ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಲೋಕನ | ಇದು ‘ತಾಂಡ’ದ ಮಾಹಿತಿ ಕಣಜ

Last Updated 4 ಜೂನ್ 2022, 19:45 IST
ಅಕ್ಷರ ಗಾತ್ರ

ಶಿರಗಾನಹಳ್ಳಿ ಶಾಂತನಾಯ್ಕ ಅವರ ಎರಡನೇ ಕಾದಂಬರಿ ‘ತಾಂಡ’. ನಾನೂರಕ್ಕೂ ಅಧಿಕ ಪುಟಗಳಲ್ಲಿ ಹರಡಿಕೊಂಡಿರುವ ಈ ಕಾದಂಬರಿಯ ಕಾಳಜಿ – ಕಥನ ಕಟ್ಟುವುದಕ್ಕಿಂತ, ಸಮುದಾಯದ ಕುರಿತು ಲೇಖಕರಿಗೆ ಗೊತ್ತಿರುವ ಮಾಹಿತಿಯನ್ನು ದಾಖಲಿಸುವುದೇ ಆಗಿದೆ. ಲೇಖಕರ ಈ ಆಶಯಕ್ಕೆ ಪೂರಕವಾಗಿಯೇ ಮುನ್ನುಡಿ ಮತ್ತು ಬೆನ್ನುಡಿಗಳನ್ನೂ ಗಮನಿಸಬಹುದು. ಬಂಜಾರ ಸಮುದಾಯದ ಪರಿಚಯವನ್ನು ಮುನ್ನುಡಿಯಲ್ಲಿ ಚೆನ್ನಾಗಿ ಮಾಡಿಕೊಡಲಾಗಿದೆ. ಬೆನ್ನುಡಿಯಲ್ಲಿ ಲೇಖಕರ ಸೂಕ್ಷ್ಮ ತಿಳಿವಳಿಕೆ ಮತ್ತು ಅನನ್ಯತೆಯನ್ನು ಗುರ್ತಿಸಲಾಗಿದೆ.

ಉತ್ತರದಿಂದ ದಕ್ಷಿಣಕ್ಕೆ ವಲಸೆ ಬಂದು, ಇಲ್ಲಿ ಬೇರೆ ಬೇರೆ ಭಾಗಗಳಲ್ಲಿ ನೆಲೆಯೂರಿ ತಮ್ಮತನವನ್ನು ಕಾಪಿಟ್ಟುಕೊಂಡಿದ್ದ ಬಂಜಾರ ಸಮುದಾಯದಲ್ಲಿ ಬದಲಾವಣೆಯ ಗಾಳಿ ಬೀಸಿದಾಗ ಆಗುವ ಸ್ಥಿತ್ಯಂತರಗಳನ್ನು ಈ ಕಾದಂಬರಿ, ಹುಲಿಯೂರ ಎಂಬ ಪಾತ್ರದ ನೆನಪಿನ ಮೂಲಕ ಕಟ್ಟಿಕೊಡುತ್ತದೆ. ಆ ಸಮುದಾಯದ ಸಾಂಸ್ಕೃತಿಕ ಹೆಗ್ಗುರುತುಗಳ ಪ್ರಸ್ತಾವವೂ ಈ ಕಥನದಲ್ಲಿ ದಾಖಲಾಗಿದೆ. ತಾಂಡಾಗಳ ಬದುಕಿನ ಬಿಂಬವೂ ಅದರೊಳಗೆ ಚಿತ್ರಿತವಾಗಿದೆ. ಆದರೆ, ತನ್ನ ಸಮುದಾಯದ ಕುರಿತು ‘ಹೇಳುವ’ಲ್ಲಿ ಲೇಖಕರಿಗೆ ಇರುವ ಉತ್ಸಾಹ, ಅದನ್ನು ಕಲಾತ್ಮಕ ಅನುಭವವಾಗಿ ಕಟ್ಟಿಕೊಡುವಲ್ಲಿ ಕಾಣಿಸುವುದಿಲ್ಲ. ಕಳೆದ ಕಾಲವೆಲ್ಲವೂ ಹೊನ್ನು, ಬದಲಾವಣೆಯಿಂದ ಸಿಕ್ಕಿದ್ದೆಲ್ಲವೂ ಪೊಳ್ಳು ಎಂಬ ಕಪ್ಪು ಬಿಳುಪು ಪೂರ್ವಗ್ರಹವೂ ಈ ಕಾದಂಬರಿಯನ್ನು ಕಾಡಿದೆ. ಕಾದಂಬರಿ ಆರಂಭವಾಗುವುದೇ ಅಂಥದ್ದೊಂದು ಹಳಹಳಿಕೆಯ, ಉಪದೇಶದ ಧ್ವನಿಯಿಂದ.

ಸಡಿಲ ಶಿಲ್ಪ ಒಂದೆಡೆಯಾದರೆ, ಎದುರಾಗುವ ಕಾಗುಣಿತ ದೋಷಗಳು ಸಹ ಓದಿನ ವೇಗಕ್ಕೆ ತಡೆಯೊಡ್ಡುತ್ತವೆ. ಮೂರು ಪುಟಗಳ ಮುನ್ನುಡಿಯಲ್ಲಿಯೇ ಅರವತ್ತಕ್ಕೂ ಹೆಚ್ಚು ಕಾಗುಣಿತ ದೋಷಗಳು ನುಸುಳಿವೆ. ಬೆನ್ನುಡಿಯಲ್ಲಿ ಉಲ್ಲೇಖಗೊಂಡಿರುವಂತೆ ಲೇಖಕರು ವಿಶ್ವವಿದ್ಯಾಲಯವೊಂದರಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರು. ಲೇಖಕರೇ ಹೇಳಿಕೊಂಡಿರುವ ಹಾಗೆ, ಒಂದು ಲಮಾಣಿ ತಾಂಡದ ಒಳಸುಳಿಗಳನ್ನು ಬಿಚ್ಚಿಡುವ ಪ್ರಯತ್ನವನ್ನು ಈ ಕಾದಂಬರಿಯಲ್ಲಿ ಮಾಡಿದ್ದಾರೆ. ಇದರ ಮೂಲಕ ಜಾಗತಿಕ ಸತ್ಯವೊಂದನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಮಾಡಿದ್ದಾಗಿ ಅವರು ಹೇಳಿದ್ದಾರೆ. ಜಾಗತಿಕವಾದ ಸತ್ಯವನ್ನು ಕಾಣಿಸುವುದೇ ಎಲ್ಲ ಒಳ್ಳೆಯ ಸಾಹಿತ್ಯದ ಉದ್ದೇಶವೂ ಆಗಿರುತ್ತದೆ. ಆದರೆ ಅಂಥ ಜಾಗತಿಕ ಸತ್ಯ ಸಾರ್ವತ್ರಿಕ ಅನುಭವವೂ ಆಗಬೇಕಾದರೆ ಕಲೆಯ ಸ್ಪರ್ಶ ಬೇಕೇ ಬೇಕು ಎನ್ನುವುದನ್ನು ಮರೆಯುವಂತಿಲ್ಲ.

ಕೃತಿ: ತಾಂಡ (ಕಾದಂಬರಿ)

ಲೇ: ಶಿರಗಾನಹಳ್ಳಿ ಶಾಂತನಾಯ್ಕ

ಪು: 428 ಬೆ: ₹400

ಪ್ರ: ಪ್ರಗತಿ ಪ್ರಕಾಶನ, ಮೈಸೂರು

ಸಂ: 0821 4287558

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT