ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಮೀಸಲಾತಿಯ ಮಹತ್ವದ ಒಳದನಿ

Last Updated 29 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

‘ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ಸಿಗಬೇಕಾದರೆ ಮೀಸಲಾತಿ ನೀಡುವುದೊಂದೇ ಪರಿಹಾರ. ಅದಕ್ಕಾಗಿ ರಾಷ್ಟ್ರಮಟ್ಟದ ಆಂದೋಲನವಾಗಬೇಕು. ಅದಕ್ಕಾಗಿ ಪ್ರತ್ಯೇಕ, ಪ್ರಬಲ ಸಂಘಟನೆಯ ಅಸ್ತಿತ್ವ ಅನಿವಾರ್ಯ’ ಎನ್ನುವ ಸಾಲುಗಳಷ್ಟೇ ಸಾಕು, ಮೀಸಲಾತಿಯ ಒಳನೋಟ ಕೃತಿಯ ತಿರುಳು ಏನೆಂಬುದನ್ನು ಹೇಳಲು.‘ಅಹಿಂದ’ ಅಸ್ತಿತ್ವಕ್ಕೆ ಬಂದ ಉದ್ದೇಶವನ್ನು ಪ್ರಬಲವಾಗಿ ಸ್ಪಷ್ಟೀಕರಿಸುತ್ತಲೇ ಹಿಂದುಳಿದ ವರ್ಗಗಳ ರಾಜಕೀಯ ಅಸ್ಮಿತೆಯನ್ನು ಎತ್ತಿ ಹಿಡಿಯುವ ಬಗೆಯನ್ನು ಲೇಖಕ ಕೆ.ಎನ್‌.ಲಿಂಗಪ್ಪ ಅವರು ಈ ಕೃತಿಯಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಕೃತಿಯ ಮೊದಲ ಅಧ್ಯಾಯ ‘ರಾಜಕೀಯ ಚದುರಂಗದಾಟದಲ್ಲಿ ಕಳೆದುಹೋದ ಹಿಂದುಳಿದ ವರ್ಗಗಳು’ ಲೇಖನದಲ್ಲಿ 1951–52ರಿಂದ 2019ರವರೆಗೆ ಸಂಸತ್‌ಗೆ ನಡೆದ ಒಟ್ಟು 17 ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಗಣನೀಯವಾಗಿ ಹಿನ್ನಡೆ ಕಂಡಿರುವುದನ್ನು ಆಯಾ ಕಾಲಘಟ್ಟದ ಸನ್ನಿವೇಶಗಳ ಸಹಿತ ಉಲ್ಲೇಖಿಸಿದ್ದಾರೆ. ಈ ಹಿನ್ನಡೆ ಮತ್ತು ಪ್ರಾತಿನಿಧ್ಯದ ಪ್ರಮಾಣ ಸಮತೋಲನಗೊಳ್ಳಬೇಕಾದರೆ ‘ಅಹಿಂದ ಮರುಹುಟ್ಟು ಅಗತ್ಯ ಏಕೆ? ಮತ್ತು ಹೇಗೆ?’ ಎಂಬ ಅಧ್ಯಾಯದಲ್ಲಿ ಲೇಖಕರು ವಿಸ್ತಾರವಾಗಿ ಚರ್ಚಿಸಿದ್ದಾರೆ.

ಕರ್ನಾಟಕದ ಏಕೀಕರಣದ ಬಳಿಕ 2018ರವರೆಗೆ ರಾಜ್ಯ ವಿಧಾನಸಭೆಗೆ ನಡೆದ ಒಟ್ಟು 15 ಚುನಾವಣೆಗಳಲ್ಲಿ ಆಯ್ಕೆಯಾದ ಹಿಂದುಳಿದ ವರ್ಗಗಳ ಜನಪ್ರತಿನಿಧಿಗಳ ಪ್ರಮಾಣ ನಿರಾಶಾದಾಯಕ ಎಂಬುದನ್ನು ಜಾತಿವಾರು ಪ್ರಾತಿನಿಧ್ಯದ ದಾಖಲೆ ಸಹಿತ ಕೊಟ್ಟಿದ್ದಾರೆ.

‘ರಾಜಕೀಯ ಸುಳಿಯಲ್ಲಿ ಸಿಲುಕಿದ ಜನಗಣತಿ’ ಲೇಖನದಲ್ಲಂತೂ ಒಂದು ವ್ಯವಸ್ಥಿತ ಸಮೀಕ್ಷೆಯು ಹೊರಬರದಂತೆ ಹಿತಾಸಕ್ತಿಗಳು ನಡೆದುಕೊಂಡ ಬಗೆಯನ್ನು ವಿಷಾದದಿಂದಲೇ ವಿವರಿಸಿದ್ದಾರೆ. ವರದಿ ಸೋರಿಕೆ ಆಯಿತು ಎಂಬ ಗುಲ್ಲೆದ್ದದ್ದು, ಅದನ್ನೊಂದು ವಿವಾದವನ್ನಾಗಿಸಿದ್ದನ್ನು ವಿವರವಾಗಿ ಚರ್ಚಿಸಿದ್ದಾರೆ. ಈ ಸಮೀಕ್ಷೆಗಾಗಿ ಜನಸಾಮಾನ್ಯರ ತೆರಿಗೆ ಹಣ ₹ 250 ಕೋಟಿ ವ್ಯಯವಾಗಿದ್ದು ಕೊನೆಗೂ ವರದಿ ಬೆಳಕಿಗೆ ಬಾರದೇ ಹೋಯಿತು ಎಂದು ವಿಷಾದಿಸಿದ್ದಾರೆ. ‘ಹಿಂದುಳಿದವರನ್ನು ರಕ್ಷಿಸಬೇಕಾದ ದೇವರೂ ಅವರ ಪಾಲಿಗೆ ಇಲ್ಲವಾಗಿದ್ದಾನೆ’ ಎಂದು ಬೇಸರವನ್ನು ಹೊರಹಾಕಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಎಲ್ಲ ಜಾತಿಗಳಿಗೂ ಮೀಸಲಾತಿ ಸಿಗಬೇಕು ಎಂಬ ನಿರ್ಧಾರದ ಹಿನ್ನೆಲೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು. ಈಗ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಅರ್ಹತೆ ಇರುವ ಅತಿ ಹಿಂದುಳಿದ ಜಾತಿಗಳು ಮತ್ತು ಈಗಾಗಲೇ ಸೇರಿರುವ ಮುಖ್ಯ ಜಾತಿಗಳಿಗೆ ಅವುಗಳ ಉಪಜಾತಿಗಳನ್ನು ಸೇರಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಸಲಹೆ ಮಾಡಿದ್ದಾರೆ. ತೃತೀಯ ಲಿಂಗಿಗಳಿಗೂ ಮೀಸಲಾತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (ಡಾ.ಸಿ.ಎಸ್‌.ದ್ವಾರಕಾನಾಥ್‌ ಅಧ್ಯಕ್ಷರಾಗಿದ್ದ ಅವಧಿಯಲ್ಲಿ) ಮಾಡಿದ ಶಿಫಾರಸನ್ನು ಜಾರಿಗೊಳಿಸಬೇಕು. ಕೇಂದ್ರ ಸರ್ಕಾರವೂ ಇವರನ್ನು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂದು ಪರಿಗಣಿಸಿ ಕೇಂದ್ರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಒಳಮೀಸಲಾತಿಯ ಒಳಸುಳಿಗಳು, ಆಯೋಗಗಳ ಸಲಹೆಗಳಿಗೆ ಸರ್ಕಾರಗಳ ದಿವ್ಯ ನಿರ್ಲಕ್ಷ್ಯ, ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಾದ ಜಾತಿ ಜನಗಣತಿ, ಸಂವಿಧಾನ ತಿದ್ದುಪಡಿ: ಜಾತಿಗಳ ಹೊಸ ಸೇರ್ಪಡೆ ಕಗ್ಗಂಟು, ಮೀಸಲಾತಿಯ ಕೋಟಾ: ಶೇ 50ರ ಮಿತಿಯ ಕಗ್ಗಂಟು, ಮಡಿವಾಳರ ಕನಸು ನನಸಾದೀತೇ?, ದಡ ತಲುಪದ ಉಪ್ಪಾರರ ಭಗೀರಥ ಹೋರಾಟ ಮೊದಲಾದ ಲೇಖನಗಳ ತಲೆಬರಹಗಳೇ ಕೃತಿಯ ಚರ್ಚೆಯ ಆಳವನ್ನೂ ಹೇಳುತ್ತವೆ. ಇಲ್ಲಿನ ಲೇಖನಗಳಲ್ಲಿ ರಾಜಕೀಯದ ಒಳನೋಟಗಳಿವೆ. ಪಕ್ಷಗಳ ಸೈದ್ಧಾಂತಿಕ ಸಂಘರ್ಷಗಳು, ತೆರೆಮರೆಯ ಉದ್ದೇಶಗಳು ಹಿಂದುಳಿದ ಜಾತಿಗಳ ಏಳಿಗೆಗೆ, ಹಿತಾಸಕ್ತಿಗೆ ಅಡ್ಡಿಯಾಗಿ ಪರಿಣಮಿಸಿರುವ ಬಗ್ಗೆ ಚರ್ಚೆಗಳಿವೆ.

ಕೆಎಎಸ್‌ ಅಧಿಕಾರಿಯಾಗಿ, ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿ ಆಡಳಿತದಲ್ಲಿ ವ್ಯಾಪಕವಾದ ಅನುಭವ ಹೊಂದಿರುವ ಲಿಂಗಪ್ಪನವರು, ಆಳವಾದ ಅಧ್ಯಯನ ಆಧಾರದ ಮೇಲೆ ಕೃತಿ ರಚಿಸಿದ್ದಾರೆ. ಸರ್ಕಾರಿ ಆದೇಶಗಳು, ಸುತ್ತೋಲೆಗಳು, ದಾಖಲೆಗಳು, ಕೋರ್ಟ್‌ ತೀರ್ಪುಗಳು, ಅಂಕಿ–ಅಂಶಗಳನ್ನು ಹೇರಳವಾಗಿ ಕಲೆಹಾಕಿ ಕೊಡುವ ಮೂಲಕ ಚರ್ಚೆಯ ವಸ್ತುನಿಷ್ಠತೆಯನ್ನು ಹೆಚ್ಚಿಸಿದ್ದಾರೆ.

‘ನನಗೆ ತಿಳಿದಂತೆ ಕನ್ನಡದಲ್ಲಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಇಷ್ಟೊಂದು ವಿವರಗಳಿರುವ ಪುಸ್ತಕ ಇದೊಂದೇ ಅನಿಸುತ್ತದೆ’ ಎಂದು ಮುನ್ನುಡಿಯಲ್ಲಿ ಡಾ. ದ್ವಾರಕಾನಾಥ್‌ ಅವರು ಅಭಿಪ್ರಾಯಪಟ್ಟಿರುವುದು ಕೃತಿಯ ಮಹತ್ವವನ್ನು ಸಾರುತ್ತದೆ. ಜಾತಿ ರಾಜಕಾರಣದ ಒಳನೋಟ, ಕಾನೂನು ವಿಶ್ಲೇಷಣೆಯ ಹಲವಾರು ದೃಷ್ಟಾಂತಗಳಿರುವ ಈ ಕೃತಿ ಮೀಸಲಾತಿಗೆ ಸಂಬಂಧಿಸಿ ಅಧ್ಯಯನಾಸಕ್ತರಿಗೆ, ಕಾನೂನು ವಿದ್ಯಾರ್ಥಿಗಳಿಗೆ, ಜನಪ್ರತಿನಿಧಿಗಳಿಗೆ ಉಪಯುಕ್ತ ಕೃತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT