀವನ ದರ್ಶನದ ಸಾಮರ್ಥ್ಯವನ್ನು ಬಿಚ್ಚಿಡುತ್ತಾನೆ ಫ್ರಾಂಕ್ಲ್.

ಹಾಗೆಂದು ಈ ಪುಸ್ತಕ ಆತ್ಮಕಥೆಯಲ್ಲ. ಮೊದಲ ಭಾಗ ಮಾತ್ರ ಸ್ವಲ್ಪ ಆತ್ಮನಿವೇದನೆಯ ರೂಪದಲ್ಲಿದೆ. ಕಾನ್ಸೆಂಟ್ರೇಷನ್ ಕ್ಯಾಂಪ್‍ನ ಕೈದಿಗಳಲ್ಲಿ ಎಲ್ಲ ವರ್ಗದ ಜನರಿದ್ದರು. ಅವರೆಲ್ಲರೂ ಒಂದೇ ಬಗೆಯ ಆಹಾರ ಸೇವಿಸುತ್ತಿದ್ದರು. (ಆದರೆ ಆಹಾರದ ಗ್ಯಾರಂಟಿ ಇರಲಿಲ್ಲ.) ಬಂದೂಕಿನ ನಳಿಕೆಯ ಅಡಿಯಲ್ಲಿ ಒಂದೇ ತೆರನಾದ ಕೆಲಸ ಮಾಡುತ್ತಿದ್ದರು. ಎಲ್ಲರೂ ಒಂದೇ ಬಗೆಯ ಚಳಿಯಿಂದ ನಡುಗುತ್ತಿದ್ದರು. ಒಂದೇ ಬಗೆಯ ರೋಗದಿಂದ ನರಳುತ್ತಿದ್ದರು. ಒಂದೇ ತೆರನಾದ ನೋವು ಅನುಭವಿಸುತ್ತಿದ್ದರು. ಆದರೆ ಅವರಲ್ಲಿ ಕೆಲವರು ಸತ್ತರು, ಕೆಲವರು ಬದುಕುಳಿದರು. ಬದುಕಿ ಉಳಿದವರ ಸಂಖ್ಯೆ ಕಡಿಮೆಯೇ ಇತ್ತು. ಆದರೆ ಅವರು ಬದುಕಿ ಉಳಿಯಲು ಕಾರಣವಾದದ್ದೇನು.. ಎನ್ನುವುದನ್ನು ಶೋಧಿಸುತ್ತದೆ ಈ ಪುಸ್ತಕ. ಯಾತನೆ ಜೀವನದ ಒಂದು ಅವಿಭಾಜ್ಯ ಅಂಗ ಎಂದು ಅವರು ತಿಳಿದಿದ್ದರು. ಆದರೆ ಯಾತನೆಗೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿ ಅದಕ್ಕೊಂದು ಅರ್ಥ ಕೊಡಬೇಕು ಎಂದುಕೊಂಡು ಬದುಕಿದರು. ಬದುಕಿನ ಈ ಅಸ್ತಿತ್ವವಾದದ ಕುರಿತು ಫ್ರಾಂಕ್ಲ್ ನಡೆಸಿದ ವಿಶ್ಲೇಷಣೆಯೇ ಈ ಪುಸ್ತಕ.

ಪುಸ್ತಕದಲ್ಲಿ ಮೂರು ಭಾಗಗಳಿವೆ. ಕಾನ್ಸೆಂಟ್ರೇಷನ್ ಕ್ಯಾಂಪ್ ಒಳಗಿನ ಅನುಭವಗಳು, ಲೋಗೊಥೆರಪಿ ಒಂದು ಇಣುಕುನೋಟ ಮತ್ತು ದುಃಖದ ಆಶಾವಾದಕ್ಕೊಂದು ಮೊಕದ್ದಮೆ- ಈ ಮೂರು ಭಾಗಗಳು. ಕೊನೆಯಲ್ಲಿ ಅನುಬಂಧ 1ರಲ್ಲಿ ಪುಸ್ತಕದಲ್ಲಿ ಬಂದಿರುವ ಪದ, ಪರಿಭಾಷೆ, ಪರಿಕಲ್ಪನೆ, ಸಿದ್ಧಾಂತ ಮತ್ತು ವ್ಯಕ್ತಿಗಳ ಕುರಿತ ವಿವರಗಳಿವೆ. ಅನುಬಂಧ 2ರಲ್ಲಿ ಡಾ.ರಾಜಶೇಖರ ಮಠಪತಿ ಅವರು ಬರೆದಿರುವ ಫ್ರಾಂಕ್ಲ್ ಬಾಲ್ಯ ಮತ್ತು ಜೀವನದ ಕುರಿತ ಪುಟ್ಟ ಲೇಖನವಿದೆ.

ಫ್ರಾಂಕ್ಲ್ ಈ ಪುಸ್ತಕವನ್ನು ಬರೆದದ್ದು 1945ರಲ್ಲಿ. ಈತ ಬರೆದಿರುವ 30 ಪುಸ್ತಕಗಳಲ್ಲಿ ಈ ಪುಸ್ತಕ ಹೆಚ್ಚು ಜನಪ್ರಿಯ. ಅದೆಷ್ಟು ಬಾರಿ ಮುದ್ರಣವಾಗಿದೆ ಎನ್ನುವುದು ಸ್ಪಷ್ಟವಿಲ್ಲ. ಆರಂಭದಲ್ಲಿ ‘ಏನೇ ಬರಲಿ, ಜೀವನಕ್ಕೆ ಹೌದು ಅನ್ನಿ’ ಎನ್ನುವ ಹೆಸರಿನಲ್ಲಿ ಮುದ್ರಣವಾದ ಪುಸ್ತಕ 1959ರಲ್ಲಿ ‘ಸಾವಿನ ಶಿಬಿರದಿಂದ ಅಸ್ತಿತ್ವವಾದದೆಡೆಗೆ’ ಎಂಬ ಹೆಸರಿನಲ್ಲಿ ಹೊರಬಂತು. ಕೊನೆಗೆ ‘ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್’ ಎನ್ನುವ ಹೆಸರಿನಲ್ಲಿ ಜಗದ್ವಿಖ್ಯಾತವಾಯಿತು. 1997ರಲ್ಲಿ ತನ್ನ 92ನೇ ವಯಸ್ಸಿನಲ್ಲಿ ಫ್ರಾಂಕ್ಲ್ ನಿಧನರಾಗುವ ಹೊತ್ತಿಗೆ ವಿಶ್ವದ 24 ಭಾಷೆಗಳಲ್ಲಿ ಈ ಪುಸ್ತಕದ ಒಂದು ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿದ್ದವು. ಈ ಪುಸ್ತಕದ ಕುರಿತು ಈಗಾಗಲೆ 5,000ಕ್ಕೂ ಹೆಚ್ಚು ವಿಮರ್ಶೆಗಳು ಪ್ರಕಟವಾಗಿವೆ. 1992ರ ಆವೃತ್ತಿಗೆ ಸ್ವತಃ ಲೇಖಕ ವಿಕ್ಟರ್ ಫ್ರಾಂಕ್ಲ್ ಬರೆದಿರುವ ಮುನ್ನುಡಿಯಲ್ಲಿ ‘ಈ ಕೃತಿಯನ್ನು ಅನಾಮಧೇಯನಾಗಿ ಪ್ರಕಟಿಸಬೇಕೆಂಬ ದೃಢನಿಶ್ಚಯದೊಂದಿಗೆ ಸತತ 9 ದಿನಗಳಲ್ಲಿ ಬರೆದೆ. ಮೂಲತಃ ಜರ್ಮನ್ ಭಾಷೆಯಲ್ಲಿದ್ದ ಪ್ರಥಮ ಮುದ್ರಣದ ಮುಖಪುಟದ ಮೇಲೆ ನನ್ನ ಹೆಸರಿರಲಿಲ್ಲ. ಕೊನೆಯ ಕ್ಷಣದಲ್ಲಿ ಮುದ್ರಿತ ಪ್ರತಿಯೊಂದನ್ನು ಗೆಳೆಯರ ಕೈಗಿಟ್ಟಾಗ ಮುಖಪುಟದಲ್ಲಾದರೂ ನನ್ನ ಹೆಸರು ಇರಬೇಕೆಂದು ಒತ್ತಾಯಿಸಿ ಹಾಕಿಸಿದರು’ ಎಂದು ಬರೆದುಕೊಂಡಿದ್ದಾರೆ.

ಕಾನ್ಸೆಂಟ್ರೇಷನ್ ಕ್ಯಾಂಪಿನ ದಾರುಣ ಅನುಭವಗಳನ್ನು ಫ್ರಾಂಕ್ಲ್ ಯಾವ ಭಾವಾವೇಶವೂ ಇಲ್ಲದೆ ನಿರ್ಲಿಪ್ತವಾಗಿ ಬರೆಯುತ್ತಾರೆ. ‘ಕೆಲವು ಸೆರೆಯಾಳುಗಳನ್ನು ಮತ್ತೊಂದು ಕ್ಯಾಂಪಿಗೆ ಸಾಗಿಸುವುದಕ್ಕೆ ಅಧಿಕಾರಿಗಳಿಂದ ಅಧಿಕೃತ ಘೋಷಣೆ ನಡೆಯುತ್ತಿತ್ತು. ಆಗ ಸೆರೆಯಾಳುಗಳಲ್ಲಿ ಏನಾಗುತ್ತಿತ್ತು ಎಂಬುದನ್ನು ಇಲ್ಲಿ ಹೇಳುತ್ತೇನೆ. ತಮ್ಮನ್ನೆಲ್ಲ ಗ್ಯಾಸ್ ಚೇಂಬರಿಗೆ ದೂಡುತ್ತಾರೆಂದು ತಿಳಿದು ಕಂಗಾಲಾಗುತ್ತಿದ್ದರು. ಕೆಲಸ ಮಾಡಲಾಗದ ಅನಾರೋಗ್ಯಪೀಡಿತ ಮತ್ತು ಅಶಕ್ತ ಸೆರೆಯಾಳುಗಳನ್ನು ಗ್ಯಾಸ್ ಚೇಂಬರ್ ಅಥವಾ ಚಿತಾಗಾರಗಳಿದ್ದ ದೊಡ್ಡದಾದ ಕೇಂದ್ರ ಕ್ಯಾಂಪ್‍ಗಳಿಗೆ ಕಳುಹಿಸಲಾಗುತ್ತಿತ್ತು. ಇದಕ್ಕಾಗಿ ಮಾಡುವ ಆಯ್ಕೆಯಿಂದಾಗಿ ಸೆರೆಯಾಳುಗಳಲ್ಲಿ ಗುದ್ದಾಟವೇ ನಡೆಯುತ್ತಿತ್ತು. ಆಗ ಪ್ರತಿಯೊಬ್ಬರಿಗೂ ತಾನು ಬದುಕಿ ಉಳಿಯುವುದೇ ಮುಖ್ಯವಾಗುತ್ತಿತ್ತು. ಅಂತೂ ಇಂತೂ ಬಲಿಪಶುಗಳ ಪಟ್ಟಿಯೊಂದು ಸಿದ್ಧವಾಗುತ್ತಿತ್ತು. ಇಲ್ಲಿ ಮತ್ತೊಬ್ಬ ಬಲಿಪಶು ಸಿಗುವವರೆಗೂ ತಾನು ಬದುಕಿ ಉಳಿದಂತೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿತ್ತು.’- ಹೀಗೆ ಫ್ರಾಂಕ್ಲ್ ಬರವಣಿಗೆ ಯಾವ ವಿಷಾದವೂ ಇಲ್ಲದೆ ಸಾಗುತ್ತದೆ. ‘ನಾನು ವೈಯಕ್ತಿಕ ಪೂರ್ವಗ್ರಹದಿಂದ ಹೊರಗೆ ಬರಲು ಪ್ರಯತ್ನಿಸಿದೆ. ಆದರೆ ಇಂತಹ ಪುಸ್ತಕ ಬರೆಯುವಾಗ ಅದು ಇನ್ನೂ ಕಷ್ಟದ್ದು’ ಎಂದು ಸ್ವತಃ ಲೇಖಕ ಹೇಳಿಕೊಳ್ಳುವುದು ಓದುಗರ ಅನುಭವಕ್ಕೂ ಬರುತ್ತದೆ.

ಕ್ಯಾಂಪ್‍ಗಳಲ್ಲಿ ಯಾರಿಗೂ ಹೆಸರು ಹಿಡಿದು ಕರೆಯುತ್ತಿರಲಿಲ್ಲ. ಗಾರ್ಡ್‌ಗಳು ನಂಬರ್‌ಗಳನ್ನು ಕೊಟ್ಟಿದ್ದರು. ಕೆಲವರು ತಮಗೆ ಬೇಕಾದ ಹೆಸರುಗಳನ್ನು ತಾವೇ ಇಟ್ಟುಕೊಳ್ಳುತ್ತಿದ್ದರು! ವಿಕ್ಟರ್ ಫ್ರಾಂಕ್ಲ್‌ನ ನಂಬರ್ 119 ಮತ್ತು ಇನ್ನೊಂದು ಕ್ಯಾಂಪ್‍ನಲ್ಲಿ 104. ಬಹಳ ಸಮಯ ರೈಲು ಹಳಿಗಳಿಗಾಗಿ ಅಗೆಯುವ ಕೆಲಸ. ಒಂದು ಸಲ ಸುರಂಗ ಮಾರ್ಗಕ್ಕಾಗಿ ಭೂಮಿ ಅಗೆಯುವ ಕೆಲಸ ಸಿಕ್ಕಿತ್ತು. ಅದೂ ಒಬ್ಬನೇ ಮಾಡಬೇಕಿತ್ತು. ಅಮೆರಿಕನ್ ಸೇನೆ ನಾಜಿ ಕ್ಯಾಂಪ್‍ಗಳಿಗೆ ದಾಳಿಯಿಟ್ಟು ಎಲ್ಲರನ್ನೂ ಬಿಡುಗಡೆ ಮಾಡುವುದಕ್ಕೆ ಮುನ್ನ ಕೆಲವು ವಾರಗಳ ಕಾಲ ಕ್ಯಾಂಪ್‍ನಲ್ಲಿ ಮನೋಚಿಕಿತ್ಸಕನಾಗಿಯೂ ಈತನಿಗೆ ಕೆಲಸ ಸಿಕ್ಕಿತ್ತು!

ಫ್ರಾಂಕ್ಲ್ ಮನಸ್ಸು ಮಾಡಿದ್ದರೆ ನಾಜಿ ಕ್ಯಾಂಪ್‍ಗೆ ಸೇರುವುದನ್ನು ತಪ್ಪಿಸಿಕೊಳ್ಳಬಹುದಾಗಿತ್ತು. ಅಮೆರಿಕಕ್ಕೆ ಹೋಗಲು ದಾಖಲೆಪತ್ರಗಳೂ ಸಿದ್ಧವಾಗಿದ್ದವು. ಆದರೆ ವಯಸ್ಸಾದ ತಂದೆ ತಾಯಿಯರನ್ನು ವಿಯೆನ್ನಾದಲ್ಲೇ ಬಿಟ್ಟುಹೋಗಲು ಆತನ ಮನಸು ಒಪ್ಪಲಿಲ್ಲ. ಏನೇ ಬಂದರೂ ಅಪ್ಪ ಅಮ್ಮನ ಜೊತೆಗೇ ಎದುರಿಸಲು ಆತ ನಿರ್ಧರಿಸಿದ. ಹಾಗೆಯೇ ಕ್ಯಾಂಪ್‍ಗೆ ಸೇರಲ್ಪಟ್ಟ ಬಳಿಕ ಎರಡು ಬಾರಿ ಅಲ್ಲಿಂದ ತಪ್ಪಿಸಿಕೊಳ್ಳಲೂ ಪ್ರಯತ್ನಿಸಿದ್ದ.

ಪುಸ್ತಕದ ಎರಡನೇ ಭಾಗದಲ್ಲಿ ಜೀವನವನ್ನು ಎದುರಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಫ್ರಾಂಕ್ಲ್ ಕಂಡುಕೊಳ್ಳುವ ತಾತ್ವಿಕ ಉತ್ತರಗಳಿವೆ. ಒಂದೆಡೆ ಫ್ರಾಂಕ್ಲ್ ಬರೆಯುತ್ತಾರೆ- ಒಂದು ಆಶಾಹೀನ ಪರಿಸ್ಥಿತಿಯಲ್ಲೂ ಬದುಕಿನಲ್ಲಿ ಅರ್ಥವನ್ನು ಶೋಧಿಸಲು ಸಾಧ್ಯ ಎಂಬುದನ್ನು ನಾವು ಎಂದಿಗೂ ಮರೆಯಬಾರದು. ಅದನ್ನು ದೈವವೆಂದೂ, ಬದಲಾಯಿಸಲಾಗದ್ದೆಂದೂ ತಿಳಿಯಬಾರದು. ಮಾನವನಿಗೆ ತನ್ನ ವೈಯಕ್ತಿಕ ದುಃಖವನ್ನು ಸುಖಾಂತ್ಯವನ್ನಾಗಿ ಪರಿವರ್ತಿಸಿಕೊಳ್ಳುವ ಚೈತನ್ಯವಿದೆ. ಮಾನವ ತನ್ನ ಉಭಯಸಂಕಟಗಳನ್ನು ಸಾಧನೆಗಳನ್ನಾಗಿ ರೂಪಾಂತರಿಸಿಕೊಳ್ಳಬಲ್ಲ. ಯಾವಾಗ ನಾವು ಒಂದು ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲವೋ, ಆಗ ಗುಣಪಡಿಸಲಾಗದ ಕ್ಯಾನ್ಸರ್ ಕಾಯಿಲೆಯನ್ನು ಕುರಿತು ಆಲೋಚಿಸಿದಾಗ, ನಮ್ಮನ್ನು ನಾವು ಪರಿವರ್ತಿಸಿಕೊಳ್ಳುವ ಸವಾಲುಗಳು ಎದುರಾಗುತ್ತವೆ’.

ಈ ಪುಸ್ತಕದ ಉತ್ತರಾರ್ಧದ ಅನುವಾದ ಕಷ್ಟಕರವೂ ಹೌದು. ಮನೋವಿಜ್ಞಾನದ ತಾಂತ್ರಿಕ ಶಬ್ದಗಳು ಮತ್ತು ಲೋಗೊಥೆರಪಿ ಚಿಕಿತ್ಸೆಯ ವಿಧಾನಗಳನ್ನು ವಿವರಿಸುವಾಗ ಬಳಸುವ ಶಬ್ದಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಆದರೆ ಅನುವಾದಕ ಸುಭಾಷ್ ರಾಜಮಾನೆ ಈ ಟರ್ಮಿನಾಲಜಿಗಳನ್ನು ಕನ್ನಡಕ್ಕೆ ಒಗ್ಗುವಂತೆ ಅನುವಾದಿಸಿದ್ದಾರೆ. ಅನುಬಂಧ 1 ಕೂಡಾ ಪುಸ್ತಕವನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಮುನ್ನುಡಿ ಬರೆದ ಎಂ.ಬಸವಣ್ಣ ಅವರೂ ಫ್ರಾಂಕ್ಲ್ ಕುರಿತು ಹಲವು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸಿಗ್ಮಂಡ್ ಫ್ರಾಯ್ಡ್, ಕಾರ್ಲ್ ಯೂಂಗ್ ಬಗ್ಗೆ ಕನ್ನಡದಲ್ಲಿ ಸಾಕಷ್ಟು ವಿವರಗಳು ಸಿಗುತ್ತವೆ. ಆದರೆ ವಿಕ್ಟರ್ ಫ್ರಾಂಕ್ಲ್ ಕನ್ನಡಕ್ಕೆ ಸ್ವಲ್ಪ ಮಟ್ಟಿಗೆ ಅಪರಿಚಿತನೇ. ಕನ್ನಡದ ಅಕ್ಷರಲೋಕಕ್ಕೆ ಇದೊಂದು ಮಹತ್ವದ ಕೃತಿ ಎನ್ನುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT