ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದ ಜೀವಗಳ ಅಚ್ಚರಿ ಜಗತ್ತು

Last Updated 19 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಶಿವಾನಂದ ಕಳವೆ ಅವರು ಪರಿಸರ ಕಾರ್ಯಕರ್ತರಾಗಿ ಗುರುತಿಸಿಕೊಂಡವರು. ನಾಡಿಗೆ ಕಾಡಿನ ಪರಿಚಯ ಮಾಡಿಕೊಟ್ಟವರು. ಜಲಕಾರ್ಯಕರ್ತರಾಗಿಯೂ ಹೆಸರು ಮಾಡಿದವರು. ಕೃಷಿ ಚಟುವಟಿಕೆ, ದಾಖಲೀಕರಣದಲ್ಲಿಯೂ ತೊಡಗಿಕೊಂಡವರು. ಇಂತಿರ್ಪ ಕಳವೆ ಅವರು ತಮ್ಮ 30 ವರ್ಷಗಳ ಸುದೀರ್ಘ ಕಾಡಿನ ಅನುಭವವನ್ನು ಎರಕ ಹೊಯ್ದು ‘ಮಧ್ಯಘಟ್ಟ’ ಎಂಬ ಕಾದಂಬರಿ ರಚಿಸಿದ್ದಾರೆ. ಇದು ಒಂದೇ ಬೈಠಕ್‌ನಲ್ಲಿ ಓದಿ ಮುಗಿಸಬಹುದಾದ ಕಾದಂಬರಿ. ಎಲ್ಲಿಯೂ ಬೇಸರವಾಗದ ಸರಾಗ ಶೈಲಿ. ಇಲ್ಲಿ ಬಳಸಿರುವ ಕೆಲವು ಶಬ್ದಗಳು ಕಾಡಿನ ಮುಳ್ಳಿನಂತೆ ಕಾಣಿಸಿದರೂ ಓದಿನ ಖುಷಿಗೆ ಧಕ್ಕೆ ತರವು.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಕಾಡುಗಳಲ್ಲಿ ಮರೆಯಾಗಿರುವ ಹಳ್ಳಿಗಳ ಪರಿಸರವೇ ಈ ಕಾದಂಬರಿ ನಾಯಕ. ಗಿಡಬಳ್ಳಿಗಳೂ ಪಾತ್ರಗಳು. ಅಂದರೆ ಮನುಷ್ಯರೇ ಇಲ್ಲ ಎಂದಲ್ಲ. 60 ವಯಸ್ಸಿನ ಗೋಪಯ್ಯ ಹೆಗಡೆ ಕೇರಳದ ಕುಂಬಳೆಯಿಂದ ಯುವತಿ ಶ್ರೀದೇವಿಯನ್ನು ಕರೆತಂದು ಮದುವೆಯಾದಾಗಿನಿಂದ ಆರಂಭವಾಗುವ ಅವರ ಸಂಸಾರದ ಕತೆ ಕಾಡಿನ ಕತೆಯೊಂದಿಗೆ ಬೆಸೆದುಕೊಂಡಿದೆ. ಶ್ರೀದೇವಿಯ ತಾಯಿ ಭೂದೇವಿ ದೂರದ ಕೇರಳದಿಂದ ಶಿರಸಿಯ ಮಧ್ಯಘಟ್ಟದವರೆಗೆ ನಡೆದುಕೊಂಡು ಬಂದ ಸಾಹಸದ ಜೊತೆಗೆ ಆಕೆಯ ಮಗ ಇಲ್ಲಿಯೇ ಜಮೀನು ಮಾಡಿ ಸುಖ ಸಂಸಾರ ನಡೆಸಿದ ವಿವರಗಳೂ ಇಲ್ಲಿವೆ. ಸುಮಾರು 100–150 ವರ್ಷಗಳ ಹಿಂದೆ ಉತ್ತರಕನ್ನಡದ ಕಾಡು ಹೇಗಿತ್ತು? ಅಲ್ಲಿನ ಜನಜೀವನ ಹೇಗಿತ್ತು ಎನ್ನುವುದನ್ನು ಮಧ್ಯಘಟ್ಟ ಪರಿಚಯ ಮಾಡಿಸುತ್ತದೆ.

ಪುನರ್ವಸು, ಮೃಗಶಿರ, ತಲೆಗಳಿ ಮುಂತಾದ ಕಾದಂಬರಿಗಳ ಹಾಗೆಯೇ ಮಧ್ಯಘಟ್ಟದಲ್ಲಿಯೂ ಸಂಭಾಷಣೆಗಳು ಹವಿಗನ್ನಡದಲ್ಲಿಯೇ ಇವೆ. ಹವ್ಯಕರಿಗೂ ಅರ್ಥವಾಗದ ಶಬ್ದಗಳೂ ಇವೆ. ಪುಸ್ತಕದ ಅಂತ್ಯದಲ್ಲಿ ಶಬ್ದಾರ್ಥವನ್ನು ಕೊಟ್ಟು ಲೇಖಕರು ಉಪಕಾರ ಮಾಡಿದ್ದಾರೆ. ಕಾಡಿನ ಪರಿಚಯದಿಂದಲೇ ತೆರೆದುಕೊಳ್ಳುವ ಕಾದಂಬರಿ ಬರೀ ಕತೆಯನ್ನು ಹೇಳುವುದಿಲ್ಲ. ಕಾಡು ನಾಡಾಗುವ ಪರಿಯನ್ನೂ ವಿವರಿಸುತ್ತದೆ. ಜೊತೆ ಜೊತೆಗೆ ಸಂಪ್ರದಾಯ, ಬದುಕಿನ ಶೈಲಿ ಬದಲಾಗುವುದು, ಕಾಡಿನ ನಿಗೂಢ ಕಳೆದುಕೊಂಡು ಬಯಲಾಗುವುದೂ ಕಾಣುತ್ತದೆ. ಬದುಕಿಗೂ ಬಡತನಕ್ಕೂ ಸಂಪ್ರದಾಯಕ್ಕೂ ಇರುವ ನಂಟು ಅನಾವರಣವಾಗುತ್ತದೆ.

ಬಡವರು ಗಂಜಿ ಕುಳಿಯಲ್ಲಿ ಹಸುಕರುಗಳಂತೆ, ನಾಯಿ ಬೆಕ್ಕುಗಳಂತೆ ಅನ್ನ ನೆಕ್ಕುವುದು, ಭೂಗತ ನಿಧಿಯನ್ನು ಕಾಯುವ, ಕಳೆದುಹೋದ ವಸ್ತುಗಳನ್ನು ಹುಡುಕುವ ಕುಂಟಭೂತ, ಜಟುಕ ಮುಂತಾದ ವಿಶೇಷಗಳೂ ಗಮನ ಸೆಳೆಯುತ್ತವೆ. ಗೋಪಯ್ಯ ಹೆಗಡೆ ಜೊತೆಗೆ ಮಾಮಲೇದಾರ ಚಾಂದ್ ಷಾ, ಕೇಮೂ ಅಜ್ಜ, ಪಟಾನ್ಸ್ ರಾಮ, ಉಗ್ರಾಣಿ ಧರ್ಮ ಮುಂತಾದ ಪಾತ್ರಗಳೂ ಕಾಡುತ್ತವೆ.

ಕಳವೆ ಅವರ ಚೊಚ್ಚಲ ಕಾದಂಬರಿ ಇದು. ಇದನ್ನು ಓದುತ್ತಿರುವಾಗ ಹಾಗೆ ಅನ್ನಿಸುವುದಿಲ್ಲ. ಆದರೂ ಕಾದಂಬರಿಯ ಕಸುಬುದಾರಿಕೆಯಲ್ಲಿ ಅವರು ಇನ್ನೂ ಮಾಗಬೇಕು ಎನಿಸುತ್ತದೆ. ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಡುವ ಅವಸರದಲ್ಲಿ ಅವರಿಗೆ ಕೆಲವೊಮ್ಮೆ ಪಾತ್ರಗಳು ಮರೆತು ಹೋಗುತ್ತವೆ. ಪಾತ್ರ ಮತ್ತು ಸನ್ನಿವೇಶಗಳ ಮೂಲಕವೇ ಕತೆಯನ್ನು ಕಟ್ಟುವ ಕೌಶಲ ಇನ್ನಷ್ಟು ಹರಳುಗಟ್ಟಿದ್ದರೆ ಮಧ್ಯಘಟ್ಟ ಇನ್ನೂ ರೋಚಕವೆನಿಸುತ್ತಿತ್ತು. ಕಾರಂತ, ಕುವೆಂಪು, ತೇಜಸ್ವಿ ಅವರನ್ನು ಓದುತ್ತಲೇ ಬೆಳೆದ ಹಾಗೂ ಅವುಗಳ ಮೂಲಕವೇ ಕಾಡಿನ ಕುತೂಹಲವನ್ನು ಹೆಚ್ಚಿಸಿಕೊಂಡ ಕಳವೆ ಅವರಿಗೆ ಇದೊಂದು ದೊಡ್ಡ ಸವಾಲು ಅಲ್ಲ. ಮೂರು ದಶಕಗಳಿಗೂ ಹೆಚ್ಚಿನ ಕಾಲದ ಅವರ ಕಾಡಿನ ತಿರುಗಾಟದಲ್ಲಿ ಇನ್ನೂ ಸಾಕಷ್ಟು ಅನುಭವಗಳು ಅವರ ಬತ್ತಳಿಕೆಯಲ್ಲಿವೆ. ಅವೆಲ್ಲ ಕಾದಂಬರಿಯ ರೂಪದಲ್ಲಿ ಹೊರಬಂದರೆ ಕಾಡು ಕಳೆದು ಹೋಗುವುದಿಲ್ಲ. ನಾಡು ಬರಡಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT