ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ: ಸ್ವಂತಿಕೆಯ ಹುಡುಕಾಟದಲ್ಲಿ ಬೆಳೆದ ಸಾಲುಗಳು

Last Updated 21 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಇದು ಭುವನಾ ಹಿರೇಮಠ ಅವರ ಎರಡನೇ ಕವನ ಸಂಕಲನ. ಕಾವ್ಯದೊಟ್ಟಿಗಿನ ಆರಂಭಿಕ ಸಹವಾಸ ನೀಡುವ ಆಮಿಷಗಳು, ರೊಮ್ಯಾಂಟಿಕ್ ಕಲ್ಪನೆಗಳನ್ನೆಲ್ಲ ದಾಟಿಕೊಂಡು, ತನ್ನ ಅಂತರಂಗದ ನಿಜದನಿಯನ್ನು ಶೋಧಿಸಿಕೊಳ್ಳುವ ಪ್ರಯತ್ನ ಈ ಸಂಕಲನದಲ್ಲಿ ಎದ್ದು ಕಾಣುತ್ತದೆ. ಕಾವ್ಯದ ವಸ್ತು, ನಿರ್ವಹಣೆ, ಶಿಲ್ಪ, ಭಾಷೆಯ ಬಳಕೆ ಎಲ್ಲ ದೃಷ್ಟಿಯಿಂದಲೂ ಈ ಪ್ರಯತ್ನ ಸಂಕಲನದುದ್ದಕ್ಕೂ ಕಾಣಿಸುತ್ತದೆ. ಆದರೆ ಅದರಲ್ಲಿ ಪೂರ್ತಿ ಯಶಸ್ವಿಯಾಗಿಲ್ಲ ಎಂಬುದಕ್ಕೂ ಇಲ್ಲಿ ಪುರಾವೆಗಳಿವೆ.

‘ನಾನು’ ಮತ್ತು ‘ನೀನು’ ಎಂಬುದು, ಅವರಿಬ್ಬರ ಆಚೆಗೊಂದು ಜಗತ್ತೇ ಇಲ್ಲವೇನೋ ಅನ್ನುವಷ್ಟು ಹೊಸ ತಲೆಮಾರಿನ ಹಲವು ಕವಿಗಳಲ್ಲಿ ಕ್ಲೀಷೆಯಾಗಿದೆ. ಭುವನಾ ಅವರ ಪದ್ಯಗಳಲ್ಲಿಯೂ ಈ ‘ನಾನು’ ಮತ್ತು ‘ನೀನು’ ಬರುತ್ತಾರೆ. ಆದರೆ ಅವರು ಹಲವು ಸಂಗತಿಗಳನ್ನು ಒಳಗೊಂಡಿರುವ ಪರಿಸರದ ಒಂದು ಭಾಗವಾಗಿ ಬರುತ್ತಾರೆ. ಅಷ್ಟೇ ಅಲ್ಲ, ತಮ್ಮಿಂದ ತಾವೇ ಪಾರಾಗುವ ಊರುಗೋಲಾಗಿಯೂ ಅವರು ಪರಸ್ಪರ ಒದಗಿಬರುತ್ತಾರೆ. ‘ಪಾರಾಗಬೇಕಿದೆ ನಾನು ನನ್ನಿಂದ/ ಅವನು ಅವನಿಂದ/ ಇಬ್ಬರೂ ಈ ಕನಸಿನಿಂದ’.

‘ರಾತ್ರಿ ಮತ್ತು ಕನ್ನಡಿ’ ಎಂಬ ಪದ್ಯವನ್ನೇ ನೋಡಿ. ಇಲ್ಲಿ ಬರುವ ಇಬ್ಬರು ಸಾಕ್ಷಿಗಳಷ್ಟೆ. ಅವರು ಪರಿಧಿಯ ಕೇಂದ್ರದಲ್ಲಿಲ್ಲ; ಅದರ ಒಂದು ಭಾಗವಾಗಿದ್ದಾರಷ್ಟೆ; ಅಲ್ಲಿನ ಬಿಂಬಗಳಿಗೆ ಸಾಕ್ಷಿಯಾಗಿದ್ದಾರೆ. ಕತ್ತಲಾವರಿಸಿದ ಈ ಲೋಕದ ಭಾಗವಾದ ನೋವು ಅವರದಷ್ಟೆ.

‘ದೇವಿಯೆಂದರು ರಾತ್ರಿಯನ್ನು/ ಕತ್ತಲೆಂದರು ದೇವಿಯನ್ನು/ ಕತ್ತಲನ್ನು ಅಜ್ಞಾನ ದಾರಿದ್ರ್ಯ/ ವಿಪರ್ಯಾಸವೆಂದರೆ,/ಈಗ ಇಡೀ ಲೋಕಕ್ಕೆ ಕತ್ತಲಾವರಿಸಿದೆ’. ಮತ್ತೆ ಈ ಅಜ್ಞಾನದ ಕತ್ತಲನ್ನು ದಾಟಿದರೆ ಅವನು ಅವಳಾಗಬಹುದು, ಅವಳು ಅವನಾಗಬಹುದು. ಅಕ್ಕನ ‘ನಡುವೆ ಸುಳಿವಾತ್ಮನು’ ನೆನಪಾಗುವಂಥ ಮುಂದಿನಸಾಲುಗಳುಹೀಗಿವೆ: ‘ಆ ಗೌರಿಕೊಳ ದಾಟಿದರೆ/ ಹೆಣ್ಣು ಗಂಡಾಗುವನು/ ಗಂಡು ಹೆಣ್ಣಾಗುವಳು/ ಈ ಕತ್ತಲು ಬೆಳಕಾಗುವುದೇ?/ ನಾನು ನೀನು ಅದಲು ಬದಲು ಕಂಚಿ ಬದಲು.’

ಹೀಗೆ ಹೊರಗಿನಿಂದ ಬೇರೆ ಬೇರೆಯಾಗಿ ಕಾಣಿಸುವವರೆಲ್ಲರೂ ಆಳದಲ್ಲಿ ಒಂದೇ ಆಗಿರುತ್ತಾರೆ ಎಂಬ ಧ್ವನಿ ಅವರ ಹಲವು ಕವಿತೆಗಳಲ್ಲಿ ಸೂಚ್ಯವಾಗಿ ಬರುವುದು ಕುತೂಹಲಕಾರಿ. ‘ಅಕ್ಕಿ ಆರಿಸಬೇಕು’ ಕವನವನ್ನೇ ಗಮನಿಸಿ. ಈ ಪದ್ಯದಲ್ಲಿ ಹಲವು ಹೆಣ್ಣುಗಳ ಚಿತ್ರಗಳಿವೆ. ಮೊಸರಲ್ಲೂ ಕಲ್ಲು ಹುಡುಕುವಂಥ ಗಂಡನಿಂದ ಕುಂಡೆ ಮೇಲೆ ಬರೆ ಎಳೆಸಿಕೊಳ್ಳುವ, ಕೆನ್ನೆ ಮೇಲೆ ಬೆರಳ ಗುರುತು ಮೂಡಿಸಿಕೊಳ್ಳುವ ಹೆಣ್ಣು, ಚಟಚಟನೆ ಸಿಡಿಯುವ ಅಗ್ನಿಕುಂಡದಲ್ಲಿ ಕಿಚ್ಚು ಹಾಯುವ ಪುರಾಣದ ಸೀತೆಯಂಥ ಹೆಣ್ಣು, ಅನುದಿನವೂ ಕತ್ತಲೆಯಿಂದ (ಕತ್ತಲೆಯಲ್ಲಿ?) ಬಲಾತ್ಕಾರಕ್ಕೊಳಗಾಗುವ ಹೆಣ್ಣು, ಪ್ರತೀ ಹೆರಿಗೆಗೂ ಹರಕೆ ಹೊರುವ ಸೂಲಗಿತ್ತಿಯೆಂಬ ಹೆಣ್ಣು, ಜೋಳಿಗೆ ತುಂಬೆಲ್ಲ ಕುಡಿಗಳ ತುಂಬಿಕೊಂಡ ಭಿಕ್ಷುಕ ರೂಪದ ಹೆಣ್ಣು... ಮತ್ತಾ ಹೆಣ್ಣು ಕವಿಗೆ ತನ್ನ ಲೋಕವನ್ನೆಲ್ಲ ಹೊತ್ತುಕೊಂಡ ಜಗದಂಬೆಯಂತೆ ಕಾಣಿಸುತ್ತಾಳೆ. ಹಲವು ಕಾಲ, ರೂಪಗಳಲ್ಲಿ ಕಾಣಿಸಿಕೊಳ್ಳುವ ಈ ಹೆಣ್ಣುಗಳು ಬೇರೆ ಬೇರೆಯಲ್ಲ ಎಂಬುದನ್ನು ಕವಿ, ಕವಿತೆಯ ಕಟ್ಟುವಿಕೆಯ ಕ್ರಮದಲ್ಲಿಯೇ ನಮಗೆ ಮನದಟ್ಟು ಮಾಡುತ್ತಾರೆ.

ಇಲ್ಲಿನ ಹಲವು ಪದ್ಯಗಳು ಇನ್ನೊಂದು ಪದ್ಯದಲ್ಲಿ ಮುಂದುವರಿಯುತ್ತವೆ; ತಮ್ಮನ್ನು ತಾವು ವಿಸ್ತರಿಸಿಕೊಳ್ಳುತ್ತವೆ. ಹಾಗೆಯೇ ಒಂದರ ವಸ್ತು ಇನ್ನೊಂದರಲ್ಲಿ ಮತ್ತೊಂದು ಬಗೆಯಲ್ಲಿ ಕಾಣಿಸಿಕೊಳ್ಳುವುದೂ ಇದೆ. ಸತ್ಯವೆಂಬಂತೆ ತೋರುವುದನ್ನು ಹಲವು ಆಯಾಮಗಳಿಂದ ನೋಡಿ, ತನ್ನೊಳಗೆ ಇಳಿಸಿಕೊಳ್ಳುವ ಈ ಪ್ರಯತ್ನ ಮತ್ತೊಂದು ಬಗೆಯಲ್ಲಿ ತನ್ನದೇ ಅಭಿವ್ಯಕ್ತಿಯ ಭಾಷೆಯನ್ನು ಕಟ್ಟಿಕೊಳ್ಳುವ ಪ್ರಯತ್ನವಾಗಿಯೂ ಕಾಣುತ್ತದೆ. ಈ ಪ್ರಯತ್ನದಲ್ಲಿಯೇ ಅವರು ತಮ್ಮ ಹಿಂದಿನವರಿಂದಲೂ, ವರ್ತಮಾನದಿಂದಲೂ, ಆಧುನಿಕ ಬದುಕಿನ ಬಿರುಕುಗಳಿಂದಲೂ ಸಾಕಷ್ಟು ಪಡೆದುಕೊಳ್ಳುತ್ತಾರೆ. ಭೂತ, ವರ್ತಮಾನ ಮತ್ತು ಭವಿಷ್ಯಗಳ ಚಿತ್ರಗಳು ಪರಸ್ಪರ ಒಂದಕ್ಕೊಂದು ಹೆಣೆದುಕೊಂಡೇ ಇವರ ಪದ್ಯಗಳಲ್ಲಿ ಬರುತ್ತವೆ.

ಹಲವು ಗಟ್ಟಿ ರಚನೆಗಳಿರುವ ಈ ಸಂಕಲನದಲ್ಲಿ, ಅಳ್ಳಕವೆನಿಸುವ ಕಾವ್ಯಗಳೂ ಇವೆ. ಭಾಷೆಯಲ್ಲಿಯೇ ಮೈಮರೆಯುವ ಮೋಹ, ಹುಸಿ ಬೌದ್ಧಿಕತೆಯ ಆಕರ್ಷಣೆ, ವಾಚಾಳಿತನಗಳಿಂದ ಸಡಿಲಗೊಂಡ ರಚನೆಗಳೂ ಇವೆ.

‘ಎರಡೆರಡು ಗೋರಿಯಲಿ ಪ್ರತ್ಯೇಕವಾಗಿ’ ಎಂಬ ಪದ್ಯ ಶುರುವಾಗುವುದು ಹೀಗೆ: ‘ಪ್ರತಿ ರಾತ್ರಿಗೂ ನಿಲ್ಲದೆ ಉರುಳುತ್ತಲೇ ಇರುವ ಕಾಲ/ ಈ ಬೀದಿಗಳಲ್ಲಿ ಆ ಆಗಸದಲ್ಲಿ/ ಮನೆಮನೆಯ ಪಡಸಾಲೆಯಲ್ಲಿ/ ಅಡ್ಡಗೋಡೆಯ ಸಣ್ಣ ಸಣ್ಣ ಮಾಡಿನಲ್ಲಿ/ ಮೊಸರಾಗುವ ಕುಡಿಕೆಯಲ್ಲಿ/ಯಾರ ಅರಿವಿಗೂ ಬರದೆ ವೇದ್ಯವಾಗಿ ಸಾಗುತಿರಲು/...’ ಕಾಲದ ಉರುಳುವಿಕೆಯನ್ನು ಹಲವು ತಾಜಾ ಚಿತ್ರಗಳ ಮೂಲಕ ಹೇಳುವ ಪದ್ಯದಲ್ಲಿ ಬರುವ ‘ವೇದ್ಯವಾಗಿ’ ಎಂಬ ಸಾಲು ಮೈಮರೆಸಿ ಓದಿಸಿಕೊಂಡು ಹೋಗುತ್ತದೆ. ವೇದ್ಯ ಎಂದರೆ ಜ್ಞಾನಿ, ತಿಳಿದವನು, ತಿಳಿದುದು ಎನ್ನುವ ಅರ್ಥಗಳಿವೆ. ‘ಯಾರ ಅರಿವಿಗೂ ಬಾರದೆ ತಿಳಿದು ಸಾಗುವುದು ಎಂದರೆ ಏನು?’ ತನ್ನ ಶಬ್ದಕೋಶದ ಅರ್ಥವನ್ನು ಹೊರತುಪಡಿಸಿ ಈ ಪದ ಈ ಸನ್ನಿವೇಶದಲ್ಲಿ ಬೇರೆ ಅರ್ಥಸಾಧ್ಯತೆಗಳನ್ನು ಹೊರಡಿಸುತ್ತಿದೆಯೇ? ಅಥವಾ ಬರಿ ಶಬ್ದ ಚಮತ್ಕಾರಕ್ಕಾಗಿ ಬಳಕೆಯಾಗಿದೆಯೇ? ಕವಿಗೆತನ್ನ ಪದ್ಯದಲ್ಲಿ ಬರುವ ಒಂದೊಂದು ಶಬ್ದವನ್ನೂ ಯಾಕೆ ಬಳಸುತ್ತಿದ್ದೇನೆ ಎಂಬುದರ ಅರಿವಿರಬೇಕು. ಅಷ್ಟೇ ಅಲ್ಲ, ಅದು ಲೋಕಾರೂಢಿಯಲ್ಲಿ ಯಾವ ಅರ್ಥವನ್ನು ಹೊರಡಿಸುತ್ತದೆ ಎಂಬುದೂ ತಿಳಿದಿದ್ದಾಗಲಷ್ಟೇ ಅದನ್ನು ಮುರಿದುಕಟ್ಟಲು ಸಾಧ್ಯ.

‘ಅರ್ಥ ಕಾಮ ಮೋಕ್ಷ ಮತ್ತು ಸ್ವರ್ಗಕ್ಕಾಗಿ’ ಪದ್ಯದಲ್ಲಿ ಬರುವ ‘ಬಿಕನಾಸಿ ಜ್ಯೋತಿರ್ವರ್ಷಗಳು’, ‘ಕುಲಗೇಡಿ ಕ್ಯಾಲೆಂಡರುಗಳು’, ‘ಅನಾಥ ತಾರೀಖುಗಳು’ – ಇಂಥ ಪದಪುಂಜಗಳು ವಿಕ್ಷಿಪ್ತವೆನಿಸುವ ಪದಜೋಡಣೆಯಿಂದ ಹುಸಿ ಆಕರ್ಷಣೆ ಹುಟ್ಟಿಸುತ್ತವೆಯೇ ಹೊರತು ಒಟ್ಟಾರೆ ಕಾವ್ಯಕ್ಕೆ ಬಹುಮುಖ್ಯವಾದದ್ದನ್ನೇನೂ ಸೇರಿಸುವುದಿಲ್ಲ. ಸೂಕ್ಷ್ಮವಾಗಿ ನೋಡಿದರೆ ಇವು ಅತಿ ವಾಚಾಳಿತನದಿಂದ, ಪರಪರೆ ಬೆಗಡೆಯಂಥ ಭಾಷೆಯ ಹೊಳಪಿನಿಂದ ಕವಿತೆಯ ಶಿಲ್ಪವನ್ನು ಶಿಥಿಲಗೊಳಿಸುತ್ತಿರುತ್ತವೆ.

ಇವು ಪದಗಳ ಆಕರ್ಷಣೆಯಾದರೆ, ‘ನೀನು ನೆನಪಾಗುತ್ತಿ’ ಎಂಬಂಥ ಸಾಧಾರಣ ಪದ್ಯಗಳು, ಕವಿತೆಯ ಕುರಿತಾದ ರೊಮ್ಯಾಂಟಿಕ್ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕವಿ ಇನ್ನೂ ಪೂರ್ತಿ ಯಶಸ್ವಿಯಾಗಿಲ್ಲ ಎಂಬುದನ್ನು ಸೂಚಿಸುವಂತಿವೆ.

ಇಂಥ ‘ಮೇಲುನೋಟ’ದ ಆಕರ್ಷಣೆಗಳನ್ನು ಮೀರುವ ರಿಸ್ಕ್ ಅನ್ನು ತೆಗೆದುಕೊಂಡಾಗಲಷ್ಟೆ ತಮ್ಮ ನಿಜಧ್ವನಿಯ ಹುಡುಕಾಟಕ್ಕೆ ಅರ್ಥ ಸಿಗುತ್ತದೆ. ಮತ್ತು ಮುಂದಿನ ಬರವಣಿಗೆಯಲ್ಲಿ ಭುವನಾ ಈ ರಿಸ್ಕ್‌ ಅನ್ನು ತೆಗೆದುಕೊಂಡು ಯಶಸ್ವಿಯಾಗುವ ಲಕ್ಷಣಗಳಂತೂ ಈ ಕವನಸಂಕಲನದಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT