ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಣಿತ ಸಂಕಟಗಳ ಮ್ಯೂಸಿಯಂ

Last Updated 28 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಹಿಂಡೆಕುಳ್ಳು

ಲೇ: ಅಮರೇಶ ಗಿಣಿವಾರ

ಪು: 78; ಬೆ: ರೂ. 80

ಪ್ರ: ವೈಷ್ಣವಿ ಪ್ರಕಾಶನ, ಕೆ. ಗುಡದಿನ್ನಿ, ರಾಯಚೂರು ಜಿಲ್ಲೆ. ಫೋನ್: 96201 70027

ಕಥೆಗಾರರ ಹೆಸರು ಅಮರೇಶ ಗಿಣಿವಾರ. ಸಂಕಲನದ ಶೀರ್ಷಿಕೆ ಹಿಂಡೆಕುಳ್ಳು. ಕಾವ್ಯದ ಮೋಹಕತೆಯನ್ನು ಸ್ಫುರಿಸುವಂತಿರುವ ಈ ಹೆಸರುಗಳು ಕಟ್ಟಿಕೊಟ್ಟಿರುವುದು ಮಾತ್ರ ಕೆಂಡದಂಥ ಕಥೆಗಳನ್ನು. ಮನುಷ್ಯ ಮಾತ್ರದವರಿಗೆ ಬರಬಹುದಾದ ಸಂಕಷ್ಟಗಳನ್ನೆಲ್ಲ ಒಂದೆಡೆ ಗುಡ್ಡೆ ಹಾಕಿದಂತೆ ಕಾಣಿಸುವ ಹೆಣ್ಣು–ಗಂಡುಗಳ ಬದುಕನ್ನು ಅಮರೇಶರು ಕಥೆಗಳ ಹೆಸರಿನಲ್ಲಿ ಓದುಗರ ಮುಂದಿಟ್ಟಿದ್ದಾರೆ.

ಅಮರೇಶರ ಸಾಮರ್ಥ್ಯ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ‘ಶಿವನಕುದುರೆ’ ಹಾಗೂ ‘ಹಿಂಡೆಕುಳ್ಳು’ ಕಥೆಗಳನ್ನು ಪರಿಶೀಲಿಸಬಹುದು. ತರುಣನೊಬ್ಬನ ಕಣ್ಣಿನಲ್ಲಿ ಬಿಚ್ಚಿಕೊಳ್ಳುವ ‘ಶಿವನಕುದುರೆ’ ಕಥೆಯಲ್ಲಿ ಕಾಲು ಮುರಿದುಕೊಳ್ಳುವುದರ ಜೊತೆಗೆ ಪಾರ್ಶ್ವವಾಯುವಿಗೆ ತುತ್ತಾದ ಅಪ್ಪನಿದ್ದಾನೆ. ಹಾಸಿಗೆ ಹಿಡಿದಿರುವ ಆ ವ್ಯಕ್ತಿ, ಕಾಲು ಚೆನ್ನಾಗಿದ್ದಾಗ ಹಾಗೂ ಮೈಯಲ್ಲಿ ಕಸುವಿದ್ದಾಗ ತನ್ನ ಹಾಗೂ ತನ್ನಮ್ಮನನ್ನು ಹೇಗೆಲ್ಲ ಹಿಂಸಿಸಿದ ಎನ್ನುವ ವಿವರಗಳನ್ನು ಕಥಾನಾಯಕ ನೆನಪಿಸಿಕೊಳ್ಳುತ್ತಾನೆ. ಈ ನೆನಪುಗಳಲ್ಲಿ, ನೆಲ ಕಚ್ಚಿದ ಅಪ್ಪನ ಗತಪ್ರಾಯದ ರೋಚಕ–ರಸಿಕ ಸಂಗತಿಗಳು ಇರುವಂತೆಯೇ, ಅಪ್ಪನಿಗೆ ಸವಾಲೆಸೆಯುವಂತಹ ಮಗನ ಬಾಲ್ಯ–ತಾರುಣ್ಯದ ಪ್ರಯೋಗಗಳೂ ಇವೆ.

ಮಗನ ತಪ್ಪುಗಳಿಗಾಗಿ ಅವನನ್ನು ದಂಡಿಸುವ ಅಪ್ಪ, ತಾನು ಅದೇ ತಪ್ಪುಗಳನ್ನು ಮಾಡುತ್ತಾನೆ. ಹೀಗೆ ವಿರೋಧಾಭಾಸದ ವಿವರಗಳನ್ನು ಜೋಡಿಸುತ್ತಾ ಹೋಗುವ ಕಥೆ ಓದುಗನ್ನು ಬೆಚ್ಚಿಬೀಳಿಸುವುದು ಎರಡು ಕಾರಣಗಳಿಗಾಗಿ. ಒಂದು, ತುಂಡು ದನಗಳಂಥ ಅಪ್ಪ–ಮಗನ ನಡುವೆ ಹೆಂಡತಿ, ಅಮ್ಮನ ರೂಪದಲ್ಲಿ ಹೆಣ್ಣುಮಗಳೊಬ್ಬಳ ಬದುಕು ನವೆದುಹೋಗುತ್ತಿರುವುದು. ಇನ್ನೊಂದು, ಈಗ ನೆಲ ಕಚ್ಚಿರುವ ಅಪ್ಪನನ್ನು ಕೇಡಿಗನಂತೆ ಭಾವಿಸುತ್ತಿರುವ ಮಗ, ಮುಂದೊಂದು ದಿನ ಅಪ್ಪನ ಪೋಷಾಕಿನೊಂದಿಗೆ ಅದೇ ಮೂಲೆ ಸೇರುತ್ತಾನಾ ಎನ್ನುವುದು. ಎರಡನೇ ಸಾಧ್ಯತೆಯನ್ನು ಕಥೆ ಒಡೆದು ಹೇಳುವುದಿಲ್ಲವಾದರೂ ಅಪ್ಪ–ಮಗನ ಬದುಕು–ನಡತೆಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿರುವುದು, ಗಂಡಸರ ಹಣೆಬರಹವೇ ಇಷ್ಟು ಎನ್ನುವುದನ್ನು ಹೇಳುವಂತಿದೆ.

‘ಶಿವನಕುದುರೆ’ ಕಥೆಯ ವಿಸ್ತೃತ ರೂಪದಂತೆ ನೋಡಬಹುದಾದ ‘ಹಿಂಡೆಕುಳ್ಳು’ ಕಥೆಯಲ್ಲಿ ಅಮ್ಮ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಮೂವರು ಹೆಣ್ಣುಮಕ್ಕಳಿದ್ದಾರೆ. ಈ ಮೂರು ಜೀವಗಳನ್ನು ಕುಟುಂಬದ ಯಜಮಾನ ಎನ್ನಿಸಿಕೊಂಡ ಗಂಡು ವಿಕೃತವಾಗಿ ಹಿಂಸಿಸಿ ಆನಂದಿಸುತ್ತಾನೆ. ‘ಕತ್ತಲಾಯ್ತು, ಬರ್ತಾನ, ಬಾಗ್ಲಿ ತೆಗಿ ಅಂತಾನ’ ಎನ್ನುವ ಕಥಾನಾಯಕಿಯ ಆತಂಕದೊಂದಿಗೆ ಕಥೆ ಶುರುವಾಗುತ್ತದೆ. ಗಂಡ ಮನೆಗೆ ಬರುವುದೇ ಹೆಂಡತಿಯ ಪಾಲಿಗೆ ಸಂಭ್ರಮವಾಗಬೇಕು. ಇಲ್ಲಿ ಪರಿಸ್ಥಿತಿ ತಿರುಗುಮುರುಗು. ತಾನು ಮನೆಯಲ್ಲಿರುವಾಗ ಮಕ್ಕಳನ್ನು ಗುಡಿಸಲಿನ ಆಚೆ ಉಳಿಸುವ, ರಾತ್ರಿ ಮಳೆ ಬಂದರೂ ಮಕ್ಕಳನ್ನು ಒಳಗೆ ಬಿಟ್ಟುಕೊಳ್ಳದ ಅಪ್ಪನ ಪಾತ್ರದ ನಿಷ್ಕರುಣಿ ಗಂಡು, ಕೊನೆಗೊಂದು ದಿನ ಸಾಯುವ ಮೂಲಕ ಮೂರು ಹೆಣ್ಣುಜೀವಗಳಿಗೆ ಬಿಡುಗಡೆ ದೊರೆಯುತ್ತದೆ.

‘ಸತ್ತು ಹೋಗ್ಯಾನ. ಇನ್ನಮ್ಯಾಕ ಗುಡಿಸಿಲಿಗೆ ಬರಂಗಿಲ್ಲ’ ಎಂದು ಅಮ್ಮ ಹೇಳಿದರೆ, ‘ಅಪ್ಪ ಸತ್ತಿದ್ದು ಬೇಸಾಯ್ತು ಅಲಮಾ?’ ಎನ್ನುತ್ತಾಳೆ ಕಿರಿಮಗಳು. ಸಾವಿನ ಮೂರನೇ ದಿನ ಗಂಡನ ಸಮಾಧಿಯ ಮೇಲೆ ಅವನಿಗೆ ಪ್ರಿಯವಾದ ಏನನ್ನಾದರೂ ಇಡಬೇಕಾದಾಗ, ‘ಅವನು ಮ್ಯಾಕ ಹೋಗ್ಯಾನ, ಅಲ್ಲಿನೂ ಯಾರಿಗೂ ರೋಗ ಹಚ್ಚಬಾರದು’ ಎಂದು ಯೋಚಿಸುವ ಮೃತನ ಪತ್ನಿ, ಗುಳಿಗೆಗಳ ಸೂಪರ್‌ಪಾಕೀಟನ್ನು ಗುಡ್ಡೆಯ ಮೇಲೆ ಇಟ್ಟು ಬಂದರೆ, ಮಕ್ಕಳು ಅಂಗಳದಲ್ಲಿ ಹಿಗ್ಗಿನಿಂದ ಆಡುತ್ತಿವೆ. ‘ನರಿಮಳೆ’ ಕಥೆಯ ನಾಯಕಿ ಕೂಡ ಇಂತಹುದ್ದೇ ಬಿಡುಗಡೆ ಕಂಡುಕೊಳ್ಳುತ್ತಾಳೆ. ತನ್ನ ಬದುಕಿನಲ್ಲಿ ಬಂದವರ ಹೆಸರುಗಳನ್ನು ಹೇಳುತ್ತಾ ಗೌಡಶಾನಿಯ ಬಿಳಿಕೂದಲುಗಳನ್ನು
ಒಂದೊಂದಾಗಿ ಗಾಳಿಗೆ ತೂರಿಬಿಟ್ಟು ಹಗುರಾಗುವ ರೇಣುಕಾ, ಕೊನೆಗೆ ತನ್ನ ಕೂಸನ್ನೂ ಹಳ್ಳಕ್ಕೆ ಬಿಡುತ್ತಾಳೆ.

‘ಶಿವನಕುದುರೆ’ ಮತ್ತು ‘ಹಿಂಡೆಕುಳ್ಳು’ ಮಾತ್ರವಲ್ಲ – ಗಿಣಿವಾರರ ಎಲ್ಲ ಕಥೆಗಳಲ್ಲಿ, ಗ್ರಾಮೀಣ ಪರಿಸರದಲ್ಲಿನ ಹೆಣ್ಣುಮಕ್ಕಳು ತಮ್ಮ ಕನಸು ಕಸುವನ್ನೆಲ್ಲ ಗಂಡಿನ ಸುಖಕ್ಕೆ ಧಾರೆಯೆರೆದು, ಜೀವಚ್ಚವಗಳಂತೆ ಬದುಕುತ್ತಿದ್ದಾರೆ. ತನಗೆ ದಕ್ಕದೆಹೋದ ಗೆಳತಿಗೆ ಪತ್ರ ಬರೆಯುವ ಯುವಕನಲ್ಲಿ ಕೂಡ, ಹೆಣ್ಣಿನ ಬಗ್ಗೆ ವ್ಯಂಗ್ಯವಾಡಬಲ್ಲ ಮೇಲರಿಮೆಯ ಗಂಡಸಿದ್ದಾನೆ. ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಲಿಂಗಭೇದದ ರೋಗಗಳು ಕಾಡುತ್ತಿರುವ ಜೀವಗಳ ಬದುಕು ‘ಹಿಂಡೆಕುಳ್ಳು’ ಸಂಕಲನದ ಕಥೆಗಳಲ್ಲಿದೆ.

ಹೆಣ್ಣಿನ ಸಂಕಟಗಳನ್ನು ಕೇಂದ್ರವಾಗಿರಿಸಿಕೊಂಡು ಗಿಣಿವಾರರು ಕಾಣಿಸುವ ಕಥನಗಳು, ಗ್ರಾಮಭಾರತದ ಯಾವ ಊರಿನ ನರಳಿಕೆಯೂ ಆಗಿರಬಹುದಾದರೂ ಅವು ರಾಯಚೂರು ಸೀಮೆಯ ತಲ್ಲಣಗಳಾಗಿಯೇ ಕಾಣಿಸುವುದಕ್ಕೆ ಕಾರಣ ಅವುಗಳು ಜೀವತಳೆದಿರುವ ಭಾಷೆ. ಹೈದರಾಬಾದ್‌ ಕರ್ನಾಟಕ ಭಾಗದ ಮಾತುಗಳನ್ನು ಗಿಣಿವಾರರು ಬಹು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಮೋಹಕತೆಗೆ ಮರುಳಾಗದೆ ಭಾಷೆಯನ್ನು ಹದ ಮೀರದಂತೆ ಬಳಸುವ ಅವರ ಸಾಮರ್ಥ್ಯ ಕಥೆಗಳ ಹೊಳಪನ್ನು ಹೆಚ್ಚಿಸಿದೆ.

ಗಿಣಿವಾರರಿಗೆ ಕಥೆ ಹೇಳುವ ಕಲೆ ಗೊತ್ತಿದೆ ಎನ್ನುವುದಕ್ಕೆ ಸಂಕಲನದ ಹತ್ತು ಕಥೆಗಳೂ ಉದಾಹರಣೆಯಂತಿವೆ. ಕೊನೆಮೊದಲಿಲ್ಲದ ಸಂಕಟಗಳನ್ನೇ ಕಥೆಗಳಾಗಿಸುವಾಗ, ಕಥೆಗಾರ ತನ್ನ ರಚನೆಯೊಂದಿಗೆ ಸಾಧಿಸಬೇಕಾದ ಅಂತರದ ಅರಿವೂ ಅವರಿಗಿರುವಂತಿದೆ. ಚೊಚ್ಚಿಲ ಸಂಕಲನದ ರಚನೆಗಳಲ್ಲೇ ಕಥನಕಲೆಯ ಬಗ್ಗೆ ಗಿಣಿವಾರ ಅವರಿಗಿರುವ ಆಸಕ್ತಿ ಮತ್ತು ಪ್ರೀತಿ – ಎರಡನ್ನೂ ‘ಹಿಂಡೆಕುಳ್ಳು’ ಅನುಮಾನಕ್ಕೆ ಆಸ್ಪದವಿಲ್ಲದಂತೆ ಸ್ಪಷ್ಟಪಡಿಸುತ್ತದೆ. ಆದರೆ, ಇಲ್ಲಿನ ರಚನೆಗಳು ನಿಜವಾದ ಅರ್ಥದಲ್ಲಿ ಕಥೆಗಳಾಗಿವೆಯೇ ಎನ್ನುವ ಪ್ರಶ್ನೆಯನ್ನು ಕಥೆಗಾರರೇ ಕೇಳಿಕೊಳ್ಳಬೇಕಾಗಿದೆ. ಸಣ್ಣಕಥೆಯೊಂದಕ್ಕೆ ಇರಬೇಕಾದ ನಿರ್ದಿಷ್ಟ ಕೇಂದ್ರ ಅಥವಾ ನಿರ್ದಿಷ್ಟ ಕ್ಷಣದ ಧ್ಯಾನವನ್ನು ಇಲ್ಲಿನ ರಚನೆಗಳಲ್ಲಿ ಕಾಣುವುದು ಕಷ್ಟ. ಕಥೆ ಮತ್ತು ಕಾದಂಬರಿ ಶಿಲ್ಪಗಳ ನಡುವೆ ಸುಳಿದಾಡುವ ಕಥನಗಳಂತೆ ಗಿಣಿವಾರರ ರಚನೆಗಳಿವೆ. ಮನುಷ್ಯ ಜೀವನದ ಅಗಣಿತ ಸಂಕಟಗಳನ್ನು ಓದುಗರ ಮುಂದೆ ಹರಡಿರುವ ಅವರು, ಅದರಲ್ಲಿರಬಹುದಾದ ಕಥೆಯನ್ನು ಹೆಕ್ಕಿಕೊಳ್ಳುವ ಆಯ್ಕೆಯನ್ನು ಓದುಗರ ಜಾಣ್ಮೆಗೇ ಬಿಟ್ಟಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT