ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ವಿಜ್ಞಾನದ ‘ಕರ್ನಾಟಕ ವಿಶ್ವಕೋಶ’

Last Updated 6 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

‘ವಿಜ್ಞಾನ’ ಎಂಬ ಜ್ಞಾನವೃಕ್ಷವು ಮಾನವನ ಇತಿಹಾಸದಲ್ಲಿ ತುಂಬ ಮಹತ್ವದ ಭೂಮಿಕೆಯನ್ನು ನಿರ್ವಹಿಸುತ್ತಿದೆ. ಅದರ ಶಾಖೆಗಳೂ ಹತ್ತುಹಲವು; ಅದರ ಹೂವು–ಹಣ್ಣುಗಳೂ ಸಾವಿರಾರು. ವಿಜ್ಞಾನಕ್ಕೂ ನಮ್ಮ ಪ್ರಗತಿಗೂ ನೇರ ಸಂಬಂಧವಿರುವುದು ಸುಳ್ಳಲ್ಲ.

ದೇಶಾತೀತ ತತ್ತ್ವಗಳ ಅನುಸಂಧಾನವೇ ವಿಜ್ಞಾನ – ಎಂಬ ಮಾತು ದಿಟವೇ. ಆದರೆ ದೇಶವೊಂದರ ವಿಕಾಸಕ್ಕೂ ವಿಜ್ಞಾನದ ವಿಕಾಸಕ್ಕೂ ನಂಟಿದೆಯಷ್ಟೆ. ನಮ್ಮ ದೇಶದಲ್ಲೂ ವಿಜ್ಞಾನದ ಸಿದ್ಧಿ–ಸಾಧನೆಗಳು ಪ್ರಾಚೀನ ಕಾಲದಿಂದಲೂ ಗಣನೀಯವಾಗಿವೆ. ನಮ್ಮ ರಾಜ್ಯವೂ ವಿಜ್ಞಾನದ ಬೆಳವಣಿಗೆಗೆ ನೀಡಿರುವ ಕೊಡುಗೆ ಗಮನೀಯವಾಗಿದೆ. ಹೀಗೆ ನಮ್ಮ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡಿರುವ ಕೊಡುಗೆಗಳನ್ನು ದಾಖಲೆ ಮಾಡುವ ಪ್ರಯತ್ನವೇ ‘ಕರ್ನಾಟಕ ವಿಜ್ಞಾನ ತಂತ್ರಜ್ಞಾನ ದರ್ಶನ’ದ ಸಂಪುಟಗಳು.

ಎಂ. ಎಸ್‌. ಸುರೇಶ್‌ ಅವರ ಪ್ರಧಾನ ಸಂಪಾದಕತ್ವದಲ್ಲಿ ವೈ. ಸಿ. ಕಮಲ ಮತ್ತು ಸುಮಂಗಲಾ ಮುಮ್ಮಿಗಟ್ಟಿ ಸಂಪಾದಕರಾಗಿ ಪ್ರಕಟಿಸಿರುವ ಈ ಕೃತಿಯ ಪ್ರಕಾಶಕರು ‘ಉದಯಭಾನು ಕಲಾಸಂಘ’; ಈಗಾಗಲೇ ‘ಬೆಂಗಳೂರು ದರ್ಶನ’ದಂಥ ಹಲವು ಆಕರಗ್ರಂಥವನ್ನು ಪ್ರಕಟಿಸಿ ಪ್ರಶಂಸೆಗೆ ಪಾತ್ರವಾಗಿದೆ; ಪ್ರಸ್ತುತ ಕೃತಿಯ ಪ್ರಕಾಶನಕ್ಕಾಗಿಯೂ ಸಂಸ್ಥೆಗೆ ಅಭಿನಂದನೆಗಳು ಸಲ್ಲುತ್ತವೆ. ಈ ಗ್ರಂಥದ ಮುಖಪುಟದ ಬಗ್ಗೆ ಸಂಪಾದಕರ ಮಾತುಗಳು ಹೀಗಿವೆ:

‘ನಮ್ಮ ಮುಖ್ಯ ಉದ್ದೇಶ ಕರ್ನಾಟಕದ ಕೊಡುಗೆಯನ್ನು ದಾಖಲಿಸುವುದು, ಚರಿತ್ರೆ ಮತ್ತು ಪ್ರಸ್ತುತ ಸ್ಥಿತಿಯನ್ನು ಕುರಿತು. ಈ ನೆಲೆಯಲ್ಲಿ ನೀಲಿಬಣ್ಣ ಆಗಸದ ಅಗಾಧತೆಯನ್ನೂ ವಿಶ್ವದ ಅನಂತತೆಯನ್ನೂ ಸೂಚಿಸುತ್ತದೆ. ಇದರಲ್ಲಿ ಕಾಣುವ ತರಂಗಗಳು ಆಕಾಶಕಾಯಗಳು ಉಂಟುಮಾಡುವ ಗುರುತ್ವ ತರಂಗಗಳು. ಈ ಗುರುತ್ವ ತರಂಗಗಳ ಸಂಶೋಧನೆ ಬೆಂಗಳೂರನ್ನು ತಟ್ಟುತ್ತದೆ; ಭೂಮಿಯಲ್ಲಿ ಭಾರತದ ಕೊಡುಗೆಯನ್ನು ಪ್ರಕಾಶಮಾನ ಭಾರತವಾಗಿ ತೋರಿಸಿದೆ. ಭಾರತದಿಂದ ಹೊರಹೊಮ್ಮುವ ಕರ್ನಾಟಕದ ಕೊಡುಗೆ ಈ ಗ್ರಂಥದ ಉದ್ದೇಶ. ಈ ಗ್ರಂಥದಲ್ಲಿ ಒಳಗೊಂಡಿರುವ ಭೌತವಿಜ್ಞಾನ, ರಸಾಯನವಿಜ್ಞಾನ, ಜೀವವಿಜ್ಞಾನ, ವೈಮಾಂತರಿಕ್ಷ ತಂತ್ರಜ್ಞಾನ, ಭೂವಿಜ್ಞಾನ ಮತ್ತು ವಿಶ್ವವಿಜ್ಞಾನಗಳನ್ನು ಬಿಂಬಿಸುವ ಚಿತ್ರಗಳನ್ನು ಸೇರಿಸಲಾಗಿದೆ. ಚಂದ್ರನ ಹಿನ್ನೆಲೆಯಲ್ಲಿ ಚಂದ್ರಯಾನ ನೌಕೆ ಬಾಹ್ಯಕಾಶ ತಂತ್ರಜ್ಞಾನವನ್ನೂ, ತೇಜಸ್‌ ವಿಮಾನ ವೈಮಾನಿಕ ತಂತ್ರಜ್ಞಾನದ ಸಾಧನೆಯನ್ನೂ ಬಿಂಬಿಸುತ್ತವೆ. ರಸಾಯನವಿಜ್ಞಾನ ಮತ್ತು ಹಲವು ಇತರ ಕ್ಷೇತ್ರಗಳಲ್ಲಿ ಮುಖ್ಯವಾದ ಇಂಗಾಲದ ನ್ಯಾನೋ ಕೊಳವೆಗಳು, ಜೈವಿಕವಿಜ್ಞಾನದ ವಂಶಾವಳಿ ತಂತು/ಡಿಎನ್‌ಎ ಹಾಗೂ ಕರ್ನಾಟಕದ ಕಾಡುಪ್ರಾಣಿ ಸಂಕುಲದ ಹುಲಿ – ಇವುಗಳನ್ನು ಸಾಂಕೇತಿಕವಾಗಿ ತೋರಿಸಲಾಗಿದೆ.’

ಗ್ರಂಥದ ಮುಖಪುಟ ಇಷ್ಟೊಂದು ‘ವಾಚ್ಯ’ ವಾಗುವುದು ಕಲಾತ್ಮಕತೆ ಎನಿಸಿಕೊಳ್ಳುವುದೋ ಇಲ್ಲವೋ ಎಂಬ ಚರ್ಚೆ ಬೇರೆಯ ವಿಷಯ. ಆದರೆ ಮುಖಪುಟವನ್ನು ಕುರಿತ ಈ ಮಾತುಗಳು ಈ ಗ್ರಂಥದ ಉದ್ದೇಶ ಮತ್ತು ವಿಷಯವ್ಯಾಪ್ತಿಯನ್ನು ಸೂಚಿಸುತ್ತವೆ.

ಎರಡು ಸಂಪುಟಗಳಲ್ಲಿ, ಸುಮಾರು ಒಂದೂವರೆ ಸಾವಿರ ಪುಟಗಳಲ್ಲಿ ಹರಡಿ ಕೊಂಡಿರುವ ಈ ಗ್ರಂಥದಲ್ಲಿ ಹನ್ನೊಂದು ಅಧ್ಯಾಯಗಳಿವೆ. ಇವು ವಿಜ್ಞಾನದ ಮುಖ್ಯ ಶಾಖೆಗಳಲ್ಲಿ ಕರ್ನಾಟಕದ ಸಾಧನೆಯನ್ನು ಗುರುತಿಸುತ್ತವೆ; ಮಾತ್ರವಲ್ಲ, ‘ಕರ್ನಾಟಕದ ಪದ್ಮಪುರಸ್ಕೃತ ವಿಜ್ಞಾನಿಗಳು ಮತ್ತು ತಂತ್ರಜ್ಞರು’, ‘ಕರ್ನಾಟಕದ ಪ್ರಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆ’ಗಳ ಬಗ್ಗೆಯೂ ಅಧ್ಯಾಯಗಳಿವೆ. ಒಂದೊಂದು ಅಧ್ಯಾಯಕ್ಕೂ ವಿಷಯತಜ್ಞರೊಬ್ಬರು ವಿಭಾಗ ಸಂಪಾದಕರಾಗಿರುವುದು ಔಚಿತ್ಯಪೂರ್ಣ ವಾಗಿದೆ. ಹೆಚ್ಚು ಕಡಿಮೆ ಪ್ರತಿಯೊಂದು ಅಧ್ಯಾಯವೂ ಆಯಾ ವಿಜ್ಞಾನಶಾಖೆಯ ಬಗ್ಗೆ ಜಾಗತಿಕ ನೆಲೆಯ ಸಂಕ್ಷಿಪ್ತ ಇತಿಹಾಸ, ಭಾರತದಲ್ಲಿ ಅದರ ಹುಟ್ಟು–ಬೆಳವಣಿಗೆ ಮತ್ತು ಕರ್ನಾಟಕದ ಹಿನ್ನೆಲೆಯಲ್ಲಿ ಆ ವಿಷಯದ ನೆಲೆ–ಹಿನ್ನೆಲೆ–ಸಾಧನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ; ಪೂರಕವಾದ ಚಿತ್ರಗಳೂ ಸಾಕಷ್ಟಿವೆ. ಹಲವರು ವಿಷಯತಜ್ಞರು ಅಧ್ಯಾಯಗಳಲ್ಲಿಯ ಪ್ರಬಂಧಗಳನ್ನು ಒದಗಿಸಿದ್ದಾರೆ.ಇಂಥ ಸಂಪುಟಗಳು ಹಲವರ ಪರಿಶ್ರಮದಿಂದ ಮಾತ್ರವೇ ಸಿದ್ಧವಾಗುವಂಥವು.

ಪ್ರತಿಯೊಂದು ಕೃತಿಗೂ ಗುಣಗಳೂ ಇರುತ್ತವೆ; ಅಂತೆಯೇ ಮಿತಿಗಳೂ ಇರುತ್ತವೆ. ಈ ಸಂಪುಟಗಳೂ ಇವಕ್ಕೆ ಹೊರತಾಗಿಲ್ಲ. ಇಂಥದೊಂದು ಕೃತಿಯ ಅನಿವಾರ್ಯತೆಯನ್ನು ಈ ಗ್ರಂಥ ಒದಗಿಸಿದೆ. ಇದೇ ಇದರ ಮೊತ್ತಮೊದಲ ದೊಡ್ಡಗುಣ. ಕನ್ನಡದಲ್ಲಿ ವಿಜ್ಞಾನದ ಬಗ್ಗೆ ಬರೆಯುವವರು ಸಾಕಷ್ಟಿದ್ದಾರೆಂಬ ಸಂಗತಿಯೇ ಸಂತೋಷದಾಯಕ. ವಿಷಯತಜ್ಞರೇ ಇಲ್ಲಿಯ ಪ್ರಬಂಧಗಳನ್ನು ಬರೆದಿದ್ದಾರೆ ಎಂಬುದು ಪ್ರಶಂಸಾರ್ಹವೇ. ವಿಶ್ವವಿದ್ಯಾಲಯಗಳು ಮಾಡಬೇಕಾದ ಇಂಥ ಯೋಜನೆಯನ್ನು ಸಾಂಸ್ಕೃತಿಕ ಸಂಸ್ಥೆಯೊಂದು ನಿರ್ವಹಿಸಿರುವುದೂ ಅನುಕರಣೀಯ.

ಆದರೆ, ಈ ಸಂಪುಟಗಳಲ್ಲಿ ಏಕರೂಪತೆ ಯಿಲ್ಲದಿರುವುದೊಂದು ದೊಡ್ಡಕೊರತೆಯಾಗಿದೆ. ಮಾತ್ರವಲ್ಲ, ಇಂಥ ವಿಶ್ವಕೋಶಗಳಲ್ಲಿ ಇರಬೇಕಾದ ಸಂಪಾದನೆಯ ಶಿಸ್ತು ಇಲ್ಲವಾಗಿದೆ; ಕೊನೆಯ ಪಕ್ಷ, ವಿಷಯಸೂಚಿಯನ್ನಾದರೂ ಒದಗಿಸಲೇ ಬೇಕಿತ್ತು; ಲೇಖಕರು ಆಕರಗ್ರಂಥಗಳ ಪಟ್ಟಿಯನ್ನೂ ನೀಡಬೇಕಿತ್ತು. ಹಲವು ಪ್ರಬಂಧಗಳ ಭಾಷೆಯಲ್ಲೂ ಭಾವದಲ್ಲೂ ಅಲ್ಲಲ್ಲಿ ತೊಡಕುಗಳು ಕಾಣಿಸಿಕೊಂಡಿವೆ. ಉದಾಹರಣೆಗೆ ನೋಡಿ: ‘ಆ ದಿನಗಳಲ್ಲಿ ಬಾಬರ್‌ (1494) ಅನ್ವೇಷಣಾರ್ಥವಾಗಿ ದೇಶವನ್ನಾಳುತ್ತಿದ್ದನು’ (ಸಂ. 1, ಪು. 26). ಇಲ್ಲಿ ‘ಅನ್ವೇಷಣಾರ್ಥ’ ದೇಶವನ್ನಾಳುವುದು ಎಂದರೆ ಏನು? ‘ಮಠಗಳಲ್ಲೂ ಮದರಸಾಗಳಲ್ಲೂ ವೇದಗಣಿತ–ಖಗೋಳವಿಜ್ಞಾನಗಳ ಬೋಧನೆ ನಡೆಯುತ್ತಿತ್ತು’ ಎಂಬ ಮಾಹಿತಿ ಇಲ್ಲಿದೆ (ಸಂ.1. ಪು, 27). ಇಂಥ ವಿವರಗಳಿಗೆ ಪೂರಕಸಾಕ್ಷ್ಯವನ್ನು ಇಂಥ ಕೃತಿಗಳಲ್ಲಿ ಒದಗಿಸಬೇಕಲ್ಲವೆ? ‘ಆಯುರ್ವೇದ ಮೂಲ ತಾಂತ್ರಿಕರು’ ಎಂದು ಹೇಳಿ, ಮುಂದಿನ ಪ್ಯಾರಾದಲ್ಲಿ ‘ಆಯುರ್ವೇದದ ಮೂಲ ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ ಮುಂತಾದ ದರ್ಶನಗಳು’ ಎಂಬ ಮಾಹಿತಿಯಿದೆ (ಸಂ.1, ಪು. 641); ಇದರಲ್ಲಿ ಓದುಗರು ಯಾವುದನ್ನು ಸ್ವೀಕರಿಸುವುದು? ವಿಶ್ವಕೋಶಗಳಲ್ಲಿ ಲೇಖಕರ ವೈಯಕ್ತಿಕ ಭಾವನೆಗಳಿಗಿಂತಲೂ ವಿಷಯನಿಷ್ಠೆಯೇ ಪ್ರಧಾನಗುಣವಾಗಿರಬೇಕು; ಈ ಗುಣವೂ ಈ ಸಂಪುಟಗಳ ಬರಹಗಳಲ್ಲಿ ಹಲವೆಡೆ ಸಡಿಲವಾಗಿರುವುದು ಸ್ಪಷ್ಟ.

ವಿಜ್ಞಾನದ ದಾರಿ ನಮ್ಮ ಜೀವನಕ್ಕೆ ಅರಿವನ್ನೂ ನಲಿವನ್ನೂ ಕೊಡುವಂಥದ್ದು. ವಿಜ್ಞಾನದ ಹೃದಯವೇ ಕಾರ್ಯ–ಕಾರಣಭಾವಗಳ ಅನುಸಂಧಾನ; ಅದರಿಂದ ಉದ್ದೀಪನವಾಗುವ ಅರಿವಿನ ಬೆಳಕು. ಆಧುನಿಕ ಸಮಾಜವು ತಾನು ವಿಜ್ಞಾನದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದೆ ಎಂದು ಹೆಮ್ಮೆ ಪಡುತ್ತಿದೆ. ಆದರೆ ವಿಜ್ಞಾನದ ಬಗ್ಗೆ ನಮ್ಮ ತಿಳಿವಳಿಕೆಯ ಮಿತಿ ಮತ್ತು ಅದರ ಬಳಕೆಯಲ್ಲೂ ನಮಗಿರುವ ಅಸಡ್ಡೆ – ಇಂಥ ವಾಸ್ತವಗಳನ್ನು ‘ಕೋವಿಡ್‌ಕಾಲ’ ಬಯಲು ಮಾಡಿದೆ. ಹೀಗಾಗಿ ನಮ್ಮ ಸಮಾಜದ ಅಜ್ಞಾನಗಳನ್ನು ನಿವಾರಿಸುವಲ್ಲಿ ಇಂಥ ಕೃತಿಗಳು ನೆರವಾಗಲಿ ಎಂದು ಆಶಿಸೋಣ.

ಕೃತಿ: ಕರ್ನಾಟಕ ವಿಜ್ಞಾನ ತಂತ್ರಜ್ಞಾನ ದರ್ಶನ

(ಎರಡು ಸಂಪುಟಗಳು)

ಪ್ರ. ಸಂಪಾದಕರು: ಎಂ.ಎಸ್‌. ಸುರೇಶ್‌

ಸಂಪಾದಕರು: ವೈ. ಸಿ. ಕಮಲ ಹಾಗೂ

ಸುಮಂಗಲಾ ಎಸ್‌. ಮುಮ್ಮಿಗಟ್ಟಿ

ಪ್ರ: ಉದಯಭಾನು ಕಲಾಸಂಘ

ಸಂ: 080–26609343

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT