ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣದು ಸುಂದರವಾದಾಗ...

Last Updated 28 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಮಹಾತ್ಮ ಗಾಂಧಿಯವರ 150ನೇ ಜನ್ಮದಿನಾಚರಣೆಗೆ ಇಡೀ ದೇಶ ಸಿದ್ಧತೆ ನಡೆಸಿರುವಾಗ ಅವರು ಸ್ವತಃ ಆಚರಿಸಿ ಬೋಧಿಸಿದ ತತ್ವಗಳನ್ನು ಸರಳವಾಗಿ, ಸುಂದರವಾಗಿ ಪರಿಚಯಿಸುವ ಕಾರ್ಯ ಸಮಾಜ ವಿಜ್ಞಾನಿ, ಅರ್ಥಶಾಸ್ತ್ರಜ್ಙ ಎಂ.ವಿ.ನಾಡ್ಕರ್ಣಿ ಅವರಿಂದಾಗಿದೆ. ಅವರ ಕೇವಲ 70 ಪುಟಗಳ, 108 ಶ್ಲೋಕಗಳನ್ನೊಳಗೊಂಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳ ಸಮನ್ವಯವುಳ್ಳ ವಿದ್ವತ್ಪೂರ್ಣ ಕೃತಿ ‘ಗಾಂಧಿ-ತತ್ವ- ಶತಕಂ’ ಸಣ್ಣದು ಸುಂದರವಾಗಬೇಕಾದರೆ ಅದು ಸತ್ವಯುತವಾಗಿರಬೇಕೆಂಬ ಸಂದೇಶ ನೀಡುತ್ತದೆ. ಕನ್ನಡದಲ್ಲಿ ಇದು ಈ ವರ್ಷವೇ ಅನುವಾದಗೊಂಡರೆ ಅದಕ್ಕೆ ಇನ್ನಷ್ಟು ಮೆರಗು ಬರಲಿದೆ.

ಲೇಖಕರಿಗೆ ಗಾಂಧೀಜಿಯವರ ಮೇಲೆ ಇರುವ ಅಪಾರ ಗೌರವಕ್ಕೂ, ಅವರ ಸಂಸ್ಕೃತ ಪ್ರೇಮಕ್ಕೂ ದರ್ಪಣ ಹಿಡಿಯುವುತ್ತದೆ ಪೀಠಿಕೆ. ಸಂಸ್ಕೃತದಲ್ಲಿ ಬರೆದ ಶ್ಲೋಕಗಳು ನೀರಸವಾಗಿ ಅನುವಾದಗೊಳ್ಳದೆ ಪ್ರಾಸಬದ್ಧವಾಗಿ ಓದುಗರ ಮನ ಮುಟ್ಟುವ ರೀತಿಯಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ಚೌಪದಿಗಳ ರೂಪ ತಾಳಿದ್ದು ವಿಶೇಷ.

ಮೊದಲನೆಯ 10 ಶ್ಲೋಕಗಳು ಗಾಂಧೀಜಿಯವರ ವ್ಯಕ್ತಿತ್ವದ ಎತ್ತರವನ್ನು ಗುರುತಿಸುತ್ತವೆ. ಈ ಎತ್ತರದಿಂದಾಗಿಯೇ ಅವರು ಸಮಾಜಕ್ಕೆ ಈಗಲೂ ಹತ್ತಿರದವರು. ಅವರು ಜನಸಾಮಾನ್ಯರಂತೆ ಎಷ್ಟೋ ಪ್ರಮಾದಗಳನ್ನು ಎಸಗಿದ್ದು ನಿಜ. ಆದರೆ ಗಾಂಧಿ ತಮ್ಮ ತಪ್ಪುಗಳನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದರು. ಬೂಟಾಟಿಕೆ ಅವರ ಬಳಿ ಸುಳಿಯಲೂ ಇಲ್ಲ. ಸದಾ ದೇಶದ ಸ್ವಾತಂತ್ರ್ಯಕ್ಕೂ, ಜನತೆಯ ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗೂ ಚಿಂತನೆ ಮಾಡಿದ್ದಲ್ಲದೆ, ಅನವರತ ಶ್ರಮಿಸುತ್ತಿದ್ದ ಅವರನ್ನು ಅಸಂಖ್ಯಾತ ವ್ಯಕ್ತಿಗಳು ಹಿಂಬಾಲಿಸಿದರು. ‘ಹಿಂದ್ ಸ್ವರಾಜ್’ ಮತ್ತು ಅವರ ಆತ್ಮ ಚರಿತ್ರೆಯಾದ ‘ ಸತ್ಯದೊಡನೆ ನನ್ನ ಪ್ರಯೋಗಗಳ ಕಥೆ’ ಅವರ ಚಿಂತನೆಗಳನ್ನು ತುಂಬಿಕೊಂಡ ಪ್ರಮುಖ ಕೃತಿಗಳು. ಗಾಂಧೀಜಿ ಏನನ್ನೇ ಅನುಷ್ಠಾನಗೊಳಿಸಲಿ ಅದು ಸತ್ಯಾನ್ವೇಷಣೆಗೇ ಆಗಿರುತ್ತಿತ್ತು. ಯಾವುದೇ ಕಪಟವಿಲ್ಲದೆ, ಭೀತಿಯಿಲ್ಲದೆ, ಶಿಸ್ತು- ಬದ್ಧತೆಯೊಂದಿಗೆ ಅವರು ಮಾಡಿದ್ದು ಸತ್ಯಾನ್ವೇಷಣೆ.

ಮುಂದಿನ ಕೆಲವು ಶ್ಲೋಕಗಳಲ್ಲಿ (16-56) ಸತ್ಯದ ಹಿರಿಮೆ, ಸತ್ಯದಿಂದಾಗುವ ಹಿತಾನುಭವ ಮತ್ತು ಸತ್ಯ-ಅಹಿಂಸೆಗಳ ನಡುವಿನ ಸಂಬಂಧ, ಬೇರೆ ಬೇರೆ ಧರ್ಮಗಳಲ್ಲಿರುವ ಸೂಕ್ಷ್ಮಗಳನ್ನೂ, ನೀತಿಗಳನ್ನೂ ಅರಿಯಬೇಕಾದ ಅಗತ್ಯವನ್ನು ಸಾದರಪಡಿಸಲಾಗಿದೆ. ಸತ್ಯ ಒಂದು ಸಾಮಾಜಿಕ ಕ್ಷೇಮಾಭಿವೃದ್ಧಿಯ ಸಾಧನವಾಗಬಲ್ಲುದು ಎಂದು ಗಾಂಧಿ ನಂಬಿಕೊಂಡಿದ್ದರು. ಏಕಕಾಲದಲ್ಲಿ ವ್ಯಕ್ತಿ ವಿಕಾಸಕ್ಕೂ, ಸಮಾಜದ ಅಭ್ಯುದಯಕ್ಕೂ ಸತ್ಯ ಮತ್ತು ಅದರ ಇನ್ನೊಂದು ಮುಖವಾದ ಅಹಿಂಸೆ ದಾರಿ ಮಾಡಬಲ್ಲವು. ಅಹಿಂಸೆ ಎಂದರೆ ಎಲ್ಲರನ್ನೂ ಪ್ರೀತಿಸುವುದು, ಶತ್ರುವನ್ನು ಕೂಡ ದ್ವೇಷಿಸದಿರುವುದು.

ಸಮಾಜದಲ್ಲೂ ಆಡಳಿತ ಪರಿಪಾಲನೆಯಲ್ಲೂ ಉದ್ಭವಿಸುವ ಹಲವು ಸಂಘರ್ಷಗಳಿಗೆ ಪರಿಹಾರ ನೀಡಬಲ್ಲ, ಸುಖ-ಶಾಂತಿ ನೆಲೆಸುವಂತೆ ಮಾಡಬಲ್ಲ ಶಕ್ತಿ ಗಾಂಧಿ ತತ್ವಗಳಿಗಿದೆ. ಯಾವ ಧರ್ಮವೂ ಪರಿಪೂರ್ಣವಾಗಿಲ್ಲ. ಆದರೆ ಎಲ್ಲಾ ಧರ್ಮಗಳಿಂದಲೂ ಬೇಕಾದಷ್ಟು ಕಲಿಯುವದಿದೆ ಎಂದು ನಂಬಿದ್ದ ಗಾಂಧೀಜಿ ಎಲ್ಲಾ ಧರ್ಮಗಳನ್ನು ಯಾವುದೇ ಅಂಧಶ್ರದ್ಧೆಯಿಲ್ಲದೆ ಗೌರವಿಸುತ್ತಿದ್ದರು. ಸಮಾಜದಲ್ಲಿ ತಾರತಮ್ಯಗಳಿಗೆ ಕಾರಣವಾದ ಜಾತಿವಾದ ಮತ್ತು ಅಮಾನವೀಯವಾದ ಅಸ್ಪೃಶ್ಯತೆಯನ್ನು ಖಂಡಿಸಿದ ಗಾಂಧಿ ಇವೇ ಹಿಂದೂಧರ್ಮದ ವೈರಿಗಳೆಂದು ಪರಿಭಾವಿಸಿದ್ದರು.

48 ಶ್ಲೋಕಗಳಲ್ಲಿ ( 57-105) ಶ್ರಮದ ಗೌರವ, ಉತ್ಪಾದನೆಯಲ್ಲಿ ಮಾನವ ಶ್ರಮದ ಮಹತ್ವ, ಪ್ರಕೃತಿಯ ಮೇಲಿನ ಹಿಂಸೆಯಿಂದಾದ ಅನಾಹುತ, ವಿವೇಚನೆರಹಿತ ಯಾಂತ್ರೀಕರಣದಿಂದಾಗುವ ಉದ್ಯೋಗ ನಷ್ಟ ಮತ್ತು ಅದರಿಂದಾಗಿ ಬಡತನದ ಹೆಚ್ಚಳ, ಬಡತನ ನಿವಾರಣೆಯಲ್ಲಿ ಸಣ್ಣ ಮತ್ತು ಗ್ರಾಮೀಣ ಕೈಗಾರಿಕೆಗಳ ಪಾತ್ರದ ಕುರಿತು ಗಾಂಧಿ ಚಿಂತನೆಗಳು ತುಂಬಿಕೊಂಡಿವೆ.

ಆರ್ಥಿಕಾಭಿವೃದ್ಧಿಯಲ್ಲಿ ಉತ್ತೇಜಕಗಳ ಅವಶ್ಯಕತೆ, ಶ್ರೀಮಂತರಾದವರು ಭೋಗದ ಜೀವನಕ್ಕೆ ಮಾರುಹೋಗದೆ, ಶೋಷಕರಾಗದೆ ಸಮುದಾಯದ ಏಳ್ಗೆಗೆ ತ್ಯಾಗಬುದ್ಧಿಯನ್ನು ತೋರಿ ಧರ್ಮದರ್ಶಿಗಳಾಗಿ ಹೊರಹುಮ್ಮುವ ಅಗತ್ಯತೆ ಬಗ್ಗೆ ಚಿಂತನೆಯ ಹರವು ವಿಸ್ತಾರ ಪಡೆದುಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಜನಸಮುದಾಯದ ಸಬಲೀಕರಣಕ್ಕೆ ಎಡೆ ಮಾಡಿಕೊಡುವ ಅಧಿಕಾರದ ವಿಕೇಂದ್ರೀಕರಣವುಳ್ಳ ಸ್ಥಾನಿಕ ಸರಕಾರಗಳ ಮಹತ್ವದ ಮೇಲೆ ಬೆಳಕು ಚೆಲ್ಲುವ ರೀತಿ ಪ್ರಭಾವ ಪೂರ್ಣವಾಗಿದೆ. ಹಿಂದ್ ಸ್ವರಾಜ್‌ ಎಂದರೆ ಗ್ರಾಮ ಸ್ವರಾಜ್ ಎಂದು 91ನೇ ಶ್ಲೋಕ ಸಾರಿದೆ.

ಗಾಂಧೀಜಿಯವರ ಧ್ಯೇಯಗಳನ್ನು ವಾಸ್ತವದಲ್ಲಿ ಈಡೇರಿಸುವುದು ಕಷ್ಟವಾದರೂ ಮುಂದಿನ ಎಲ್ಲಾ ತಲೆಮಾರುಗಳಿಗೆ ಅವರ ಜೀವನ ಸ್ಫೂರ್ತಿಯಾಗಲಿದೆ ಎಂದು ಕೊನೆಯ ಮೂರು ಶ್ಲೋಕಗಳು ಹೇಳುತ್ತವೆ. 108ನೇ ಶ್ಲೋಕ ಗಾಂಧೀಜಿಯವರ 70ನೇ ದಿನಾಚರಣೆಯಲ್ಲಿ ಅಲ್ಬರ್ಟ್ ಐನ್‌ಸ್ಟೀನ್ ವ್ಯಕ್ತಪಡಿಸಿದ ಅಪ್ರತಿಮ ಗೌರವಾದರದ ನುಡಿಗಳನ್ನು ನೆನಪಿಸುತ್ತದೆ. ಪುಸ್ತಕದಲ್ಲಿರುವ ಕೊನೆಯ ವಿಶೇಷ ಟಿಪ್ಪಣಿ (ಐದು ಅರ್ಥಪೂರ್ಣ ಟಿಪ್ಪಣಿಗಳಿವೆ) ಅವರನ್ನು ಉದ್ಧರಿಸಿ ಕೊನೆಯ ಶ್ಲೋಕವನ್ನು ಅರಳಿಸುತ್ತದೆ. ಗಾಂಧೀಜಿಯ 150ನೇ ಜನ್ಮದಿನಾಚರಣೆಯಲ್ಲಿ ಆ ವಿಜ್ಞಾನಿಯ ಹೃದಯಸ್ಪರ್ಶಿ ನುಡಿಮುತ್ತುಗಳು ಮತ್ತೆ ನೆನಪಾಗುವುದು ಸಹಜ ಎನ್ನುವ ಭಾವನೆ ಪುಸ್ತಕವನ್ನು ಓದಿ ಮುಗಿಸಿದಾಗ ಬರುತ್ತದೆ.

ಗಾಂಧಿ-ತತ್ವ-ಶತಕಂ

ಲೇ: ಎಂ.ವಿ.ನಾಡ್ಕರ್ಣಿ
ಪ್ರ: ನ್ಯಾಷನಲ್ ಬುಕ್ ಟ್ರಸ್ಟ್-ಇಂಡಿಯಾ
ನೆಹರು ಭವನ, 5, ವಸಂತ್ ಕುಂಜ್,
ನವದಹಲಿ-110070

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT