ಫ್ರಾಂಕಿನ್‌ಸ್ಟೈನ್‌ ಕಾದಂಬರಿಗೆ ದ್ವಿಶತಕ

7

ಫ್ರಾಂಕಿನ್‌ಸ್ಟೈನ್‌ ಕಾದಂಬರಿಗೆ ದ್ವಿಶತಕ

Published:
Updated:

ಮೇ ರಿ ಶೆಲ್ಲಿ ಬರೆದ ‘ಫ್ರಾಂಕಿನ್‌ಸ್ಟೈನ್‌’ ಕಾದಂಬರಿ ವಿಶ್ವ ಸಾಹಿತ್ಯದ ಅಪ್ರತಿಮ ಹಾಗೂ ವೈಜ್ಞಾನಿಕ ಕಥಾ ಸಾಹಿತ್ಯದಲ್ಲಿ ಪ್ರಥಮ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನು ಬರೆಯುವಾಗ ಮೇರಿ ಶೆಲ್ಲಿಗೆ ಕೇವಲ 19 ವರ್ಷ. ಅವಳು ಹುಟ್ಟಿದ್ದು 1797ರ ಆಗಸ್ಟ್ 30ರಂದು ಇಂಗ್ಲೆಂಡಿನಲ್ಲಿ. ತಂದೆ ವಿಲಿಯಮ್ ಗಾಡ್‌ವಿನ್‌ ಪತ್ರಕರ್ತ, ಲೇಖಕ, ತತ್ವಶಾಸ್ತ್ರಜ್ಞ, ರಾಜಕೀಯ ಚಿಂತಕ. ತಾಯಿ ಮೇರಿ ವಾಲ್‌ಸ್ಟೋನ್‌ಕ್ರಾಫ್ಟ್ ಲೇಖಕಿ ಹಾಗೂ ಸ್ತ್ರೀವಾದ ಪ್ರತಿಪಾದಕಿ. ಮನೆಯಲ್ಲೆಲ್ಲಾ ಸಾಹಿತ್ಯಿಕ ವಾತಾವರಣ. ದುರ್ದೈವವಶಾತ್ ಅವಳನ್ನು ಹಡೆದ ಹತ್ತನೇ ದಿನವೇ ಕಾಲವಶವಾದಳು. ಜವಾಬ್ದಾರಿಯೆಲ್ಲ ತಂದೆಯ ಪಾಲಿಗೆ. ಧೃತಿಗೆಡಲಿಲ್ಲ. ಮಗಳನ್ನು ತನ್ನ ಸಾಹಿತ್ಯಿಕ ವಾತಾವರಣದಲ್ಲಿಯೇ ಬೆಳೆಸಿದ. ಅವಳ ಶಿಕ್ಷಣಕ್ಕೂ ಮನೆಯಲ್ಲಿಯೇ ಏರ್ಪಾಡು ಮಾಡಿದ.

ತಂದೆಯ ಸ್ನೇಹಿತರ ಬಳಗ ತುಂಬಾ ದೊಡ್ಡದು. ಪತ್ರಕರ್ತ ಹಾಜ್‌ವಿಚ್, ಲೇಖಕ ಲ್ಯಾಂಬ್, ಕವಿಗಳಾದ ಪಿ.ಬಿ. (ಪರ್ಶಿ ಬೈಶ್) ಶೆಲ್ಲಿ ಮತ್ತು ಕೋಲ್‌ರಿಚ್ ಇವರ ಮನೆಗೆ ಬರುತ್ತಿದ್ದರು. ತಂದೆಯೊಂದಿಗೆ ಗಂಟೆಗಟ್ಟಲೆ ಕುಳಿತು ಮಾತನಾಡುತ್ತಿದ್ದರು. ಅನೇಕ ಕಥೆ, ಕವನಗಳು ಕಿವಿಯ ಮೇಲೆ ಬೀಳತೊಡಗಿದಾಗ ಅವುಗಳನ್ನು ಓದುವ ಕುತೂಹಲ ಮೇರಿಯಲ್ಲಿ ತಾನೇತಾನಾಗಿ ಬೆಳೆಯತೊಡಗಿತು. ಆಕೆ ಓದತೊಡಗಿದಳು.

ಈ ವಾತಾವರಣದಲ್ಲಿದ್ದಾಗಲೇ 16ರ ಹರೆಯದ ಮೇರಿಗೆ ಪಿ.ಬಿ. ಶೆಲ್ಲಿಯೊಂದಿಗೆ ಪ್ರೇಮಾಂಕುರವಾಯಿತು. ಫ್ರಾನ್ಸ್, ನೈಜೀರಿಯಾಕ್ಕೆ ಪಲಾಯನಗೈದರು. 1816ರಲ್ಲಿ ವಿವಾಹವಾದರು. ಪಿ.ಬಿ. ಶೆಲ್ಲಿಯ ಗೆಳೆಯ ಪ್ರಖ್ಯಾತ ಲೇಖಕ ಲಾರ್ಡ್ ಬೈರನ್. ಈತ ಮೇರಿಯ ಸಹೋದರಿಯ ಪತಿಯೂ ಹೌದು. ಸ್ವಿಡ್ಜರ್‌ಲ್ಯಾಂಡಿನ ಜಿನೀವಾದಲ್ಲಿ ಅವರ ವಾಸ. ಅವರ ಅತಿಥಿಗಳಾಗಿ ಮೇರಿ ಮತ್ತು ಶೆಲ್ಲಿ ಹೋದಾಗಲೇ ಫ್ರಾಂಕಿನ್‌ಸ್ಟೈನ್ ಕಥೆ ಮೊಳಕೆಯೊಡೆದದ್ದು.

ವಿವರ ಹೀಗಿದೆ: 1816ರ ಜೂನ್ ತಿಂಗಳದು. ಜಿನೀವಾ ಸರೋವರದ ತಟದಲ್ಲಿರುವ ಹೊಟೇಲ್ ವಿಲ್ಲಾ ಡಯೋಡಾಟಿಯಲ್ಲಿ ಕುಳಿತಿದ್ದಾರೆ ಆತ್ಮೀಯ ಸ್ನೇಹಿತರು: ಲಾರ್ಡ್ ಬೈರನ್, ಅವನ ಪತ್ನಿ ಕ್ಲೇರ್ ಕ್ಲೈಮಾಂಟ್ (ಮೇರಿಯ ಸಹೋದರಿ), ಬೈರನ್ ಕವಿಯ ವೈದ್ಯ ಜಾನ್ ವಿಲಿಯಮ್ ಪಾಲಿಡೋರಿ, ಮೇರಿ ಮತ್ತು ಶೆಲ್ಲಿ. ಹೊರಗೆ ಕಾರ್ಗತ್ತಲು. ಒಂದೇ ಸವನೆ ಮಳೆ ಮತ್ತು ಮಿಂಚುಗಳು. ಇಂಡೋನೇಷ್ಯಾದ ಮೌಂಟ್ ಟಾಂಟೋರಾ ಜ್ವಾಲಾಮುಖಿಯಿಂದಾಗಿ ಎಲ್ಲ ಕಡೆಗೆ ಶೀತ ಮತ್ತು ಚಳಿಯ ವಾತಾವರಣ.

1816 ಬೇಸಿಗೆ ಇಲ್ಲದ ವರ್ಷ ಎಂತಲೇ ಪ್ರಸಿದ್ಧಿ. ಈ ಭಯಭೀತ ಪರಿಸ್ಥಿತಿಯಲ್ಲಿ ಸ್ನೇಹಿತರು ಮಾತಾಡುತ್ತಿದ್ದುದು ಭಯಭೀತಿಯ ಕಥೆಗಳ ಕುರಿತು! ಆಗಲೇ ಮಿಂಚಿದ್ದು ಲಾರ್ಡ್ ಬೈರನ್ ತಲೆಯಲ್ಲಿ: ನಾವು ಪ್ರತಿಯೊಬ್ಬರೂ ಒಂದೊಂದು ಭಯಾನಕ ರೋಮಾಂಚಕಾರಿ ಕಥೆ ಬರೆಯೋಣ. ಯಾರದು ಎಲ್ಲರಿಂದಲೂ ಮೆಚ್ಚುಗೆ ಪಡೆಯುತ್ತದೋ ಅವರು ಜಯಶಾಲಿ. ಈ ಪಂಥಾಹ್ವಾನಕ್ಕೆ ಎಲ್ಲರೂ ಒಪ್ಪಿದರು.

ಹೊರಗೆ ಸರೋವರದ ಮೇಲೆ ಬೀಳುವ ಮಿಂಚಿನ ಬೆಳಕು ಅವಳಲ್ಲಿ ಹಳೆಯ ನೆನಪೊಂದನ್ನು ಸ್ಫುರಿಸಿತು. ಚಿಕ್ಕವಳಿದ್ದಾಗ ಕಂಡದ್ದದು. ಮರಣದಂಡನೆಗೊಳಗಾದ ಕೈದಿಗಳ ಮೇಲೆ ಮಾಡಿದ ವಿದ್ಯುಚ್ಛಕ್ತಿಯ ಪ್ರಯೋಗವದು. ಹೆಣಕ್ಕೆ ವಿದ್ಯುತ್ ಸ್ಪರ್ಶ ನೀಡಿದಾಗ ಅದರ ದವಡೆಗಳು ಸಕ್ರಿಯಗೊಳ್ಳುತ್ತಿದ್ದವು! ಒಂದು ಕಣ್ಣು ಮತ್ತೆ ತೆರೆದುಕೊಳ್ಳುತ್ತಿತ್ತು!

ಲುಯಿಗಿ ಗಾಲ್ವಾನಿ ಒಬ್ಬ ಜನಪ್ರಿಯ ಇಟಾಲಿಯನ್ ಪ್ರೊಫೆಸರ್. ಅಂಗ ರಚನಾಶಾಸ್ತ್ರ ಪಾರಂಗತ. ಸತ್ತ ಕಪ್ಪೆಗಳಿಗೆ ವಿದ್ಯುತ್ ಸ್ಪರ್ಶ ಕೊಟ್ಟು ಜೀವ ಮರುಕಳಿಸುವಂತೆ ಮಾಡಬಹುದು ಎಂದು ನಂಬಿ ಪ್ರಯೋಗ ನಡೆಸಿದ್ದ.
ಹೊರಗೆ ಇಂಥ ಚಟುವಟಿಕೆಗಳು ನಡೆದಿದ್ದರೆ ಮೇರಿಯ ಅಂತರಂಗದಲ್ಲಿ ಬೇರೆ ರೀತಿಯ ಚಟುವಟಿಕೆಗಳು ನಡೆದಿದ್ದವು.

ಕಳೆದ ವರ್ಷವಷ್ಟೆ ಅವಳು ಅವಧಿ ಪೂರ್ಣಗೊಳ್ಳದ ಅಶಕ್ತ ಮಗುವಿಗೆ ಜನ್ಮ ನೀಡಿದ್ದಳು. ಅದು ಜೀವಂತವಿದ್ದುದು ಕೇವಲ ಎಂಟು ದಿನಗಳು ಮಾತ್ರ. ತೀರಿಕೊಂಡದ್ದು ಮಾರ್ಚ್ 6ರ 1815ರಲ್ಲಿ. ಒಂದು ಶೋಚನೀಯ ದಿನ ಎಂದು ಡೈರಿಯಲ್ಲಿ ನಮೂದಿಸಿಕೊಂಡಿದ್ದಳು. ಈ ಘಟನೆ ಮೇಲಿಂದ ಮೇಲೆ ಕನಸಿನಲ್ಲಿ ಬಂದು ಬಾಧಿಸುತ್ತಿತ್ತು. ಮಗುವಿನ ಶರೀರವನ್ನು ಬೆಂಕಿಯ ಶಾಖಕ್ಕೆ ಒಡ್ಡಿದಾಗ ಅದಕ್ಕೆ ಜೀವ ಮರುಕಳಿಸಿದಂತೆ ಕನಸು. ಅಷ್ಟರಲ್ಲಿ ಎಚ್ಚರಾಗಿಬಿಡೋದು.

ಈ ಹಿನ್ನೆಲೆಯಲ್ಲಿಯೇ ವಸ್ತುವನ್ನು ಆಯ್ದು ಕೃತಿ ರಚಿಸಬೇಕೆಂದು ತೀರ್ಮಾನಿಸಿ ಕಾರ್ಯನಿರತಳಾದಳು. ಒಬ್ಬ ತರುಣ ಜೀವ ವಿಜ್ಞಾನಿಯ ಕಲ್ಪನೆ ಮಾಡಿಕೊಂಡು ಅವನಿಗೆ ಹೆಸರನ್ನೂ ಕೊಟ್ಟುಬಿಟ್ಟಳು. ವಿಕ್ಟರ್ ಫ್ರಾಂಕಿನ್‌ಸ್ಟೈನ್. ಆತ ಕೃತಕ ಜೀವಿಯೊಂದನ್ನು ಸೃಷ್ಟಿಸುವ ಕಲ್ಪನೆ ಮಾಡಿಕೊಂಡಳು. ಕಥೆ ಬೆಳೆಯತೊಡಗಿತು. 1817ರ ಮೇ ತಿಂಗಳಲ್ಲಿ ಅಂದರೆ ಒಂದು ವರ್ಷದೊಳಗಾಗಿ ಫ್ರಾಂಕಿನ್‌ಸ್ಟೈನ್ ಕಾದಂಬರಿ ಪೂರ್ಣಗೊಂಡಿತು. ಪುಸ್ತಕ ರೂಪದಲ್ಲಿ ಪ್ರಕಟವಾದುದು 1818ರ ಜನವರಿ 1ರಂದು. ಲಂಡನ್ ಪಬ್ಲಿಷಿಂಗ್ ಹೌಸ್ ಇದನ್ನು ಮೂರು ಸಂಪುಟಗಳಲ್ಲಿ ತಲಾ 500 ಪ್ರತಿಗಳಂತೆ ಪ್ರಕಟಿಸಿತು.

ಆದರೆ, ಲೇಖಕಿಯ ಹೆಸರು ಹಾಕಲಿಲ್ಲ. ಬಹುಶಃ ಲೇಖಕಿ ಮತ್ತವರ ಕುಟುಂಬದವರ ಹಿಂಜರಿಕೆಯೇ ಕಾರಣ ಇದ್ದಿರಬಹುದು. ಕಾದಂಬರಿಯಲ್ಲೂ ಇಂಥದೇ ಪ್ರಸಂಗವಿದೆ: ವಿಕ್ಟರ್ ಫ್ರಾಂಕಿನ್‌ಸ್ಟೈನ್ ತನ್ನ ಪ್ರಯೋಗದಲ್ಲಿ ಸಫಲಗೊಳ್ಳುತ್ತಾನೆ. ಅಲ್ಲಲ್ಲಿ ಸಂಗ್ರಹಿಸಿ ತಂದ ಮನುಷ್ಯರ ಅವಯವಗಳನ್ನು ಕೂಡಿಸಿ ಮನುಷ್ಯಾಕೃತಿ ಮಾಡಿ ಜೀವ ಬರಿಸುತ್ತಾನೆ. ಆದರೆ, ಆ ವಿಕೃತ ಮುಖ ನೋಡಿ ತಾನೇ ಹೆದರುತ್ತಾನೆ. ಮೇಲಿಂದ ಮೇಲೆ ಅದನ್ನು ನೋಡಲಿಕ್ಕೂ ಆಗದೆ ಅದರ ಕಣ್ತಪ್ಪಿಸಿ ಮರೆಯಾಗುತ್ತಿರುತ್ತಾನೆ. ಆಗಲೇ ಆ ಜೀವಿಯಲ್ಲಿ ದ್ವೇಷಾಗ್ನಿ ಹುಟ್ಟಿದುದು. ‘ನನ್ನನ್ನು ನೋಡಲಿಕ್ಕೂ ನಿನ್ನಿಂದಾಗದಿದ್ದರೆ ನನ್ನನ್ನು ನೀನು ಹುಟ್ಟಿಸಿದ್ದಾದರೂ ಯಾಕೆ?’ ಎಂಬ ಮೂಲಭೂತ ಪ್ರಶ್ನೆ ಇಡುತ್ತದೆ. ಒಬ್ಬ ಮನುಷ್ಯ ದಾನವನಾಗಿ ರೂಪುಗೊಳ್ಳಲು ಪರಿಸ್ಥಿತಿ ಹೇಗೆ ಕಾರಣವಾಗುತ್ತದೆ ಎಂಬುದರ ಸೂಕ್ಷ್ಮ ಚಿತ್ರಣ ಈ ಕಾದಂಬರಿಯಲ್ಲಿದೆ.

‘ಹುಟ್ಟಿಸಿಯಾದ ಮೇಲೆ ನನಗೊಂದು ಹೆಸರಾದರೂ ಬೇಡವೇ?’ ಎನ್ನುವುದು ಇನ್ನೊಂದು ಪ್ರಶ್ನೆ. ಕಾದಂಬರಿಯುದ್ದಕ್ಕೂ ಈ ಸೃಷ್ಟಿಯನ್ನು ದೈತ, ರಾಕ್ಷಸ, ಪ್ರಾಣಿ, ದೆವ್ವ ಮುಂತಾಗಿ ಸಂಬೋಧಿಸಲಾಗಿದೆ. ಈ ಸೃಷ್ಟಿಯನ್ನು ಸೃಷ್ಟಿಸಿದವ ನಾನೇ ಎಂಬುದು ಯಾರಿಗೂ ಗೊತ್ತಾಗುವುದೇ ಬೇಡ ಎಂದು ಪಲಾಯನಗೈಯುತ್ತಾನೆ. ಇಂಥದೊಂದು ಭೀಬತ್ಸ ಕಾದಂಬರಿ ಬರೆದವಳು ಇವಳೇ ಎಂದು ಗುರುತಿಸಿಕೊಳ್ಳುವುದು ಬಹುಶಃ ಮೇರಿಗೂ ಬೇಡ ಅನ್ನಿಸಿರಬಹುದು. ಆ ಕಾಲದಲ್ಲಿ 19 ವರ್ಷದ ತರುಣಿಯೊಬ್ಬಳು ಇಂಥ ಅದ್ಭುತ ಕಾದಂಬರಿ ಬರೆದಿದ್ದಾಳೆಂದರೆ ಜನಸಾಮಾನ್ಯರು ನಂಬುವುದೂ ಅಸಾಧ್ಯವೇ ಇತ್ತು. ಇದೂ ಒಂದು ಪ್ರಯೋಗವಾಗಿರಲಿ, ಫಲಾಫಲಗಳನ್ನು ನೋಡಿಕೊಂಡು ಮುಂದುವರಿದರಾಯಿತು ಎಂದು ಪ್ರಕಾಶಕರೂ ಅಂದುಕೊಂಡಿರಬಹುದು. ಕಾದಂಬರಿ ನಿರೀಕ್ಷೆಗೂ ಮೀರಿ ಜನಪ್ರಿಯತೆ ಗಳಿಸಿತು.

ಲೇಖಕಿಯ ಹೆಸರಿರದಿದ್ದರೂ ಮೇರಿಯ ಪತಿ ಪಿ.ಬಿ. ಶೆಲ್ಲಿಯ ಮುನ್ನುಡಿ ಅದರಲ್ಲಿ ಪ್ರಕಟವಾಗಿತ್ತು. ಕೃತಿಯನ್ನು ಮೇರಿಯ ತಂದೆ ತತ್ವಶಾಸ್ತ್ರಜ್ಞ ವಿಲಿಯಮ್ ಗಾಡ್‌ವಿನ್‌ಗೆ ಅರ್ಪಿಸಲಾಗಿತ್ತು. ಇವೆರಡರ ಆಧಾರದ ಮೇಲೆ ಈ ಕೃತಿಯ ಲೇಖಕಿ ಮೇರಿಯೇ ಎಂದು ಎಲ್ಲರಿಗೂ ಗೊತ್ತಾಗಿಬಿಟ್ಟಿತ್ತು.

ಕಾದಂಬರಿಗೆ ಫ್ರಾಂಕಿನ್‌ಸ್ಟೈನ್ ಜೊತೆಗೆ ದಿ ಮಾಡರ್ನ್ ಪ್ರೊಮೆಥಿಸಿಸ್ ಎಂಬ ಉಪಶೀರ್ಷಿಕೆಯನ್ನೂ ಕೊಡಲಾಗಿತ್ತು. ಅಂದರೆ ಅಭಿನವ ಪ್ರೊಮೆಥಿಸಿಸ್. ಗ್ರೀಕ್ ಪುರಾಣದಲ್ಲಿ ಪ್ರೊಮೆಥಿಸಿಸ್‌ನ ಹೆಸರು ಬರುತ್ತದೆ. ದೇವರ ಆಜ್ಞೆಯನ್ನು ಉಲ್ಲಂಘಿಸಿ ಮನುಷ್ಯನಿಗೆ ಬೆಂಕಿಯನ್ನು ಪರಿಚಯಿಸಿದ್ದಕ್ಕಾಗಿ ದೇವರ ಕೋಪಕ್ಕೆ ಶಾಪಕ್ಕೆ ಗುರಿಯಾಗುತ್ತಾನೆ. ಪಡಬಾರದ ಕಷ್ಟ ಅನುಭವಿಸುತ್ತಾನೆ.

ಇಲ್ಲಿ ಫ್ರಾಂಕಿನ್‌ಸ್ಟೈನ್ ಕೂಡ ಮನುಷ್ಯನನ್ನು ತಾನೇ ಸೃಷ್ಟಿಸಹೋಗಿ ಪಡಬಾರದ ಕಷ್ಟ ಅನುಭವಿಸುತ್ತಾನೆ. ತಾನೊಬ್ಬನೇ ಅಲ್ಲ, ತನ್ನ ಕುಟುಂಬದವರು ಕೂಡ ಅನುಭವಿಸುವುದಕ್ಕೆ ಕಾರಣೀಭೂತನಾಗುತ್ತಾನೆ. ತಾನು ಸೃಷ್ಟಿಸಿದ ಸೃಷ್ಟಿಯೇ ತನ್ನ ವಿರುದ್ಧ ತಿರುಗಿಬಿದ್ದು ಕುಟುಂಬದ ಸದಸ್ಯರನ್ನು, ಸ್ನೇಹಿತರನ್ನು ಸಂಹರಿಸುತ್ತ ಹೋಗುತ್ತದೆ. ಅದರ ಬೇಡಿಕೆ ಒಂದೇ ಒಂದು. ‘ನನ್ನನ್ನು ಯಾರೂ ಸೇರುತ್ತಿಲ್ಲವೆಂದಾದ ಮೇಲೆ ನನ್ನಂತೆಯೇ ಅಸಹ್ಯ ಇದ್ದರೂ ನಡೆದೀತು. ಇನ್ನೊಂದನ್ನು ಸೃಷ್ಟಿಸಿಕೊಡು, ಸಂಗಡಿಗರಾಗಿ ಇರುತ್ತೇವೆ’. ಇದೊಂದನ್ನೇ ಸೃಷ್ಟಿಸಿ ಸಾಕುಬೇಕಾಗಿದೆ. ಇನ್ನೂ ಒಂದನ್ನು ಸೃಷ್ಟಿಸಿದರೆ ಎರಡೂ ಕೂಡಿ ತಮ್ಮ ಸಂತತಿ ಬೆಳೆಸಿದರೆ ಮನುಕುಲಕ್ಕೆ ಈ ಭೂಮಿಯ ಮೇಲೆ ಉಳಿಗಾಲವೇ ಇಲ್ಲ ಎನ್ನುವುದು ಫ್ರಾಂಕಿನ್‌ಸ್ಟೈನ್‌ನ ದೂರದೃಷ್ಟಿ.

ಕಾದಂಬರಿಯುದ್ದಕ್ಕೂ ತಾತ್ವಿಕ ಸಂಘರ್ಷ ಹಾಸುಹೊಕ್ಕಾಗಿದೆ. ಕೊನೆಯಲ್ಲಿ ಆ ಜೀವಿ ತನ್ನೊಳಗೆ ತಾನು ಯೋಚಿಸುವ ಪರಿ ನೋಡಿ: ತಾನು ಯಾರೆಲ್ಲರನ್ನು ನಿರ್ನಾಮ ಮಾಡಬೇಕಿತ್ತೋ ಅವರೆಲ್ಲ ನಿರ್ನಾಮವಾಗಿ ಹೋದರು. ತನ್ನ ಸೃಷ್ಟಿಕರ್ತ ಫ್ರಾಂಕಿನ್‌ಸ್ಟೈನ್ ಕೂಡ ಇನ್ನಿಲ್ಲವಾದ. ಇಷ್ಟೆಲ್ಲ ಅಪರಾಧಗಳನ್ನು ಮಾಡಿ ಪರಿತಪಿಸುತ್ತಿರುವ ನನಗೆ ಸಾವೊಂದೇ ವಿಶ್ರಾಂತಿಯ ತಾಣ. ಹೀಗಂದುಕೊಳ್ಳುತ್ತ ಸಾವಿಗೆ ಶರಣಾಗುತ್ತದೆ.ಇಂಥ ವಿಶೇಷ ಗುಣಗಳಿಂದಾಗಿಯೇ ಈ ಕಾದಂಬರಿ ಓದುಗರ ಹೃದಯದಲ್ಲಿ ಸ್ಥಿರವಾಗಿ ನಿಲ್ಲುತ್ತದೆ.

ಐದು ವರ್ಷಗಳ ನಂತರ ಅಂದರೆ 1823ರ ಆಗಸ್ಟ್ 11ರಂದು ಎರಡನೆಯ ಆವೃತ್ತಿ ಪ್ರಕಟವಾದುದು ಎರಡು ಸಂಪುಟಗಳಲ್ಲಿ. ಈ ಸಲ ಲೇಖಕಿಯ ಹೆಸರು ಹಾಕಿದ್ದರಲ್ಲದೆ ಅವಳ ಸುದೀರ್ಘ ಪ್ರಸ್ತಾವನೆಯೂ ಪ್ರಕಟವಾಗಿತ್ತು. ಮೂರನೆಯ ಆವೃತ್ತಿ 1831ರ ಅಕ್ಟೋಬರ್ 31ರಂದು ಒಂದೇ ಸಂಪುಟದಲ್ಲಿ ಪ್ರಕಟಗೊಡಿತು.

ಈ ಕಾದಂಬರಿ ಆಧಾರದ ಮೇಲೆ ಇದುವರೆಗೆ 37 ಚಲನಚಿತ್ರಗಳು ತೆರೆಕಂಡಿವೆ. ಜಗತ್ತಿನ ಹಲವಾರು ಭಾಷೆಗಳಿಗೆ ಕಾದಂಬರಿ ಅನುವಾದಗೊಂಡಿದೆ. ಕನ್ನಡದಲ್ಲಿ ನಾನು ನೋಡಿದ ಕೃತಿ ಶ್ಯಾಮಲಾ ಮಾಧವ ಅನುವಾದಿಸಿದ್ದು. ಶೀರ್ಷಿಕೆ ಫ್ರಾಂಕಿನ್‌ಸ್ಟೈನ್ ಅಂತಲೇ ಇದೆ. ಅಂಕಿತ ಪುಸ್ತಕ 2007ರಲ್ಲಿ ಪ್ರಕಟಿಸಿದೆ. ವಿಭಿನ್ನ ಅಂಗಾಂಗಗಳಿಂದ ರಚಿತವಾದ ಈ ಮನುಷ್ಯಾಕೃತಿಗೆ ಮೇರಿ ಶೆಲ್ಲಿ ಫ್ರಾಂಕಿನ್‌ಸ್ಟೈನ್ ಅಂತ ಹೆಸರಿಟ್ಟರೆ ವಿಭಿನ್ನ ಸಣ್ಣ ಸಣ್ಣ ಆಕಾಶಗಂಗೆಗಳಿಂದ ನಿರ್ಮಿತವಾಗಿದೆ ಎಂಬ ಕಾರಣಕ್ಕಾಗಿ ಖಗೋಲ ವಿಜ್ಞಾನಿಗಳು ತಾವು ಕಂಡುಹಿಡಿದ ಹೊಸ ಆಕಾಶಗಂಗೆಗೆ ‘ಫ್ರಾಂಕಿನ್‌ಸ್ಟೈನ್ ಗೆಲಾಕ್ಸಿ’ ಎಂದು ಹೆಸರಿಟ್ಟಿದ್ದಾರೆ.

ಫ್ರಾಂಕಿನ್‌ಸ್ಟೈನ್ ಚಿರಂಜೀವಿ! 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !