ಇತಿಹಾಸ ಮತ್ತು ಕಲ್ಪನೆಯ ನಡುವೆ ಜೋಡಿ ನಡಿಗೆ

7

ಇತಿಹಾಸ ಮತ್ತು ಕಲ್ಪನೆಯ ನಡುವೆ ಜೋಡಿ ನಡಿಗೆ

Published:
Updated:
Deccan Herald

ಕನ್ನಡದ ಮಹತ್ವದ ಮತ್ತು ಜನಪ್ರಿಯ ಕಥೆಗಾರರಾಗಿರುವ ಬೊಳುವಾರು ಮಹಮದ್ ಕುಂಞಿ ಅವರು ತಮ್ಮ. ‘ಉಮ್ಮಾ’ ಕಾದಂಬರಿಯ ಮುಖಪುಟದಲ್ಲೇ ‘ಪ್ರವಾದಿಪತ್ನಿ ಆಯಿಷಾ ಜೀವನಪ್ರೇರಿತ ಕಾದಂಬರಿ’ ಎಂದು ಬರೆದಿದ್ದಾರೆ. ಈ ಹಿಂದೆ ಇವರು ಬರೆದ ಪ್ರವಾದಿ ಮುಹಮ್ಮದರ ಜೀವನಾಧಾರಿತ ಕಾದಂಬರಿ ‘ಓದಿರಿ’ಯನ್ನು ಐತಿಹಾಸಿಕ ಕಾದಂಬರಿ ಎಂದು ನಮೂದಿಸಿದ್ದರು. ಸಾಮಾನ್ಯ ಓದುಗನಿಗೆ ಈ ಐತಿಹಾಸಿಕ ಮತ್ತು ಜೀವನಪ್ರೇರಿತ ಎಂಬ ಶಬ್ದಗಳ ನಡುವೆ ಏನಾದರೂ ವ್ಯತ್ಯಾಸವಿದೆಯೆ ಎಂದು ಗೊಂದಲ ಉಂಟಾಗುವುದು ಸಹಜ. ಓದುತ್ತಾ ಹೋದಂತೆ ಇದು ಕಾದಂಬರಿಯೇ ಅಥವಾ ಜೀವನಚರಿತ್ರೆಯೇ ಎಂಬ ಜಿಜ್ಞಾಸೆಯೂ ಉಂಟಾಗುತ್ತದೆ.

ಲೇಖಕನೊಬ್ಬ ತನ್ನ ಸೃಜನಶೀಲ ಕೃತಿಯಲ್ಲಿ ಹೀಗೆ ಕಣ್ಣಾಮುಚ್ಚಾಲೆಯಾಟ ಆಡುವ ಅಗತ್ಯವಿದೆಯೆ ಎನ್ನುವ ಪ್ರಶ್ನೆ ಉದ್ಭವಿಸಿದರೆ ಅದು ಓದುಗನ ತಪ್ಪಲ್ಲ. ಭಾರತೀಯ ಮುಸ್ಲಿಂ ಸಮುದಾಯವನ್ನು ಬಹಳಷ್ಟು ಸಮಾಜವಿಜ್ಞಾನಿಗಳು ‘ಮುಚ್ಚಿಕೊಂಡ ಸಮುದಾಯ’ ಎಂದು ಬಣ್ಣಿಸುತ್ತಾರೆ. ತಮ್ಮ ಧಾರ್ಮಿಕ ನಂಬಿಕೆಗಳ ಮೇಲೆ ನಿರಂತರ ಹಲ್ಲೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ಹೆಚ್ಚು ಸೂಕ್ಷ್ಮವೂ, ಆತಂಕಭರಿತವೂ ಆಗಿರುವುದರಿಂದ, ಇಸ್ಲಾಂ ಚರಿತ್ರೆಯ ಐತಿಹಾಸಿಕ ಪಾತ್ರಗಳನ್ನು ಕಾದಂಬರಿಯ ಚೌಕಟ್ಟಿಗೆ ಒಗ್ಗಿಸುವಾಗ (ಅದರಲ್ಲೂ ಮುಸ್ಲಿಂ ಹಿನ್ನೆಲೆಯ ಲೇಖಕನೊಬ್ಬ) ವಹಿಸಬಹುದಾದ ಎಚ್ಚರಿಕೆಗಳನ್ನು ಇಲ್ಲಿ ಬೊಳುವಾರು ಅವರು ಸ್ವಲ್ಪ ಹೆಚ್ಚೇ ತಬ್ಬಿಕೊಂಡಂತಿದೆ. ಅದಕ್ಕೆ ಪೂರಕವಾಗಿ, ಪ್ರತಿಯೊಂದು ಅಧ್ಯಾಯದ ಕೊನೆಯಲ್ಲೂ ಸ್ವಗತಗಳು ಮತ್ತು ಟಿಪ್ಪಣಿಗಳು ಕಾಣಿಸಿಕೊಂಡಿವೆ.

ಕಾದಂಬರಿಯ ಆರಂಭದಲ್ಲೇ ಇದರ ಹಸ್ತಪ್ರತಿಯನ್ನು ಓದಿದವರ ಹೆಸರುಗಳನ್ನು ನಮೂದಿಸಲಾಗಿದೆ. ಕನ್ನಡದ ಹೆಸರಾಂತ ವಿಮರ್ಶಕರ ಸಂಕ್ಷಿಪ್ತ ಟಿಪ್ಪಣಿಗಳನ್ನೂ ಕೊಡಲಾಗಿದೆ. ಈ ‘ನಿರೀಕ್ಷಣಾ ಜಾಮೀನುಗಳು’ ಏಕೋ ಬೊಳುವಾರು ಅವರು ತಮ್ಮ ಸಮುದಾಯದ ಓದುಗರಿಗೆ ಸ್ವಲ್ಪ ಹೆಚ್ಚೇ ಹೆದರಿಕೊಂಡಂತಿದೆ ಎಂಬುದನ್ನೇ ಸೂಚಿಸುತ್ತವೆ. ಇತಿಹಾಸದ ಪಾತ್ರಗಳನ್ನು ಇಟ್ಟುಕೊಂಡು ಸೃಜನಶೀಲ ಕಾದಂಬರಿಯೊಂದನ್ನು ಬರೆಯುವ ಲೇಖಕನೊಬ್ಬ ಇಷ್ಟೊಂದು ಗೋಜಲುಗಳನ್ನು ತನ್ನ ಸುತ್ತ ನಿರ್ಮಿಸಿಕೊಳ್ಳಬೇಕೆ ಎನ್ನುವ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ.

ಬೊಳುವಾರು ಮಹಮದ್ ಕುಂಞಿ ಮೂಲತಃ ನಾಟಕಕಾರ. ಬಹುಶಃ ಅದಕ್ಕೇ ಇರಬೇಕು, ಅವರ ಕಥೆ, ಕಾದಂಬರಿಗಳಲ್ಲೂ ನಾಟಕೀಯತೆ ಎದ್ದು ಕಾಣುತ್ತದೆ. ಈ ಕಾದಂಬರಿಯಲ್ಲಂತೂ ಅಲ್ಲಲ್ಲಿ ಹೈಡ್ರಾಮಾ ನಡೆಯುತ್ತದೆ. ಅರೇಬಿಯಾದ ಮರಳುಗಾಡಿನಲ್ಲಿ ಹುಟ್ಟಿ, 23 ವರ್ಷಗಳ ಪ್ರವಾದಿತ್ವದ ಅವಧಿಯಲ್ಲಿ ಇಸ್ಲಾಂ ಎಂಬ ಜೀವನವಿಧಾನವನ್ನು 12 ಲಕ್ಷ ಚದರಮೈಲಿ ವಿಸ್ತೀರ್ಣದ ಪ್ರದೇಶದಲ್ಲಿ ಕ್ರಾಂತಿಕಾರಕವೆಂಬಂತೆ ಸ್ಥಾಪಿಸಿದ ಪ್ರವಾದಿ ಮುಹಮ್ಮದರ ಪತ್ನಿ ಆಯಿಷಾ ಅವರ ಕಣ್ಣಲ್ಲಿ ಬದುಕನ್ನು ಅವಲೋಕಿಸುವ ವಿಭಿನ್ನ ಪ್ರಯತ್ನ ಈ ಲೇಖಕನದ್ದು. ಈ ಅವಲೋಕನದಲ್ಲಿ ಆಯಿಷಾ ಅವರ ಜತೆಗೆ ಪ್ರವಾದಿ ಮುಹಮ್ಮದರ ಇನ್ನಿತರ ಪತ್ನಿಯರ ಜೀವನಗಾಥೆಯೂ ಹೆಣೆದುಕೊಂಡಿದೆ. ಚರಿತ್ರೆಯನ್ನು ವರ್ತಮಾನದ ಕಣ್ಣಲ್ಲಿ ನೋಡುತ್ತಾ, ಏಳನೆಯ ಶತಮಾನದ ಪುರುಷ ಕೇಂದ್ರಿತ ವ್ಯವಸ್ಥೆಯಲ್ಲಿ ಪ್ರವಾದಿ ಪತ್ನಿಯರ ತುಮುಲ ತಾಕಲಾಟಗಳನ್ನು ಬೊಳುವಾರು ಇಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.

ಇಷ್ಟೊಂದು ದೊಡ್ಡ ಕ್ಯಾನ್ವಾಸ್ ಇಟ್ಟುಕೊಂಡಾಗ, ಅದೂ ನಮ್ಮದಲ್ಲದ ಪ್ರದೇಶವೊಂದರಲ್ಲಿ ನಡೆಯುವ ಘಟನೆಗಳನ್ನು ಏಕಗುಟುಕಿನಲ್ಲಿ ಗ್ರಹಿಸುವುದು ಸ್ವಲ್ಪ ಕಷ್ಟವೇ ಸರಿ. ಆದರೆ, ಈ ಕಷ್ಟವನ್ನು ಸುಲಭಗೊಳಿಸುವ ಹಲವು ತಂತ್ರಗಳನ್ನು ಬೊಳುವಾರು ಇಲ್ಲಿ ಅಳವಡಿಸಿಕೊಂಡಿರುವುದು ಕುತೂಹಲಕರ. ಸ್ವಗತಗಳು, ಪ್ರತಿ ಅಧ್ಯಾಯದ ಕೊನೆಗೆ ಬರುವ ಟಿಪ್ಪಣಿಗಳು, ನಿರೂಪಕನಾಗಿ ಕಾಬಂಬರಿಕಾರನೇ ಕಾಣಿಸಿಕೊಳ್ಳುವುದು- ಎಲ್ಲವೂ ಈ ತಂತ್ರದ ಭಾಗವೇ. ಈ ತಂತ್ರದಿಂದಾಗಿಯೇ 320 ಪುಟಗಳ ಸುದೀರ್ಘ ಓದು ಕೂಡಾ ಖೊ ಕೊಟ್ಟಂತೆ ಸಲೀಸಾಗಿ ಓದಿಸಿಕೊಳ್ಳುತ್ತದೆ.

ಹೈಡ್ರಾಮಾದ ಅನುಭವದೊಂದಿಗೆ ಅಲ್ಲಲ್ಲಿ ಓದುಗನ ಕಣ್ಣಂಚನ್ನೂ ಒದ್ದೆಯಾಗಿಸುವ, ಕಾದಂಬರಿಯ ಬಂಧವೂ ಓದುಗನ ತಲ್ಲೀನತೆಗೆ ಪೂರಕವಾಗಿದೆ. ಮುಅತ್ತಲ್ ಎಂಬ ತಂದೆಯೊಬ್ಬ ಸ್ವಂತ ಮಗಳು ಅಫೀರಾಳನ್ನು ಮರಳಿನಲ್ಲಿ ಹೂತು ಹೊರಡುವ ದೃಶ್ಯದಿಂದ ಆರಂಭವಾಗಿ ಕುತೂಹಲ ಕೆರಳಿಸಿ, ಬಳಿಕ ಅರೇಬಿಯಾದ ಮರಳುಗಾಡಿನಾದ್ಯಂತ ಪಯಣಿಸಿ, ಕೊನೆಗೆ ಅದೇ ಅಫೀರಾಳೊಂದಿಗೇ ಕೊನೆಗೊಳ್ಳುವ ರೀತಿ ಕಾದಂಬರಿಯ ಓದನ್ನು ರಮಣೀಯಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಇದೊಂದು ಯಶಸ್ವಿ ಕಾದಂಬರಿ.

ಬೊಳುವಾರು ಈ ಕಾದಂಬರಿಯನ್ನು ಒಂದು ನಿರ್ದಿಷ್ಟ ಉದ್ದೇಶವನ್ನು ಇಟ್ಟುಕೊಂಡೇ ಬರೆದಿದ್ದಾರೆ. ಆ ಉದ್ದೇಶದ ಬಗ್ಗೆ ಆರಂಭದ ಪುಟಗಳಲ್ಲಿ ಸ್ಷಷ್ಟವಾಗಿಯೇ ಬರೆಯುತ್ತಾರೆ. ಆ ಬರವಣಿಗೆ ಹಾಗೆಯೇ ಕಥನಸ್ವರೂಪಕ್ಕೆ ಹೊರಳುತ್ತದೆ. ಓದುತ್ತಿದ್ದಂತೆಯೇ ಫಿಕ್ಷನ್ ಆಗುತ್ತದೆ. ಸಾಗುತ್ತಿದ್ದಂತೆಯೇ ಇತಿಹಾಸವಾಗುತ್ತದೆ. ಸ್ವಲ್ಪ ನಿಂತಂತೆ ಕಾಣಿಸಿದಾಗ ಸಮುದಾಯದ ಆತ್ಮವಿಮರ್ಶೆಯೂ ಆಗುತ್ತದೆ. ಸಾಮಾನ್ಯವಾಗಿ ಧರ್ಮವೊಂದರ ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಧರ್ಮಗುರುಗಳು ಬರೆಯುವಾಗ ಆವೇಶ ಮತ್ತು ಭಕ್ತಿ ಮೈದುಂಬಿರುತ್ತದೆ. ಆದರೆ ಇಲ್ಲಿ ಕಾದಂಬರಿಕಾರನ ತಣ್ಣನೆಯ ಸ್ಪರ್ಶ ಎದ್ದು ಕಾಣುತ್ತದೆ. ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು ಐತಿಹಾಸಿಕ ಕಾದಂಬರಿಯೊಂದನ್ನು ಬರೆದರೆ ಅದು ಸೃಜನಶೀಲ ಕೃತಿ ಆಗುತ್ತದೆಯೆ? ಅದರ ಬದಲು ನೇರವಾಗಿ ಇತಿಹಾಸವನ್ನೇ ಬರೆಯಬಹುದಲ್ಲ? ಹಾಗೆ ಬರೆದರೆ ಅಪರಿಚಿತ ಧರ್ಮವೊಂದರ ಸದ್ಗುಣಗಳನ್ನು ಓದುಗರು ಅರಗಿಸಿಕೊಳ್ಳಲಾರರೆ? ಹೀಗೆ ಇತಿಹಾಸ ಮತ್ತು ಕಾಲ್ಪನಿಕತೆಯ ನಡುವಣ ತೆಳ್ಳನೆಯ ಗೆರೆಯನ್ನು ಲೇಖಕನೊಬ್ಬ ಎಷ್ಟರಮಟ್ಟಿಗೆ ಹಿಗ್ಗಿಸಬಹುದು? ಈ ಎಲ್ಲ ಪ್ರಶ್ನೆಗಳಿಗೆ ಬೊಳುವಾರು ಕಾದಂಬರಿಯ ಓಘದಲ್ಲೇ ಪರೋಕ್ಷ ಉತ್ತರವನ್ನೂ ನೀಡುತ್ತಾರೆ.

‘ಭೂಮಿಯ ಮೇಲಿರುವವರು ಇಂತಹ ಪ್ರಶ್ನೆಗಳಿಗೆಲ್ಲ ಬೇರೆಯವರಿಂದ ಉತ್ತರ ನಿರೀಕ್ಷಿಸಬಾರದು. ಪ್ರತಿಯೊಬ್ಬರೂ ತಮಗಿಷ್ಟವಾದ ಉತ್ತರಗಳನ್ನು ತಮ್ಮೊಳಗೇ ಕಾಣಲು ಯತ್ನಿಸಬೇಕು. ಉತ್ತರ ಸಿಗದಿದ್ದಾಗ ಎಲ್ಲವೂ ಪೂರ್ವನಿರ್ಧಾರಿತವೆಂದು ನಂಬುತ್ತಾ ಸಮಾಧಾನ ಪಟ್ಟುಕೊಳ್ಳುತ್ತಿರಬೇಕು ಅಷ್ಟೆ’ ಎಂದು ದೇವದೂತ ಇರ್ಷದ್ ಬಾಯಿಯಿಂದಲೇ ಹೇಳಿಸುತ್ತಾರೆ.

ಇದು ಆಯಿಷಾರ ಜೀವನಪ್ರೇರಿತ ಕಾದಂಬರಿ ಎಂದು ಸೂಚಿಸಿದರೂ, ಈ ಕಾದಂಬರಿಯ ಕೇಂದ್ರ ಬಿಂದು ಆಯಿಷಾರ ದಾಸಿ ಅಫೀರಾ. ಇತಿಹಾಸದಲ್ಲಿ ಇಲ್ಲದ ಇಬ್ಬರು ದಾಸಿಯರ ಪಾತ್ರಗಳನ್ನು ಸೃಷ್ಟಿಸಿ, ಅದನ್ನು ಐತಿಹಾಸಿಕ ಪಾತ್ರಗಳ ಜತೆಗೆ ಅಚ್ಚುಕಟ್ಟಾಗಿ ಜಡೆ ಹೆಣೆದಂತೆ ರೂಪಿಸಿರುವ ಬೊಳುವಾರು ಅವರ ತಂತ್ರ ಕಾದಂಬರಿಯ ಯಶಸ್ಸಿಗೆ ಬಹುದೊಡ್ಡ ಕೊಡುಗೆ ನೀಡಿದೆ. ಜೊತೆಗೆ ಧರ್ಮನಿರಪೇಕ್ಷ ಓದುಗರ ಮನಸ್ಸನ್ನೂ ತಟ್ಟಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !