ಸೋಮವಾರ, ಜೂನ್ 1, 2020
27 °C

ಸಂಕೀರ್ಣ ವಿಚಾರಗಳ ಸಮರ್ಥ ಅನುವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಓಶೋ ಪುಸ್ತಕಗಳ ಹಲವು ಕನ್ನಡ ಅನುವಾದಗಳು ಬಂದಿವೆ, ಈಗಲೂ ಬರುತ್ತಿವೆ. ಕನ್ನಡದ ಎಷ್ಟು ಲೇಖಕರನ್ನು ಓಶೋ ಪ್ರಭಾವಿಸಿದ್ದಾರೆ ಎನ್ನುವುದು ಸ್ಪಷ್ಟ ಇಲ್ಲವಾದರೂ. ಕುತೂಹಲ ಕೆರಳಿಸುವಷ್ಟು ಸಂಖ್ಯೆಯಲ್ಲಿ ಕನ್ನಡದಲ್ಲಿ  ಓಶೋ ಓದುಗರಿದ್ದಾರೆ ಎನ್ನವುದು ನಿಜ. Creativity- Unleashing the Force Within ಎನ್ನುವ ಪುಸ್ತಕವನ್ನು ‘ಸೃಜನಶೀಲತೆ– ಅಂತರ್ಗತವಾಗಿ ಹುದುಗಿರುವ ಬಲಗಳ ಸಡಿಲಿಸುವಿಕೆ’ ಎನ್ನುವ ಶೀರ್ಷಿಕೆಯೊಂದಿಗೆ ಲೇಖಕಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಅನುವಾದದ ಭಾಷೆ, ನಿರೂಪಣೆ ಎರಡೂ ಸರಳವಾಗಿದೆ. ಓಶೋ ತತ್ವಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಹೀಗೆ ಸರಳವಾಗಿ ಅನುವಾದಿಸುವುದು ಕಷ್ಟ.

ಹೊಸ ರೀತಿಯ ಮನುಷ್ಯನ ಹುಟ್ಟಿಗೆ ಬೇಕಾದ ಪರಿಸ್ಥಿತಿಗಳನ್ನು ಸೃಷ್ಟಿಸಲು ತಾನು ಸಹಾಯ ಮಾಡುತ್ತಿದ್ದೇನೆ ಎಂದು ನಂಬಿದಾತ ಓಶೋ. ಈ ಕೃತಿಯಲ್ಲಿ ಸೃಜನಶೀಲತೆಯ ಆಳ, ಅಗಲ, ಹರಿವು, ಸೃಷ್ಟಿ ಎಲ್ಲವನ್ನೂ ಒಂದು ಕಣ್ಣೋಟಕ್ಕೆ ಸಿಕ್ಕುವಂತೆ ಅವರು ವಿಷದೀಕರಿಸಿದ್ದಾರೆ. ಹೀಗೆ ವಿಚಾರಗಳನ್ನು ಮನದಟ್ಟು ಮಾಡುವಾಗ ಸಿಗ್ಮಂಡ್‌ ಫ್ರಾಯ್ಡ್‌, ನೀಶೆ, ಬುದ್ಧ, ಸಾಕ್ರೆಟಿಸ್‌, ಶಹಜಹಾನ್‌ ಎಲ್ಲರನ್ನೂ ಎಳೆದುತಂದಿದ್ದಾರೆ. ಅಲ್ಲಲ್ಲಿ ಝೆನ್ ಮತ್ತು ಮುಲ್ಲಾ ನಸರುದ್ದೀನ್‌‌ ಕಥೆಗಳಿಂದ ತತ್ವಜ್ಞಾನವನ್ನು ಕಡ ಪಡೆದಿದ್ದಾರೆ. ಅವೆಲ್ಲವನ್ನು ಬಳಸಿಕೊಂಡೂ ಸ್ವತಂತ್ರ ವಿಚಾರವೊಂದನ್ನು ಮಂಡಿಸುವ ಓಶೋ ಶೈಲಿ ಗಮನಾರ್ಹ. ಸಂಕೀರ್ಣ ವಿಚಾರಗಳನ್ನೂ ಸರಳವಾಗಿ ಮಂಡಿಸುವ ಕಾರಣದಿಂದಾಗಿಯೇ ಓಶೋ ಜಗತ್ತಿನೆಲ್ಲೆಡೆ ಜನಪ್ರಿಯರಾಗಿದ್ದಾರೆ ಅನ್ನಿಸುತ್ತೆ. ಅದನ್ನು ಸಮರ್ಥಿಸುವ ಹಲವು ಅಧ್ಯಾಯಗಳು ಇಲ್ಲಿವೆ. ‘ಕ್ರಿಯೆ ಚಟುವಟಿಕೆಯಲ್ಲ; ಚಟುವಟಿಕೆ ಕ್ರಿಯೆಯಲ್ಲ. ಅವುಗಳ ಸ್ವಭಾವ ಪೂರ್ಣವಾಗಿ ವಿರುದ್ಧವಾದದ್ದು. ಸಂದರ್ಭದ ಅಗತ್ಯಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವುದು ಕ್ರಿಯೆ. ಚಟುವಟಿಕೆಗೆ ಸಂದರ್ಭ ಅಗಣ್ಯ, ಅದು ಪ್ರತಿಕ್ರಿಯೆಯಲ್ಲ. ನೀವು ಅದರಲ್ಲಿ ಎಷ್ಟರಮಟ್ಟಿಗೆ ಪ್ರಕ್ಷುಬ್ಧವಾಗಿ ಬಿಡುವಿರೆಂದರೆ, ಸಂದರ್ಭ ನೀವು ಸಕ್ರಿಯರಾಗಲು ನೆಪ ಮಾತ್ರ’ ಎನ್ನುವ ಓಶೋ ವಿವರಣೆ ಇದಕ್ಕೊಂದು ಉದಾಹರಣೆ.

ಕೆದರು ಓದುಗರು ಹೆಚ್ಚುತ್ತಿರುವ ಈ ಕಾಲದಲ್ಲಿ ಓಶೋ ಅವರ ಬಿಡಿ ‘ಕೋಟ್‌’ಗಳು ಎಲ್ಲೆಂದರಲ್ಲಿ ಕಾಣಸಿಗುತ್ತಿವೆ. ಆದರೆ ಅದಷ್ಟೇ ಓಶೋ ಅಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಈ ರೀತಿಯ ಕೋಟ್‌ಗಳಿಂದ ಓಶೋ ವಿಚಾರಗಳ ತಪ್ಪು ಅರ್ಥೈಸುವಿಕೆಯೇ ಹೆಚ್ಚಾಗುತ್ತಿದೆ. ಉದಾಹರಣೆಗೆ ಈ ಕೃತಿಯಲ್ಲಿ ಒಂದೆಡೆ, ‘ನೀವು ಏನನ್ನಾದರೂ ಪರಿಪೂರ್ಣವಾಗಿ ಮಾಡಲು ಪ್ರಯತ್ನಿಸಿದರೆ ಅದು ಅಪರಿಪೂರ್ಣವಾಗೇ ಉಳಿಯುತ್ತದೆ. ಸಹಜವಾಗಿ ಅದನ್ನು ಮಾಡುತ್ತಾ ಹೋದರೆ ಅದು ಸದಾ ಪೂರ್ಣವಾಗುತ್ತದೆ’ ಎನ್ನುವ ‘ಕೋಟ್‌’ ಇದೆ. ಈ ‘ಕೋಟ್‌’ ಸರಿಯಾಗಿ ಅರ್ಥವಾಗಬೇಕೆಂದರೆ ‘ಪ್ರಕೃತಿಯೊಂದಿಗೆ ಸಾಮರಸ್ಯದಿಂದ ವರ್ತಿಸಿ’ ಎನ್ನುವ ದೀರ್ಘ ಅಧ್ಯಾಯವನ್ನು ನೀವು ಪೂರ್ತಿ ಗ್ರಹಿಸಬೇಕಾಗುತ್ತದೆ.

ಕೃತಿಗೆ ಮುನ್ನುಡಿ ಬರೆದಿರುವ ಎಂ.ಎಸ್‌.ಶಿವಕುಮಾರ್, ‘ಓಶೋನಂತಹ ಚಿಂತಕನನ್ನು ಅನುವಾದಿಸುವುದು ಸುಲಭದ ಕೆಲಸವಲ್ಲ. ಇದಕ್ಕೆ ಸಿದ್ಧತೆ ಬೇಕು. ಅವರ ಹಲವಾರು ಕೃತಿಗಳನ್ನು ಓದಿರಬೇಕು. ಮೇಲ್ಪದರದ ಓದಿನಿಂದ ಅದು ಸಾಧ್ಯವಿಲ್ಲ’ ಎಂದಿರುವುದು ಸರಿಯಾಗಿಯೇ ಇದೆ. ಸುಮಾ ಗೋವಿಂದರಾಜ್‌ ಅವರ ಅನುವಾದ ಮೂಲಕ್ಕೆ ತುಂಬ ಹತ್ತಿರವಿದೆ. ಓಶೋ ಅವರನ್ನು ಅರ್ಥೈಸುವಲ್ಲಿ ಈ ಕೃತಿ ಸಾಕಷ್ಟು ಸಹಕಾರಿಯಾಗಿದೆ. 

***

ಓಶೋ– ಸೃಜನಶೀಲತೆ

ಕನ್ನಡಕ್ಕೆ– ಸುಮಾ ಗೋವಿಂದರಾಜ್‌

ಪ್ರ: ಸಪ್ನ ಬುಕ್‌ ಹೌಸ್‌, ಬೆಂಗಳೂರು

ದೂರವಾಣಿ: 080– 40114455 ಪುಟ 200 ಬೆಲೆ 150

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು