ಮಂಗಳವಾರ, ಸೆಪ್ಟೆಂಬರ್ 21, 2021
23 °C

ನಿಘಂಟಿನ ಆಚೆಗಿನ ಕಿಟೆಲ್‌ ಜಗತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೆಲೆಕ್ಟೆಡ್‌ ರೈಟಿಂಗ್ಸ್‌ ಆಫ್‌ ರೆವರೆಂಡ್‌ ಫೆರ್ಡಿನೆಂಡ್‌ ಕಿಟೆಲ್‌ ಆನ್‌ ಕನ್ನಡ ಲಾಂಗ್ವೇಜ್‌, ಲಿಟರೇಚರ್‌ ಆ್ಯಂಡ್‌ ಕಲ್ಚರ್‌

ಸಂ: ಎ.ವಿ. ನಾವಡ

ಪ್ರ: ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ

***

ನಿಘಂಟಿನ ವಿಷಯ ಪ್ರಸ್ತಾಪವಾದ ಪ್ರತೀ ಸಂದರ್ಭದಲ್ಲಿ ತಪ್ಪದೇ ನೆನಪಾಗುವ ಹೆಸರು ರೆವರೆಂಡ್‌ ಫೆರ್ಡಿನೆಂಡ್‌ ಕಿಟೆಲ್‌ ಅವರದು. ಕನ್ನಡ ಸಾಹಿತ್ಯಕ್ಕೆ ಅವರು ಕೊಟ್ಟ ನಿಘಂಟಿನ ತೂಕ ಒಂದೆಡೆಯಾದರೆ, ಆಳ ಅಧ್ಯಯನದ ಅವರ ಬರಹಗಳ ತೂಕ ಮತ್ತೊಂದೆಡೆ. ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ದೂರದ ಬಾಸೆಲ್‌ನಿಂದ ಧಾರವಾಡಕ್ಕೆ ಬಂದಿಳಿದ ಕಿಟೆಲರು, ಅಷ್ಟರಲ್ಲಾಗಲೇ ಇಲ್ಲಿನ ಸಂಸ್ಕೃತಿಯನ್ನು ಅರಿತುಕೊಂಡಿದ್ದ ವೈಗಲ್ ಹಾಗೂ ಮೊರಿಕೆ ಅವರಿಂದ ಕನ್ನಡವನ್ನು ಕಲಿತರು.

ಭಾರತೀಯ ಬದುಕಿನ ಕುರಿತು ಅಪಾರ ಆಸಕ್ತಿಯನ್ನು ಹೊಂದಿದ್ದ ಕಿಟೆಲ್‌, ಇಲ್ಲಿ ಸುವಾರ್ತಾ ಪ್ರಚಾರಕರಾಗುವ ಬದಲು ಸಂಸ್ಕೃತಿ, ಭಾಷೆ, ವ್ಯಾಕರಣ, ಛಂದಸ್ಸಿನ ಶೋಧಕರಾದರು. ಬಹುಶ್ರುತ ವಿದ್ವಾಂಸರಾದ ಅವರು, ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತು ಇಂಗ್ಲಿಷ್‌ನಲ್ಲಿ ಬರೆದ 33 ವಿಸ್ತೃತ ಲೇಖನಗಳ ಸಂಗ್ರಹವೇ ‘ಸೆಲೆಕ್ಟೆಡ್‌ ರೈಟಿಂಗ್ಸ್‌ ಆಫ್‌ ರೆವರೆಂಡ್‌...’ ಕೃತಿ.

ದ್ರಾವಿಡ ಭಾಷೆಗಳ ಕುರಿತು ವಿಶೇಷವಾಗಿ ಸಂಶೋಧನೆ ನಡೆಸಿರುವ ಅವರು, ದಾಖಲಿಸಿರುವ ಕೆಲವು ಮಾಹಿತಿಗಳು ಕುತೂಹಲಕಾರಿಯಾಗಿವೆ. ಸಂಸ್ಕೃತದ ಪದಗಳು ಕನ್ನಡವೂ ಸೇರಿದಂತೆ ದ್ರಾವಿಡ ಭಾಷೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೇರಿವೆ ಎನ್ನುವುದು ಸಾಮಾನ್ಯವಾದ ನಂಬಿಕೆ. ಆದರೆ, ಕಿಟೆಲ್‌ ಅವರ ಟಿಪ್ಪಣಿ ನೋಡಿ: ‘ದ್ರಾವಿಡ ಭಾಷೆಗಳ ಅಸಂಖ್ಯ ಪದಗಳು ಸಂಸ್ಕೃತ ಭಾಷೆ ಹಾಗೂ ಪದಕೋಶದಲ್ಲಿ ಇರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಸ್ಥಳೀಯ ವ್ಯಾಕರಣ ಪಂಡಿತರು ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನೇ ಮಂಡಿಸುತ್ತಾರೆ’. ಭಾರತದಲ್ಲಿ ಮೊದಲು ಗನ್‌ಪೌಡರ್ ಬಳಕೆಯಾಗಿದ್ದು ಯಾವಾಗ ಎನ್ನುವುದೂ ಅವರ ಕೌತುಕ. ಕನ್ನಡದಲ್ಲಿ ತುಂಬಾ ಹಿಂದೆಯೇ ಬಳಕೆಯಲ್ಲಿದ್ದ ‘ಬಲಮರ್ದ’ ಹಾಗೂ ‘ಅಂಕೌಷಧ’ ಪದಗಳನ್ನು ಎತ್ತಿ ತೋರಿದ್ದಾರೆ.‌

ಕಿಟೆಲ್‌ ಅವರು ಲಿಂಗಾಯತ ಧರ್ಮದ ಕುರಿತಾಗಿ ಬರೆದ ಮೂರು ವಿದ್ವತ್‌ಪೂರ್ಣ ಲೇಖನಗಳು ಈ ಕೃತಿಯ ಭಾಗವಾಗಿದ್ದು, ಅವರ ಆಳವಾದ ಅಧ್ಯಯನಕ್ಕೆ ಈ ಲೇಖನಗಳೇ ಸಾಕ್ಷಿಯಾಗಿವೆ. ಹಲವು ಲಿಂಗಾಯತ ಮಠಗಳಿಗೆ ಭೇಟಿ ಕೊಟ್ಟಿದ್ದ ಅವರು, ಅಲ್ಲಿ ಸಿಕ್ಕ ತಾಡವೋಲೆ ಹಸ್ತಪ್ರತಿಗಳನ್ನೂ ಅವಲೋಕಿಸಿ ಮಾಹಿತಿ ಹೆಕ್ಕಿದ್ದರು. ವಿಸ್ತಾರವಾದ ಕ್ಷೇತ್ರಕಾರ್ಯವನ್ನೂ ನಡೆಸಿದ್ದರು. ಧರ್ಮದ ಅಧ್ಯಯನಾಸಕ್ತರಿಗೆ ಈ ಕೃತಿಯ ‘ಲಿಂಗಾಯತ ಅಧ್ಯಯನ’ ವಿಭಾಗ ಒಂದು ಅತ್ಯುತ್ತಮ ಆಕರ.

ಭಾರತೀಯ ಶಾಸ್ತ್ರೀಯ ಸಂಗೀತದ ಕುರಿತ ಅವರ ಟಿಪ್ಪಣಿಗಳು ತುಂಬಾ ಕುತೂಹಲಕಾರಿ. ಪಂಚತಂತ್ರ ಕಥೆಗಳ ಕುರಿತು ಜರ್ಮನಿ ಭಾಷೆಯ ಕೃತಿಗೆ ಬರೆದ ಮುನ್ನುಡಿಯು ಭಾರತೀಯ ಸಂಸ್ಕೃತಿಯ ಕುರಿತು ಅವರು ಹೊಂದಿದ್ದ ಆಳವಾದ ಜ್ಞಾನಕ್ಕೆ ದ್ಯೋತಕ.  

ಕಿಟೆಲ್‌ ಅವರು ಪದ ಸಂಗ್ರಹಕ್ಕಾಗಿ ಅನೇಕ ದೇಶೀಯ ಪಂಡಿತರನ್ನು ನೇಮಿಸಿಕೊಂಡಿದ್ದರು. ಅವರಲ್ಲಿ ಅಯ್ಯ ವಸ್ತ್ರದ ಶಿವಲಿಂಗಪ್ಪ ಪ್ರಮುಖರು. ಪಂಡಿತ ಶಿವಲಿಂಗಪ್ಪನವರ ಜತೆ ಹುಬ್ಬಳ್ಳಿ-ಧಾರವಾಡಗಳ ಬೀದಿ ಬೀದಿಗಳಲ್ಲಿ, ಸಂತೆಗಳಲ್ಲಿ ಸಂಚರಿಸಿ ಅವರು ಪದ ಸಂಗ್ರಹಿಸಿದರು. ಹಾಗೆ ಹೋದಾಗ ಅವರು ಪದ ಸಂಗ್ರಹವನ್ನಷ್ಟೇ ಮಾಡಲಿಲ್ಲ. ನೆಲದ ಸಂಸ್ಕೃತಿ, ಸಾಹಿತ್ಯದ ರಸಾನುಭವವನ್ನೂ ತಮ್ಮ ಸಂಗ್ರಹದ ಜೋಳಿಗೆಯಲ್ಲಿ ತುಂಬಿಸಿಕೊಂಡರು.

ಸಾಹಿತ್ಯ ಚರಿತ್ರಕಾರರಾಗಿ, ಗ್ರಂಥ ಸಂಪಾದನಕಾರರಾಗಿ, ನಿಘಂಟಿಗನಾಗಿ, ಪಠ್ಯಪುಸ್ತಕ ರಚನಕಾರರಾಗಿ, ಅನುವಾದಕರಾಗಿ, ಶಾಸನತಜ್ಞರಾಗಿ, ಸಂಸ್ಕೃತಿ ಚಿಂತಕರಾಗಿ, ಸಂಸ್ಕೃತ ವೇದಪಂಡಿತರಾಗಿ ಕಿಟೆಲ್‌ ಅವರು ಮಾಡಿದ ಕೆಲಸ ಎಷ್ಟೊಂದು ಹಿರಿದಾದುದು ಎಂಬುದನ್ನು ಕೃತಿ ಎತ್ತಿ ತೋರುತ್ತದೆ. ಕಿಟೆಲ್‌ ಅವರ ಬಹುಶ್ರುತ ಸಾಹಿತ್ಯ ಸಿದ್ಧಿಯನ್ನು ಅನುಲಕ್ಷಿಸಿ, ಅವರನ್ನು ಕೇವಲ ನಿಘಂಟುತಜ್ಞ ಎಂದು ಗುರ್ತಿಸುತ್ತಿರುವುದು ದುರ್ದೈವದ ಸಂಗತಿ ಎಂಬ ಉದ್ಗಾರವೂ ಹೊರಡುವಂತೆ ಮಾಡುತ್ತದೆ. ಈ ಅಮೂಲ್ಯ ಲೇಖನಗಳನ್ನು ಸಂಗ್ರಹಿಸಿದ್ದಲ್ಲದೆ ಸುದೀರ್ಘ ಪೀಠಿಕೆಯನ್ನೂ ಬರೆದ ಸಂಪಾದಕ ಎ.ವಿ. ನಾವಡ, ‘ಪತ್ರಗಳ ಮನುಷ್ಯ’ ಕಿಟೆಲ್‌ ಅವರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಈ ಅಮೂಲ್ಯ ಸಾಹಿತ್ಯದ ಸಂಪಾದನೆಯಲ್ಲಿ ಅವರು ವಹಿಸಿದ ಶ್ರಮ ಸಾರ್ಥಕವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು