ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ವರ್ತಮಾನಕ್ಕೆ ಕನ್ನಡಿ ಹಿಡಿವ ದೇವರುಗಳು

Last Updated 18 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ನಾಟಕ ಕೃತಿಗಳು ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗುತ್ತಿವೆ ಎನ್ನುವ ಕೊರಗೊಂದು ಇದೆ. ಇಂತಹ ಹೊತ್ತಿನಲ್ಲಿ ‘ದೇವರುಗಳಿವೆ ಎಚ್ಚರಿಕೆ!’ ಎಂಬ ವೈಚಾರಿಕ, ವೈನೋದಿಕ, ವಿಡಂಬನಾತ್ಮಕ ನಾಟಕವೊಂದು ಬಂದಿದೆ. ವಿಡಂಬನೆ, ಕವನಗಳ ಮೂಲಕ ಈಗಾಗಲೇ ಸಾಹಿತ್ಯ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಕೆಎಎಸ್‌ ಅಧಿಕಾರಿ ಸಂಗಮೇಶ ಉಪಾಸೆ ಅವರು ಬರೆದ ನಾಟಕ ಇದಾಗಿದೆ.

ತಲೆಬರಹ ನೋಡಿದ ಮಾತ್ರಕ್ಕೆ ದೇವರನ್ನು ಹೀಗಳೆಯುವುದು ಈ ನಾಟಕದ ಉದ್ದೇಶ ಎಂದು ಪರಿಭಾವಿಸಬೇಕಿಲ್ಲ. ಲೋಕಕ್ಕೆ ಒಳಿತನ್ನು ಬಯಸಿ ಧರ್ಮಮಾರ್ಗಗಳನ್ನು ತೋರಿದ ಶ್ರೀಕೃಷ್ಣ,ಬುದ್ಧ, ಮಹಾವೀರ, ಏಸುಕ್ರಿಸ್ತ, ಪೈಗಂಬರರ ಕುರಿತು ನಿವೇದಿಸುವುದು ಈ ನಾಟಕದ ಒಳಗಿನ ತಿರುಳು. ದೇವರು–ಧರ್ಮದ ಪರಿಕಲ್ಪನೆಯನ್ನು ಹಾಸ್ಯ ಲೇಪನದೊಂದಿಗೆ ಮುಂದಿಡುವ ಈ ನಾಟಕವು ವಿಚಾರ ಪ್ರಚೋದನೆಯನ್ನೂ ಮಾಡುತ್ತದೆ. ದೇವರ ಹುಡುಕಾಟದ ಲೀಲಾವಿನೋದ ವೈಶಿಷ್ಟ್ಯಪೂರ್ಣವಾಗಿ ಮೂಡಿಬಂದಿದೆ.

ಧರ್ಮ ಎನ್ನುವುದು ಅವರವರ ಮನೆಯ ಕಾಂಪೌಂಡಿನೊಳಗೆ ಇದ್ದರೆ ಚಂದ. ಸಂವಿಧಾನದ ಆಶಯ ಕೂಡ ಅದೇ ಆಗಿದೆ ಎನ್ನುವ ಲೇಖಕರು, ಭಾರತದಂತಹ ಬಹುಧರ್ಮೀಯ, ಬಹು ಭಾಷಿಕ, ಬಹು ಸಂಸ್ಕೃತಿಗಳ ದೇಶದಲ್ಲಿ ಧರ್ಮ ನಾಲ್ಕು ಗೋಡೆಗಳಿಂದ ಹೊರಬಿದ್ದರೆ ಏನೆಲ್ಲ ಅವಾಂತರ ಆಗಬಹುದು ಎನ್ನುವುದನ್ನು ನಾಟಕದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ದೇವರು–ಧರ್ಮದಂತಹ ಸೂಕ್ಷ್ಮ ವಿಚಾರಗಳನ್ನು ವಿಷಯ ವಸ್ತುವನ್ನಾಗಿ ಮಾಡಿಕೊಂಡ ಉಪಾಸೆಯವರು ನಾಟಕವನ್ನು ಅಷ್ಟೇ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.

ಲೋಕದ ಜನರಿಗಿರುವ ಪಾಪ, ಪುಣ್ಯ, ಸ್ವರ್ಗ, ನರಕದ ಮೂಲಭೂತ ಪ್ರಶ್ನೆಗಳ ಕುರಿತು, ಕಳ್ಳಸ್ವಾಮಿ ಸುಳ್ಳಾಶ್ರಮದ ಕುರಿತು, ಕೋಮುಗಲಭೆಯ ಕುರಿತು, ಪೂಜಾರಿಗಳ ಕುರಿತು ಈ ನಾಟಕದ ಅಂಕಗಳು ಮಾತನಾಡುತ್ತವೆ. ಮಠದ ಪೀಠಾಧಿಪತಿ ಬಡಂಗ ಬಾಬಾನನ್ನು ಭಕ್ತೆಯೊಬ್ಬಳು ‘ಆ ಮಠಾ ಮಣ್ಣಾಗಿಟ್ಟು, ಈ ಮಠಾ ಮುಳುಗಿಸೋಕೆ ಬಂದಿದೀಯೇನೋ ಮುಠ್ಠಾಳಾ’ ಎಂದು ಕೇಳುವ ಪ್ರಸಂಗ ಭಲೇ ಮಜವಾಗಿದೆ. ಸಂಭಾಷಣೆಗಳ ಚುರುಕುತನ ಗಮನಸೆಳೆಯುತ್ತದೆ.

**

ದೇವರುಗಳಿವೆ ಎಚ್ಚರಿಕೆ!
ಲೇ:
ಸಂಗಮೇಶ ಉಪಾಸೆ
ಪ್ರ: ಬೆರಗು ಪ್ರಕಾಶನ
ಸಂ: 77953 41335
ಪುಟಗಳು: 276 ಬೆಲೆ: 250

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT