ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ತಾಳವಾದ್ಯ ಹೊರಡಿಸುವ ಭಾವತರಂಗ

Last Updated 28 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

‘ಗಾಯಕ ಹಾಡುವುದು ಶಬ್ದಗಳನ್ನು; ಆ ಶಬ್ದಗಳು ಭಾವೋದ್ವೇಗದ ಅನುಭವವನ್ನು ತುಂಬಿಕೊಂಡಿರುತ್ತವೆ. ಉದಾಹರಣೆಗೆ, ‘ನಹಿ ಆಯೇ ಸಾವರಿಯಾ ಘಿರ್ ಆಯೇ ಬದರಿಯಾ’ (ನನ್ನ ಇನಿಯ ಇನ್ನೂ ಬರದಿದ್ದರೂ, ಕಪ್ಪು ಮೋಡಗಳಂತೂ ಬಂದುಬಿಟ್ಟಿವೆ) ಎಂಬ ಸಾಲನ್ನು ತೆಗೆದುಕೊಳ್ಳಿ. ಇಲ್ಲಿರುವ ಕೆಲವೇ ಶಬ್ದಗಳು ನಮಗೆ ಖಿನ್ನತೆಯನ್ನು, ನಿರಾಶೆಯನ್ನು, ಅಭಿಲಾಶೆಯನ್ನು ಅರ್ಥಮಾಡಿಸುವುದಷ್ಟೇ ಅಲ್ಲ, ಅವುಗಳನ್ನು ಅನುಭವಿಸುವಂತೆಯೂ ಮಾಡುತ್ತವೆ. ಗಾಯಕ ಈ ಒಂದೇ ಸಾಲನ್ನು ಇಪ್ಪತ್ತು ನಿಮಿಷ ಹಾಡಬಹುದು. ಆ ಇಪ್ಪತ್ತು ನಿಮಿಷಗಳಲ್ಲಿ ಅವನು ಆ ಸಂಕೀರ್ಣ ಭಾವಗಳನ್ನು ಐವತ್ತು ವಿಭಿನ್ನ ಬಗೆಗಳಲ್ಲಿ ಅಭಿವ್ಯಕ್ತಗೊಳಿಸಬಹುದು ಮತ್ತು ಐವತ್ತು ವಿಭಿನ್ನ ರೀತಿಗಳಲ್ಲಿ ತುಂಬ ಸೂಕ್ಷ್ಮವಾಗಿ ಲಯಕ್ಕೆ ಹೊಂದಿಕೊಳ್ಳುತ್ತಿರಬಹುದು. ಅದೇ ಒಬ್ಬ ಪಕ್ಕವಾದ್ಯಗಾರ ಅವನ ಗಾಯನವನ್ನು ಶ್ರೋತೃಗಳಿಗಾಗಿ ಇನ್ನೊಂದೇ ಎತ್ತರಕ್ಕೆ ಕೊಂಡೊಯ್ಯಬಲ್ಲ.’ ಇದು ಪ್ರಸಿದ್ಧ ತಬಲಾ ಜಾದೂಗಾರ ಜಾಕಿರ್ ಹುಸೇನ್ ಸಂದರ್ಶನವೊಂದರಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ. ಆ ಇನ್ನೊಂದು ಎತ್ತರ ಯಾವುದು? ಅದು ಉಂಟುಮಾಡುವ ಸಂಕೀರ್ಣಾನುಭವ ಎಂಥದು? ಕೃಷ್ಣಪ್ರಕಾಶ ಉಳಿತ್ತಾಯರ ‘ಸುಘಾತ’ ಈ ಪ್ರಶ್ನೆಗಳಿಗೆ ಅನೇಕ ನಿದರ್ಶನಗಳ ಮೂಲಕ ಉತ್ತರಿಸಿ, ವಿಶದೀಕರಿಸುವ ಒಂದು ಅಪರೂಪದ ಪುಸ್ತಕ.

ಭಾವವೈವಿಧ್ಯವನ್ನು ಅಭಿವ್ಯಕ್ತಿಸುವ ಪ್ರಕ್ರಿಯೆಯಲ್ಲಿ ತಾಳವಾದ್ಯಗಾರನೊಬ್ಬ ಮುಖ್ಯ ಗಾಯಕನಷ್ಟೇ ಪರಿಣಾಮಕಾರಿಯಾಗಲು ಸಾಧ್ಯವೇ? ಸಾಧ್ಯ ಎಂದು ಈ ಪುಸ್ತಕವನ್ನು ಓದುವ ಪೂರ್ವದಲ್ಲಿ ನನಗೆ ಗೊತ್ತಿರಲಿಲ್ಲ. ಉಳಿತ್ತಾಯರು ಸ್ವತಃ ಒಬ್ಬ ಪರಿಣತ ಚೆಂಡೆ-ಮದ್ದಳೆ ವಾದಕರು. ಅವರಿಗೆ ನಮ್ಮ ಶಾಸ್ತ್ರೀಯ ಸಂಗೀತದ ಶಾಸ್ತ್ರಭಾಗದಲ್ಲಿ ಹೇಗೋ ಹಾಗೆ ಅದರ ಪ್ರಯೋಗಭಾಗದಲ್ಲೂ ವಿಶೇಷ ಪರಿಶ್ರಮವಿದೆ. ಜೊತೆಗೆ ವಾದನ ಕಲೆಯ ಅಮೂರ್ತ ಸೂಕ್ಷ್ಮಗಳನ್ನು ಭಾಷೆಯಲ್ಲಿ ಮೂರ್ತಗೊಳಿಸಬಲ್ಲ ಭಾಷಾ ಕೌಶಲವೂ ಉಂಟು.

ಈ ಪುಸ್ತಕದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಮೃದಂಗವಾದನದ ವೈಶಿಷ್ಟ್ಯ, ಯಕ್ಷಗಾನದ ನಾದವೈಭವ, ಗಾನಾನುಸಂಧಾನ, ತಿತ್ತಿತ್ತೈ ತಾಳ, ಯಕ್ಷಗಾನ ಕಲೆಯ ಹಿಮ್ಮೇಳ, ನೃತ್ಯ, ವಾದನಗಳ ಲಾಸ್ಯ, ಚಕ್ರತಾಳ ಇತ್ಯಾದಿ ವಿಷಯಗಳ ಬಗ್ಗೆ ತೀರ ಆಳವಾದ ವಿಶ್ಲೇಷಣೆಯಿದೆ. ಎರಡನೆಯ ಭಾಗದಲ್ಲಿ, ಪರಿಣತ ಚೆಂಡೆ-ಮದ್ದಳೆ ವಾದ್ಯಗಾರರ ನುಡಿಸಾಣಿಕೆಯನ್ನು ಕುರಿತ ಅತ್ಯಂತ ಅಪೂರ್ವವಾದ ಒಳನೋಟಗಳಿವೆ. ಈ ವಾದ್ಯಗಾರರಾದರೋ ಯಕ್ಷಗಾನ ರಂಗದಲ್ಲಿ ತುಂಬ ಹೆಸರಾದವರು. ಪುಂಡಿಕಾಯ್ ಕೃಷ್ಣ ಭಟ್, ದಿವಾಣ ಭೀಮ ಭಟ್ಟ, ಲಕ್ಷ್ಮೀಶ ಅಮ್ಮಣ್ಣಾಯ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ತಲೆಂಗಳ ಗೋಪಾಲಕೃಷ್ಣ ಭಟ್, ಅಡೂರು ಗಣೇಶ ರಾವ್, ಅನಂತ ಪದ್ಮನಾಭ ಪಾಠಕ್, ಶಂಕರ ಭಾಗವತ್ ಯಲ್ಲಾಪುರ, ಪೆರುವಾಯಿ ನಾರಾಯಣ ಭಟ್ಟ, ಪದ್ಯಾಣ ಜಯರಾಮ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮುಂತಾದವರ ಸ್ವೋಪಜ್ಞ ಶೈಲಿ, ನುಡಿಸಾಣಿಕೆಯ ವೈಶಿಷ್ಟ್ಯ, ವೈಯಕ್ತಿಕ ಛಾಪು ಮೊದಲಾದವುಗಳನ್ನು ಕೆಲವು ಸೂಕ್ತ ಸಂದರ್ಭಗಳ ವಿವರಣೆಯ ಸಮೇತ ಚಿತ್ರಿಸಲಾಗಿದೆ.

ವಾದ್ಯವಾದನದಲ್ಲಿ ಎರಡು ಬಗೆಯುಂಟು. ಒಂದು, ಗಾಯಕನ ಹಾಡಿನ ಲಯವನ್ನು ಅನುಸರಿಸುವ ತಾಳಧರ್ಮ. ಇನ್ನೊಂದು, ಗಾಯಕ ಹೊಮ್ಮಿಸುವ ಭಾವವನ್ನು ಇಮ್ಮಡಿಸುವಂಥ ವಾದಕ ಮನೋಧರ್ಮ. ಒಬ್ಬ ಸಮರ್ಥ ವಾದಕನಲ್ಲಿ ಈ ಎರಡೂ ಬೇರೆ ಬೇರೆಯಾಗದೆ ಹೇಗೆ ಪರಸ್ಪರ ಹೊಂದಿಕೊಂಡಿರುತ್ತವೆ, ಹೊಂದಿಕೊಂಡಿರಬೇಕು ಎಂಬುದನ್ನು ತುಂಬ ಮಾರ್ಮಿಕವಾಗಿ ವಿವರಿಸುತ್ತವೆ ಉಳಿತ್ತಾಯರ ಈ ಮಾತುಗಳು: ‘ವಾದಕನು ಗಾನದೊಂದಿಗೆ ‘ಅದ್ವೈತ ಭಾವ’ ಹೊಂದಿದರೆ ವಾದಕನಿಗೆ ‘ಕೈಕಟ್ಟುವ’ ಅಪಾಯವೇ ಹೆಚ್ಚು. ಅನ್ಯನಾಗಿ ನಿಂತರೆ ಭಾವಪೂರ್ಣತೆಯೊಂದಿಗಿನ ಮನೋಧರ್ಮೀಯ ಪ್ರಸ್ತುತಿ ಆಗದಿರುವ ಕೊರತೆಯೂ ಬರುತ್ತದೆ. ವಾದಕನಿಗೆ ‘ಅನ್ಯ’ನಾಗುವಿಕೆ ಮತ್ತು ‘ಒಂದಾಗು’ವಿಕೆಯ ಸಾಮರ್ಥ್ಯ ಇದ್ದರಂತೂ ಸೌಭಾಗ್ಯವೇ ಸರಿ. ಕೀರ್ತಿಶೇಷ ಪಾಲ್ಘಾಟ್ ಮಣಿ ಅಯ್ಯರ್ ಅಂಥವರಿಂದ ಅದು ಸಾಧಿತವಾಗಿತ್ತು. ಈ ಸಾಮರ್ಥ್ಯ ವಿಶೇಷದಿಂದಲೇ ವಾದಕನಾದವನಲ್ಲಿ ರಾಗದ ಭಾವವನ್ನೂ ಕೃತಿ ಭಾವವನ್ನೂ ಮತ್ತೂ ಮುಂದಕ್ಕೆ ಹೋದರೆ ತಾಳದ (ಕಾಲದ) ಭಾವವನ್ನೂ ಅಭಿವ್ಯಕ್ತಿಸುವುದಕ್ಕೆ ಸಾಧ್ಯವಾಗುವುದು.’

ಈ ಪುಸ್ತಕದಲ್ಲಿ ಎಲ್ಲ ಕಡೆಯೂ ವಿಷಯ ಇಷ್ಟು ಸರಳವಾಗಿಲ್ಲ, ಸ್ಪಷ್ಟವೂ ಆಗಿಲ್ಲ. ಉದಾಹರಣೆಗೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರ ವಾದನ ಶೈಲಿಯ ಬಗ್ಗೆ 123ನೆಯ ಪುಟದಲ್ಲಿರುವುದನ್ನು ನೋಡಿ: ‘ಚೆಂಡೆಯ ಉರುಳಿಕೆಯಲ್ಲಿ ಇವರು ಮಂಡಿಸುವ ಕ್ರಮದಲ್ಲಿ ಪಾಟಾಕ್ಷರಗಳು ತಾಳದೊಂದಿಗೆ ಕಚ್ಚಿ ಸಾಗುವ ರೀತಿ ಮತ್ತು ಅದರಲ್ಲಿರುವ ಸಮಾನ ರೀತಿಯ ಧ್ವನಿ ಹೊಮ್ಮುವಿಕೆ ಅನ್ಯತ್ರ ಅಲಭ್ಯವೆಂದು ಹೇಳದಿರಲು ಸಾಧ್ಯವಿಲ್ಲ. ಅವರ ಚೆಂಡೆಯ ಉರುಳಿಕೆಯ ಶುದ್ಧತೆಗೆ ಮತ್ತು ಸೌಂದರ್ಯಕ್ಕೆ ಮದ್ದಳೆಗಾರರ ಸದಸ್ಸಿನಲ್ಲಿ ವಿಶೇಷ ಗೌರವವಿದೆ. ಧುತಗತಿಯ ಮಾರವಿ ಏಕ ತಾಳದ ಬಿಡಿತದಲ್ಲಿ ಬರುವ ಉರುಳಿಕೆಯಲ್ಲಿ ಅವರು ತೋರುವ ದ್ವಿ ಕಾಲದ ಉರುಳಿಕೆ ಕೊಡುವ ಸಂತೋಷ ಇದೆಯಲ್ಲ ಅದು ಅನುಭವ ವೇದ್ಯ.’ ಸುಭಗ ಸಂವಹನಕ್ಕೆ ಅನುಕೂಲವಾಗುವಂತೆ ಈ ವಾಕ್ಯಗಳಲ್ಲಿ ಅಗತ್ಯವಿದ್ದ ಕಡೆ ಅಲ್ಪವಿರಾಮ ಚಿಹ್ನೆಗಳು ಬೇಕಿದ್ದವು. ‘ಕಚ್ಚಿ’, ‘ಹೊಮ್ಮುವಿಕೆ’, ‘ಉರುಳಿಕೆ’, ‘ಸದಸ್ಸು’, ‘ಬಿಡಿತ’ ಇತ್ಯಾದಿ ಪದಗಳಿಗೆ ಸುಲಭಗ್ರಾಹ್ಯವಾದ ಪರ್ಯಾಯ ಶಬ್ದಗಳಿಲ್ಲದಿದ್ದಲ್ಲಿ ಇವುಗಳನ್ನು ವಿವರಿಸಬಹುದಿತ್ತು. ಕೊನೆಯಲ್ಲಿ ಶಬ್ದಾರ್ಥಗಳ ಒಂದು ಪಟ್ಟಿ ಕೊಟ್ಟಿದ್ದರೆ ಇನ್ನೂ ಹೆಚ್ಚು ಪ್ರಯೋಜನವಾಗುತ್ತಿತ್ತು.

ಸಂಗೀತ ಅನಿರ್ವಚನೀಯವಷ್ಟೆ. ಇದಕ್ಕೆ ಚೆಂಡೆ-ಮದ್ದಳೆಯೂ ಹೊರತಲ್ಲ. ವಿದ್ವಾಂಸ ಎಂ.ಎ.ಹೆಗಡೆಯವರು ಹೇಳಿರುವಂತೆ, ‘ಚೆಂಡೆ-ಮದ್ದಲೆಗಳ ನಾದಸೌಂದರ್ಯವನ್ನು ಸವಿಯುತ್ತೇವೆ; ಚಪ್ಪಾಳೆ ತಟ್ಟುತ್ತೇವೆ; ತಲೆದೂಗುತ್ತೇವೆ; ಉದ್ಗಾರವನ್ನು ಹೊರಡಿಸುತ್ತೇವೆ. ಆದರೆ ಮಾತಿನಲ್ಲಿ ವಾದನದ ಸ್ವಾರಸ್ಯವನ್ನು ಸೆರೆ ಹಿಡಿಯಲು ಸೋಲುತ್ತೇವೆ. ಹಾಗಾಗಿ ವಾದನಗಳ ಬಗೆಗಾಗಲಿ, ವಾದಕರ ಬಗೆಗಾಗಲಿ ಬಂದ ಬರಹಗಳು ಕಡಿಮೆ. ಬಂದವುಗಳಲ್ಲಿಯೂ ಕೌಶಲದ ಸ್ವರೂಪವನ್ನು ವಿಶ್ಲೇಷಿಸುವ ಪ್ರಯತ್ನ ತೀರ ವಿರಳ.’

‘ಸುಘಾತ’ ಅಂಥ ವಿರಳ ಕೃತಿಯಾಗಿರುವುದರಿಂದಲೇ ಅದಕ್ಕೆ ವಿಶೇಷ ಮಹತ್ವ. ನನಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ಇಂಥ ಪುಸ್ತಕ ಬಹುಶಃ ಇದೊಂದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT