ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ರಂಗದಲ್ಲಿ ಬಿಚ್ಚಿಕೊಳ್ಳುವ ಚರಿತ್ರೆ

Last Updated 4 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಮೈಸೂರು ಮಹಾರಾಜರ ಚರಿತ್ರೆಯು ಕನ್ನಡದ ಹಲವು ಪ್ರಮುಖ ಲೇಖಕರನ್ನು ಬಹುವಾಗಿ ಕಾಡಿದೆ. ಈ ರಾಜರ ಕಥೆ ಲಾವಣಿ ರೂಪದಲ್ಲಿ ಜನರ ಮಧ್ಯೆ ಇಂದಿಗೂ ಉಸಿರಾಡುತ್ತಿದೆ. ಅಷ್ಟೇ ಅಲ್ಲ, ಇತಿಹಾಸದ ದಾಖಲೆಯಾಗಿ, ಕಥೆಯಾಗಿ, ಕಾದಂಬರಿಯಾಗಿ, ನಾಟಕವಾಗಿ... ಹೀಗೆ ಬಗೆಬಗೆಯ ರೂಪದಲ್ಲಿ ಅವರ ಚರಿತ್ರೆ ನಮ್ಮ ಮುಂದೆ ಕಾಣಿಸಿಕೊಂಡಿದೆ. ಇತಿಹಾಸವನ್ನು ಭಿನ್ನವಾಗಿ ಗ್ರಹಿಸುವ, ಹಾಗೇ ಕಂಡರಿಸುವ ನಾಟಕಕಾರ, ಕವಿ ಡಿ.ಎ.ಶಂಕರ್‌ ಅವರನ್ನೂ ಮೈಸೂರು ಮಹಾರಾಜರು ಕಾಡದೆ ಬಿಟ್ಟಿಲ್ಲ. ಅಂತೆಯೇ ರಾಜರ ಚರಿತ್ರೆಯನ್ನೇ ಕೇಂದ್ರೀಕರಿಸಿ ಅವರು ಬರೆದ ನಾಲ್ಕು ನಾಟಕಗಳ ಸಂಕಲನವೇ ಇದೀಗ ಓದುಗರ ಕೈಸೇರಿರುವ ‘ಮೈಸೂರು ಇತಿಹಾಸ: ನಾಲ್ಕು ಐತಿಹಾಸಿಕ ನಾಟಕ ಚಕ್ರ’.

‘ಕಳಲೆ ಕರಾಚೂರಿ’, ‘ಹೈದರಾಲಿ’, ‘ಟಿಪ್ಪು ಸುಲ್ತಾನ್‌’ ಹಾಗೂ ‘ಕಳೆದುಹೋದವರು’ ನಾಟಕಗಳಲ್ಲಿ ಅರಸು ಮನೆತನದ, ಸೈನ್ಯಾಧಿಕಾರಿಗಳ, ಸುಲ್ತಾನರ ಕಥೆಗಳು ಹರಳುಗಟ್ಟಿವೆ. ಅವರು ಸೃಷ್ಟಿಸಿದ ರಾಜಕೀಯ ಚರಿತ್ರೆಯಿದೆ. ಶಂಕರ್‌ ಅವರು ಸೃಷ್ಟಿಸಿರುವ ಪ್ರಸಂಗಗಳಲ್ಲಿ ಆಗಿನ ಚಾರಿತ್ರಿಕ ಘಟನೆಗಳು ಕಣ್ಮುಂದೆಯೇ ಮೆರವಣಿಗೆ ಹೊರಟಂತೆ ಭಾಸವಾಗುತ್ತದೆ. ಅರಮನೆಯ ಅಂತಃಪುರದ ತೊಳಲಾಟಗಳು, ಅಧಿಕಾರ ಹಸ್ತಾಂತರದ ಘಟನಾವಳಿಗಳು, ಆಗಿನ ಸಾಮಾಜಿಕ ಸನ್ನಿವೇಶಗಳು ಕಪ್ಪು–ಬಿಳುಪಾಗಿ ಇಲ್ಲಿ ಬಿಚ್ಚಿಕೊಳ್ಳುತ್ತವೆ. ಆದ್ದರಿಂದಲೇ ಈ ನಾಟಕಗಳು ಬೇರೆ ಪ್ರಯೋಗಗಳಿಗಿಂತ ಭಿನ್ನವಾಗಿ ನಿಲ್ಲುತ್ತವೆ.

‘ಹೈದರಾಲಿ’ ಮತ್ತು ‘ಟಿಪ್ಪು ಸುಲ್ತಾನ್‌’ ನಾಟಕಗಳು ಮೈಸೂರು ಇತಿಹಾಸದ ಆಕರ್ಷಕ ಮತ್ತು ಸಂಘರ್ಷಾತ್ಮಕ ಕಾಲಘಟ್ಟದ ಅವಧಿಯನ್ನು ಕಣ್ಮುಂದೆ ತಂದು, ಇವರಿಬ್ಬರ ಕಾಲಘಟ್ಟದ ನಂತರದ ಚಿತ್ರಣವನ್ನೂ ಮುಮ್ಮಡಿ ಕೃಷ್ಣರಾಜರ ಅಧಿಕಾರದ ಕಥೆಯನ್ನೂ ದೃಶ್ಯರೂಪದಲ್ಲಿ ಮುಂದಿಡುತ್ತವೆ. ಜೊತೆಗೆ ಹೈದರಾಲಿ, ಟಿಪ್ಪು ಸುಲ್ತಾನರಿಗೆ ದಿವಾನರಾಗಿದ್ದ ಪೂರ್ಣಯ್ಯ ಅವರ ‘ಪೂರ್ಣವ್ಯಕ್ತಿತ್ವ’ದ ದರ್ಶನವನ್ನೂ ಮಾಡಿಸುತ್ತವೆ. ಸಂಸ, ತರಾಸು ಅವರಂತಹ ಪೂರ್ವಸೂರಿಗಳ ದಾರಿಯಲ್ಲಿ ಶಂಕರ್‌ ಅವರೂ ತುಸುದೂರ ಸಾಗಿರುವುದಕ್ಕೆ ಈ ನಾಟಕಗಳಲ್ಲಿ ಕುರುಹುಗಳು ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT