ಶುಕ್ರವಾರ, ಮೇ 27, 2022
21 °C

ಪುಸ್ತಕ ವಿಮರ್ಶೆ: ಒಳಗಿಗೂ ಕನ್ನಡಿ ಕಾಲಕ್ಕೂ ಕನ್ನಡಿ

ಮಹತಿ Updated:

ಅಕ್ಷರ ಗಾತ್ರ : | |

Prajavani

ನನ್ನೊಳಗಣ ನಾನು
ಲೇ: ದ್ವಾರನಕುಂಟೆ ಪಾತಣ್ಣ
ಪ್ರ: ಸ್ನೇಹ ಪ್ರಕಾಶನ, ಬೆಂಗಳೂರು.
ಸಂ: 9686073837.

**
ಆತ್ಮಕಥೆಯ ಬರವಣಿಗೆ ಲೇಖಕನ ಪಾಲಿಗೆ ತಾನು ಸಾಗಿಬಂದ ಹಾದಿಯ ನೆನಪುಗಳನ್ನು ನವೀಕರಿಸಿಕೊಳ್ಳುವ ವಿಶಿಷ್ಟ ಸಂದರ್ಭ. ಈ ನವೀಕರಣ ವೈಯಕ್ತಿಕವಾದುದೂ ಹೌದು, ಸಮಷ್ಟಿಯದೂ ಹೌದು. ಆ ಕಾರಣದಿಂದಲೇ ಆತ್ಮಕಥೆಯೊಂದರ ಮುಖಾಮುಖಿ ಓದುಗನ ಪಾಲಿಗೆ ಲೇಖಕನ ಜೊತೆಗೆ, ಕಾಲಘಟ್ಟವೊಂದನ್ನು ಅರಿತುಕೊಳ್ಳುವ ಅವಕಾಶವೂ ಆಗುತ್ತದೆ. ದ್ವಾರನಕುಂಟೆ ಪಾತಣ್ಣನವರ ‘ನನ್ನೊಳಗಣ ನಾನು’ ಆತ್ಮಕಥೆಯ ಮಹತ್ವ ಇರುವುದು ಕೃತಿ ‘ಕಾಲಕನ್ನಡಿ’ ಆಗಿರುವುದರಲ್ಲಿ.

ಪಾತಣ್ಣನವರು ಎಚ್‌ಎಂಟಿ ಕೈಗಡಿಯಾರಗಳ ಕಾರ್ಖಾನೆಯಲ್ಲಿ ಅಧಿಕಾರಿಯಾಗಿ ದುಡಿದವರು. ವೃತ್ತಿಯ ಅನುಭವಗಳು ಕೃತಿಯ ಪ್ರಮುಖ ಭಾಗ. ಔದ್ಯಮಿಕ ಕರ್ನಾಟಕದ ಸುವರ್ಣ ಕಲಶದಂತಿದ್ದ ಎಚ್‌ಎಂಟಿ ಕಾರ್ಖಾನೆಯ ಉನ್ನತಿ ಹಾಗೂ ಅವನತಿಯ ಚಿತ್ರಣದ ಅಧಿಕೃತ ವಿವರಗಳನ್ನು ಲೇಖಕರು ದಾಖಲಿಸಿದ್ದಾರೆ. 3 ಲಕ್ಷ ಕಾರ್ಮಿಕರು 77 ದಿನಗಳ ದಿನಗಳ ಕಾಲ ನಡೆಸಿದ ಮುಷ್ಕರದ ವಿವರಗಳಿವೆ. ರಾಜಕಾರಣಿಗಳ ಹಟ ಮತ್ತು ದುಷ್ಟತನದಿಂದಾಗಿ ಮುಷ್ಕರ ವಿಫಲವಾಗುವುದರ ವಿಷಾದದ ಚಿತ್ರಣ ಕೃತಿಯಲ್ಲಿದೆ. ಮನುಷ್ಯನ ಒಂದೊಂದೇ ಅಂಗವನ್ನು ಮಾರಾಟ ಮಾಡಿದಂತೆ ಕಾರ್ಖಾನೆಯ ಭಾಗಗಳೂ ವಿಲೇವಾರಿ ಆದ ದುರಂತದ ಕಥನ, ಸಾರ್ವಜನಿಕ ಸಂಸ್ಥೆಗಳನ್ನು ರಾಜಕೀಯ ವ್ಯವಸ್ಥೆ ಹೇಗೆ ಅರಾಜಕಗೊಳಿಸಬಹುದು ಎನ್ನುವುದರ ವರ್ತಮಾನದ ಕಥೆಯನ್ನೂ ಹೇಳುವಂತಿದೆ. 

ಎಚ್‌ಎಂಟಿ ಕಾರ್ಖಾನೆಯ ಇತಿಹಾಸದ ಏಳುಬೀಳುಗಳು ಪಾತಣ್ಣನವರ ‘ಬದುಕಿನ ಗಡಿಯಾರ’ದ ಚಲನೆಯೂ ಆಗಿವೆ. ಜೀತಗಾರನಾಗಿದ್ದ ತಂದೆಯ ಮಗನೊಬ್ಬ ಹಳ್ಳಿಯಿಂದ ನಗರಕ್ಕೆ ಬರುವುದು, ಶಿಕ್ಷಣದ ಮೂಲಕವೇ ಸ್ವಾಭಿಮಾನ–ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ, ಪ್ರವೃತ್ತಿಯ ರೂಪದಲ್ಲಿ ಸಾಹಿತ್ಯದ ಓದು–ಬರವಣಿಗೆಯನ್ನು ರೂಢಿಸಿಕೊಳ್ಳುವ ಹೋರಾಟದ ಕಥನ ಕುತೂಹಲಕರವಾಗಿದೆ. ಅಪ್ಪನ ಇಚ್ಛೆಯಂತೆ ಕೃಷಿ–ಪಶುಪಾಲನೆಯ ಚಟುವಟಿಕೆಗಳಲ್ಲಿ ಕುಟುಂಬಕ್ಕೆ ನೆರವಾಗಿ ಇರುವುದನ್ನು ಬಯಸದೆ, ಶಿಕ್ಷಣದ ಮೂಲಕವೇ ಬದುಕನ್ನು ರೂಪಿಸಿಕೊಳ್ಳುವ ಪಾತಣ್ಣನವರ ಛಲ, ಕುಟುಂಬವೊಂದು (ಸಮುದಾಯವೊಂದು) ಬದಲಾವಣೆಯ ಬೆಳಕಿಗೆ ತನ್ನನ್ನೊಡ್ಡಿಕೊಂಡ ಮಹತ್ವದ ಗಳಿಗೆಯೂ ಆಗಿದೆ. 

ಕಾರ್ಖಾನೆಯ ಔದ್ಯಮಿಕ ಪರಿಸರದಲ್ಲಿ ದಕ್ಷತೆ ಮತ್ತು ವೃತ್ತಿಪರತೆಯಿಂದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದ ಪಾತಣ್ಣನವರು ಕಾರ್ಮಿಕರ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರು. ಎಚ್‌ಎಂಟಿ ಕಾರ್ಖಾನೆಗೆ ಸಾಂಸ್ಕೃತಿಕ ಸ್ವರೂಪ ತಂದುಕೊಡುವಲ್ಲಿ ಅವರ ಪಾತ್ರವೂ ಇತ್ತು. ಆ ಸಂಘಟನಾ ಚಾತುರ್ಯ ನಂತರದ ದಿನಗಳಲ್ಲಿ ‘ಕನ್ನಡ ಚಳವಳಿ’ಯಲ್ಲಿ ಅವರನ್ನು ಸಕ್ರಿಯರಾಗುವಂತೆ ಮಾಡಿದರೆ, ಸಾಂಸ್ಕೃತಿಕ ಸಹಚರ್ಯ ಬರವಣಿಗೆಯಲ್ಲಿ ತೊಡಗಿಕೊಳ್ಳಲು ಪ್ರೇರಣೆಯಾಯಿತು. ತನ್ನ ಸರಳತೆಯಿಂದ, ಜೀವನಪ್ರೀತಿಯಿಂದ ಹಾಗೂ ಔದ್ಯಮಿಕ ಕರ್ನಾಟಕದ ಪ್ರಮುಖ ಅಧ್ಯಾಯವೊಂದರ ಚಿತ್ರಣದ ಮೂಲಕ ‘ನನ್ನೊಳಗಣ ನಾನು’ ಕೃತಿ ಗಮನಸೆಳೆಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು