ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳಲೇಬೇಕು ಎಂದು ಹೊರಟ ಕಾವ್ಯಭಕ್ತ

Last Updated 25 ಜುಲೈ 2020, 19:30 IST
ಅಕ್ಷರ ಗಾತ್ರ

‘ಹೇಳಲೇಬೇಕಾದದ್ದು ಇನ್ನೂ ಇದೆ’ ಕವಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರ ಮೂರನೇ ಕವನ ಸಂಕಲನ. ಅವರೇ ಹೇಳಿಕೊಂಡಂತೆ ಇದು ಅವರ ಸಮಗ್ರ ಪ್ರೇಮ ಕವನಗಳ ಸಂಗ್ರಹ. ಬಹುತೇಕ ಕವಿಗಳ ಕಾವ್ಯ ಕೃಷಿ ಆರಂಭವಾಗುವುದೇ ಪ್ರೇಮ ಕವನಗಳ ಮೂಲಕ; ಆದರೆ, ಮಲ್ಲಿಕಾರ್ಜುನಗೌಡ ಅವರದ್ದು ಭಿನ್ನ ಹಾದಿ.

‘ಶರೀಫನ ಬೊಗಸೆ’ ಮೊದಲ ಕವನ ಸಂಕಲನದಲ್ಲೇ ಅಧ್ಯಾತ್ಮವನ್ನು ಧ್ಯಾನಿಸಿದರು. ಎರಡನೇ ಸಂಕಲನ ‘ತುಂಗಭದ್ರೆಯ ಪಾತ್ರದಲ್ಲಿ’ ಬದುಕಿನ ಸತ್ಯಗಳಿಗೆ ಮುಖಾಮುಖಿಯಾದರು. ಈಗ ‘ಹೇಳಲೇಬೇಕಾದದ್ದು ಇನ್ನೂ ಇದೆ’ ಎಂದು ಚಡಪಡಿಸುತ್ತಲೇ ಪಕ್ವ ‍ಪ್ರೇಮವನ್ನು ಆರಾಧಿಸಿದ್ದಾರೆ.

ಈ ಸಂಕಲನದಲ್ಲಿ 67 ಕವಿತೆಗಳಿವೆ. ಕಿರು ಕವಿತೆಗಳೂ ಸೇರಿವೆ. ಎರಡು ಸಂಕಲನಗಳಿಗಾಗುವಷ್ಟು ಕವನಗಳನ್ನು ಒಂದರಲ್ಲೇ ಜೋಡಿಸಲಾಗಿದೆ. ಗೌಡರದ್ದು ಕನ್ನಡ ಕಾವ್ಯಲೋಕಕ್ಕೆ ಹೊಸ ಹೆಸರೇನೂ ಅಲ್ಲ; ತಮ್ಮ ಎರಡು ಕವನ ಸಂಕಲನಗಳ ಮೂಲಕ ಕಾವ್ಯದ ಗಂಭೀರ ಓದುಗರಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ತಮ್ಮ ವಿಶಿಷ್ಟ ರೂಪಕಗಳಿಂದ ಕಾವ್ಯದ ರುಚಿ ಹತ್ತಿಸಿರುವ ಅವರು ಈ ಪ್ರೇಮ ಸಂಕಲನದಲ್ಲಿ ಪ್ರೇಮವೂ ಒಂದು ಅಧ್ಯಾತ್ಮ ಎಂದೇ ಮೆಲುದನಿಯಲ್ಲಿ ಹೇಳಿದ್ದಾರೆ.

ಪ್ರೀತಿ–ಪ್ರೇಮದ ಕುರಿತಂತೆ ಎಳೆಯ ಕವಿಗಳ ರೀತಿ ಇಲ್ಲಿ ತುಟಿ, ತೊಡೆಗಳ ವರ್ಣನೆ ಇಲ್ಲ; ಕ್ಯಾಸೆಟ್‌ ಕವಿಗಳ ರೀತಿ ಭಾವನೆಗಳ ಭಾರವನ್ನು ಹೊರಿಸಿಲ್ಲ; ಸಹಜ ಲಯದಲ್ಲಿ ಓದಿಕೊಂಡಂತೆ; ಸಹೃದಯನ ಎದುರು ಕುಳಿತು ಮಾತು ಮಥಿಸಿದಂತೆ ಇಲ್ಲಿನ ಕವನಗಳು ನಮ್ಮ ಅನುಭವಕ್ಕೆ ತಾಕುತ್ತವೆ.

ಒಂದೆರೆಡು ಉದಾಹರಣೆಗಳು
‘ಸಲುಗೆಯ ಬಾಗಿಲು’ ಕವಿತೆಯಲ್ಲಿ
ಸಲುಗೆಯ ಬಾಗಿಲುನಿನಗೆಂದೂ ತೆರೆದಿದೆ
ಬರಲು ಹಿಂಜರಿಯಬೇಡ

ಎಂದು ಆತ್ಮೀಯವಾಗಿ ಕರೆಯುವ ಕವಿ ಮುಂದುವರೆದು

ಎಣಿಸುತ್ತ ಕೂತರೆ
ಸಾವೇ ಕರೆದುಬಿಡಬಹುದು
ಬಾ

ಸುಮ್ಮನೇ.

ಎಂಬ ಪ್ರೀತಿಯ ಎಚ್ಚರಿಕೆಯನ್ನೂ ನೀಡುತ್ತಾರೆ.

‘ನಿನ್ನ ನೆಲದಲ್ಲೇ ಹುಗಿದು’ ಕವನದಲ್ಲಿ
ನಿನ್ನ ನೆಲದಲ್ಲೇ
ಹುಗಿದು ನೆಲಗುಮ್ಮ
ಬಗೆದು ತೋರಿದ ಚಿತ್ರ

ನನ್ನ ಪಾಡು.

ಎನ್ನುವ ಕವಿ

ನಿನ್ನ ಕೂದಲ ನಶೆಗೆ
ಹಗಲು ನಿದ್ರಿಸುತಿತ್ತು.
ಆಸೆಯಲಿ ಮೊಗವಿಡಲು
ನಾನೂ ಬಂದೆ.
ಮೆದು ಸುಖಕೆ ಮನಸೋತು
ಉಸಿರ ಹೂವನು ಮುಡಿಸಿ
ಬಿಗಿದಪ್ಪಿ ಸುಖಿಸುತಲೆ

ಸಾವ ಕಂಡೆ.

ಎಂದು ಹೇಳುವ ಮೂಲಕ ಓದುಗನನ್ನೂ ಭಾವತೀವ್ರತೆಯಲ್ಲಿ ಮುಳುಗಿಸುತ್ತಾರೆ.

ಪ್ರೀತಿ–ಪ್ರೇಮವನ್ನು ನಿವೇದಿಸಿಕೊಳ್ಳದಿದ್ದರೆನೇ ಚೆಂದ ಎಂದು ನಂಬಿಕೊಂಡ ಕವಿಗೆ ಈ ಅಸ್ಪಷ್ಟ, ಅಸಂಗತ ಭಾವಗಳಿಂದಲೇ ಬದುಕು ಸಾರ್ಥಕತೆ ಪಡೆಯುತ್ತದೆಂಬ ಗಾಢ ವಿಶ್ವಾಸವಿದೆ. ಅದ್ದರಿಂದಲೇ ‘ಹೇಳಲೇಬೇಕಾದದ್ದು ಇನ್ನೂ ಇದೆ, ಹೇಳಲಾಗುತ್ತಿಲ್ಲ’, ‘ಇಲ್ಲದ್ದರಲ್ಲಿ ಇರುವುದಾದರೂ ಏನು?’, ‘ಸರಿಯಿಲ್ಲ ತಪ್ಪಿಲ್ಲ, ಚುಕ್ಕೆಗಳ ಲೆಕ್ಕಾಚಾರದಿಂದ ರಂಗೋಲಿ ಬರೆದು ಬಣ್ಣ ತುಂಬುವ ಜಾಗ ನನ್ನೊಳಗಿಲ್ಲ’ ಎಂದು ಹೇಳುತ್ತಾರೆ.

‘ಶಿವನ ಕುದುರೆ’, ‘ಗಾಳಿಮಾತಿನ ಮೋಹ’ ಕವನಗಳು ಕವಿ ಎಚ್‌.ಎಸ್‌. ಶಿವಪ್ರಕಾಶರ ಕೆಲ ದೀರ್ಘ ಕವಿತೆಗಳನ್ನು ನೆನಪಿಸುತ್ತವೆ. ‘ಕೊಳಲು ಮರ’, ‘ಪ್ರಚೋದಿಸು ಬಾರ’, ‘ಗುಲಾಬಿ ನದಿ’ ಕವನಗಳು ಕವಿಯ ರೂಪಕಶಕ್ತಿಗೆ ಮಾದರಿಯಾಗಿವೆ. ಕಾವ್ಯದ ಮಹಾಭಕ್ತರೂ ಆದ ಈ ಕವಿಗೆ ಅತಿ ಶೀಘ್ರ ಪ್ರೇಮ ದೇವರ ದರ್ಶನವಾಗಬೇಕಾಗಿದೆ.
–––––––––––––––––––
ಹೇಳಲೇಬೇಕಾದದ್ದು ಇನ್ನೂ ಇದೆ
(ಕವನ ಸಂಕಲನ)
ಲೇ: ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ
ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ
ಶಿವಮೊಗ್ಗ– 577201
ಮೊ: 94498 86390

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT