ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ರಾಮಾಯಣ ‘ದರ್ಶನ’ಕ್ಕೆ ದಾರಿದೀಪ

Last Updated 22 ಜನವರಿ 2022, 19:31 IST
ಅಕ್ಷರ ಗಾತ್ರ

ಕುವೆಂಪು ಶ್ರೀರಾಮಾಯಣ ದರ್ಶನಂ ವಚನ ದೀಪಿಕೆ
ಲೇ:
ಡಾ.ಜಿ.ಕೃಷ್ಣಪ್ಪ
ಪ್ರ: ಅನ್ನಪೂರ್ಣ ಪಬ್ಲಿಷಿಂಗ್‌ ಹೌಸ್‌
ಸಂ: 9448291802

**

ಕುವೆಂಪು ಮತ್ತು ಬೇಂದ್ರೆ–ಕನ್ನಡ ಕಾವ್ಯದ ಎರಡು ಕಣ್ಣುಗಳು. ಈ ಎರಡೂ ಕಾವ್ಯದ ಕಣ್ಣುಗಳಿಂದಲೇ ಸಾಹಿತ್ಯ ಲೋಕದಲ್ಲಿ ವಿಹರಿಸುವ ಹಂಬಲ ಲೇಖಕ ಜಿ.ಕೃಷ್ಣಪ್ಪ ಅವರದು. ದಶಕಗಳ ಕಾಲ ಬೇಂದ್ರೆ ಕಾವ್ಯ ಕಡಲಿನಲ್ಲಿ ಈಜಾಡಿದ ಅವರಿಗೀಗ ಕುವೆಂಪು ಸಾಹಿತ್ಯ ಸಾಗರದ ಆಳಕ್ಕಿಳಿದು ರಸಾನುಭೂತಿ ಪಡೆಯುವ ಹಂಬಲ. ಹೀಗಾಗಿ ಕೆಲವು ವರ್ಷಗಳಿಂದ ಅವರು ಕುವೆಂಪು ಧ್ಯಾನಾಸಕ್ತ. ‘ಶ್ರೀ ರಾಮಾಯಣ ದರ್ಶನಂ’ ಅಧ್ಯಯನದಲ್ಲಿ ಅವರು ಯಾವ ಪರಿ ಮುಳುಗಿ ಹೋಗಿದ್ದಾರೆಂದರೆ ಅದರಲ್ಲಿ ಕಂಡ ಕಾವ್ಯದರ್ಶನದ ಫಲವೇ ‘ಕುವೆಂಪು ಹನುಮದ್ದರ್ಶನ’ ಮತ್ತು ‘ಶ್ರೀರಾಮಾಯಣ ದರ್ಶನಂ ಪಾತ್ರಗಳ ಕಥಾವಳಿ’ ಕೃತಿಗಳು. ಇದೀಗ ‘ಕುವೆಂಪು ಶ್ರೀರಾಮಾಯಣ ದರ್ಶನಂ ವಚನ ದೀಪಿಕೆ’ ಎಂಬ ಬೃಹತ್‌ ಸಂಪುಟ ಹಿಡಿದು ಬಂದಿದ್ದಾರೆ.

ಮಹಾಕಾವ್ಯಗಳ ಕಾಲ ಮುಗಿದೇಹೋಯಿತು ಎನ್ನುವಾಗ ಕುವೆಂಪು ಅವರಿಂದ ರಚಿತವಾದ ಆಧುನಿಕ ಸಾಹಿತ್ಯದ ಲೋಕೋತ್ತರ ಕೃತಿ ‘ಶ್ರೀರಾಮಾಯಣ ದರ್ಶನಂ’. ‘ಹಳೆಯ ಕಥೆ, ಹೊಸ ಯುಗಧರ್ಮವನ್ನು ಮೈಗೂಡಿಸಿಕೊಂಡು, ಎಷ್ಟರಮಟ್ಟಿಗೆ ಹೊಸದಾಗಬಹುದು ಎಂಬುದಕ್ಕೆ ಈ ಮಹಾಕಾವ್ಯ ಉಜ್ವಲ ಉದಾಹರಣೆ. ಮಿಲ್ಟನ್‌ ಕವಿಯ ‘ಪ್ಯಾರಡೈಸ್‌ ಲಾಸ್ಟ್‌’, ‘ಪ್ಯಾರಡೈಸ್‌ ರಿಗೇನ್ಡ್‌’ ಆದಮೇಲೆ ಯಾವ ಭಾಷೆಯಲ್ಲೇ ಆಗಲಿ ಈ ಪ್ರಮಾಣದ ಒಂದು ಮಹಾಕಾವ್ಯ ಬಂದದ್ದನ್ನು ಕಾಣೆ’ ಎಂದು ಗೋವಿಂದ ಪೈ ಅವರು ಹೇಳಿರುವುದು ಸುಮ್ಮನೆಯೇ ಮತ್ತೆ? ಕನ್ನಡ ಸಾಹಿತ್ಯದಲ್ಲಿ ಆಸಕ್ತರಾದ ಯಾರಿಗಾದರೂ ಈ ಕಾವ್ಯದ ಮೇಲೆ ಒಂದು ಮೋಹ ಇದ್ದದ್ದೇ. ಅದರಲ್ಲೂ ಕೃಷ್ಣಪ್ಪನಂಥವರು ‘ದರ್ಶನಂ’ನ ಕಡು ವ್ಯಾಮೋಹಿಗಳು. ಹಳೆಗನ್ನಡ ಶೈಲಿಯಲ್ಲಿರುವ ಈ ಮಹಾಕಾವ್ಯಕ್ಕೆ ಅವರೀಗ ಗದ್ಯರೂಪದಲ್ಲಿ ಅರ್ಥ ನೀಡಿದ್ದಾರೆ.

ಕನ್ನಡದ ಈ ಮೇರು ಮಹಾಕಾವ್ಯಕ್ಕೆ 1954ರಷ್ಟು ಹಿಂದೆಯೇ ದೇ.ಜವರೇಗೌಡರು ‘ಶ್ರೀರಾಮಾಯಣ ದರ್ಶನಂ ವಚನ ಚಂದ್ರಿಕೆ’ ಹೆಸರಿನಲ್ಲಿ ಗದ್ಯರೂಪದಲ್ಲಿ ಅರ್ಥ ನೀಡಿದ್ದಾರೆ. ನಿ.ರಾಜಶೇಖರ ಹಾಗೂ ಟಿ.ಭೀಮಯ್ಯ ಮಾರೇನಹಳ್ಳಿ ಅವರೂ ಅಂತಹ ಪ್ರಯತ್ನ ಮಾಡಿದ್ದಾರೆ. ಈ ಕಾವ್ಯದ ಕುರಿತಂತೆ ಅಧ್ಯಯನ ಮಾಡಿದ, ಲೇಖನ ಬರೆದ ಸಾಹಿತ್ಯಾಸಕ್ತರಿಗೆ ಲೆಕ್ಕವಿಲ್ಲ. ಈಗೇಕೆ ಕೃಷ್ಣಪ್ಪ ಅವರಿಂದ ಈ ಪ್ರಯತ್ನ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಆರಂಭಿಕ ಮಾತುಗಳಲ್ಲಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ‘ಹಲವರು ಮಾಡಿದ ಇಂತಹ ಸಾಹಸವನ್ನು ನಾನೂ ಏಕೆ ಮಾಡಬಾರದು’ ಎಂಬ ಇಚ್ಛೆಯಿಂದ ಈ ಪ್ರಯತ್ನಕ್ಕೆ ಕೈಹಾಕಿದೆ’ ಎಂದು. ಬಾಳಸಂಧ್ಯೆಯಲ್ಲಿ ಅವರ ಅಧ್ಯಯನದ, ಬರವಣಿಗೆಯ ಈ ಉತ್ಸಾಹ ಯುವಕರಿಗೂ ಪ್ರೇರಣೆದಾಯಕ.

ಕುವೆಂಪು ಅವರ ಮಹಾಕಾವ್ಯವು ನಾಲ್ಕು ಸಂಪುಟಗಳಲ್ಲಿ ವಿಸ್ತರಿಸಿದೆ. ಅವುಗಳೇ ಅಯೋಧ್ಯಾ ಸಂಪುಟ, ಕಿಷ್ಕಿಂದಾ ಸಂಪುಟ, ಲಂಕಾ ಸಂಪುಟ ಮತ್ತು ಶ್ರೀ ಸಂಪುಟ. ಈ ನಾಲ್ಕೂ ಸಂಪುಟಗಳ ಗದ್ಯರೂಪ ಈ ಕೃತಿಯಲ್ಲಿದೆ. ಗದ್ಯರೂಪ ನೀಡಿದ ಬಗೆ ಹೇಗಿದೆ ಎಂಬುದನ್ನು ಅಯೋಧ್ಯಾ ಸಂಪುಟದ ಮೊದಲ ಐದು ಸಾಲುಗಳ ಉದಾಹರಣೆಯಿಂದಲೇ ನೋಡಬಹುದು:

‘ಶ್ರೀ ರಾಮ ಕಥೆಯಂ ಮಹರ್ಷಿ ನಾರದ ವೀಣೆಯಿಂ
ಕೇಳ್ದು, ಕಣ್ದಾವರೆಯೊಳಶ್ರುರಸಮುಗುವನ್ನೆಗಂ
ರೋಮಹರ್ಷಂದಾಳ್ದು ಸಹೃದಯಂ ವಾಲ್ಮೀಕಿ ತಾಂ
ನಡೆತಂದನಾತ್ಮಸುಖಿ, ಕೇಳ್, ತಮಸಾ ನದೀ ತಟಿಗೆ,
ತೇಜಸ್ವಿ, ತರುಣಂ ತಪೋವಲ್ಕಲ ವಸ್ತ್ರ ಶೋಭಿ.’

‘ದರ್ಶನಂ’ಗೆ ಇಂಗ್ಲಿಷ್‌ ರೂಪ ನೀಡಿದ ಶಂಕರ ಮೊಕಾಶಿ ಪುಣೇಕರ ಅವರು ಈ ಸಾಲುಗಳಿಗೆ ನೀಡಿದ ಗದ್ಯರೂಪ ಹೀಗಿದೆ: ‘ಶ್ರೀರಾಮನ ಕಥೆಯನ್ನು ಮಹರ್ಷಿ ನಾರದನ ವೀಣೆಯಿಂದ ಕೇಳಿ, ತಪಸ್ವಿಯೂ, ಸಹೃದಯನೂ, ತೇಜಸ್ವಿಯೂ ಆದ ತರುಣ ವಾಲ್ಮೀಕಿಯು ತನ್ನ ಕಮಲದಂತಹ ಕಣ್ಣುಗಳಲ್ಲಿ ಆನಂದಭಾಷ್ಪಗಳು ಉದುರುವಷ್ಟು ರೋಮಾಂಚನಗೊಂಡ. ನಾರುಡೆಯನ್ನು ಧರಿಸಿದ್ದ ಅವನು ಆತ್ಮಾನಂದದಿಂದ ಸುಖಿಸುತ್ತಾ ತಮಸಾ ನದಿ ತೀರಕ್ಕೆ ನಡೆದು ಹೊರಟ.’

ಕೃಷ್ಣಪ್ಪ ಅವರು ಹೀಗೆ ಬರೆಯುತ್ತಾರೆ: ‘ಶ್ರೀರಾಮನ ಕಥೆಯನ್ನು ಮಹರ್ಷಿ ನಾರದರ ವೀಣೆಯಿಂದ ಕೇಳಿ, ತಾವರೆಯ ಕಣ್ಣುಗಳಲ್ಲಿ ಆನಂದಾಶ್ರುಗಳು ಹೊಮ್ಮುವಂತೆ ಸಹೃದಯ ವಾಲ್ಮೀಕಿ ರೋಮಾಂಚಿತನಾದನು. ನಾರುಮಡಿಯಿಂದ ಶೋಭಾಯಮಾನವಾದ ತೇಜಸ್ವಿ, ತರುಣ ಆತ್ಮಸುಖಿಯಾದ ಅವನು ತಮಸಾನದಿ ತೀರದ ಕಡೆ ನಡೆದನು’. ಮೊಕಾಶಿ ಅವರ ವ್ಯಾಖ್ಯಾನದಲ್ಲಿ ಕಾವ್ಯದ ಭಾವಕ್ಕೆ ಸರಳವಾದ ಗದ್ಯರೂಪ ನೀಡಲಾಗಿದ್ದರೆ, ಕೃಷ್ಣಪ್ಪ ಅವರದು ಸಾಲು, ಸಾಲಿನ ಯಥಾರ್ಥವಾದ ಗದ್ಯರೂಪ. ಎರಡಕ್ಕೂ ಅವುಗಳದೇ ಆದ ವೈಶಿಷ್ಟ್ಯವಿದೆ. ಕೃಷ್ಣಪ್ಪನವರು ಯಥಾರ್ಥವನ್ನು ಇಟ್ಟುಕೊಂಡೇ ಇನ್ನಷ್ಟು ಸರಳವಾಗಿ ಗದ್ಯರೂಪ ನೀಡಬಹುದಿತ್ತೇ ಎಂಬ ಪ್ರಶ್ನೆ ಅಲ್ಲಲ್ಲಿ ಹಾದು ಹೋಗುತ್ತದೆ.

ರಸಾನುಭೂತಿಗೆ ಮೂಲ ಮಹಾಕಾವ್ಯವಿದ್ದರೆ, ಅರ್ಥೈಸಿಕೊಳ್ಳುವುದಕ್ಕೆ ಈ ಗದ್ಯರೂಪವಿದೆ. ಸಾಹಿತ್ಯದ ಸಂಶೋಧನಾರ್ಥಿಗಳು ಮೂಲ ಹಾಗೂ ಗದ್ಯರೂಪ ಕೃತಿಗಳೆರಡನ್ನೂ ಮುಂದಿಟ್ಟುಕೊಂಡು ಕಾವ್ಯದ ಒಂದೊಂದು ಸಾಲಿನ ಕುರಿತೂ ಅಧ್ಯಯನ ಮಾಡಬಹುದು. ಒಳಗೂ ಇಳಿಸಿಕೊಳ್ಳಬಹುದು. ‘ಶ್ರೀ ರಾಮಾಯಣ ದರ್ಶನಂ ನಿಘಂಟು’ ಅಂತೂ ವಚನ ದೀಪಿಕೆಯ ಹೆಗ್ಗುರುತು. ಕಾವ್ಯದಲ್ಲಿ ಬಳಕೆಯಾದ ಪ್ರತಿಯೊಂದು ಕ್ಲಿಷ್ಟಪದದ ಅರ್ಥವಿವರಣೆಯೂ ಇಲ್ಲಿದೆ. ಕಾವ್ಯದ ಅಧ್ಯಯನ ಮಾಡುವವರಿಗೆ ಅದೊಂದು ದಾರಿದೀಪವಾಗಿದೆ. ಅಂದಹಾಗೆ, ಕೃಷ್ಣಪ್ಪ ಅವರ ಬಲುದೊಡ್ಡ ಕಾಣಿಕೆಯಾಗಿ ಈ ಕೃತಿ ಕನ್ನಡ ಸಾಹಿತ್ಯದಲ್ಲಿ ನಿಲ್ಲಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT