ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಪೋಲಿಷ್‌ ಜನಜೀವನ ಶೋಧದ ಕತೆಗಳು

Last Updated 3 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಸ್ಲಾವೊಮೀರ್ ಮ್ರೋಜೆಕ್‍ನ ಕತೆಗಳು - ಪೋಲಿಷ್ ಕತೆಗಳ ಅನುವಾದ
ಅನುವಾದ:
ಡಾ. ಬಿ.ಎ. ವಿವೇಕ ರೈ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ಪುಟ 104; ಬೆಲೆ ರೂ. 80

**
ಸ್ಲಾವೊಮೀರ್ ಮ್ರೋಜೆಕ್‍ನ ಈ ಕತೆಗಳನ್ನು ಕುರಿತು ಬರೆಯಲು ನನಗೊಂದು ಕಾರಣವಿದೆ. 1974ರಲ್ಲಿ ಗೋಪಾಲಕೃಷ್ಣ ಅಡಿಗರ ಕೋರಿಕೆಯಂತೆ ನಾನು ‘ಸಾಕ್ಷಿ’ ತ್ರೈಮಾಸಿಕದ 25ನೆಯ ಸಂಚಿಕೆಗೆ ಗೌರವ ಸಂಪಾದಕನಾಗಿದ್ದೆ. ಪೋಲಿಷ್ ಸಾಹಿತ್ಯಕ್ಕೆ ಮೀಸಲಾಗಿದ್ದ ಆ ಸಂಚಿಕೆಯಲ್ಲಿ ಇದೇ ಮ್ರೋಜೆಕ್‍ನ ‘ಶಿಬಿರದ ದಾರಿ’ ಎಂಬ ಕತೆಯನ್ನು ಸೇರಿಸಿದ್ದೆ. ಅದನ್ನು ದಿವಂಗತ ಜಿ.ಎಸ್. ಸದಾಶಿವ ಅನುವಾದಿಸಿ ಕೊಟ್ಟಿದ್ದರು. ಆಮೇಲೆ ನಾನೂ ಇವನ ಕೆಲವು ಕತೆಗಳನ್ನು ಅನುವಾದಿಸಿದ್ದುಂಟು. ತೊಂಬತ್ತರ ದಶಕದಲ್ಲಿ ಬಿ.ವಿ.ಕಾರಂತರಿಗೆ ಇವನು ಬರೆದ ‘ಟ್ಯಾಂಗೊ’ ನಾಟಕವನ್ನು ಯಾರಿಂದಲಾದರೂ ಅನುವಾದ ಮಾಡಿಸಿ ಆಡಿಸುವ ಆಸೆಯಿತ್ತು.

ಮ್ರೋಜೆಕ್ ಪೋಲೆಂಡಿನ ಪ್ರಸಿದ್ಧ ವ್ಯಂಗ್ಯಚಿತ್ರಕಾರ, ಕತೆಗಾರ, ನಾಟಕಕಾರ. ಇವನ ಮೊದಲ ಕಥಾ ಸಂಕಲನ ಪೋಲಿಷ್ ಭಾಷೆಯಲ್ಲಿ ಪ್ರಕಟಗೊಂಡದ್ದು 1957ರಲ್ಲಿ. ಇದು 1968ರಲ್ಲಿ ‘ದಿ ಎಲಿಫೆಂಟ್’ ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಗೊಂಡಿತು. ಇದರಲ್ಲಿ ವಿಡಂಬನೆಯಿಂದ ಹಿಡಿದು ಬುಡಮೇಲುಗೊಳಿಸುವಂಥ ಅಸಂಗತ ಧಾಟಿಯವರೆಗೆ ಒಟ್ಟು 42 ಕತೆಗಳಿವೆ. ಶೀರ್ಷಿಕೆಯ ಕತೆ ‘ಆನೆ’ಯಲ್ಲಿ ಸಣ್ಣದೊಂದು ಪಟ್ಟಣದಲ್ಲಿ ಹಣ ಉಳಿಸುವ ಉದ್ದೇಶದಿಂದ ನಿಜವಾದ ಆನೆಗೆ ಬದಲಾಗಿ ಆನೆಯಾಕಾರದ ಒಂದು ರಬ್ಬರಿನ ಬಲೂನನ್ನು ಕೊಂಡು ತಂದು ಅದಕ್ಕೆ ಗಾಳಿಯೂದಿ ಉಬ್ಬಿಸಿ ಅದನ್ನು ಮೃಗಾಲಯದಲ್ಲಿ ನಿಲ್ಲಿಸುವ ವಿದ್ಯಮಾನವಿದೆ. ಆದರೆ ಗಾಳಿ ಬೀಸಿದ್ದೇ ಅದು ನಿಂತಲ್ಲಿ ನಿಲ್ಲದೆ ಹಾರಿಹೋಗಿಬಿಡುತ್ತದೆ. ಈ ಪ್ರಸಂಗದ ಋಣಾತ್ಮಕ ಪರಿಣಾಮವನ್ನು ಚಿತ್ರಿಸುವ ಮೂಲಕ ಪಟ್ಟಣದ ಜನರಿಗೆ ಸುಳ್ಳುಗಳ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸುವ ಕತೆಯಲ್ಲಿ ರಾಜಕೀಯ ವರ್ಗದ ವಂಚನೆಯ ಸ್ವರೂಪವಿದೆ, ಸಾಮಾನ್ಯ ಜನರ ಮುಗ್ಧತೆಯ ನಕಾಶೆಯಿದೆ, ನಮ್ಮ ನೀತಿಕತೆಗಳ ಕಾಲಾತೀತ ಗುಣವಿದೆ. ಜೊತೆಗೆ ಸರಳ ನೇರ ನಿರೂಪಣಾ ಶೈಲಿಯ ಕತೆಯಲ್ಲಿ ಮ್ರೋಜೆಕ್‍ನ ಕಾಲದ ಅನುಭವಗಳ ಬಗ್ಗೆ ಸಾಕಷ್ಟು ಒಳನೋಟಗಳೂ ಇವೆ.

ಮ್ರೋಜೆಕ್‍ನ ಕಾಲವೆಂದರೆ ಪೋಲೆಂಡ್‌ನಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ವಾಧಿಕಾರಿ ಆಳ್ವಿಕೆಯಿದ್ದ ಕಾಲ; ತಮ್ಮ ಸಮಾಜದ ಕುಂದುಕೊರತೆಗಳ ವಿರುದ್ಧ ನೇರವಾಗಿ ಮಾತಾಡಿದವರನ್ನು ಜೈಲಿಗೆ ಅಟ್ಟುತ್ತಿದ್ದ, ಗಡಿಪಾರು ಮಾಡುತ್ತಿದ್ದ ಕಾಲ. ಆಗ ಸರ್ವಾಧಿಕಾರಿಯಾಗಿದ್ದ ವ್ಲಾದಿಸ್ಲಾ ಗೋಮುಲ್ಕ (1905-1982) ಎರಡನೆಯ ಮಹಾಯುದ್ಧದ ನಂತರ ಪೋಲೆಂಡ್‌ ಕಮ್ಯುನಿಸಂಗೆ ಹೊರಳುವಲ್ಲಿ ಪ್ರಮುಖ ಪಾತ್ರ ವಹಿಸಿದವನು; ಸ್ವತಃ ಯಹೂದಿಗಳ ವಿರೋಧಿಯಾಗಿದ್ದು ಸಮಾಜದ ಅನೇಕ ಯಹೂದಿಗಳ ವಿರುದ್ಧ ಬರ್ಬರ ಕಾರ್ಯಾಚರಣೆ ನಡೆಸಿದವನು.

ವಿಪರ್ಯಾಸವೆಂದರೆ 1948ರಲ್ಲಿ ಅವನೇ ಅಧಿಕಾರ ಕಳೆದುಕೊಂಡದ್ದು. ಅದಕ್ಕೆ ಕಾರಣ ಅವನು ಸೋವಿಯತ್‌ ಯೂನಿಯನ್‌ನಲ್ಲಿ ಸ್ಟಾಲಿನ್ನನಿಗೆ ನಿಷ್ಠೆಯಿಂದಿದ್ದ ಗುಂಪಿಗೆ ಬದಲಾಗಿ ಪೋಲಿಷ್ ಕಮ್ಯುನಿಸ್ಟರಿಗೇ ಹೆಚ್ಚು ಬೆಂಬಲ ನೀಡಿದ್ದು. ಸುಮಾರು ಒಂದು ದಶಕ ಜೈಲಿನಲ್ಲಿದ್ದವನು ಸ್ಟಾಲಿನ್ನನ ಮರಣಾನಂತರ ಮತ್ತೆ ಅಧಿಕಾರಕ್ಕೆ ಬಂದ. ಅಂಥ ಕಾಲದಲ್ಲಿ ವಸ್ತುಸ್ಥಿತಿಯನ್ನು ವ್ಯಕ್ತಪಡಿಸುವ ತುರ್ತಿದ್ದ ಲೇಖಕರಿಗೆ ವಾಸ್ತವಕ್ಕೊಂದು ಪ್ರತಿ-ವಾಸ್ತವವನ್ನು ಸೃಷ್ಟಿಸುವುದಲ್ಲದೆ ಬೇರೆ ದಾರಿಯೇ ಇರಲಿಲ್ಲ.

‘ದಿ ಎಲಿಫೆಂಟ್’ ಸಂಕಲನದ ವೈವಿಧ್ಯವನ್ನು ನೋಡಿ: ಒಬ್ಬ ಫಾರೆಸ್ಟರನ ಬಹುದೊಡ್ಡ ಮೀಸೆಯೇ ಬಟ್ಟೆ ಒಣಹಾಕುವ ತಂತಿಯಾಗುತ್ತದೆ; ಸಿಂಹವೊಂದು ಕ್ರಿಶ್ಚಿಯನ್ನರು ಅಧಿಕಾರಕ್ಕೆ ಬರಬಹುದೆಂದು ಎಚ್ಚರಿಸುತ್ತದೆ; ಒಬ್ಬ ಹವಾಮಾನತಜ್ಞನಿಗೆ ಪ್ರವಾಹವಿದ್ದರೂ ಒಳ್ಳೆಯ ಮುನ್ಸೂಚನೆ ನೀಡುವಂತೆ ಒತ್ತಾಯ ಮಾಡಲಾಗುತ್ತದೆ; ನಾಗರಿಕಸೇವಾ ಅಧಿಕಾರಿಗಳು ತಮ್ಮ ಅಜಾಗರೂಕತೆಯಿಂದಾಗಿಯೇ ಆಫೀಸಿನ ಕಿಟಕಿಗಳಿಂದ ಹಾರಿಹೋಗುತ್ತಾರೆ; ರೈತನೊಬ್ಬ ಹೆಂಚುಹೊದಿಸುವ ಕಾರ್ಯದ ಮುಂಚೂಣಿಯಲ್ಲಿದ್ದರೆ ಮನೆಯಲ್ಲಿ ಅವನ ಹೆಂಡತಿ ಚಳಿಯಿಂದ ನಡುಗುತ್ತಿರುತ್ತಾಳೆ; ಹೆಂಡತಿಯೊಬ್ಬಳಿಗೆ ಮದುವೆಯಾಗಿ ಏಳು ವರ್ಷಗಳ ನಂತರ ತನ್ನ ಗಂಡ ತಯಾರಾಗಿರುವುದು ಜಿಗುಟು ಮಣ್ಣಿನಿಂದ ಎಂದು ಅರಿವಾಗುತ್ತದೆ.

ಯುದ್ಧೋತ್ತರ ಪೋಲಿಷ್ ಜನಜೀವನವನ್ನೂ ಪರಮಾಧಿಕಾರದ ಅಸಂಗತತೆಯನ್ನೂ ಒಟ್ಟಿಗೆ ಶೋಧಿಸುವ ಈ ಸಂಕಲನದ 22 ಕತೆಗಳು ಇದೀಗ ಕನ್ನಡಕ್ಕೆ ಬಂದಿವೆ - ಡಾ. ಬಿ.ಎ.ವಿವೇಕ ರೈ ಅವರ ಸೊಗಸಾದ ಅನುವಾದದಲ್ಲಿ. ವಿವೇಕ ರೈ ಅವರು ಶಿಕ್ಷಣತಜ್ಞರು, ಬಹುಶ್ರುತ ವಿದ್ವಾಂಸರು. ‘ಚಿಲಿಯಲ್ಲಿ ಭೂಕಂಪ’, ‘80 ದಿನಗಳಲ್ಲಿ ವಿಶ್ವ ಪರ್ಯಟನ’ ಮುಂತಾದವನ್ನೂ ಬರ್ಟೋಲ್ಟ್ ಬ್ರೆಖ್ಟ್, ಪಾಲ್ ಸೆಲಾನ್‍ರಂಥ ಜರ್ಮನ್ ಕವಿಗಳ ಕೆಲವು ಕವನಗಳ ಅನುವಾದವನ್ನೂ ನೋಡಿದರೆ ಅವರ ಆಸಕ್ತಿಯ ಹರವು ಗೊತ್ತಾಗುತ್ತದೆ. ಅರ್ಜೆಂಟೀನಾದ ಲೇಖಕ ಬೋರ್ಹೆಸ್ ‘ನಾವು ಒಂದು ಅನುವಾದಿತ ಕೃತಿಯನ್ನು ಅನುವಾದವೆಂದು ಓದಬೇಕೇ ಹೊರತು ಅದೊಂದು ಸ್ವತಂತ್ರ ಕೃತಿಯೆಂದು ಅಲ್ಲ’ ಎಂದೊಮ್ಮೆ ಹೇಳಿದ್ದುಂಟು.

ಆದರೆ, ನಮ್ಮಲ್ಲೀಗ ಮೂಲ ಲೇಖಕನನ್ನು ‘ಕನ್ನಡ ಜಾಯಮಾನ’ಕ್ಕೆ ಒಗ್ಗಿಸುವುದೇ ಅನುವಾದದ ಪರಮೋದ್ದೇಶವೆಂದಾಗಿದೆ. ಹಾಗಾಗಿ ಮೂಲ ಪಠ್ಯದಲ್ಲಿ ಎರಡು ಮೂರು ವಾಕ್ಯಗಳ ಒಂದು ಪ್ಯಾರಾ ಇದ್ದರೆ ಅದು ಕನ್ನಡದಲ್ಲಿ ಹತ್ತು ಹನ್ನೆರಡು ವಾಕ್ಯಗಳ ಪ್ಯಾರಾ ಆಗುವುದು ಅಸಂಭವವಲ್ಲ. ವಿವೇಕ ರೈ ಅವರು ಮೂಲ ಪಠ್ಯದ ‘ಟೋನ್’ ಅನ್ನು ಬಿಟ್ಟುಕೊಡುವ ಅನುವಾದಕರಲ್ಲ. ಹಾಗಾಗಿ ಅವರ ಈ ಅನುವಾದದಲ್ಲಿ ಮ್ರೋಜಕ್‍ನ ಆಶಯದ ಜೊತೆಗೆ ಅವನ ನಿರೂಪಣೆಯಲ್ಲಿರುವ ಧ್ವನಿಯ ಏರಿಳಿತಗಳು ಕೂಡ ಅನುರಣಿಸುತ್ತಿವೆ. ನನ್ನ ದೃಷ್ಟಿಯಲ್ಲಿ ಕನ್ನಡವು ಮ್ರೋಜೆಕ್‍ನಂಥ ಲೇಖಕರನ್ನು ಒಳಗೊಳ್ಳಬೇಕಾದದ್ದೇ ಹೀಗೆ.

ನಮ್ಮ ವಿಶ್ವವಿದ್ಯಾಲಯಗಳು ಸಮಕಾಲೀನ ಸೃಜನಶೀಲ ಸಾಹಿತ್ಯವನ್ನು ಪ್ರಕಟಿಸಲೇಬಾರದೆಂದು ಪಣತೊಟ್ಟಂತಿವೆ. ಹೀಗಿದ್ದೂ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಈ ಮುಖ್ಯ ಅನುವಾದವನ್ನು ಪ್ರಕಟಿಸಿರುವುದು ನಿಜಕ್ಕೂ ಸ್ವಾಗತಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT