ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ: ಮರಣವೃಕ್ಷದಿ ಬಿಟ್ಟ ಅಮೃತಫಲ!

Last Updated 24 ಅಕ್ಟೋಬರ್ 2020, 17:28 IST
ಅಕ್ಷರ ಗಾತ್ರ

19ನೇ ಶತಮಾನದ ಅಂತ್ಯದಲ್ಲಿ ಹುಟ್ಟಿ 20ನೇ ಶತಮಾನದ ಆರಂಭದಲ್ಲಿ ಜ್ವಾಜಲ್ಯಮಾನವಾಗಿ ಉರಿದು, ನಲವತ್ತನೇ ವಯಸ್ಸಿನಲ್ಲಿಯೇ ಆರಿಹೋದ ಸಾಹಿತ್ಯದೀಪ ಸಂಸ. ‘ವಿಗಡ ವಿಕ್ರಮರಾಯ’ನಂಥ ಎಂದಿಗೂ ಸಲ್ಲುವ ಹಲವು ನಾಟಕಗಳನ್ನು ಬರೆದ ಅವರನ್ನು ‘ಐತಿಹಾಸಿಕ ನಾಟಕಗಳ ಪಿತಾಮಹ’ ಎಂದೇ ಗುರ್ತಿಸಲಾಗುತ್ತದೆ. ಅವರ ನಾಟಕಗಳೆಂದರೆ ಕ್ಷೋಭೆಯ ಕಡಲು. ಈ ಕ್ಷೋಭೆ ಎನ್ನುವುದು ನಾಟಕಗಳಿಗಷ್ಟೇ ಅಲ್ಲ, ಅವರ ಬದುಕಿಗೂ ಹೊತ್ತಿಕೊಂಡು ಉರಿದ ಕಿಡಿ. ಹಾಗಾಗಿ ಸಂಸರ ನಾಟಕಗಳು ಎಷ್ಟು ಗಾಢವಾಗಿ ಕಾಡಿದವೋ ಅವರ ವೈಯಕ್ತಿಕ ಬದುಕೂ ಅಷ್ಟೇ ನಿಗೂಢವಾಗಿ ಕಾಡುವಂಥದ್ದು. ಅವರ ಬದುಕಿನ ಪಥವನ್ನು ಗಮನಿಸಿದರೆ, ತನ್ನ ಪ್ರತಿಭೆಯ ಭಾರವನ್ನು ತಾನೇ ತಾಳಲಾಗದೆ ಕುಸಿದುಹೋದ ಸಮೃದ್ಧ ಸಾಹಿತ್ಯವೃಕ್ಷದಂತೆ ಭಾಸವಾಗುತ್ತದೆ.

ಇಂಥ ಸಂಸರ ಬದುಕಿನ ಚಿತ್ರಣ ಕಟ್ಟಿಕೊಡುವ ಕಾದಂಬರಿಯನ್ನು ಪ್ರೊ. ಮಲೆಯೂರು ಗುರುಸ್ವಾಮಿ ಬರೆದಿದ್ದಾರೆ. 350 ಪುಟಗಳ ಈ ಸುದೀರ್ಘ ಕಾದಂಬರಿಯಲ್ಲಿ ಸಂಸರ ಬಾಲ್ಯ, ಬೆಳೆದ ವಾತಾವರಣ, ಸಾಹಿತ್ಯಾಸಕ್ತಿ, ಹೊಸದನ್ನು ಹುಡುಕುತ್ತ ಅಲೆಯುವ ಪ್ರವೃತ್ತಿ, ಅದರಿಂದ ಅವರು ಅನುಭವಿಸುವ ಉದ್ವಿಗ್ನತೆ, ಅವುಗಳ ನಡುವೆಯೇ ಹುಟ್ಟಿಕೊಂಡ ಉಜ್ವಲ ಸಾಹಿತ್ಯಕೃತಿಗಳು ಎಲ್ಲವನ್ನೂ ವಿವರವಾಗಿ ಕಟ್ಟಿಕೊಟ್ಟಿದ್ದಾರೆ.

ಸಾಮಾನ್ಯವಾಗಿ ಕಾದಂಬರಿ ಅಂದಾಕ್ಷಣ ಕಲ್ಪನೆಗೇ ಹೆಚ್ಚು ಒತ್ತುಕೊಡಲಾಗುತ್ತದೆ. ಆದರೆ ಇಲ್ಲಿ ಸಂಸರ ಬದುಕನ್ನು ಚಿತ್ರಿಸುವಾಗ ಆದಷ್ಟೂ ವಾಸ್ತವದ ನೆಲೆಯನ್ನು ಬಿಟ್ಟು ನೆಗೆಯದ ಹಾಗೆಯೇ ಲೇಖಕರು ಎಚ್ಚರವಹಿಸಿದ್ದಾರೆ. ಹಾಗಾಗಿ ಸಂಸರ ಕುರಿತು ಅವರು ಮಾಡಿದ ಅಧ್ಯಯನಗಳೂ ಕಾದಂಬರಿಯ ಓದಿನಲ್ಲಿ ನಮಗೆ ಅರಿವಾಗುತ್ತ ಹೋಗುತ್ತವೆ. ಸರಳ ಭಾಷೆಯಲ್ಲಿ, ಸುಭಗ ಓದಿಗೆ ದಕ್ಕುವ ಶೈಲಿಯಲ್ಲಿರುವ ಈ ಕೃತಿ, ಸಂಸ ಎಂಬ ಮಹಾನ್ ನಾಟಕಕಾರರ ಬದುಕಿನ ಬಗ್ಗೆ ತಿಳಿಸುತ್ತಲೇ ಒಂದು ಒಳ್ಳೆಯ ಕಾದಂಬರಿಯನ್ನು ಓದಿದ ಅನುಭವವನ್ನೂ ನೀಡುವಲ್ಲಿ ಯಶಸ್ವಿಯಾಗಿದೆ.

ಕಾದಂಬರಿಯಲ್ಲಿ ಸಂಸರು ಗೋವಿಂದ ಪೈಗಳನ್ನು ಭೇಟಿಯಾಗುವ ಒಂದು ಸನ್ನಿವೇಶವಿದೆ. ಅಲ್ಲಿ ಪೈಗಳು ಬರೆದ ಕ್ರೈಸ್ತನ ಜೀವನ ಕುರಿತ ಕಾವ್ಯವನ್ನು ಸಂಸರು ಸೊಗಸಾಗಿ ಓದುತ್ತಾರೆ. ಆ ಕಾವ್ಯದಲ್ಲಿ ಶಿಲುಬೆಯಲ್ಲಿ ನೇತಾಡುವ ಕ್ರೈಸ್ತನನ್ನು ಕುರಿತು ಇರುವ ಸಾಲೊಂದು ಹೀಗಿದೆ: ಮರಣ ವೃಕ್ಷದೊಳಮೃತ ಫಲದಂತೆ ತೂಗುತಿರೆ...’ ಈ ಸಾಲು ಸ್ವತಃ ಸಂಸರ ಬದುಕಿಗೂ ಅನ್ವಯವಾಗುವಂಥದ್ದು. ಸದಾ ಉದ್ವಿಗ್ನತೆ, ವಿಕ್ಷಿಪ್ತತೆಯ ಉರಿಯಲ್ಲಿಯೇ ಬೇಯುತ್ತಿದ್ದ, ಕೊನೆಗಾಲದಲ್ಲಂತೂ ಭಯವೇ ಒಂದು ರೋಗವಾಗಿ ನರಳುತ್ತ ಅದಕ್ಕೇ ಬಲಿಯಾಗಿ ಹೋದ ಅವರು ಕನ್ನಡಿಗರಿಗೆ ನೀಡಿದ್ದು ಮಾತ್ರ ಅಮೃತ ಫಲದಂಥ ಅಮೂಲ್ಯ ಸಾಹಿತ್ಯ ಕೃತಿಗಳನ್ನು. ಇಂಥ ಮೇರು ಲೇಖಕನ ಬದುಕನ್ನು ಕಾದಂಬರಿಯಾಗಿ ಕೊಟ್ಟ ಗುರುಸ್ವಾಮಿ ಅವರ ಪ್ರಯತ್ನ ಶ್ಲಾಘನಾರ್ಹ.

ಹೆಸರು: ಸಂಸ (ಕಾದಂಬರಿ)
ಲೇಖಕ: ಮಲೆಯೂರು ಗುರುಸ್ವಾಮಿ‌
ಪು: 352 ಬೆ:₹ 360
ಪ್ರಕಾಶನ: ಅನನ್ಯ ಪುಸ್ತಕಗಳು‌, ಎ. ರಾಮಣ್ಣ ರಸ್ತೆ, ಕೃಷ್ಣವಿಲಾಸ ಅಗ್ರಹಾರ, ದೇವರಾಜ ಮೊಹಲ್ಲ, ಮೈಸೂರು– 570024
ಮೊ: 98866 88255

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT