ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಲೋಕನ: ಬಹುತ್ವದ ಅನನ್ಯತೆ ಸಾರುವ ಕಥೆಗಳು

Last Updated 30 ಜುಲೈ 2022, 19:32 IST
ಅಕ್ಷರ ಗಾತ್ರ

ಕಥೆ, ನಾಟಕ, ಅನುವಾದ, ಮಕ್ಕಳ ಸಾಹಿತ್ಯ ಸೇರಿದಂತೆ ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಎಫ್‌.ಎಂ. ನಂದಗಾಂವ ಅವರ ಇತ್ತೀಚಿನ ಕೃತಿ ‘ಯಡ್ಡಿ ಮಾಮಾ ಬರಲಿಲ್ಲ...’ ಕಥಾಸಂಕಲನ. ಈ ಸಂಕಲನದ ಹತ್ತು ಕಥೆಗಳು ಸರಳಶೈಲಿ ಹಾಗೂ ನವಿರುತನದಿಂದ ಗಮನಸೆಳೆಯುತ್ತವೆ.

ನಂದಗಾಂವ್‌ ಸುದ್ದಿಮನೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದವರು. ಪಳಗಿದ ಪತ್ರಕರ್ತನ ಭಾಷೆಯನ್ನು ಅವರ ಕಥೆಗಳಲ್ಲಿ ಕಾಣಬಹುದು.

ಸಂಕಲನದ ಶೀರ್ಷಿಕೆಯೂ ಆದ ‘ಯಡ್ಡಿ ಮಾಮಾ ಬರಲಿಲ್ಲ...’ ಕಥೆಯನ್ನು ಕಥೆಗಾರರ ಶಕ್ತಿ ಹಾಗೂ ಅವರೇ ಸೃಷ್ಟಿಸಿಕೊಂಡಿರುವ ಚೌಕಟ್ಟಿನ ಮಿತಿಗೆ ಉದಾಹರಣೆಯಾಗಿ ಗಮನಿಸಬಹುದು. ಬೆಂಗಳೂರಿನಲ್ಲಿ ನೆಲೆಸಿರುವ ನಿರೂಪಕ ಗೋವಾಕ್ಕೆ ಹೋಗಿಬರುವಷ್ಟರಲ್ಲಿ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆಯಾಗಿ, ಮುಖ್ಯಮಂತ್ರಿಯ ಬದಲಾವಣೆಯಾಗಿದೆ. ಆ ಬದಲಾವಣೆ, ಗೋವಾದಿಂದ ಊರಿಗೆ ಮರಳುವ ನಿರೂಪಕನ ವೈಯಕ್ತಿಕ ಜೀವನದ ಮೇಲೆಯೂ ಪ್ರಭಾವ ಬೀರಿದೆ. ನಿರೂಪಕನ ಮನೆಗೆ ಹೊಸ ಮುಖ್ಯಮಂತ್ರಿ ಸಂಗಪ್ಪ ಯಡ್ರಾಮಿ ಭೇಟಿ ಕೊಡುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಡಿದೆ. ಈ ಸುದ್ದಿಯನ್ನು ಹೇಗೆ ಅರ್ಥೈಸಿಕೊಳ್ಳುವುದೆಂದು ತಿಳಿಯದೆ ನಿರೂಪಕ ಗಲಿಬಿಲಿಗೊಳ್ಳುತ್ತಾನೆ. ಮಗಳ ಬಾಯಿಂದ ಹೊರಟ, ಅಕ್ಕನನ್ನು ನೋಡಲು ಬರುವ ಯಡ್ಡಿ ಮಾಮನ ಹೆಸರನ್ನು ನೆರೆಹೊರೆಯವರು ಮುಖ್ಯಮಂತ್ರಿಯೆಂದು ತಿಳಿದಿದ್ದರಿಂದ ಉಂಟಾದ ಗೊಂದಲವಿದು ಎನ್ನುವುದು ತಿಳಿಯುವುದರೊಂದಿಗೆ ಕಥೆ ಕೊನೆಗೊಳ್ಳುತ್ತದೆ. ಸಮಕಾಲೀನ ರಾಜಕೀಯ ವಿದ್ಯಮಾನಗಳ ವಿಡಂಬನೆಯನ್ನು ಸೂಚ್ಯವಾಗಿ ಒಳಗೊಂಡಿರುವ ಈ ಕಥೆಯನ್ನು ಲಲಿತ ಪ್ರಬಂಧದದ ರೂಪದಲ್ಲೂ ಓದಬಹುದು.

‘ಯಡ್ಡಿ ಮಾಮಾ ಬರಲಿಲ್ಲ...’ ಕಥೆ, ಜನಸಾಮಾನ್ಯರ ಬದುಕು ಹಾಗೂ ಸಮಕಾಲೀನ ರಾಜಕಾರಣದ ನಡುವಿನ ಸಂಬಂಧ–ಸಂಘರ್ಷಗಳ ಶೋಧ ಆಗಬಹುದಿತ್ತು. ಆದರೆ, ಓದುಗನ ಮುಖದಲ್ಲಿ ನಗೆಯರಳಿಸುವುದಷ್ಟೇ ಕಥೆಗಾರರ ಉದ್ದೇಶವಾಗಿದ್ದು, ಕಥೆ ತಂತಾನೇ ಮಹತ್ವಾಕಾಂಕ್ಷೆಯನ್ನು ಬಿಟ್ಟುಕೊಟ್ಟಿದೆ. ಕಥೆಯನ್ನು ಓದುಗನಿಗೆ ನೇರವಾಗಿ ದಾಟಿಸುವ ನಿಟ್ಟಿನಲ್ಲಿ ಕಥೆಗಾರರು ಯಶಸ್ವಿಯಾಗಿದ್ದಾರೆ. ಆದರೆ, ಕಥೆಯೊಂದರ ಹಲವು ಆಯಾಮಗಳನ್ನು ಶೋಧಿಸುವುದು ಅವರ ಆದ್ಯತೆಯಾಗಿಲ್ಲ. ‘ಸಿ ಸಿ ಟೀವಿ ತಂದ ಫಜೀತಿ’ ಕಥೆ ಕೂಡ ಸಮಕಾಲೀನ ವಸ್ತುವನ್ನೊಳಗೊಂಡಿದ್ದರೂ, ಲಘುವಾದ ಪ್ರಸಂಗವೊಂದರ ನಿರೂಪಣೆಗೆ ತನ್ನನ್ನು ಸೀಮಿತವಾಗಿಸಿಕೊಂಡಿದೆ.

‘ಪಾದ್ರಿಯ ಪ್ರಸಂಗ ಮತ್ತು ಅಜ್ಜಿ ಆಗ್ನೇಸಮ್ಮ’ ಸಂಕಲನದ ಉತ್ತಮ ಕಥೆಗಳಲ್ಲೊಂದು. ಉಗುರಿಗೆ ಬಣ್ಣ ಬಳಿದುಕೊಂಡ ಅಜ್ಜಿಯನ್ನು ಹಗುರವಾಗಿ ಕಾಣುವ ಪಾದ್ರಿ, ತಮ್ಮ ತಾಯಿಯೊಂದಿಗಿನ ಒಡನಾಟದಲ್ಲಿ ತಮ್ಮ ತಪ್ಪುಗ್ರಹಿಕೆಯನ್ನು ತಿಳಿಯಾಗಿಸಿಕೊಳ್ಳುತ್ತಾರೆ. ಸಾರ್ವಜನಿಕ ಸಭೆಯಲ್ಲಿ ತಾವೆಸಗಿದ ತಪ್ಪಿಗೆ ಅಜ್ಜಿಯ ಕ್ಷಮೆಯನ್ನೂ ಕೋರುತ್ತಾರೆ. ಧರ್ಮದ ಜಿಗುಟುತನ, ಆ ಜಿಗುಟುತನವನ್ನು ತಿಳಿಯಾಗಿಸುವ ಜೀವನಪ್ರೀತಿ, ಮಾಗಿದ ಬದುಕಿನ ಸೌಂದರ್ಯಗಳನ್ನು ಕಾಣಿಸುವ ಈ ಕಥೆ ಓದುಗರ ಮನಸ್ಸಿಗೆ ತಾಕುವಂತಿದೆ.

ನಂದಗಾಂವ್‌ ಅವರ ಕಥೆಗಳ ಮಹತ್ವ ಇರುವುದು, ಆ ಕಥೆಗಳು ಕಾಣಿಸುವ ಕ್ರಿಶ್ಚಿಯನ್‌ ಸಮುದಾಯದ ದೈನಿಕವನ್ನು ಚಿತ್ರಿಸುವ ವಿವರಗಳಲ್ಲಿ. ಈ ವಿವರಗಳು ಕಥೆಯ ದೇಹವಾಗಿ ಬಹುಸಹಜವಾಗಿ ಮೂಡಿರುವುದರಲ್ಲಿ ಕಥೆಗಾರರ ಪ್ರತಿಭೆ ವಿಶೇಷವಾಗಿ ಕೆಲಸ ಮಾಡಿದೆ. ಕ್ರಿಶ್ಚಿಯನ್‌ ಧರ್ಮೀಯರ ನಿತ್ಯದ ಬದುಕಿನ ವಿವರಗಳು, ಚರ್ಚ್‌ನಲ್ಲಿನ ಆಚರಣೆ–ನಡವಳಿಕೆಗಳನ್ನು ಈ ಕಥೆಗಳು ಸೊಗಸಾಗಿ ಪರಿಚಯಿಸುತ್ತವೆ. ಸಮುದಾಯದೊಳಗೆ ಬಳಕೆಯಾಗುವ ಪದಗಳಿಗೆ ಕನ್ನಡದ ಪರ್ಯಾಯಗಳನ್ನು ಕಟ್ಟಿಕೊಟ್ಟಿರುವ ಪ್ರಯತ್ನವೂ ಸೊಗಸಾಗಿದೆ. ಧಾರ್ಮಿಕ ವಿವರಗಳು, ಐತಿಹ್ಯಗಳು ಹಾಗೂ ಚಾರಿತ್ರಿಕ ಸಂಗತಿಗಳು ಬಹು ಸಹಜವಾಗಿ ಮಿಳಿತಗೊಂಡು ಕಥೆಯ ರೂಪ ತಳೆದಿರುವುದಕ್ಕೆ ಉದಾಹರಣೆಯಾಗಿ, ‘ಸಂತ ಫಿಲೋಮಿನಾ ಮತ್ತು ಪರದೇಶಪ್ಪನ ಗದ್ದುಗೆ’ ಕಥೆಯನ್ನು ಗಮನಿಸಬಹುದು.

‘ಹಲವು ಕನ್ನಡಂಗಳು’ ಎನ್ನುವುದು ಕನ್ನಡ ನುಡಿಯ ವೈವಿಧ್ಯಕ್ಕೆ ಸಂಬಂಧಿಸಿದ ಮಾತಷ್ಟೇ ಅಲ್ಲ; ಅದು ಕನ್ನಡನಾಡಿನೊಳಗಿನ ಸಮುದಾಯಗಳ ಬಹುತ್ವವನ್ನು ಸೂಚಿಸುವಂತಹದ್ದೂ ಹೌದು. ಆ ಬಹುತ್ವದ ಅನನ್ಯತೆಯ ರೂಪದಲ್ಲೂ ನಂದಗಾಂವ್‌ ಅವರ ಕಥೆಗಳಿಗೆ ಮಹತ್ವವಿದೆ.

ಕೃತಿ: ಯಡ್ಡಿ ಮಾಮಾ ಬರಲಿಲ್ಲ..

ಲೇ: ಎಫ್‌.ಎಂ. ನಂದಗಾಂವ

ಪ್ರ: ಪೆನ್ಸಿಲ್‌ ಬುಕ್‌ಹೌಸ್‌, ಮೈಸೂರು.

ಸಂ: 8762414676

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT