ಸೋಮವಾರ, ಡಿಸೆಂಬರ್ 6, 2021
23 °C

ಪುಸ್ತಕ ವಿಮರ್ಶೆ: ಶಾಂತಾದೇವಿ ಕಣವಿ ಅವರ ‘ಘಮ ಘಮಿಸುವ ಸಂಜೆ ಮಲ್ಲಿಗೆ’

ಪಿನಾಕ Updated:

ಅಕ್ಷರ ಗಾತ್ರ : | |

ಮಾಸ್ತಿ ಕಥಾ ಪರಂಪರೆಯ ಕೊಂಡಿಯಾಗಿ ಬೆಳಗಿದರೂ ಕಥೆಗಾರ್ತಿ ಶಾಂತಾದೇವಿ ಕಣವಿಯವರು ಅಷ್ಟೊಂದು ಢಾಳಾಗಿ ಪ್ರಕಟಗೊಳ್ಳದೆ ಕವಿ ಚೆನ್ನವೀರ ಕಣವಿಯವರ ದೈತ್ಯ ಕಾವ್ಯಪ್ರತಿಭೆಯ ಪ್ರಭಾವಳಿಯಲ್ಲಿಯೇ ಉಳಿದು
ಹೋದರೇ? ‘ಸಂಜೆಮಲ್ಲಿಗೆ’ ಸಂಸ್ಮರಣ ಸಂಪುಟದಲ್ಲಿ ಶಾಂತಾದೇವಿ ಅವರ ಬರಹಗಳ ಸಂಗ್ರಹದ ಮೇಲೆ ಕಣ್ಣಾಡಿಸಿದರೆ ಇಂತಹದ್ದೊಂದು ಸಂಶಯ ಕಾಡದಿರದು.

ಚೆಂಬೆಳಕಿನ ಕವಿಗೆ ಸದಾ ಬೆಳಕಿನದೇ ಧ್ಯಾನವಾದರೆ, ಕವಿಯ ಅರ್ಧಾಂಗಿಯಾಗಿದ್ದ ಈ ಕಥೆಗಾರ್ತಿಗೆ ಅಂತಹ ಬೆಳಕಿನಲ್ಲಿ ಸದ್ದಿಲ್ಲದೆ ಹೂವಾಗಿ ಅರಳಿ, ಘಮ ಘಮಿಸುವಂತಹ ಮಲ್ಲಿಗೆ ಮೊಗ್ಗಿನ ಅನುಸಂಧಾನ. ಹಾಗಾಗಿಯೇ ಅವರ ಕಥೆಗಳು ಅಬ್ಬರದ ಅಲೆಗಳನ್ನು ಎಬ್ಬಿಸುವ ಗೋಜಿಗೆ ಹೋಗದೆ ಕಿವಿಯಲ್ಲಿ ಮೆಲುದನಿಯಿಂದ ಪಿಸುಗುಡುವಂತಹ ಸ್ವಭಾವವನ್ನು ಹೊಂದಿರುವಂಥವು. ಬುದ್ಧಿ–ಭಾವ ಮೀಟಿ, ಹೃದಯವನ್ನೂ ತಟ್ಟಿ ಬೆಚ್ಚಗೆ ಮಾಡುವಂಥವು. ಅವರೇನೂ ಸ್ತ್ರೀವಾದಿಯಾಗಿ ಬೀದಿಗಿಳಿದು ಹೋರಾಟ ಮಾಡಿದವರಲ್ಲ. ಆದರೆ, ಅವರ ಕಥೆಗಳಲ್ಲಿ ಸ್ತ್ರೀಯರ ನೋವು, ಸಂಕಟ, ಸಂವೇದನೆಗಳು ದಟ್ಟವಾಗಿರುವುದನ್ನು ಕನ್ನಡದ ವಿಮರ್ಶಾಲೋಕ ಸ್ಪಷ್ಟವಾಗಿಯೇ ಗುರ್ತಿಸಿದೆ.

ಧಾರವಾಡದ ಪ್ರಶಾಂತ ವಾತಾವರಣದ ‘ಚೆಂಬೆಳಕಿ’ನ ಅಡುಗೆಮನೆಯಲ್ಲಿ ಇದ್ದುಕೊಂಡು ಕವಿ ಪರಿವಾರಕ್ಕೆ ರಸಪಾಕ ಸಿದ್ಧಪಡಿಸಿ ಉಣಬಡಿಸಿದಷ್ಟೇ ಆಸ್ಥೆಯಿಂದ ಕನ್ನಡದ ಪರಿವಾರಕ್ಕೆ ಕಥಾ ರಸಪಾಕವನ್ನೂ ಎರಕ ಹೊಯ್ದು ಕೊಟ್ಟವರು ಅವರು. ಶಾಂತಾದೇವಿಯವರ ಸಾಹಿತ್ಯದಷ್ಟೇ ಅವರ ಮಾನವೀಯ ಸಂಬಂಧಗಳ ಒಲುಮೆಯೂ ದೊಡ್ಡದು. ಧಾರವಾಡ ಸಾಹಿತ್ಯ ವಲಯದಲ್ಲಿ ಕಿರಿಯರಿಗೆ ಅಮ್ಮನಾಗಿ, ಹಿರಿಯರಿಗೆ ಅಕ್ಕನಾಗಿ ಅವರು ಹಂಚಿದ ಪ್ರೀತಿಯನ್ನು ನೆನೆಯದವರೇ ಇಲ್ಲ. ಅಂತಹ ನೆನಪುಗಳೆಲ್ಲ ಈ ಸಂಪುಟದಲ್ಲಿ ಇಡುಕಿರಿದಿವೆ.

ಸಂಪುಟವನ್ನು ಸ್ಥೂಲವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಭಾಗದಲ್ಲಿ ಶಾಂತಾದೇವಿಯವರ ಪ್ರಕಟಿತ ಹಾಗೂ ಅಪ್ರಕಟಿತ ಲೇಖನಗಳಿದ್ದರೆ, ಎರಡನೇ ಭಾಗದಲ್ಲಿ ಅವರ ವ್ಯಕ್ತಿತ್ವನ್ನು ಒಡನಾಡಿಗಳು ಕಂಡರಿಸಿದ ಬರಹ
ಗಳಿವೆ. ಕೃತಿಯ ಕೊನೆಯ ಭಾಗದಲ್ಲಿ ಕಣವಿ ಪರಿವಾರದ ದೃಷ್ಟಿಯಲ್ಲಿ ಶಾಂತಾದೇವಿಯವರ ವ್ಯಕ್ತಿತ್ವ ಅನಾವರಣಗೊಂಡಿದೆ. ಮಲ್ಲಿಗೆಯಂತಹ ಮೃದು ಮನಸಿನ ವ್ಯಕ್ತಿತ್ವ ಕೃತಿಯುದ್ದಕ್ಕೂ ಪರಿಮಳ ಬೀರುತ್ತಲೇ ಹೋಗುವುದಾದರೂ ಶಾಂತಾದೇವಿಯವರ ಬರಹಗಳಿರುವ ಮೊದಲ ಭಾಗವೇ ತುಂಬಾ ಆಪ್ತವಾಗಿದೆ.

ಶಾಂತಾದೇವಿಯವರು ಚಿಕ್ಕವರಿದ್ದಾಗ ಅವರ ತಂದೆ ಸಿದ್ಧಬಸಪ್ಪ ಗಿಡ್ನವರ ವಿಜಯಪುರದಲ್ಲಿ ಶಿರಸ್ತೇದಾರರಾಗಿದ್ದರು. ಅವರ ಮನೆಯಲ್ಲಿದ್ದ ಗ್ರಂಥಾಲಯಕ್ಕೆ ಓದಲು ಬರುತ್ತಿದ್ದ ತೆಳ್ಳಗೆ ಎತ್ತರವಾಗಿದ್ದ, ಗೋಧಿ ಬಣ್ಣ, ನೀಳ ಮೂಗು, ತುಂಬು ಗಲ್ಲ ಹೊಂದಿದ್ದ, ಹೊಳೆಯುವ ಕೂದಲಿನ ತುಂಬು ಕ್ರಾಪು ಬಿಟ್ಟುಕೊಂಡಿದ್ದ, ಉದ್ದನೆಯ ಕಾವಿ ಬಣ್ಣದ ನೆಹರು ಶರ್ಟು, ಖಾದಿ ಧೋತರ ಧರಿಸಿದ್ದ ಚೆಲುವ, ನಟ ಅಶೋಕ್‌ ಕುಮಾರನಂತಹ ಹುಡುಗ, ಬಾಳಸಂಗಾತಿಯಾಗಿ ಸಿಕ್ಕಿದ್ದನ್ನು ತುಸು ನಾಚಿಕೆಯಿಂದಲೇ ಶಾಂತಾದೇವಿ ನೆನೆಯುತ್ತಾರೆ.

ಒಡನಾಟಕ್ಕೆ ಬಂದವರ ಮೇಲೆ ಅವರದು ತಾಯಿ ಮಮತೆ. ಬರಹದಲ್ಲಿ ಅವರು ಕೊಡುವ ವಿವರಗಳು ಒಗ್ಗರಣೆ ಡಬ್ಬಿ ತೆಗೆದು ಸಾಸಿವೆ, ಜಿರಿಗೆ, ಅರಿಷಿಣ, ಉದ್ದಿನ ಬೇಳೆ, ಕರಿಬೇವು... ಹೀಗೆ ಒಂದೊಂದನ್ನೇ ತೆಗೆದು ಹಾಕಿದಷ್ಟು ಬಲು ಸೂಕ್ಷ್ಮವಾದವು. ಅಷ್ಟೇ ಆಳವಾದವು. ಅದರ ಉದಾಹರಣೆ ಬೇಕಾದರೆ ಸಂಪುಟದಲ್ಲಿರುವ ಅವರ ಅಪ್ರಕಟಿತ ಕಥೆ ‘ಕಳ್ಳಗಂಟು ಮತ್ತು ಸತ್ಯ’ವನ್ನು ನೋಡಬಹುದು. ಅನುಪಮಾ ನಿರಂಜನ ಅವರನ್ನು ಒಂದೊಮ್ಮೆ ‘ಕಥೆ ಹ್ಯಾಂಗ್‌ ಬರೀತೀರಿ’ ಎಂದು ಮುಗ್ಧವಾಗಿ ಕೇಳಿದ್ದ ಶಾಂತಾದೇವಿ, ಮುಂದೆ ತಮ್ಮ ಸುದೀರ್ಘ ಸಾಹಿತ್ಯ ಯಾನದಲ್ಲಿ ‘ಕಥೆ ಹುಟ್ಟುವ ಪರಿ’ಯನ್ನೂ ಕಟ್ಟಿಕೊಟ್ಟವರು.

ಆತ್ಮ ಸಂಗಾತಿಯಾಗಿದ್ದ ಶಾಂತಾದೇವಿಯವರು 2020ರಲ್ಲಿ ಅಗಲಿದಾಗ ಕಣವಿಯವರ ಕವಿ ಹೃದಯ ಕಣ್ಣೀರು ಹಾಕಿತ್ತು. ‘ನೆಟ್ಟಗೆ ನೋಡುವ ಕಣ್ಣಿನ ದೃಷ್ಟಿ ಎತ್ತಲೋ/ ತಿರುಗಿತ್ತು. ಮುಟ್ಟಿದರೇಕೋ ಕೈ ಬಿಸಿಯಿರಲಿಲ್ಲ/ ಇದು ಕೊನೆಯ ಕ್ಷಣವೆಂದು ನನಗನಿಸಲೇ ಇಲ್ಲ’ ಎಂದು ಅದು ಪರಿತಪಿಸಿತ್ತು. ಸಂಜೆಮಲ್ಲಿಗೆಯ ಈ ಮಾಲೆಯಲ್ಲಿ ಇಂತಹ ಘಮ ಘಮಿಸುವ ಮೊಗ್ಗುಗಳೇ ತುಂಬಿಕೊಂಡಿವೆ. ಅಂತಹ ಮೊಗ್ಗುಗಳನ್ನು ಹೆಕ್ಕಿ ಪೋಣಿಸಿದ ಸಂಪಾದಕರ ಶ್ರಮ ಸಾರ್ಥಕವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು