ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಾಬಾಯಿಯ ಪತ್ರ

Last Updated 18 ಫೆಬ್ರುವರಿ 2019, 11:21 IST
ಅಕ್ಷರ ಗಾತ್ರ

ತೊಡೆಗೆ ಗುಂಡು ಬಿದ್ದಿದ್ದು, ವಿದೇಶದ ಆಸ್ಪತ್ರೆಯಲ್ಲಿ ದಿನಗಳೆಯುತ್ತಿರುವ ವಿಕ್ರಮ್‌ ರಂಜನಿಗಾಗಿ ಹಲುಬುತ್ತಲೇ ಪತ್ರಗಳನ್ನು ಬರೆಯುತ್ತಾನೆ. ಸಾವಿನ ಹೊಸಿಲಿನಿಂದ ಒಂದೆರಡೇ ಹೆಜ್ಜೆ ಹಿಂದಿದ್ದಾಗ ತನಗಾದುದು ಸತ್ಯದರ್ಶನ ಎಂಬ ತೀರ್ಮಾನಕ್ಕೆ ಬರುತ್ತಾನೆ. ಆದರೆ, ಆ ಹಲುಬುವಿಕೆ ಪ್ರೇಯಸಿ, ರಂಜನಿಗಾಗಿಯೇ ಅಥವಾ ಹೆಂಡತಿ ಗಂಗಾಳಿಗಾಗಿಯೇ? ಈ ಪ್ರಶ್ನೆಗಳಿಗೆ ಉತ್ತರ ವಿಕ್ರಮ್‌ ಬಳಿಯೂ ಇಲ್ಲ.ಹೆಂಡತಿಯನ್ನು ಪ್ರೀತಿಸುತ್ತಲೇ, ಸಹೋದ್ಯೋಗಿ ಯನ್ನೂ ಬಯಸುವ, ಅನುಭವಿಸುವ ಈ ಪಾತ್ರ ತನ್ನ ಗುಣಕ್ಕೆ ಆನುವಂಶಿಕವಾಗಿ ಬರುವ ಕ್ಷಾತ್ರಗುಣವೇ ಎಂಬ ಸಮರ್ಥನೆಯನ್ನು ಮುಂದಿಟ್ಟುಕೊಳ್ಳುತ್ತದೆ.

ಜಾತಿಯೆಂಬುದು ನಾಮಸೂಚಕವೂ ಹೌದು. ಗುಣಸೂಚಕವೂ ಹೌದು ಎಂಬ ತೀರ್ಮಾನಕ್ಕೂ ಬರುತ್ತದೆ. ಸಾವಿನ ಹೊಸಿಲಿನಲ್ಲಿರುವಾಗ ಸತ್ಯ ವೊಂದೇ ಆಚೆ ಬರುವುದು ಎಂಬಲ್ಲಿ ಪ್ರಾಮಾಣಿಕನಾಗುವ ವಿಕ್ರಮ್‌ಗೆ ತನ್ನಪ್ಪನ ಅಯ್ಯಾಶಿ ಜೀವನ, ಆಯಿ ಅದನ್ನು ಸ್ವೀಕರಿಸಿದ ಬಗೆ ಯಾವತ್ತಿಗೂ ಸೋಜಿಗದ ವಸ್ತುವೇ. ಹೆಣ್ಣುಮಕ್ಕಳ ಆಂತರ್ಯವನ್ನು ಅರಿಯುವ ಯತ್ನದಲ್ಲಿಯೇ ತನ್ನವ್ವ ಅಪ್ಪನ ಪ್ರೇಯಸಿಯರನ್ನು ನಿಂದಿಸುತ್ತಲೇ ಬುತ್ತಿ ಕಳಿಸಿಕೊಡುವ ಧಾರಾಳಿಯಾಗಿ ಕಂಡು ಬಂದರೆ, ಗಂಗಾ ವಿಕ್ರಮನ ಈ ಪ್ರಣಯವನ್ನು ಅರಿತಾಗ ಮೌನದ ಮೊರೆ ಹೋಗುತ್ತಾಳೆ. ಅವಳ ಈ ಜಂಗಮತ್ವವನ್ನು ಅರಗಿಸಿಕೊಳ್ಳಲಾಗುವುದೇ ಇಲ್ಲ. ತನ್ನೊಳಗಿನ ಅಪರಾಧಿ ಮನೋಭಾವದಿಂದಾಚೆ ಬರಲು, ಗಂಗಾಳಿಂದ ದೂರವಾಗುತ್ತಲೇ ಹೋಗುತ್ತಾನೆ... ಪ್ರೀತಿ ತೆರೆಮರೆಗೆ ಸರಿಯುತ್ತಲೇ, ರಂಜನಿಯೊಂದಿಗೆ ರಂಜನೀಯ ಘಟ್ಟಕ್ಕೆ ತೆರೆದುಕೊಳ್ಳುತ್ತಿರುತ್ತಾನೆ.

ಹಾಸಿಗೆಯೊಳಗೆ ಕ್ಷಾತ್ರಗುಣ ಮೆರೆಯುವ ವಿಕ್ರಮನಿಗೆ ಸಮುದ್ರದಲೆಯಂತೆ ಉದ್ವೇಗ, ಉದ್ರೇಕಗಳನ್ನು ಹುಟ್ಟಿಸುವ ರಂಜನಿ ಹತ್ತಿರದವಳಾಗುತ್ತಾಳೆ. ಶಾಂತ ಸರೋವರದಂಥ ಗಂಗಾ ಹಿನ್ನೆಲೆಗೆ ಸರಿಯುತ್ತಲೇ ಹೋಗುತ್ತಾಳೆ. ದೈಹಿಕ ಮೋಹದ ಬಲೆಯೊಳು ವಿಕ್ರಮ ಸಿಲುಕುತ್ತಿರುವಾಗಲೇ ರಂಜನಿಗಿದು ಬಾಂಧವ್ಯ ಎಂದೆನಿಸುವುದೇ ಇಲ್ಲ. ಕೂಡುವಾಗಲೂ ತನ್ನನ್ನು ಕಳೆದುಕೊಳ್ಳದ ಅವಳು, ವಿಕ್ರಮನ ಪ್ರೇಮವನ್ನು ಧಿಕ್ಕರಿಸಿ ನಡೆಯುತ್ತಾಳೆ. ಈ ತಿರಸ್ಕಾರ ಅರಗಿಸಿಕೊಳ್ಳುವ ಛಾತಿ ಕ್ಷಾತ್ರಗುಣದ ಪುರುಷಾಹಂಕಾರಕ್ಕೆ ಸಾಧ್ಯವಾಗುವುದೇ ಇಲ್ಲ. ಇವೆಲ್ಲವುಗಳಿಂದ ತಪ್ಪಿಸಿಕೊಳ್ಳಲು ಎಂಬಂತೆ ಅಮೆರಿಕದ ಯಾನಕ್ಕೆ ಹೋದಾಗ ಅಚಾನಕ್ಕಾಗಿ ಭಯೋತ್ಪಾದಕರ ದಾಳಿಗೆ ಸಿಕ್ಕಿಕೊಳ್ಳುತ್ತಾನೆ.

ಮೋಹ, ಕಾಮ, ಪ್ರೇಮ, ಪ್ರಣಯವೇನೇ ಇರಲಿ, ಕ್ಷಾತ್ರ ಗುಣದ ಗಂಡಸಾಗಿದ್ದರೂ ಕರಗುವುದು ಶುದ್ಧ ಅಂತಃಕರಣಕ್ಕೇನೆ. ಮನಸೊಳಗೆ ಸ್ಥಾಯಿಯಾಗಿ ಉಳಿಯುವುದು ಪ್ರೀತಿಯೇ. ತಾರಾಬಾಯಿ, ವಿಕ್ರಮನ ಅಪ್ಪನ ಪ್ರೇಯಸಿ. ಅವಳು ಬರೆದ ಎರಡು ಸಾಲಿನ ಪತ್ರದಲ್ಲಿ, ದೇವತೆ, ದೇವಿ ಎಂದೆಲ್ಲ ಬರೆದು, ಹೊಡೆದು ಹಾಕಿ, ಅಕ್ಕ ಎಂಬ ಸಂಬೋಧನೆಯೇ ಉಳಿಯುತ್ತದೆ. ಇವು ಏನೆಲ್ಲ ಭಾವಗಳನ್ನು ಹೇಳುತ್ತವೆ? ತನ್ನಪ್ಪನಂತಲ್ಲ, ಅಪ್ಪನಂತಾಗುವುದಿಲ್ಲ ಎಂದುಕೊಂಡೇ ಬದುಕಿದವನಿಗೆ ತಾನೇ ಅಪ್ಪನಂತಾದಾಗ, ಅಪ್ಪನಾದಾಗ ಮಗುವಿನಿಂದ ಅಪರಿಚಿತ ಎಂಬ ಭಾವ ಮೂಡಿದಾಗ... ಎಲ್ಲೆಡೆಯೂ ಈ ಎರಡು ಸಾಲಿನ ಪತ್ರದೊಳಗಣ ಪದಗಳು ಅಂತರ್ವಾಹಿನಿಯಾಗಿ ಪ್ರವಹಿಸುತ್ತವೆ. ಏಕಾಂತದೊಳಗಿನ ಲೋಕಾಂತ, ಮೌನದೊಳಗಣ ಮಾತು, ಸಂವಾದದೊಳಗಿನ ಮೌನ ಇವೆಲ್ಲವೂ ಈ ಪುಸ್ತಕದಷ್ಟೇ ನಮ್ಮನ್ನು ಆವರಿಸಿಕೊಳ್ಳುತ್ತವೆ.

ರಂಜನಿಗೆ ಇವನ ಕರೆ ಕೇಳಿತೆ? ಗಂಗಾ ತನ್ನ ಗಾಂಭೀರ್ಯದಿಂದಾಚೆ ಬಂದು ಮತ್ತೆ ಇವರಿಬ್ಬರೂ ಒಂದೇ ಪರಿಧಿಯಲ್ಲಿ ಬರುವರೆ? ರಂಜನಿಯನ್ನು ಕನವರಿಸುತ್ತಲೇ ಗಂಗೆಗೆ ಹಪಹಪಿಸುವ ವಿಕ್ರಮ ಆಯ್ಕೆ ಮಾಡಿಕೊಳ್ಳುವುದು ಯಾರನ್ನು? ಯಾವ ಅಂತಃಕರುಣೆಯ ಕರೆ ವಿಕ್ರಮನೊಳಗಿನ ಪ್ರೀತಿಯನ್ನು ಮತ್ತೆ ಸೋಕುತ್ತಲೇ ಆವರಿಸಿಕೊಳ್ಳುತ್ತದೆ? ಈ ಎಲ್ಲ ಪ್ರಶ್ನೆಗಳಿಗೂ ತಾರಾಬಾಯಿಯ ಪತ್ರ ಓದಲೇಬೇಕು.

ವಿಕ್ರಮನ ಆಂತರ್ಯದ ಲೋಕದೊಳಗೊಂದು ಸುತ್ತು ಹಾಕುತ್ತಲೇ ಭಾವಲೋಕದಲ್ಲಿ ಗಿರಕಿ ಹೊಡೆಯಲೇಬೇಕು. ಓದುವಾಗಲೂ, ಓದಿದ ಮೇಲೂ ಗುಂಗು ಹಿಡಿಸುವ ಎಲ್ಲ ಗುಣಗಳಿರುವ ಈ ಪುಸ್ತಕ ಓದುವಾಗ ಪ್ರೇಮದಷ್ಟೇ ತೀವ್ರವಾಗಿ ಕಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT