ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧವನದಲ್ಲಿ ಹೊಸ ಬೆಳದಿಂಗಳು

Last Updated 17 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಬುದ್ಧಚರಣ
ಲೇ:
ಎಚ್‌.ಎಸ್‌. ವೆಂಕಟೇಶಮೂರ್ತಿ
ಪ್ರ: ಅಂಕಿತ ಪುಸ್ತಕ, ಬೆಂಗಳೂರು
ದೂ: 080 26617100, 2661775
***
ರೋಗ, ಮುಪ್ಪು, ಸಾವುಗಳನ್ನು ಕಂಡ ರಾಜಕುವರ, ದುಃಖದ ಮೂಲವನ್ನು ಹುಡುಕುತ್ತಾ ಹೊರಟು ಬುದ್ಧನಾದ. ಸಾವಿನ ಸುದ್ದಿಗಳೊಂದಿಗೆ ಬೆಳಗು ಇರುಳುಗಳನ್ನು ಕಳೆಯುತ್ತಿರುವ ನಾವು ಏನನ್ನು ಹುಡುಕುವುದು? ಏನನ್ನು ಪಡೆಯುವುದು? ಪುರಾಣ ಮತ್ತು ಇತಿಹಾಸದ ಮೂಲಕ ಬದುಕಿನ ನಶ್ವರತೆಯನ್ನು ಬಗೆಬಗೆಯಾಗಿ ನಾವು ಕಂಡಿದ್ದರೂ, ಆ ನಶ್ವರತೆಯಿದೀಗ, ‘ರೋಗ ಕೊಲ್ಲುವುದೆಮ್ಮ ಆರೋಗ್ಯ ಮದವನ್ನ, ಸಾವು ಕೊಲ್ಲುವುದೆಮ್ಮ ಜೀವಿತದ ಮದವನ್ನ’ ಎನ್ನುವಂತಹ ಕೊರೊನಾ ಕಾಲಘಟ್ಟದಲ್ಲಿ ನೇರವಾಗಿ ನಮ್ಮ ಅನುಭವಕ್ಕೆ ಬರುತ್ತಿದೆ. ಬದುಕಿನ ಕುರಿತಾದ ನಂಬಿಕೆಗಳನ್ನು ಮರುವಿಮರ್ಶೆಗೆ ಒಳಪಡಿಸಲು ವರ್ತಮಾನ ಒತ್ತಾಯಿಸುತ್ತಿರುವ ಸಂದರ್ಭದಲ್ಲಿ, ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ‘ಬುದ್ಧಚರಣ’ವನ್ನು ಸಹೃದಯರ ಮುಂದಿಟ್ಟಿದ್ದಾರೆ; ಎಲ್ಲ ಕಾಲದ ತಲ್ಲಣಗಳಿಗೆ ಬುದ್ಧನೇ ಮುಲಾಮು ಎನ್ನುವಂತೆ.

ಕನ್ನಡದ ಓದುಗರಿಗೆ ಬುದ್ಧ ಹೊಸಬನಲ್ಲ. ಸಿದ್ಧಾರ್ಥ ಬುದ್ಧನಾಗುವ ಹಾದಿಗೆ ಮುನ್ನುಡಿಯಾದ ‘ಮಹಾರಾತ್ರಿ’ಯನ್ನು ಕಾಣಿಸಿದ ಕುವೆಂಪು, ‘ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ’ ಎನ್ನುವ ಉದ್ಗಾರದ ಮೂಲಕ ಸಹೃದಯರ ಎದೆಯಲ್ಲೂ ಕಾವ್ಯಕ್ಷೋಭೆಯನ್ನು ಬಡಿದೆಬ್ಬಿಸಿದ ಬೇಂದ್ರೆ, ಮೋಕ್ಷವನ್ನು ಹುಡುಕುತ್ತ ಹೊರಟ ವ್ಯಕ್ತಿ ಪ್ರೀತಿಯ ಬಂಧನಕ್ಕೆ ಸಿಲುಕಿದ ಜಾದೂವನ್ನು ವಿಶ್ಲೇಷಿಸಿದ ಲಂಕೇಶ್‌, ಅಂಗುಲೀಮಾಲನ ಹೃದಯದ ಕಾಠಿಣ್ಯವನ್ನು ಕರಗಿಸಿ ಪ್ರೇಮದ ಹಣತೆ ಬೆಳಗಿದ ಬೆರಗನ್ನು ಗುರುವಿನ ಮಂದಹಾಸದಷ್ಟೇ ಕೋಮಲವಾದ ಕನ್ನಡದಲ್ಲಿ ಕಟೆದುಕೊಟ್ಟ ‘ಪ್ರೇಮಭಿಕ್ಷು’ವಿನ ಪ್ರಭುಶಂಕರ್‌ – ಇವರೆಲ್ಲ ಬುದ್ಧನನ್ನು ಕನ್ನಡದ ಓದುಗರಿಗೆ ಆಪ್ತವಾಗಿಸಿದ ಪ್ರಮುಖರು. ಗೋವಿಂದ ಪೈ, ಜಿ.ಪಿ. ರಾಜರತ್ನಂ, ಶಿವರಾಮ ಕಾರಂತ ಸೇರಿದಂತೆ ಕನ್ನಡದ ಬರಹಗಾರರನ್ನು ಬುದ್ಧ ಮತ್ತೆ ಮತ್ತೆ ಸೆಳೆಯುತ್ತಿರುವ ಅಯಸ್ಕಾಂತ. ಈಗ ಎಚ್ಚೆಸ್ವಿ ಅವರ ಪಾಳಿ; ಬುದ್ಧಚರಣದ ಹೊಸಗಾನ.

ಬುದ್ಧನ ಬದುಕನ್ನು ಕಾವ್ಯವಾಗಿಸುವುದು ಎಚ್ಚೆಸ್ವಿ ಅವರ ದಶಕದ ಕನಸು. ಸಂಗಾತಿಯ ಅಗಲಿಕೆಯಿಂದ ವಿಷಣ್ಣಗೊಂಡ ಕವಿಗೆ, ಬುದ್ಧಚರಣದ ಧ್ಯಾನಕ್ಕೆ ಅಗತ್ಯವಾದ ಮನಸ್ಥಿತಿಯನ್ನು ಕೊರೊನಾ ಸಂದರ್ಭ ತಂದುಕೊಟ್ಟಿದೆ. ‘ಮನಸ್ಸಿನ ಲಾಕ್‌ಡೌನ್‌’ಗೆ ಬಿಡುಗಡೆಯ ರೂಪದಲ್ಲಿ ಕವಿಗೆ ಬುದ್ಧ ಕಾಣಿಸಿದ್ದಾನೆ – ಅಳುವಿನ ಕಡಲ ನೊರೆತೆರೆ ನಡುವೆ ತೇಲಿದ ಆಲದೆಲೆಯಂತೆ; ಗುರುವಿನ ಕರುಣಾಪೂರ್ಣ ನಗೆಯೇ ನಮ್ಮನ್ನು ಪೊರೆವ ತಿಂಗಳ ತೆಪ್ಪದಂತೆ.

ಕನ್ನಡದಲ್ಲಿ ಜನಪ್ರಿಯಗೊಂಡ ಬುದ್ಧಕೃತಿಗಳ ಕೇಂದ್ರದಲ್ಲಿ ಮಹಾಗುರುವಿನ ಬದುಕಿನ ಯಾವುದಾದರೊಂದು ಘಟ್ಟವೋ ಸಂಗತಿಯೋ ಕೇಂದ್ರವಾಗಿದ್ದರೆ, ಎಚ್ಚೆಸ್ವಿ ಇಡೀ ಬುದ್ಧನ ಬದುಕನ್ನೇ ಕಾವ್ಯವಾಗಿಸಿದ್ದಾರೆ. ಆ ಕಾವ್ಯದ ಹೆಣಿಗೆಗೆ ಅವರು ಆರಿಸಿಕೊಂಡಿರುವುದು ಲಲಿತ ಛಂದೋಲಯವನ್ನು – ಚೌಪದಿ, ಅಷ್ಟಪದಿ, ಸುನೀತಗಳ ಬಂಧವನ್ನು. ಎಚ್ಚೆಸ್ವಿ ಅವರಿಗೆ ಬಹುಪ್ರಿಯವಾದ ಹಕ್ಕಿ ಹಾರುವಿಕೆಯ ವಿಲಾಸ, ದೀಪಸಂಕಲ್ಪ ಹಾಗೂ ತೊರೆಯ ಶಾಂತ ಹರಿವು ಬುದ್ಧಕಾವ್ಯದ ಪಯಣದಲ್ಲೂ ಇದೆ. ಎಂಟು ಕಾಂಡಗಳಲ್ಲಿ ಬುದ್ಧನ ಭವಭವಾಂತರಗಳಿಂದ ಸಿದ್ಧಾರ್ಥ ಬುದ್ಧನಾಗಿ, ಲೋಕದ ಶೋಕಕ್ಕೆ ಮದ್ದು ಹುಡುಕುತ್ತ, ಎದೆಯಿಂದ ಎದೆಗೆ ಪ್ರೇಮದ ಬೆಳಕು ಹಂಚುತ್ತ ಸಾಗುವ ಕಥೆಯನ್ನು ಎಚ್ಚೆಸ್ವಿ ಚಿತ್ರಿಸಿದ್ದಾರೆ.

ಹಳತನ್ನು ಮರು ಒರೆಯುವ ಕವಿಗಳು ತಮ್ಮ ನಿರೂಪಣೆ ಸಮಕಾಲೀನವಾಗಬೇಕೆಂದು ಹಂಬಲಿಸುವುದಕ್ಕೆ ಪಂಪನಿಂದ ಕುವೆಂಪುವರೆಗೆ ಅನೇಕ ಉದಾಹರಣೆಗಳು ಕನ್ನಡ ಸಾಹಿತ್ಯ ಪರಂಪರೆಯಲ್ಲಿವೆ. ಶಿಲ್ಪದ ದೃಷ್ಟಿಯಿಂದ ಬಹು ಚೆಲುವಾದ, ಬುದ್ಧನ ಅಗತ್ಯವನ್ನು ಈ ತಲೆಮಾರಿಗೆ ಮನಗಾಣಿಸುವ ದೃಷ್ಟಿಯಿಂದಲೂ ಮುಖ್ಯವಾದ ‘ಬುದ್ಧಚರಣ’ ಕೃತಿಯಲ್ಲಿ, ಕಥೆಯನ್ನು ಸಮಕಾಲೀನಗೊಳಿಸುವ ಪ್ರಜ್ಞಾಪೂರ್ವಕ ಹಂಬಲ ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಬುದ್ಧನ ನಗುವಿನ ಹೆಸರಿನ ಬಾಂಬು, ಧರ್ಮಗುರುಡಿನಲ್ಲಿ ಮಣ್ಣಾದ ಬುದ್ಧಮೂರ್ತಿಗಳು, ಅಂಬೇಡ್ಕರ್‌ ಅಪ್ಪಿಕೊಂಡ ಬುದ್ಧ – ಇದಾವುದನ್ನೂ ‘ಬುದ್ಧಚರಣ’ ನೆನಪಿಸುವುದಿಲ್ಲ. ಆದರೆ, ಲೋಕದ ದಂದುಗಗಳ ಬಗ್ಗೆ ಚಿಂತಿಸಿದ, ಲೋಕದ ಶೋಕಕ್ಕೆ ಉತ್ತರ ಹುಡುಕಲು ಹೊರಟ ಬುದ್ಧನ ಬದುಕನ್ನು ಧ್ಯಾನಿಸಲು ಹೊರಟಾಗ, ಕವಿಗರಿವಿಲ್ಲದೆಯೇ ಸುತ್ತಮುತ್ತಲಿನ ಒತ್ತಡಗಳು ಕಾವ್ಯದನುಡಿಗಳಾಗಿವೆ. ಆ ಒಳಗುದಿಯ ಕುರಿತು ಕವಿ ಹೇಳುವುದು ಹೀಗೆ:

ಬೇಡವೆಂದರು ಕಾಡುವುದು ಬಾಹ್ಯ ಜಗತ್ತು,
ಸುಮ್ಮನಿರಗೊಡದೆ ಒಳಗನ್ನು ಯಾವಾಗಲೂ.
ಹೀಗೆ ಏಕಾಂತಕ್ಕೆ ಲೋಕಾಂತದಾವರಣ.
ಬಿಡಿಸಲಾಗದ ಬಿಡಿಸಬಾರದಂಥಾ ಒಂದು
ಬೆಸುಗೆ. ಅಸುಕೆಯು ಹೇಗೆ ಸುಖವಾಗಿ ಇದ್ದೀತು
ಬಿಸಿಲ ಚಾವಟಿ ಬೆನ್ನ ಮೇಲೆ ಬಾರಿಸುವಾಗ.
ಇದು ಸಹಜ. ಹೊರಗಬಿಟ್ಟೊಳಗಿಲ್ಲ, ಒಳಗನ್ನು
ಒಳಗೊಳ್ಳದಿರುವ ಹೊರಗಿಲ್ಲ ಈ ಬದುಕಲ್ಲಿ.

ಬುದ್ಧನ ಹುಡುಕಾಟ ಅವನ ಕಾಲದ ಸಂಕಟಗಳಿಗೆ ಉತ್ತರವಷ್ಟೇ ಆಗಿರಲಿಲ್ಲ. ಅದು ಎಲ್ಲ ಯುಗಗಳ ಹುಡುಕಾಟ. ಆ ಮಾರ್ಗವಾದರೂ ಎಂತಹದ್ದು? ಅದು ‘ಮೇಲು ಕೀಳುಗಳಿಲ್ಲ, ಭೇದ ಭಾವಗಳಿಲ್ಲ’ದಂತಹದ್ದು – ‘ಎಲ್ಲರಿಗು ತೆರೆದಿರಲು ಬುದ್ಧ ಕಾರುಣ್ಯ ಮತ’. ‘ಏಣಿಯಿರದ ಸಮ ಪಾತಳಿ’. ಗುರು ತೋರಿದ ದಾರಿಯಲ್ಲಿ, ಹಲವು ಹನ್ನೊಂದು ಕುಲದವರು ಬುದ್ಧಚರಣವ ಹಿಡಿದು ಮುಕ್ತರಾಗುತ್ತಾರೆ. ಆಗ, ‘ಕಾರುಣ್ಯವರ್ಷ ಸುರಿಯುವುದು ಎಲ್ಲಾ ಕಡೆಗು / ಇಬ್ಬನಿಯ ಮುತ್ತು ಪ್ರತಿಯೊಂದು ಹುಲ್ಲಿನ ಹೆಡೆಗು’ ಎನ್ನುತ್ತಾರೆ ಕವಿ.

ಚಂದ್ರಿಕೆಯ ವರ್ಷಕ್ಕೆ ಕರಗಿದ ಶಿಲೆಯಂತೆ, ರವಿಯ ಕರಸ್ಪರ್ಶಕೆ ಅರಳಿದ ಎದೆಯ ಹೂವಿನಂತೆ ಬುದ್ಧನ ಸಮ್ಮುಖದಲ್ಲಿ ಅಂಗುಲೀಮಾಲ ನಿಂತಿದ್ದಾನೆ. ‘ಸ್ವೀಕರಿಸುವೆನು ನಾನು ಜೀವಹತ್ಯಾ ವಿರತಿ, ಕಳವು ಮಾಡೆನು ಇನ್ನು, ವ್ಯಭಿಚಾರ ಮಾಡೆನು, ಅನೃತವ ನುಡಿಯೆನು, ಮತ್ತು ಬರಿಸುವ ವಸ್ತುಗಳನು ಸ್ವೀಕರಿಸೆನು’ ಎಂದು ಪ್ರತಿಜ್ಞಾವಿಧಿಗೆ ಬದ್ಧನಾಗುತ್ತಾನೆ. ಆ ಸಂಕಲ್ಪ ನಮ್ಮದೂ ಆದಾಗ ಬದುಕು ಸುಂದರವಾಗುತ್ತದೆ ಎನ್ನುವುದು ‘ಬುದ್ಧಚರಣ’ದ ಆಶಯ. ಅಂಗುಲೀಮಾಲನ ಹೃದಯದ ಬಗ್ಗಡವೇನೋ ಬುದ್ಧಸ್ಪರ್ಶದಿಂದ ತಿಳಿಯಾಯಿತು. ನಾವು?

‘ಮುಟ್ಟಿದ್ದೆಲ್ಲ ಜೀವ ತಳೆಯುವುದಿಲ್ಲ. ಜೀವವಿರಬೇಕು ಕೈಯಲ್ಲಿ. ಮುಟ್ಟುವ ಹಿಂದೆ ಪ್ರೀತಿ ಮಡುಗಟ್ಟಿ ಕಳವಳಿಸುತ್ತ ಇರಬೇಕು’ ಎನ್ನುವ ಕವಿ, ‘ಮುಟ್ಟಿದರೆ ಸಾಕು ಮೇಲೆದ್ದು ನಿಲುವ ಉಮೇದು ಪಾತ್ರಕ್ಕು ಇರಬೇಕು’ ಎಂದು ಉದ್ಗರಿಸುತ್ತಾರೆ. ಅಮೃತಹಸ್ತವೂ ಇಲ್ಲದ, ಆ ಹಸ್ತದ ಸ್ಪರ್ಶಕ್ಕೆ ಹಾತೊರೆವ ಪಾತ್ರವೂ ಇಲ್ಲದ ಸಂದರ್ಭ ಇಂದಿನದು. ‘ಅಂತಃಕರಣವಿಟ್ಟು ಅಕ್ಕರೆಯಿಂದ ಮುಟ್ಟುವುದೆ ಮಾನವತೆ. ಹೊಲೆಮಡಿಗೆ ಹಿಡಿಮದ್ದು’ ಎನ್ನುವುದು, ಈ ಹೊತ್ತು ನಮ್ಮೆಲ್ಲರ ಹೃದಯವನ್ನು ಹೊಗಬೇಕಾದ ಮಾತು.

‘ಪ್ರೀತಿ ದೊಡ್ಡದು. ಮೈತ್ರಿ ಅದಕಿಂತ ಹಿರಿದಾದ್ದು. ಇರಲಿ ಮೈತ್ರಿಯು ಅಖಿಲ ಲೋಕ ವಿನ್ಯಾಸದಲಿ’ ಎನ್ನುವ ಬುದ್ಧನ ಮಾತು ಕವಿಯ ಆಶಯವೂ ಹೌದು.

ಬುದ್ಧ, ಜಿನ, ಏಸು, ಪೈಂಗಬರ್, ಬಸವ, ಗಾಂಧಿ, ಅಂಬೇಡ್ಕರ್‌ – ಇವರೆಲ್ಲರ ನಂತರವೂ ಜಗತ್ತಿನ ಕ್ಷೋಭೆಗಳು ಹಾಗೆಯೇ ಉಳಿದಿವೆ; ಜಗದ ಬೆಳಕಿನ ಬಾಯಾರಿಕೆ ಹಾಗೆಯೇ ಉಳಿದಿದೆ. ಆದರೆ, ‘ಹಠಹಿಡಿದು ನಡೆಸುತಿದೆಯೋ ದೀಪ ಚಳುವಳಿಯ!’ ಎನ್ನುವಂತೆ ಪ್ರಯತ್ನಗಳು ನಿಂತಿಲ್ಲ. ‘ಹಾಸಬಾರದೆ ಕತ್ತಲೆದೆಯಲ್ಲಿ ಯಾವನಾದರೂ ತೂರು ಬೆಳಕಿನ ಮಹಾಮಾರ್ಗವನು?’ ಎನ್ನುವ ಹಂಬಲಕ್ಕೆ ತುದಿಮೊದಲಿಲ್ಲ. ಆ ಹಂಬಲದ ಹೊಸ ಫಸಲು ‘ಬುದ್ಧಚರಣ’.

ಬದುಕಿನ ನಶ್ವರತೆಯ ಅನುಭವ ಕಣ್ಣಿಗೆ ಕಾಣಿಸುತ್ತಿರುವ, ಮನಸ್ಸನ್ನು ಕಂಗೆಡಿಸುತ್ತಿರುವ ಸಂದರ್ಭ ಇಂದಿನದು. ಕೊರೊನಾ ಮಾತ್ರವಲ್ಲ – ನಮ್ಮ ನಡವಳಿಕೆಗಳೂ ವೈರಸ್‌ ರೂಪ ತಾಳಿ ಸಾಮಾಜಿಕ ಕ್ಷೋಭೆಗೆ ಕಾರಣವಾಗಿರುವ ವರ್ತಮಾನವಿದು. ಈ ಸಂಕಟದ ಸಂದರ್ಭವೇ ‘ಬೀರುವನು ಬೆಳದಿಂಗಳನು ಬಿಸಿಲ ತಾನುಂಡು’ ರೂಪದ ಬುದ್ಧನನ್ನು ನಮಗೆ ಇನ್ನಷ್ಟು ಸನಿಹಗೊಳಿಸುವಂತಿದೆ.

ಬುದ್ಧಚರಣದ ಕವಿ ಉದ್ಗರಿಸುತ್ತಾರೆ:
ನೆಲದೊಡಲಲ್ಲಿ ಸುಕ್ಕುಗಟ್ಟಿದ ಬೀಜ ಯಾ
ರೊಲವಿಗೋ ಯುಗದ ಭಾಗ್ಯಕೋ
ನೆಲದಿಂದ ತಲೆಯೆತ್ತಿ ಮೇಲೆ ಕುಡಿಯೊಡೆದು
ಎಳೆದುಟಿ ತೆರೆಯುವುದೊಮ್ಮೆ.

ಯುಗದ ಭಾಗ್ಯದಿಂದ ಅವತರಿಸಿದ ಬುದ್ಧನಂತೆ, ಆತನ ಕುರಿತ ಸಾಹಿತ್ಯ ನುಡಿಯ ಭಾಗ್ಯದಿಂದ ರೂಪುಗೊಳ್ಳುತ್ತದೆ. ಹಾಗೆ ಕನ್ನಡದಲ್ಲಿ ರೂಪುಗೊಂಡ ಬುದ್ಧಕೃತಿ ಪರಂಪರೆಯ ಸಾಲಿನ ಹೊಸ ಹಣತೆ – ‘ಬುದ್ಧಚರಣ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT