ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಹಿಂದೆ ಸ್ಪ್ಯಾನಿಶ್ ಫ್ಲೂ ಕಾಟ

Last Updated 28 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕೊರೊನಾ ವೈರಾಣು ಈಗ ವಿಶ್ವದ 150ಕ್ಕೂ ಹೆಚ್ಚಿನ ದೇಶಗಳನ್ನು ವ್ಯಾಪಿಸಿದೆ. ಚೀನಾ, ಇಟಲಿ, ಅಮೆರಿಕ ದೇಶಗಳನ್ನು ಬಹುವಾಗಿ ಕಾಡಿದೆ, ಕಾಡುತ್ತಿದೆ. ಚೀನಾದಲ್ಲಿ ಈ ವೈರಾಣು ಈಗ ನಿಯಂತ್ರಣಕ್ಕೆ ಬಂದಿದೆ ಎನ್ನುವ ಸುದ್ದಿ ಇದೆ.

ಅದಿರಲಿ, ಕೊರೊನಾ ರೀತಿಯಲ್ಲೇ 1918ರಲ್ಲಿ ಸ್ಪ್ಯಾನಿಶ್ ಫ್ಲೂ ಎನ್ನುವ ಮಹಾಮಾರಿಯೊಂದು ವಿಶ್ವವನ್ನು ಕಾಡಿತ್ತು. ಇದು 1918ರ ಜನವರಿ ತಿಂಗಳಿನಿಂದ 1920ರ ಡಿಸೆಂಬರ್‌ವರೆಗೆ ಮನುಕುಲವನ್ನು ಕಾಡಿತ್ತು. ಈ ಸೋಂಕಿಗೆ ಸಿಲುಕಿದವರ ಸಂಖ್ಯೆ ಅಂದಾಜು 500 ಮಿಲಿಯನ್ ಎನ್ನಲಾಗಿದೆ. ಇದು ವಿಶ್ವದ ಅಂದಿನ ಒಟ್ಟು ಜನಸಂಖ್ಯೆಯ ಶೇಕಡ 25ರಷ್ಟಕ್ಕೆ ಸಮ. ಈ ರೋಗಕ್ಕೆ ಬಲಿಯಾದವರ ನಿಖರ ಸಂಖ್ಯೆ ತಿಳಿದಿಲ್ಲ. ಆದರೆ, 17 ಮಿಲಿಯನ್‌ನಿಂದ 50 ಮಿಲಿಯನ್‌ನಷ್ಟು ಜನ ಇದಕ್ಕೆ ಬಲಿ ಆಗಿದ್ದಿರಬಹುದು ಎನ್ನುವ ಅಂದಾಜು ಇದೆ.

ಇದು ಮನುಕುಲ ಕಂಡ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ಎಂದು ಹೇಳಲಾಗಿದೆ. ಜನರು ಧೈರ್ಯಗುಂದದಿರಲಿ ಎನ್ನುವ ಉದ್ದೇಶದಿಂದ, ಈ ರೋಗಕ್ಕೆ ಬಲಿಯಾದವರ ಸಂಖ್ಯೆಯನ್ನು ಅಮೆರಿಕ, ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್ ದೇಶಗಳಲ್ಲಿ ಆರಂಭ ಹಂತಗಳಲ್ಲಿ ಕಡಿಮೆ ಮಾಡಿ ಹೇಳಲಾಯಿತು ಎಂಬ ವರದಿಗಳಿವೆ. ಆದರೆ, ಈ ರೋಗಕ್ಕೆ ಬಲಿಯಾದವರ ನಿಖರ ಸಂಖ್ಯೆಯನ್ನು ಓದುಗರಿಗೆ ತಿಳಿಸುವ ಸ್ವಾತಂತ್ರ್ಯವನ್ನು ಸ್ಪೇನ್‌ ದೇಶ ತನ್ನಲ್ಲಿನ ಪತ್ರಿಕೆಗಳಿಗೆ ನೀಡಿತ್ತು. ಇದರ ಪರಿಣಾಮವಾಗಿ ಈ ರೋಗವು ಅತಿಹೆಚ್ಚಿನ ಹಾನಿಯನ್ನು ಉಂಟುಮಾಡಿರುವುದು ಸ್ಪೇನ್‌ ದೇಶದಲ್ಲಿ ಮಾತ್ರ ಎನ್ನುವ ಭಾವನೆ ಕೂಡ ಹಲವರಲ್ಲಿ ಮೂಡಿತು. ಹೀಗಾಗಿ, ಈ ರೋಗಕ್ಕೆ ಸ್ಪ್ಯಾನಿಶ್ ಫ್ಲೂ ಎನ್ನುವ ಹೆಸರು ಬಂತು.

ಈಗಿನ ಕೊರೊನಾ ವೈರಾಣು ಮನುಷ್ಯನಿಗೆ ಹರಡಿದ್ದು ಚೀನಾದಲ್ಲಿ ಎನ್ನುವ ವಿಚಾರದಲ್ಲಿ ವಿಜ್ಞಾನಿಗಳ ನಡುವೆ ಒಮ್ಮತ ಇದೆ. ಆದರೆ, ಸ್ಪ್ಯಾನಿಶ್ ಫ್ಲೂನ ಮೂಲ ಯಾವುದು ಎಂಬ ವಿಚಾರದಲ್ಲಿ ವಿಜ್ಞಾನಿಗಳ ನಡುವೆ ಒಮ್ಮತ ಇಲ್ಲ. ಸ್ಪ್ಯಾನಿಶ್ ಫ್ಲೂ ಕಾರಣದಿಂದಾಗಿ ಭಾರತದಲ್ಲಿ ಅಂದಾಜು 12 ಮಿಲಿಯನ್‌ನಿಂದ 17 ಮಿಲಿಯನ್‌ ಜನ ಮೃತಪಟ್ಟಿರಬಹುದು ಎನ್ನಲಾಗಿದೆ.

ಇಂತಹ ಶೀತಜ್ವರಗಳು ಸಾಮಾನ್ಯವಾಗಿ ವಯಸ್ಸಾದವರು ಹಾಗೂ ಚಿಕ್ಕ ವಯಸ್ಸಿನವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುತ್ತವೆ. ಯುವಕರು ಇಂತಹ ಶೀತಜ್ವರಗಳಿಗೆ ಸಾಮಾನ್ಯವಾಗಿ ದೊಡ್ಡ ಪ್ರಮಾಣದಲ್ಲಿ ಬಲಿ ಆಗುವುದಿಲ್ಲ. ಆದರೆ, ಸ್ಪ್ಯಾನಿಶ್ ಫ್ಲೂ ಮಾತ್ರ, ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಬಲಿ ತೆಗೆದುಕೊಂಡಿತು. ಇದು ಏಕೆ ಹೀಗೆ ಎಂಬ ವಿಚಾರದಲ್ಲಿಯೂ ವಿಜ್ಞಾನಿಗಳು ಹಲವು ಬಗೆಯ ವಿವರಣೆಗಳನ್ನು ನೀಡಿದ್ದಾರೆ.

ಕೊರೊನಾ ಆರಂಭವಾಗಿದ್ದು, ಬಹಳವಾಗಿ ಕಾಡಿದ್ದು ಚೀನಿಯರನ್ನು (ಈಗ ಇಟಲಿಯವರನ್ನೂ ಇದು ಕಾಡುತ್ತಿದೆ). ಆದರೆ, ಸ್ಪ್ಯಾನಿಶ್ ಫ್ಲೂ ಮಾತ್ರ ಚೀನಾ ದೇಶವನ್ನು ಅಷ್ಟಾಗಿ ಬಾಧಿಸಲಿಲ್ಲ ಎಂದು ಕೆಲವು ದಾಖಲೆಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT