ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಿಣಿ ಶುಭದಾಯಿನಿ ಅವರ ‘ಅಂಗುಲ ಹುಳುವಿನ ಇಂಚುಪಟ್ಟಿ' ಪುಸ್ತಕ ವಿಮರ್ಶೆ

Last Updated 19 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ತಾರಿಣಿ ಶುಭದಾಯಿನಿ ಅವರ ‘ಅಂಗುಲ ಹುಳುವಿನ ಇಂಚುಪಟ್ಟಿ’ ವಿಮರ್ಶಾ ಸಂಕಲನದಲ್ಲಿ ‘ಓದು’ ಮತ್ತು ‘ಮೀಮಾಂಸೆ’ ಎಂಬೆರಡು ಭಾಗಗಳಿದ್ದು, 13 ಲೇಖನಗಳಿವೆ. ಓದು ಮತ್ತು ಮೀಮಾಂಸೆ ಜತೆ ಜತೆಯಲ್ಲಿ ಸಾಗುವಂತಹವು. ಇವೆರಡು ಸಂಲಗ್ನಗೊಂಡಾಗ ಸಾಹಿತ್ಯ ಕೃತಿಯೊಂದರ ಒಳನೋಟಗಳು ಲಭ್ಯವಾಗಬಲ್ಲವು.

ಕೃತಿಯಲ್ಲಿನ ಲೇಖನಗಳನ್ನು ಓದಿದಾಗ ಇವುಗಳನ್ನು ಮೂರು ಬಗೆಗಳಲ್ಲಿ ಗುರುತಿಸಬಹುದು. 1) ಪುರುಷ ಲೇಖಕರ ಕೃತಿಗಳಲ್ಲಿ ಹೆಣ್ಣಿನ ಲೋಕದ ಗ್ರಹಿಕೆ. ಇದರಲ್ಲಿ ಎ.ಕೆ.ರಾಮಾನುಜನ್, ಷೇಕ್ಸ್‌ಪಿಯರ್, ಶಿವರಾಮ ಕಾರಂತ ಹಾಗೂ ತತ್ವ ಪದಕಾರರ ಅಧ್ಯಯನಗಳಿವೆ. 2) ಹೆಣ್ಣಿನ ಲೋಕವನ್ನು ಲೇಖಕಿಯರೇ ಕಂಡಿರಿಸಿರುವ ಬಗೆ. ಇದರಲ್ಲಿ ವೈದೇಹಿ, ಸ್ತ್ರೀವಾದಿ ವಿಮರ್ಶೆಯ ಸ್ವರೂಪ, ಕಥೆಗಾರ್ತಿಯರು ಕಟ್ಟಿದ ಕಥನಗಳು, ಕನ್ನಡ ಸ್ತ್ರೀವಾದಿ ಸಾಹಿತ್ಯ ಮೀಮಾಂಸೆಯ ತಾತ್ವಿಕ ನೆಲೆಗಳು ಎಂಬ ಲೇಖನಗಳಿವೆ. 3) ಸಾಹಿತ್ಯದ ಸ್ವರೂಪ, ಕನ್ನಡ ಲೇಖಕರ ಕವಿತೆ ಕೃತಿಗಳ ಅಧ್ಯಯನ. ಇದರಲ್ಲಿ ಎಚ್.ಎಸ್. ರಾಘವೇಂದ್ರರಾವ್, ನಿಸಾರ್‌ ಅಹಮದ್‌, ಕೆ.ಎಸ್‌.ನ ಇವರ ಕೃತಿಗಳ ಅಧ್ಯಯನಗಳು ಇವೆ. ಸಾಹಿತ್ಯದ ಗ್ರಹಿಕೆಗಳು ಎಂಬ ಲೇಖನವನ್ನು ಇಲ್ಲಿಯೇ ಸೇರಿಸಬಹುದು.

ವಿಮರ್ಶೆ ಎನ್ನುವುದು ಒಟ್ಟಂದದಲ್ಲಿ ಅನೇಕ ಬಗೆಯ ಶಿಸ್ತುಗಳ ಸಮ್ಮಿಳಿತವಾದ ಅನೇಕ ಚಹರೆಗಳುಳ್ಳ ಸಂಗತಿ. ವಿಮರ್ಶೆ ಎನ್ನುವುದು ಸಣ್ಣ ಪ್ರಮಾಣದ ಪ್ರತಿಕ್ರಿಯೆ ಎನ್ನವುದರಿಂದ ಹಿಡಿದು ಮೀಮಾಂಸೆಯವರೆಗೂ ಹರಡಿಕೊಂಡಿರುವ ಜಾಲ ಎಂದು ವಿಮರ್ಶೆಯನ್ನು ಇಲ್ಲಿ ವಿವರಿಸಿಕೊಂಡಿರುವ ಕಾರಣ ಸಾಹಿತ್ಯದ ಅಧ್ಯಯನಕ್ಕೆ ತನ್ನಷ್ಟಕ್ಕೆ ತಾನೇ ಸಾಂಸ್ಕೃತಿಕ ಅಧ್ಯಯನದ ವ್ಯಾಪ್ತಿ ಬಂದಿದೆ.

ಪ್ರತೀ ಲೇಖನದ ಪ್ರಾರಂಭದಲ್ಲಿ ಆ ಲೇಖನದ ಶೀರ್ಷಿಕೆಗೆ ಅನುಗುಣವಾಗಿ ಒಂದು ಚೌಕಟ್ಟನ್ನು, ತಾತ್ವಿಕ ಹಿನ್ನೆಲೆಯನ್ನು ರೂಪಿಸಿಕೊಳ್ಳಲಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ವಿಜ್ಞಾನ, ಮಾನವಿಕಗಳ ಜೊತೆಗೆ ಸಾಹಿತ್ಯ ತತ್ವಗಳನ್ನು ಕೃತಿಗಳೊಂದಿಗೆ ಅನುಸಂಧಾನಗೊಳಿಸಿ ವಿಶ್ಲೇಷಣೆ ಮಾಡಿರುವುದನ್ನು ಇಲ್ಲಿನ ಲೇಖನಗಳಲ್ಲಿ ಕಾಣಬಹುದು. ಹೀಗಾಗಿ ಸಾಹಿತ್ಯ ಕೃತಿಗಳ ಒಳಶರೀರದ ಸೂಕ್ಷ್ಮವಾದ ಚರ್ಚೆ ಹಿನ್ನೆಲೆಗೆ ಸರಿದಿರುವುದನ್ನು ಸ್ವಲ್ಪಮಟ್ಟಿಗೆ ಕಾಣಬಹುದಾದರೂ ಹದ ತಪ್ಪದಂತೆ ಎಚ್ಚರ ವಹಿಸಲಾಗಿದೆ.

ಈ ಕೃತಿಯಲ್ಲಿನ ಹೆಚ್ಚು ಲೇಖನಗಳಲ್ಲಿ ಹೆಣ್ಣಿನ ಲೋಕವನ್ನು, ಲೇಖಕಿಯರು ಮತ್ತು ಲೇಖಕರು ಗ್ರಹಿಸಿರುವ ಬಗೆಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಲೇಖಕರಲ್ಲಿ ರಾಮಾನುಜನ್, ಕಾರಂತ, ಷೇಕ್ಸ್‌ಪಿಯರ್ ಅವರ ಕೃತಿಗಳಲ್ಲಿ ಹೆಣ್ಣು ಮತ್ತು ಗಂಡಿನ ಸಂಬಂಧಗಳನ್ನು, ದಾಂಪತ್ಯ-ಕುಟುಂಬ-ಸಮಾಜಗಳ ನೆಲೆಗಳ ಸಾಂಸ್ಕೃತಿಕ ತಿಳಿವಳಿಕೆಗಳೊಂದಿಗೆ ಹೋಲಿಸಿ ಅಧ್ಯಯನ ಮಾಡಲಾಗಿದೆ. ಹೆಣ್ಣು ಅನ್ಯಳಲ್ಲ, ಅಧೀನಳಲ್ಲ. ಗಂಡು ಹೆಣ್ಣುಗಳ ನಡುವಿನ ಜೈವಿಕ ವ್ಯತ್ಯಾಸ ನೈಸರ್ಗಿಕವಾದದ್ದು. ಆದರೆ ಸಾಂಸ್ಕೃತಿಕ ಮತ್ತು ಸಾಮಾಜಿಕ ರಚನೆಗಳು ಈ ವ್ಯತ್ಯಾಸವನ್ನು ಸೃಷ್ಟಿಸಿಬಿಟ್ಟಿವೆ. ಪಿತೃಪ್ರಧಾನ ಸಮಾಜವು ಸ್ತ್ರೀಯನ್ನು ಅಧೀನಳನ್ನಾಗಿಸಿದೆ. ಈ ಬಗೆಯ ಅಧೀನತೆಯಿಂದ ಸ್ತ್ರೀ ಹೊರಬರಬೇಕಾಗಿದೆ. ಅದಕ್ಕಾಗಿ ಸಾಹಿತ್ಯದ ಚಿಂತನೆಗಳನ್ನು ಮರುರೂಪಿಸಿಕೊಳ್ಳಬೇಕು ಎಂಬ ಚಿಂತನೆಯ ಹಿನ್ನೆಲೆಯಲ್ಲಿ ಲೇಖಕರು ಬರೆದಿರುವ ಕೃತಿಗಳನ್ನು ಸ್ತ್ರೀವಾದಿ ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಸ್ತ್ರೀವಾದಿ ಅಧ್ಯಯನ ಕ್ರಮದಲ್ಲಿ, ಅಷ್ಟೇ ಏಕೆ, ಸಾಹಿತ್ಯದ ಅಧ್ಯಯನ ಕ್ರಮದಲ್ಲಿ ರಚನೆಯ ಕಾಲಕ್ಕೂ ನಾವು ಅದನ್ನು ಓದುತ್ತಿರುವ ಕಾಲಕ್ಕೂ ತುಲನೆ ಮಾಡಿ ವಿಶ್ಲೇಷಣೆ ಮಾಡುವ ಕ್ರಮವಿದೆ. ಅಂದಿನ ಮತ್ತು ಇಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಒಟ್ಟಾರೆ ಸಾಂಸ್ಕೃತಿಕವಾದ ವಿಚಾರಗಳನ್ನು ಪರಸ್ಪರ ತುಲನಾತ್ಮಕವಾಗಿ ನೋಡಿ ಕಾರ್ಯಕಾರಣ ಸಂಬಂಧಗಳನ್ನು ಶೋಧನೆ ಮಾಡುವ ವಿಮರ್ಶಾ ವಿಧಾನ ಇದು. ಇದರಲ್ಲಿ ಸ್ತ್ರೀವಾದಿ ವಿಮರ್ಶೆಯೂ ಸೇರುತ್ತದೆ. ಇಲ್ಲಿರುವ ಎಲ್ಲಾ ಲೇಖನಗಳಲ್ಲಿ ಈ ಬಗೆಯ ಅಧ್ಯಯನ ಕ್ರಮವಿರುವುದನ್ನು ಗಮನಿಸಬಹುದು. ನಿದರ್ಶನಕ್ಕಾಗಿ ಷೇಕ್ಸ್‌ಪಿಯರ್: ಚಾರಿತ್ರಿಕ ಪ್ರಶ್ನೆಗಳು ಮತ್ತು ಹೆಣ್ಣು ಅಸ್ಮಿತೆಯಾಗಿರಬಹುದು, ರಾಮಾನುಜನ್, ಕಾರಂತರ ಕೃತಿಗಳಲ್ಲಿನ ಹೆಣ್ಣಿನ ಲೋಕಗಳ ಬಗೆಗಿನ ಲೇಖನಗಳಾಗಿರಬಹುದು. ಬಹುತೇಕ ಎಲ್ಲ ಲೇಖನಗಳಲ್ಲಿ ಈ ಬಗೆಯ ವಿಮರ್ಶಾ ವಿಧಾನವನ್ನು ಗಮನಿಸಬಹುದು.

ಕೃತಿಯನ್ನು ಸಮಗ್ರವಾಗಿ ಅಧ್ಯಯನ ಮಾಡದೆ ಬರೀ ಹೆಣ್ಣಿನ ಲೋಕವನ್ನೇ ಅಧ್ಯಯನ ಮಾಡಿದರೆ ಆ ವಿಮರ್ಶೆ ಪಾರ್ಶ್ವಿಕವಾಗುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆಯ ಬಗ್ಗೆಯೂ ಲೇಖಕರಿಗೆ ಅರಿವಿದೆ ಎಂಬುದು ಕೆಲವು ಲೇಖನಗಳಲ್ಲಿ ಅವರು ಎತ್ತುವ ಪ್ರಶ್ನೆಗಳಿಂದ ತಿಳಿಯುತ್ತದೆ. ಈ ಕೃತಿಯಲ್ಲಿನ ಲೇಖನಗಳನ್ನು ಓದಿ ಮುಗಿಸಿದಾಗ ‘ಜೀವಂತಿಕೆಯಿಂದ ಕೂಡಿದ ಸಂಸ್ಕೃತಿಯನ್ನು ಪಡೆಯಬೇಕಾದರೆ ಮೊದಲು ಜೀವಂತವಾದ ಸಾಹಿತ್ಯವಿರಬೇಕು, ಜೀವಂತವಾದ ಸಂಸ್ಕೃತಿ ಇದೆಯೋ ಇಲ್ಲವೋ ಎಂಬುದು ಗೊತ್ತಾಗುವುದು ವಿಮರ್ಶಕನಿಂದ’ ಎಂದು ಎಫ್.ಆರ್. ಲಿವೀಸ್ ಹೇಳಿರುವ ಮಾತು ಜ್ಞಾಪಕಕ್ಕೆ ಬರುತ್ತದೆ.

ಕೃತಿ: ಅಂಗುಲ ಹುಳುವಿನ ಇಂಚು ಪಟ್ಟಿ

ಲೇ: ಆರ್‌.ತಾರಿಣಿ ಶುಭದಾಯಿನಿ

ಪ್ರ: ಬಂಡಾರ ಪ್ರಕಾಶನ, ರಾಯಚೂರು

ಸಂ:98864 07011

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT