ಸ್ತ್ರೀ ಲೋಕದ ಭಾವಬಂಧ

7
Modala Odu

ಸ್ತ್ರೀ ಲೋಕದ ಭಾವಬಂಧ

Published:
Updated:
Deccan Herald

ಆಧುನೀಕರಣ ಮತ್ತು ಅಭಿವೃದ್ಧಿ ಮೀಮಾಂಸೆಯಲ್ಲಿ ರೂಪುಗೊಂಡ ಚಿಂತನೆಗಳಲ್ಲಿ ಇಂದಿಗೂ ಪಿತೃಪ್ರಧಾನ ಸಂರಚನೆಯದ್ದೇ ಮೇಲುಗೈ. ಅಂಥ ಸಂರಚನೆಗಳಲ್ಲಿ ಪಿತೃಪ್ರಧಾನ್ಯವನ್ನು ಮೀರಿಕೊಂಡ, ಮೀರಿಕೊಳ್ಳುವ ನೆಲೆಗಳನ್ನು ಶೋಧಿಸುವ ಗುಣವನ್ನು  ಆರ್. ಸುನಂದಮ್ಮ ಅವರ ‘ಸಂಗಾತಿ ರೂವ್ವ ಬರಸೇನಾ’ ಕೃತಿ ಒಳಗೊಂಡಿದೆ.

ಹೆಣ್ಣಿನ ಕಣ್ಣೋಟದ ವಿಮರ್ಶಾ ಲೇಖನಗಳ ಸಂಗ್ರಹವಾಗಿರುವ ಈ ಕೃತಿಯ ಎರಡು ಭಾಗಗಳಲ್ಲಿ ಒಟ್ಟು 18 ಲೇಖನಗಳಿವೆ. ‘ಸಂಗಾತಿ ರೂವ್ವ ಬರಸೇನಾ’ ಅನ್ನೋದು ಉತ್ತರಾದೇವಿ ಜನಪದ ಕಾವ್ಯದಲ್ಲಿ ಬರುವ ಸಾಲು.

ಉತ್ತರಾದೇವಿ ಗಂಡ ಮತ್ತು ತವರುಮನೆಯಿಂದ ತಿರಸ್ಕೃತಳಾದಾಗ ಆಕೆಯ ಗೆಳತಿ ಹೇಳುವ ಕಾವ್ಯದ ಸಾಲೇ ಸಂಗಾತಿ ರೂವ್ವ ಬರಸೇನಾ ಅನ್ನೋದು. ಔದ್ಯೋಗಿಕ ಸ್ಥಳ ಮತ್ತು ಮನೆಯಲ್ಲಿ ತನ್ನ ಅಸ್ಮಿತೆಯನ್ನು ಕಟ್ಟಿಕೊಳ್ಳುವ ಇಂದಿನ ಹೆಣ್ಣಿಗೆ ಸುನಂದಮ್ಮ ಅವರ ಲೇಖನಗಳು ಗೆಳತಿಯಂತೆ ಸಂತೈಸುತ್ತವೆ.

ಇಲ್ಲಿನ ಲೇಖನಗಳೆಲ್ಲವೂ ಸ್ತ್ರೀಕೇಂದ್ರಿತವಾಗಿದ್ದರೂ ನೇಪಥ್ಯದಲ್ಲಿ ಪಿತೃಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುವಂಥವೇ ಆಗಿವೆ. ಇತಿಹಾಸ, ವರ್ತಮಾನದಲ್ಲಿ ಹೆಣ್ಣಿನ ಅಸ್ತಿತ್ವದ ನೆಲೆಗಳ ಮೂಲ ಕುರಿತು ಮಾಹಿತಿ ನೀಡುವ ಇಲ್ಲಿನ ಕೆಲ ಬರಹಗಳು ಮತ್ತಷ್ಟು ಸತ್ವಯುತವಾಗಿ ರೂಪುಗೊಳ್ಳುವ ಸಾಧ್ಯತೆಯನ್ನು ಮನವರಿಕೆ ಮಾಡಿಕೊಡುತ್ತವೆ.

‘ದುಡಿಯುವ ಮಹಿಳೆ ಮತ್ತು ಸಾಂಪ್ರದಾಯಿಕತೆ’ ಮತ್ತು ‘ಚಲನಚಿತ್ರ ಮಾಧ್ಯಮ ಮತ್ತು ಮಹಿಳೆ’ ಲೇಖನಗಳಲ್ಲಿ ಮೇಲ್ಮಟ್ಟದ ಮಾಹಿತಿಯಷ್ಟೇ ಇದೆ ಹೊರತು ಆಳವಾದ ಸ್ತ್ರೀವಾದಿ ಒಳನೋಟಗಳಾಗಲೀ, ಗಂಭೀರ ಚಿಂತನೆಗಳಾಗಲಿ ಕಂಡುಬರುವುದಿಲ್ಲ.

ಆದರೆ, ಪ್ರಬಂಧದ ಸ್ವರೂಪದಲ್ಲಿರುವ ಸುನಂದಮ್ಮ ಅವರ ಬರಹಗಳಲ್ಲಿ ವೈಚಾರಿಕತೆಯ ಸ್ಪಷ್ಟನೋಟಗಳಿವೆ. ಪುಸ್ತಕದ ಬೆನ್ನುಡಿಯಲ್ಲಿ ಡಾ.ಸಬಿಹಾ ಬರೆದಿರುವಂತೆ ಇಲ್ಲಿನ ಲೇಖನಗಳು ಸೈದ್ಧಾಂತಿಕ ಭಾರಕ್ಕೆ ನಲುಗದೇ ನಿತ್ಯದ ಬದುಕಿನ ಜೀವನಕ್ರಮದ ನಿದರ್ಶನಗಳ ಮೂಲಕವೇ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಲಿಂಗ ಅಸಮಾನತೆಗಳತ್ತ ಗಮನಹರಿಸುವಂತೆ ಓದುಗರನ್ನು ಒತ್ತಾಯಿಸುತ್ತವೆ.

ಮಹಿಳಾ ಕಥನಗಳು, ಸ್ತ್ರೀವಾದಿ ಓದಿನಲ್ಲಿ ಆಸಕ್ತಿ ಇರುವವರಷ್ಟೇ ಅಲ್ಲ ಸಾಮಾನ್ಯ ಓದುಗರನ್ನು ಈ ಕೃತಿ ಓದಿಸಿಕೊಳ್ಳುವ ಗುಣ ಹೊಂದಿದೆ. ಸರಳ ಭಾಷೆ, ನಿರೂಪಣೆಯ ಮೂಲಕವೇ ಲೇಖಕಿ ಸ್ತ್ರೀವಾದಿ ದೃಷ್ಟಿಕೋನವನ್ನು ಕಟ್ಟಿಕೊಂಡಿದ್ದಾರೆ. ಆಧುನಿಕ ಮಹಿಳೆಯ ಅಸ್ಮಿತೆಯ ಜತೆಜತೆಗೆ ಕವಲುದಾರಿಯಲ್ಲಿರುವ ಗ್ರಾಮೀಣ ಮಹಿಳೆಯ ಚಿತ್ರಣವೂ ಇಲ್ಲಿದೆ. ಕೃತಿಯ ಎರಡನೇ ಭಾಗದಲ್ಲಿ ಸ್ತ್ರೀ ಕೇಂದ್ರಿತ ಕಾವ್ಯಗಳಾದ ರಾಮಾಯಣ– ಮಹಾಭಾರತ, ಹಾಲುಮತ ಪುರಾಣ ಕಾವ್ಯ, ಮೌಖಿಕ ಸಾಹಿತ್ಯ, ದಾಸ ಸಾಹಿತ್ಯ, ಹದಿಬದೆಯ ಧರ್ಮದ ಜತೆಗೆ ಆಧುನಿಕ ಸಾಹಿತ್ಯದಲ್ಲಿರುವ ಸ್ತ್ರೀ ನೋಟಗಳನ್ನು ವಿಶ್ಲೇಷಿಸಿದ್ದಾರೆ.

ಹೆಣ್ಣಿನ ಹೊಸ ಚರಿತ್ರೆ ಕಟ್ಟುವ ಭರವಸೆಯಂತೆ ಮಹಿಳಾ ಲೋಕದ ಭಾವ– ಬಂಧವನ್ನು ಓದುಗರೊಂದಿಗೆ ಈ ಕೃತಿ ಬೆಸೆಯುತ್ತದೆ.

ಕೃತಿ: ಸಂಗಾತಿ ರೂವ್ವ ಬರಸೇನಾ (ವಿಮರ್ಶಾ ಲೇಖನಗಳು)

ಲೇಖಕಿ: ಆರ್.ಸುನಂದಮ್ಮ

ಪ್ರಕಾಶನ: ಕವಿ ಪ್ರಕಾಶನ, ಕವಲಕ್ಕಿ

ಪುಟ ಸಂಖ್ಯೆ: 300

ಬೆಲೆ: ₹ 180

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !