ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಸಂಶೋಧಕರಿಗೆ ಆಕರ ಗ್ರಂಥ

Last Updated 25 ಜುಲೈ 2020, 19:45 IST
ಅಕ್ಷರ ಗಾತ್ರ

ಸುತ್ತೂರಿನ ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಠವು ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆಯನ್ನು ಆರಂಭಿಸಿ ನೂರಾರು ಗ್ರಂಥಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದೆ. ಈ ಮಾಲೆಯಲ್ಲಿನ ಹೆಮ್ಮೆಯ ಗ್ರಂಥರತ್ನ ಶಿವಪದ ರತ್ನಕೋಶ.

ಶಿವಪದ ರತ್ನಕೋಶ ಎಂಬ ಶಬ್ದಕ್ಕೆ ಹಲವು ಅರ್ಥಗಳನ್ನು ಹೇಳಬಹುದು. ಜಗತ್ತಿನ ಜನ್ಮ-ಸ್ಥಿತಿ ಲಯಗಳಿಗೆ ಕಾರಣವಾದ, ಸ್ವತಃ ನಿರಾಕಾರವೂ ಭಕ್ತಾನುಗ್ರಹಕ್ಕಾಗಿ ಸಾಕಾರವೂ ಆಗುವ ನಿತ್ಯಸತ್ಯ ಮೂಲತತ್ವವನ್ನು ಶಿವ ಎಂದು ಕರೆಯಲಾಗಿದೆ. ಶಿವನ ಪದವನ್ನು ಎಂದರೆ ಸ್ವರೂಪವನ್ನು ಮತ್ತು ಸ್ಥಾನವನ್ನು ತಿಳಿಸುವ ವಿಷಯಗಳನ್ನೊಳಗೊಂಡ ರತ್ನಕೋಶ, ವಜ್ರಗಳ ಖಜಾನೆ ಎಂದು ಒಂದು ಅರ್ಥ. ಶಿವಸಂಬಂಧಿಗಳಾದ, ಶಿವಾಧಾರವಾದ ಧರ್ಮವನ್ನು ತಿಳಿಸುವ ಪದಗಳೆಂಬ ರತ್ನಗಳ ಕೋಶ, ಅವುಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಮನೆ ಎಂದು ಇನ್ನೊಂದು ಅರ್ಥ.

ಈ ಗ್ರಂಥವನ್ನು ಸಿದ್ಧಪಡಿಸಲು ನೂರಕ್ಕೂ ಹೆಚ್ಚು ಸಂಸ್ಕೃತ ಗ್ರಂಥಗಳನ್ನೂ, ಇನ್ನೂರಕ್ಕೂ ಹೆಚ್ಚು ಕನ್ನಡ ಗ್ರಂಥಗಳನ್ನೂ ಆಧಾರಗ್ರಂಥಗಳನ್ನಾಗಿ ತೆಗೆದುಕೊಳ್ಳಲಾಗಿದೆ. ಹಿಂದೆ ವಿದ್ವಾಂಸರು ರಚಿಸಿದ್ದ ಹಲವು ಪದಕೋಶಗಳ ನೆರವನ್ನು ಪಡೆದು ಅರ್ಥಗಳನ್ನು ಪರಿಷ್ಕರಿಸಿ ವಿವರಿಸಲಾಗಿದೆ.

ಒಂದು ಧರ್ಮ, ಮತ, ದರ್ಶನ ಅಥವಾ ವಿಜ್ಞಾನ ಶಾಖೆ ಬೆಳೆದಾಗ ಅದರ ನಿರ್ದಿಷ್ಟ ಪರಿಕಲ್ಪನೆಗಳನ್ನು ಸೂಚಿಸಲು ಪಾರಿಭಾಷಿಕ ಪದಗಳನ್ನು ಬಳಸುವುದು ಅನಿವಾರ್ಯವಾಗುತ್ತದೆ. ಅಂಥ ಪಾರಿಭಾಷಿಕ ಪದಗಳ ಅರ್ಥ ಕಾಲಕಳೆದಂತೆ ವಿಸ್ತ್ರತವಾಗಬಹುದು. ಬೇರೆಬೇರೆ ಶಾಸ್ತ್ರಗಳಲ್ಲಿ ಆ ಅರ್ಥಗಳ ಛಾಯೆಗಳು ಭಿನ್ನವಾಗಿರಬಹುದು. ಯಾವ ನಿರ್ದಿಷ್ಟ ಅರ್ಥದಲ್ಲಿ ಒಬ್ಬ ವಚನಕಾರ ಅಥವಾ ಗ್ರಂಥಕಾರ ಅಥವಾ ಕವಿ ಒಂದು ಪಾರಿಭಾಷಿಕ ಪದವನ್ನು ಬಳಸಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ಕೋಶವು ಆವಶ್ಯಕ. ಉದಾಹರಣೆಗೆ `ಭಾಂಡಸ್ಥಲ' ಎಂಬ ಶಬ್ದವನ್ನು ತೆಗೆದುಕೊಳ್ಳೋಣ. ಭಾಂಡ ಎಂದರೆ ಪಾತ್ರೆ, ಭಾಂಡಸ್ಥಲ ಎಂದರೆ ಪಾತ್ರೆಗಳನ್ನಿಡುವ ಜಾಗ ಎಂದು ಸಾಮಾನ್ಯ ಭಾಷೆಯಲ್ಲಿ ಅರ್ಥ. ವೀರಶೈವ ಪಾರಿಭಾಷಿಕ ಪದಕೋಶವನ್ನು ನೋಡಿದಾಗ 'ಶತಕೋಟಿ ಬ್ರಹ್ಮಾಂಡಗಳ ಸೃಷ್ಟಿ- ಸ್ಥಿತಿ- ಲಯಗಳಿಗೆ ಆಶ್ರಯವಾಗಿರುವ ವಿಮರ್ಶ ಶಕ್ತಿ' ಎಂಬ ಅರ್ಥವೆಂದು ತಿಳಿದುಬರುತ್ತದೆ. ಈ ಅರ್ಥಕ್ಕೆ ಆಧಾರವಾದ ಸಂಸ್ಕೃತ ಶ್ಲೋಕಗಳನ್ನೂ, ಪುರಾಣ ವಾಕ್ಯಗಳನ್ನೂ ಪ್ರಸ್ತುತ ಕೋಶದಲ್ಲಿ ಕೊಡಲಾಗಿದೆ.

ವಚನಕಾರರು ಬಳಸುವ ಕೆಲವು ಪದಗಳ ನಿರ್ದಿಷ್ಟ ವಿವರಣೆಗೂ ಪದಕೋಶದ ಆವಶ್ಯಕತೆ ಇರುತ್ತದೆ. 'ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವರೆಲ್ಲ ಲಿಂಗಾರ್ಚಕರಪ್ಪರೆ ಅಯ್ಯ' ಎಂಬ ವಚನದಲ್ಲಿ ಅಷ್ಟವಿಧಾರ್ಚನೆ ಎಂದರೆ ಎಂಟು ಪ್ರಕಾರದ ಪೂಜೆ. ಆ ಎಂಟು ಯಾವುವು ಎಂದು ತಿಳಿದುಕೊಳ್ಳಲು ಕೋಶವು ಸಹಾಯಕವಾಗುತ್ತದೆ.

ಜಲ, ಗಂಧ, ಪತ್ರೆ, ಅಕ್ಷತೆ, ಪುಷ್ಪ, ಧೂಪ, ದೀಪ, ನೈವೇದ್ಯಗಳಿಂದ ಮಾಡುವ ಪೂಜೆಯೇ ಅಷ್ಟವಿಧಾರ್ಚನೆ ಎಂಬ ವಿವರಣೆ ಇಲ್ಲಿ ಸಿಕ್ಕುತ್ತದೆ. ಕೆಲವು ಕನ್ನಡ ಪದಗಳಿಗೂ ವೀರಶೈವ ಮತದಲ್ಲಿ ವಿಶಿಷ್ಟ ಅರ್ಥವಿದ್ದು ಕೋಶದ ನೆರವಿಲ್ಲದೆ ಅದನ್ನು ತಿಳಿಯಲಾಗದು. ಉದಾಹರಣೆಗೆ ಪಡ್ಡಿಡಿ ಅಥವಾ ಪಡಿವಿಡಿ. ಇದರ ಅರ್ಥ - ವೀರಶೈವ ಪಂಚಪೀಠಗಳಿಗೆ ಸಂಬಂಧಿಸಿದ ಪಂಚ ಮಹಾಸೂತ್ರಗಳಲ್ಲಿ ರಂಭಾಪುರಿ ಪೀಠದ ಅನುಯಾಯಿಗಳಿಗೆ ಸಂಬಂಧಿಸಿದ ಸೂತ್ರ, ಪಡಿವಿಡಿ ಸೂತ್ರ. ಸಂಶೋಧನೆಯನ್ನು ಮಾಡುವವರಿಗೆ ಒಂದೊಂದು ಪದದ ಆಕರಗಳನ್ನೂ, ಉದಾಹರಣೆಗಳನ್ನೂ ಈ ಪುಸ್ತಕ ಒದಗಿಸಿದೆ.

ಕೆಲವು ಪದಗಳಿಗೆ ಈ ಕೋಶದಲ್ಲಿ ಕೊಟ್ಟಿರುವ ವಿವರಣೆ ದೀರ್ಘ ಎನಿಸಬಹುದು. ಉದಾಹರಣೆಗೆ 'ಭಕ್ತಿ. ಆದರೆ ಭಕ್ತಿ ಎಂಬ ವಿಷಯದಲ್ಲಿ ಹತ್ತಾರು ಪುಸ್ತಕಗಳೂ, ನೂರಾರು ಲೇಖನಗಳೂ ಇರುವುದರಿಂದ ಲೇಖನ ದೀರ್ಘವಾಗಿ ಇರುವುದು ಸ್ವಾಭಾವಿಕ. ಸಂಶೋಧಕರಿಗೆ ಇದರಿಂದ ನೆರವು ಸಿಕ್ಕುತ್ತದೆ ಎಂಬುದು ಸ್ಪಷ್ಟ.

ಪದಗಳು ಮಾತ್ರವಲ್ಲದೆ, ಕೆಲವು ಪದಪುಂಜಗಳು ಅಥವಾ ನುಡಿಗಟ್ಟುಗಳು ವಿಶೇಷವಾಗಿ ಅಥವಾ ಪಾರಿಭಾಷಿಕವಾಗಿ ಪ್ರಯುಕ್ತವಾಗಿರುತ್ತವೆ. `ಗುರುವ ಕುರಿತು ಮಾಡುವಲ್ಲಿ ಬ್ರಹ್ಮನ ಭಜನೆಯ ಹರಿಯಬೇಕು' ಎಂಬ ನುಲಿಯ ಚಂದಯ್ಯನ ವಚನದಲ್ಲಿ `ಬ್ರಹ್ಮನ ಭಜನೆಯ ಹರಿಯಬೇಕು' ಎಂದರೇನು? ಇದಕ್ಕೆ ವಿವರಣೆ ಕೋಶದಲ್ಲಿದೆ. ‘ಬ್ರಹ್ಮನು ಪರಶಿವನ ಆಜ್ಞೆಯ ಮೇರೆಗೆ ಸೃಷ್ಟಿ ಮಾಡುತ್ತಾನೆ. ಈ ಸೃಷ್ಟಿಯಿಂದಾಗಿ ನಾವು ಪರಶಿವನಿಂದ ಬೇರೆಯಾದೆವು ಎಂದು ತಿಳಿಯುತ್ತೇವೆ. ಆದರೆ ಮುಕ್ತರಾದಾಗ ಬ್ರಹ್ಮನ ಭಜನೆಗೆ (ವಿಭಜನೆಗೆ, ಸೃಷ್ಟಿಗೆ) ನಾವು ಸಿಕ್ಕುವುದಿಲ್ಲ’. ಹೀಗೆ ವಚನಗಳನ್ನು ಅರ್ಥಸಿಕೊಳ್ಳುವುದರಲ್ಲಿ ಕೋಶವು ಉಪಕಾರಕ.

ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಈ ಗ್ರಂಥದ ರಚನೆಯಲ್ಲಿ ಹೆಜ್ಜೆಹೆಜ್ಜೆಗೂ ಮಾರ್ಗದರ್ಶನ ಮಾಡಿದ್ದಾರೆ. ಇದರ ಕಾರ್ಯ ನಿರ್ವಾಹಕ ಸಂಪಾದಕ ಡಾ. ನಂದೀಶ್ ಹಂಚೆ. ಸಂಪಾದಕರ ಸಮಿತಿಯಲ್ಲಿದ್ದವರು ಹಿರಿಯ ವಿದ್ವಾಂಸರಾದ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ, ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ, ಡಾ. ಎನ್.ಎಸ್. ತಾರಾನಾಥ, ಎಚ್.ವಿ. ನಾಗರಾಜರಾವ್, ವಿದ್ವಾನ್ ಡಾ.ಸಿ.ಶಿವಕುಮಾರ ಸ್ವಾಮಿ, ಆರ್.ಎಸ್. ಪೂರ್ಣಾನಂದ.

ಶಿವಪದ ರತ್ನಕೋಶ
ವೀರಶೈವ –ಲಿಂಗಾಯತ ಪಾರಿಭಾಷಿಕ ಪದಕೋಶ
ಸಂ:
ಡಾ. ನಂದೀಶ್‌ ಹಂಚೆ
ಪ್ರ: ಜೆಎಸ್ಎಸ್‌ ಗ್ರಂಥಮಾಲೆ, ಮೈಸೂರು
ಮೊ: 99861 37389

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT