ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ತುಳುನಾಡಿನ ಮೂರಿಗಳ ಜಗತ್ತು

Last Updated 16 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ತುಳುನಾಡಿನ ಮೂರಿಗಳ ಆರಾಧನೆ
ಲೇ: ರಾಜಶ್ರೀ ಟಿ. ರೈ ಪೆರ್ಲ
ಪ್ರ: ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ
ಸಂ:8547947876

***

ಕಳೆದ ಸುಮಾರು 150 ವರ್ಷಗಳಿಂದ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಮಹತ್ವದ ಸಂಶೋಧನೆಗಳು ನಡೆದಿವೆ. ಸಂಗ್ರಹ ಮತ್ತು ವಿಶ್ಲೇಷಣೆಗಳು ಜೊತೆ ಜೊತೆಯಾಗಿ ಸಾಗಿವೆ. ಇದರಲ್ಲಿ ಹೆಚ್ಚಿನ ಕೆಲಸಗಳು ತುಳುನಾಡಿನ ಭೂತಾರಾಧನೆ ಮತ್ತು ಯಕ್ಷಗಾನಗಳ ಕುರಿತೇ ನಡೆದಿವೆ. ಇದರಿಂದಾಗಿ ಇತರ ಜನಪದ ಪ್ರಕಾರಗಳು ಗಂಭೀರವಾದ ಅಧ್ಯಯನ ಮತ್ತು ವೈಜ್ಞಾನಿಕ ಸಂಗ್ರಹಗಳ ವ್ಯಾಪ್ತಿಯಿಂದ ಹೊರಗುಳಿದುವು. ತುಳುವ ಅಧ್ಯಯನಗಳ ಈ ಮಿತಿಯನ್ನು ಮೀರುವ ಪ್ರಯತ್ನವೊಂದನ್ನು ರಾಜಶ್ರೀ ಟಿ. ರೈ ಅವರು ಈ ಪುಸ್ತಕದ ಮೂಲಕ ಮಾಡಿದ್ದಾರೆ.

‘ಮೂರಿ’ ಪದವು ಸ್ಥೂಲವಾಗಿ ತುಳುವಿನಲ್ಲಿ ‘ವಾಸನೆ’ ಎಂಬರ್ಥದಲ್ಲಿ ಪ್ರಚಲಿತದಲ್ಲಿರುವುದು ಹೌದಾದರೂ ಅದಕ್ಕೊಂದು ಧಾರ್ಮಿಕ ಆಯಾಮ ಇರುವುದು ಬಹಳ ಜನಕ್ಕೆ ಗೊತ್ತಿರಲಿಲ್ಲ. ರಾಜಶ್ರೀ ಅವರು ಮಂಗಳೂರು ಮತ್ತು ಕಾಸರಗೋಡು ಪರಿಸರಗಳಲ್ಲಿ ವ್ಯಾಪಕವಾಗಿ ಕ್ಷೇತ್ರಕಾರ್ಯ ನಡೆಸಿ, ಅತ್ಯಮೂಲ್ಯ ಮಾಹಿತಿಗಳನ್ನು ಸಂಗ್ರಹಿಸಿ, ‘ಮೂರಿ ಎನ್ನುವುದು ದ್ರಾವಿಡ ಮೂಲದ ಶಬ್ದ. ಮಣ್ಣು ಮತ್ತು ಮಣ್ಣಿಂದ ಮಾಡಿದ ಮಡಕೆಗಳು ತಮ್ಮ ವಿಶಿಷ್ಟ ಆಕೃತಿ ಮತ್ತು ಕಾರಣಗಳಿಂದ ದೈವಗಳಾಗಿ ಆರಾಧನೆಗೊಳ್ಳುತ್ತವೆ’ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

1992ರಷ್ಟು ಹಿಂದೆ ಪ್ರಕಟವಾದ ಎ.ವಿ. ನಾವಡ ಮತ್ತು ಗಾಯತ್ರಿ ನಾವಡ ಸಂಪಾದನೆಯ ‘ಕಾಡ್ಯನಾಟ’ ಪುಸ್ತಕದಲ್ಲಿಯೂ ಮೇರ ಸಮುದಾಯದವರ ಮಡಕೆಗಳ ಆರಾಧನೆಯ ಕುರಿತು ಸಾಕಷ್ಟು ಮಾಹಿತಿಗಳಿದ್ದುವು. ಆದರೆ ಆ ಸಂಶೋಧನೆ ಯಾಕೋ ಮತ್ತೆ ಮುಂದುವರಿಯಲಿಲ್ಲ. ರಾಜಶ್ರೀಯವರ ಪ್ರಸ್ತುತ ಸಂಶೋಧನೆಯು ಆ ಅಂಶಗಳನ್ನು ಮತ್ತಷ್ಟು ವಿಸ್ತರಿಸುತ್ತದೆ.

ನಾವಡ ದಂಪತಿಯು ತಮ್ಮ ಪುಸ್ತಕದಲ್ಲಿ ನೀಡಿದ ದಲಿತ ಹೊನ್ನಿಯ ಕತೆಯು ಬಹಳ ಅರ್ಥಪೂರ್ಣವಾಗಿದ್ದು, ಅದರಲ್ಲಿ ಆಕೆಗೆ ಕಾಡಲ್ಲಿ ಮೂರು ಮಡಕೆಗಳು ದೊರೆಯುತ್ತವೆ. ಅದರಲ್ಲಿ ಮೊದಲನೆಯದಾದ ಚಿನ್ನದ ಮಡಕೆಯು ಅಡಿಗರಿಗೂ, ಎರಡನೆಯದಾದ ತಾಮ್ರದ ಮಡಕೆಯು ಒಡೆಯರಿಗೂ, ಕೊನೆಯದಾದ ಮಣ್ಣಿನ ಮಡಕೆಯು ಸ್ವತಃ ಆಕೆಗೂ ದೊರಕುತ್ತದೆ. ಇದು ಮಣ್ಣು ಮತ್ತು ಮೂಲನಿವಾಸಿ ದಲಿತರ ನಡುವಣ ಸಂಬಂಧಕ್ಕೆ ಒಂದು ರೂಪಕವಾಗಿ ಕೆಲಸ ಮಾಡುತ್ತದೆ. ಇಂಥ ಹಲವು ಅಂಶಗಳನ್ನು ಹೊಸ ಮಾಹಿತಿಗಳ ಮೂಲಕ ಗುರುತಿಸುವ ರಾಜಶ್ರೀಯವರು, ಮೂರಿ ದೈವಗಳ ಪರಿಕಲ್ಪನೆ, ವೈವಿಧ್ಯ, ಭೌತಿಕ ಸ್ವರೂಪ, ಆರಾಧನೆಯು ಕಂಡು ಬರುವ ಪ್ರದೇಶಗಳು, ಪಾಡ್ದನಗಳಲ್ಲಿ ಉಲ್ಲೇಖಿತವಾದ ಆರಾಧನಾ ಕೇಂದ್ರಗಳು, ಮೂರಿ ಕಥನಗಳು, ಮತ್ತು ದೈವಾರಾಧನೆಯ ಜೊತೆಗೆ ಇವಕ್ಕಿರುವ ಸಂಬಂಧಗಳನ್ನು ಇಲ್ಲಿ ವಿವರವಾಗಿ ಮಂಡಿಸಿದ್ದಾರೆ.

ಪುಸ್ತಕದ ಕೊನೆಯಲ್ಲಿ ನೀಡಲಾದ 140ಕ್ಕೂ ಹೆಚ್ಚಿನ ವರ್ಣಚಿತ್ರಗಳು ಅಮೂಲ್ಯವಾಗಿವೆ. ಡಾ. ವಿವೇಕ ರೈ ಅವರು ಮುನ್ನುಡಿಯಲ್ಲಿ ಹೇಳಿರುವಂತೆ: ‘ಈ ಅಧ್ಯಯನ ಗ್ರಂಥವು ತುಳುಜಾನಪದ ಸಂಶೋಧನೆಗೆ ಹೊಸತೊಂದು ಆಯಾಮ ಕೊಡಲು ಶಕ್ತವಾಗಿದೆ. ಸೂಕ್ಷ್ಮವಾದ ಮತ್ತು ವ್ಯಾಪಕವಾದ ಕ್ಷೇತ್ರಕಾರ್ಯವು ಈ ಗ್ರಂಥದ ಒಂದು ಮುಖ್ಯವಾದ ಗಟ್ಟಿ ನೆಲೆಯಾಗಿದೆ. ಇವರು ನಡೆಸಿದ ವಿಶ್ಲೇಷಣೆ ಮತ್ತು ಮಂಡಿಸಿದ ಸಂಶೋಧನಾ ಪ್ರಮೇಯಗಳನ್ನು ಇನ್ನಷ್ಟು ವಿವೇಚಿಸಿ ಮುಂದುವರೆಸಲು ಉತ್ತಮ ಅವಕಾಶಗಳಿವೆ’.

‘ಮೂರ’ಗಳ ಆರಾಧನೆಯಂಥ ಹಲವು ಆಚರಣೆಗಳನ್ನು ಇವತ್ತು ನಾವು ಚಾರಿತ್ರಿಕವಾಗಿ ಮತ್ತು ಸಮಾಜಶಾಸ್ತ್ರೀಯವಾಗಿ ಅಧ್ಯಯನಕ್ಕೆ ಒಳಪಡಿಸಬೇಕಾದ ಅವಶ್ಯಕತೆಯಿದೆ. ಪ್ರಸ್ತುತ ಪುಸ್ತಕವು ಅಂಥ ಅಧ್ಯಯನಗಳಿಗೆ ಬೇಕಾದ ನೆಲೆಗಟ್ಟೊಂದನ್ನು ಒದಗಿಸಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT