ಸೋಮವಾರ, ಸೆಪ್ಟೆಂಬರ್ 16, 2019
22 °C

ಮಾನಸಲೋಕಕ್ಕೆ ತುಸು ಹತ್ತಿರವಿದು

Published:
Updated:
Prajavani

ಮಕ್ಕಳಿಗಾಗಿ ಬರೆಯುವುದು ತುಸು ಕಷ್ಟದ ಕೆಲಸವೆಂಬುದು ಬಲ್ಲವರ ಅಂಬೋಣ. ಎಳೆಯ ಮನಸುಗಳ ಒಳಹೊಕ್ಕುವಂತಹ ಸಾಹಿತ್ಯ ಸುಲಭಕ್ಕೆ ಸಿದ್ಧಿಸುವುದಿಲ್ಲ. ಆಧುನಿಕರಣ ಹಾಗೂ ಜಾಗತಿಕರಣದ ನಡುವೆ ಕಳೆದು ಹೋಗುತ್ತಿರುವ ಇಂದಿನ ಮಕ್ಕಳಿಗೆ ‘ಓಡಿಹೋದ ಹುಡುಗ’ ಪುಸ್ತಕ ಕೈಮರವಿದ್ದಂತೆ. ನಮ್ಮಲ್ಲಿ ಮಕ್ಕಳಿಗಾಗಿ ಅತಿರಂಜಿತ, ಕಾಲ್ಪನಿಕ ಓದುಗಳಿವೆ ಎಂಬುದು ಸರಿಯಷ್ಟೆ. ವಾಸ್ತವಕ್ಕೆ, ನಿಜ ಜೀವನಕ್ಕೆ ಹತ್ತಿರವಿರುವ ಬರಹ ಮತ್ತು ಓದು ಇಂದಿನ ಅಗತ್ಯ. ಅಂತೆಯೇ ಇಂತಹ ಕೊರತೆ ತುಂಬುವಲ್ಲಿ ಬಸು ಬೇವಿನಗಿಡದ ಯಶಸ್ವಿಯಾಗಿದ್ದಾರೆ. ಗಜ್ಯಾ ಎಂಬ ಪುಟ್ಟ ಹುಡುಗನ ಬದುಕಿನ ಸಂಘರ್ಷ, ಬದುಕಿಗಂಟಿದ ಬಡತನ, ಎಡತಾಕುವ ಸವಾಲುಗಳನ್ನು ಲೇಖಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 

ಮನಸ್ಸು ಜರ್ಜರಿತವಾದಾಗ ಯೋಚನೆಗಳು ಅಷ್ಟು ಸಲೀಸಾಗಿ ಹರಿಯುವುದಿಲ್ಲ ಎಂಬಂತಹ ತಾಕಲಾಟದ ಮಾತುಗಳು ಪುಸ್ತಕದ ಹೂರಣ. ಅಪ್ಪನ ಹೋಟೆಲಿಗೆ ನೆರವಾಗುತ್ತಾ, ಹಾಲು ವ್ಯಾಪಾರ, ಓದುಗಳನ್ನು ಸರಿದೂಗಿಸಿಕೊಂಡು ಹೋಗುವ ಗಜ್ಯಾನದ್ದು ಒಂದು ತುಂಟ ಪಡೆ ಇರುತ್ತದೆ. ಅವರ ಕಿತಾಪತಿ, ತಮ್ಮ ನಡುವಿನ ಸ್ಪರ್ಧೆ ಮುಂತಾದವುಗಳು ಬಿದ್ದು ಮೇಲೇಳುವ ಮನಸುಗಳಿಗೆ ಚಿಕಿತ್ಸಕ ಗುಣದಂತಿರುತ್ತವೆ. ಇಡೀ ಕಾದಂಬರಿಯುದ್ದಕ್ಕೂ ಆಲದ ಮರದ ಅಜ್ಜನ ಪಾತ್ರ ಗಮನ ಸೆಳೆಯುತ್ತದೆ. ಕಥೆ ಹೇಳುವ, ಅನುಭವ ಹಂಚಿಕೊಳ್ಳುವ, ಮಕ್ಕಳಿಗೆ ತಿಳಿ ಹೇಳುವ ಆತನ ಸಾಂಗತ್ಯ ಗಜ್ಯಾ ಮತ್ತು ಸಂಗಡಿಗರಿಗೆ ಅಪ್ಯಾಯಮಾನವಾಗಿರುತ್ತದೆ. 

ವಿಭಿನ್ನ ಕಥಾ ಹಂದರವಿರುವ ಈ ಪುಸ್ತಕ ಸರಳ ಮತ್ತು ಸುಲಲಿತ ನಿರೂಪಣಾ ಶೈಲಿಯಿಂದಾಗಿ ಓದಿಸಿಕೊಂಡು ಹೋಗುತ್ತದೆ. ಮಾತ್ರವಲ್ಲ ಮಕ್ಕಳ ಮಾನಸಲೋಕಕ್ಕೆ ತುಸು ಹತ್ತಿರವಾಗುವಂತಿದೆ. ಉತ್ತರ ಕರ್ನಾಟಕದ ಗ್ರಾಮೀಣ ಸೊಗಡು, ಭಾಷೆ, ಹೆಸರುಗಳಿಂದ ಕಾದಂಬರಿಗೆ ಸೊಗಸು ಸಿಕ್ಕಿದೆ.

Post Comments (+)