ಲಂಕೇಶ್‌: ಇನ್ನೊಂದು ನೋಟ

7

ಲಂಕೇಶ್‌: ಇನ್ನೊಂದು ನೋಟ

Published:
Updated:

ಎನ್‌.ಕೆ. ಮೋಹನ್‌ರಾಂ ಅವರ ‘ದ ಕ್ಯಾಪಿಟಲ್: ಲಂಕೇಶ್‌ ಪ್ರೈವೆಟ್‌ ಲಿಮಿಟೆಡ್‌’ ಕೃತಿ ಎರಡು ಕಾರಣಗಳಿಂದ ಮುಖ್ಯವಾದುದು. ಲಂಕೇಶರ ವ್ಯಕ್ತಿತ್ವದ ಕೆಲವು ಮುಖಗಳ ವಿಶ್ಲೇಷಣೆ ಮೊದಲ ಕಾರಣವಾದರೆ, ಕನ್ನಡ ಪತ್ರಿಕೋದ್ಯಮದ ಅಧ್ಯಾಯವೊಂದರ ಮಾಹಿತಿಯ ರೂಪ ಹೊಂದಿರುವುದು ಕೃತಿಯ ಎರಡನೇ ವಿಶೇಷ.

ಲಂಕೇಶ್‌ ತಮ್ಮ ವಿಶಿಷ್ಟ ಗ್ರಹಿಕೆ ಹಾಗೂ ಬರವಣಿಗೆಯಿಂದಾಗಿ ಕನ್ನಡ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಪ್ರಸಿದ್ಧರಾದವರು. ಟ್ಯಾಬ್ಲಾಯ್ಡ್‌ ಪತ್ರಿಕೋದ್ಯಮಕ್ಕೆ ಘನತೆ ತಂದ ಖ್ಯಾತಿ ಅವರದು. ಲಂಕೇಶ್‌ ನಂತರದ ತಲೆಮಾರಿನ ಓದುಗರ ಮೇಲೂ ಅವರ ಬರಹಗಳ ಪ್ರಭಾವವಿದೆ. ಅದು ಅವರ ಹಾಗೂ ಅವರ ಬರವಣಿಗೆಯ ಮಹತ್ವವನ್ನು ಸೂಚಿಸುವಂತಿದೆ. ಲಂಕೇಶರ ಈ ಪ್ರಭಾವಳಿಯೇ ಅವರ ಕುರಿತಂತೆ ಹಲವು ಕಥೆಗಳಿಗೂ ಕಾರಣವಾಗಿದೆ. ಕೆಲವು ಕಥೆಗಳು ಲೇಖಕರ ಬಗ್ಗೆ ಹೆಮ್ಮೆ ಮೂಡಿಸಿದರೆ, ಮತ್ತೆ ಕೆಲವು ಇರುಸುಮುರುಸು ಉಂಟುಮಾಡುವಂತಹವು. ಲಂಕೇಶರ ಅಭಿಮಾನಿಗಳಲ್ಲಿ ಹೆಮ್ಮೆ ಹಾಗೂ ಇರುಸುಮುರುಸು ಎರಡನ್ನೂ ಉಂಟುಮಾಡುವ ಗುಣ ಮೋಹನ್‌ರಾಂ ಅವರ ಪುಸ್ತಕಕ್ಕಿದೆ.

ಲಂಕೇಶರ ಜೊತೆಗೆ ನಿಕಟ ಒಡನಾಟ ಹೊಂದಿದ್ದ ಹಾಗೂ ಅವರ ಜೊತೆ ಕೆಲಸ ಮಾಡಿದ್ದ ಮೋಹನ್‌ರಾಂ ಅವರು ತಮ್ಮ ಅನುಭವಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಲಂಕೇಶರ ಬರವಣಿಗೆಯ ಶಕ್ತಿ, ಅವರ ವ್ಯಕ್ತಿತ್ವದಲ್ಲಿನ ವೈರುಧ್ಯಗಳು, ಮೊಂಡುತನ, ಗೆಳೆಯರೊಂದಿಗಿನ ಜಗಳ, ರಾಜಕೀಯದ ಬಗೆಗಿನ ಸೆಳೆತ – ಇವೆಲ್ಲವನ್ನೂ ಮೋಹನ್‌ರಾಂ ಚಿತ್ರಿಸುತ್ತಾರೆ. ಹೀಗಾಗಿ, ‘ದ ಕ್ಯಾಪಿಟಲ್’ ಕೃತಿಗೆ ಜೀವನಚರಿತ್ರೆಯ ಲಕ್ಷಣವೂ ಇದೆ.

ಯಾವುದು ಸತ್ಯ ಯಾವುದು ಕಲ್ಪಿತ ಎನ್ನುವ ಚರ್ಚೆಗೂ ‘ದ ಕ್ಯಾಪಿಟಲ್’ ಅವಕಾಶ ಮಾಡಿಕೊಡುವಂತಿದೆ. ನಾವು ಮಾತನಾಡುತ್ತಿರುವ ವ್ಯಕ್ತಿ ಎದುರಿಗಿಲ್ಲದಿರುವ ಸಂದರ್ಭದಲ್ಲಿ ಇಂಥ ಚರ್ಚೆಗಳ ಮಹತ್ವ ಯಾವ ಬಗೆಯದು ಎನ್ನುವುದು ಬೇರೆಯದೇ ಚರ್ಚೆಯಾಗಬಲ್ಲದು. ‘ಈ ಪುಸ್ತಕ ಪೂರ್ವಗ್ರಹದಿಂದ ಮುಕ್ತವಾದದ್ದು ಎಂಬ ಪ್ರಮಾಣ ಮಾಡುವ ಧೈರ್ಯ ನನ್ನಲ್ಲಿಲ್ಲ’ ಎಂದು ಪ್ರಸ್ತಾವನೆಯಲ್ಲಿ ಲೇಖಕರು ಹೇಳಿಕೊಂಡಿರುವ ಹಿನ್ನೆಲೆಯಲ್ಲಿ, ಇಲ್ಲಿನ ಲಂಕೇಶರನ್ನು ‘ಮೋಹನ್‌ರಾಂ ಕಂಡ ಲಂಕೇಶರು’ ಎಂದೇ ಭಾವಿಸಬೇಕಾಗುತ್ತದೆ.

ಲಂಕೇಶರ ನಿಗಿನಿಗಿ ವ್ಯಕ್ತಿತ್ವದ ಜೊತೆಗೆ ಅವರ ಕಾಲದ ಸಾಂಸ್ಕೃತಿಕ ಪರಿಸರವನ್ನು ಕಟ್ಟಿಕೊಡುವ ಪ್ರಯತ್ನವೂ ಪುಸ್ತಕದಲ್ಲಿದೆ. ಓದುಗರ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವ ಚಿತ್ರಕಶಕ್ತಿಯ ಬರವಣಿಗೆ ಇಲ್ಲಿದೆ. ಆದರೆ, ಶಕ್ತಿಶಾಲಿ ಪತ್ರಕರ್ತನ ಬಗ್ಗೆ ಬಗ್ಗೆ ಮತ್ತೊಬ್ಬ ಪತ್ರಕರ್ತ ಬರೆದಿರುವ ಈ ಕೃತಿ ವಿವರಗಳ ಪುನರಾವರ್ತನೆಯಿಂದ ಅಲ್ಲಲ್ಲಿ ಬಳಲಿದೆ.

ಪುಟಗಳು: 256
ಬೆಲೆ: ₹ 220

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !