ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಪ್ರಾಯೋಗಿಕ ವಿಜ್ಞಾನದ ಪಿತಾಮಹ

ಪ್ರೊಫೆಸರ್ ಬಿ.ವಿ. ಶ್ರೀಕಂಠನ್
Last Updated 2 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಎಪ್ಪತ್ತು ವರ್ಷಗಳ ಹಿಂದೆ ಕೋಲಾರದ ಚಿನ್ನದ ಗಣಿಗಳ ಒಳಗೆ ಹೋಗಿ ಭೌತವಿಜ್ಞಾನಕ್ಕೆ ಚಿನ್ನದಷ್ಟೇ ಮುಖ್ಯವಾದ ಕಣಗಳ ಬಗ್ಗೆ ಸ್ವಾರಸ್ಯಕರ ಮಾಹಿತಿ ಹೊರತಂದವರು ಪ್ರೊಫೆಸರ್ ಬಿ.ವಿ. ಶ್ರೀಕಂಠನ್. ಇವರು ಕಳೆದ ವಾರ ತಮ್ಮ 95ನೆಯ ವಯಸ್ಸಿನಲ್ಲಿ ಬೆಂಗಳೂರಿನ ನಿಧನರಾದರು.

ನಂಜನಗೂಡಿನ ಖ್ಯಾತ ವೈದ್ಯ ಬಿ.ವಿ. ಪಂಡಿತರ ಪುತ್ರರಾದ ಶ್ರೀಕಂಠನ್, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗ ನಡೆಸಿ, ನಂತರ ಮುಂಬೈನ ಹೋಮಿ ಭಾಭಾ ಅವರ ಗರಡಿಯಾದ ಟಿ.ಐ.ಎಫ್.ಆರ್. (ಟಾಟಾ ಇನ್ಸ್ಟಿಟ್ಯೂಟ್ ಅಫ್ ಫಂಡಮೆಂಟಲ್ ರಿಸರ್ಚ್) ಸಂಸ್ಥೆಯಲ್ಲಿ ವಿಶ್ವ (ಕಾಸ್ಮಿಕ್) ಕಿರಣಗಳ ಬಗ್ಗೆ ಸಂಶೋಧನೆಗಳನ್ನು ಪ್ರಾರಂಭಿಸಿದರು. ಇಂದು ಅಭಿಜಾತ ಸ್ಥಾನವನ್ನು ಗಳಿಸಿರುವ ಕಣ ವಿಜ್ಞಾನದ ಆರಂಭದ ದಿನಗಳಲ್ಲಿ ಅವರು ಗಣಿಗಳಲ್ಲಿ ನಡೆಸಿದ ಪ್ರಯೋಗಗಳು ಮತ್ತು 1965ರಲ್ಲಿ ಅಲ್ಲಿ ಮಾಡಿದ ಅವರ ಪ್ರಾಕೃತಿಕ (ವಾತಾವರಣ) ನ್ಯೂಟ್ರಿನೊಗಳ ಆವಿಷ್ಕಾರವು ಕಣಚರಿತ್ರೆಯಲ್ಲಿ ಮಹತ್ವದ ಸ್ಥಾನ ಗಳಿಸಿದೆ.

ಅದೇ ಗಣಿಯಲ್ಲಿ ಎರಡು ದಶಕಗಳ ನಂತರ ನಡೆಸಿದ ‘ಪ್ರೋಟಾನ್ ಡಿಕೆ’ (ಪ್ರೋಟಾನ್ ಕಣದ ಕ್ಷೀಣತೆ) ಬೃಹತ್ ಪ್ರಯೋಗವು ಆಧುನಿಕ ಮೂಲಭೂತ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರಯೋಗ ಪ್ರಾವೀಣ್ಯವನ್ನು ತೋರಿಸಿತು. ಊಟಿಯಲ್ಲಿ ಹೊಸ ಉಪಕರಣಗಳ ಆವಿಷ್ಕಾರ ನಡೆಸಿ, ಅವುಗಳನ್ನು ಬಳಸಿ ಮಾಡಿದ ವಿಶ್ವಕಿರಣಗಳ ಪ್ರಯೋಗಗಳೂ ಬಹಳ ಖ್ಯಾತಿ ಗಳಿಸಿದವು. ನಂತರ ತಮ್ಮ ಗಮನವನ್ನು ನಭದತ್ತ ತಿರುಗಿಸಿ, ಎಕ್ಸ್ ರೇ ಮತ್ತು ಗಾಮಾ ರೇ ಖಗೋಳ ವಿಜ್ಞಾನವನ್ನು ಆರಂಭಿಸಿ ಬಹಳ ಹಿಂದಿನಿಂದ ನಡೆದುಕೊಂಡು ಬರುತ್ತಿದ್ದ ಸಾಧಾರಣ ಬೆಳಕಿನಿಂದ ಆಕಾಶಕಾಯಗಳ ಅಧ್ಯಯನ ಅಪೂರ್ಣವೆಂದೂ ಮತ್ತು ಅವುಗಳು ಹೊರ ಸೂಸುವ ಇತರ ತರಂಗಾಂತರದ ಕಿರಣಗಳಿಂದಲೂ ಅನೇಕ ವಿಷಯಗಳನ್ನು ಕಲಿಯಬಹುದು ಎಂದು ತೋರಿಸಿದರು.

ಶ್ರೀಕಂಠನ್ ಅವರು ವಿಶ್ವದ ಅತಿ ಚಿಕ್ಕ ಮತ್ತು ಅತಿ ದೊಡ್ಡ ವಸ್ತುಗಳ ಬಗ್ಗೆ ಭೌತವಿಜ್ಞಾನದ ಮೂರು ಪ್ರಮುಖ ಸಂಶೋಧನಾ ಕ್ಷೇತ್ರಗಳನ್ನು ಭಾರತದಲ್ಲಿ ಪ್ರಾರಂಭಿಸಿದರು. ಈ ಕ್ಷೇತ್ರಗಳಲ್ಲಿ ಮುಂದೆ ನಡೆದ ಹಲವಾರು ಪ್ರಯೋಗಗಳಿಗೆ ನೊಬೆಲ್ ಪ್ರಶಸ್ತಿಗಳು ದೊರಕಿದ್ದು ಶ್ರೀಕಂಠನ್ ಅವರ ಪ್ರಾತಃ ಸ್ಮರಣೀಯ ಸ್ಥಾನವನ್ನು ತೋರಿಸುತ್ತದೆ. ಈಗ ಭಾರತೀಯ ವಿಜ್ಞಾನಿಗಳು ವಿಶ್ವದ ದೊಡ್ಡ ದೊಡ್ಡ ಪ್ರಯೋಗಗಳಲ್ಲಿ (ಉದಾ : ಸರ್ನ್, ಲಿಗೊ ಇತ್ಯಾದಿ) ಭಾಗವಹಿಸುತ್ತಿರುವುದಕ್ಕೆ ಈ ತಳಹದಿ ಮುಖ್ಯವಾಯಿತು.

ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಯೋಗಿಕ ವಿಜ್ಞಾನಕ್ಕೆ ಮನ್ನಣೆ ಇಲ್ಲದಿದ್ದ ಈ ದೇಶದಲ್ಲಿ ಅದನ್ನು ಮುಂದೆ ತಂದದ್ದು ಶ್ರೀಕಂಠನ್ ಅವರ ಮುಖ್ಯ ಕೊಡುಗೆ. ಅವರು 1979ರಿಂದ ಹತ್ತು ವರ್ಷಗಳ ಅವಧಿಗೆ ಟಿ.ಐ.ಎಫ್.ಆರ್. ಸಂಸ್ಥೆಯ ನಿರ್ದೇಶಕರೂ ಆಗಿದ್ದರು. ವಿಜ್ಞಾನಿಗಳು ಮಾತ್ರವಲ್ಲದೆ ಎಲ್ಲ ಕೆಲಸಗಾರರ ಗೌರವ ಮತ್ತು ಪ್ರೀತಿ ಸಂಪಾದಿಸಿದ್ದರು. 1990ರಲ್ಲಿ ಬೆಂಗಳೂರಿಗೆ ವಾಪಸ್ ಬಂದು ನಿಯಾಸ್ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ‌್ಡ್ ಸ್ಟಡೀಸ್) ಸಂಸ್ಥೆಯಲ್ಲಿ ‘ಪ್ರಜ್ಞೆಯ ಬಗ್ಗೆ ಹೊಸ ಅನ್ವೇಷಣೆ’ಗಳನ್ನು ಪ್ರಾರಂಭಿಸಿದರು.

ಇತ್ತೀಚೆಗೆ ಆರೋಗ್ಯ ಕೆಡುವವರೆಗೂ ಈ ವಿಜ್ಞಾನಿ ಬೆಳಿಗ್ಗೆ 8.30ಕ್ಕೆ ನಿಯಾಸ್‌ಗೆ ಹೋಗಿ, ದಿನವಿಡೀ ಕೆಲಸ ಮಾಡಿ ಸಂಜೆ ಐದು ಗಂಟೆಗೆ ಮನೆಗೆ ಬರುತ್ತಿದರು. ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದರು. ಇಷ್ಟೆಲ್ಲ ಇದ್ದರೂ ಆಡಂಬರ ಮತ್ತು ಗರ್ವವನ್ನು ದೂರವಿರಿಸಿ ಎಲ್ಲರನ್ನೂ ಮಾತನಾಡಿಸಿಕೊಂಡು ಹೋಗುತ್ತಿದ್ದರು ಈ ಸರಳ ಮತ್ತು ಸಜ್ಜನ ವಿಜ್ಞಾನಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT