ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಯೇಸು ಕಥಾಸಾರ

Last Updated 31 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಫರ್ಡಿನಂಡ್ ಕಿಟೆಲ್ ಎಂದಾಕ್ಷಣ ಕನ್ನಡಿಗರ ಮನದಲ್ಲಿ ಮೂಡುವುದು ಅವರ ಕನ್ನಡ–ಇಂಗ್ಲಿಷ್ ನಿಘಂಟು. ಅವರನ್ನು ನಿಘಂಟು ರಚಕರೆಂದಷ್ಟೇ ಪರಿಗಣಿಸಿರುವುದೂ ಇಲ್ಲದಿಲ್ಲ. ಅದರಿಂದಾಚೆಗೆ ಅವರು ವಯ್ಯಾಕರಣಿ, ಸಾಹಿತ್ಯ ಚರಿತ್ರೆಕಾರ, ಗ್ರಂಥ ಸಂಪಾದನಕಾರ, ಸೃಜನಶೀಲ ಕವಿ, ಅನುವಾದಕ, ಶಾಸನ ತಜ್ಞ, ಸಾಂಸ್ಕೃತಿ ಚಿಂತಕ, ಸಂಗೀತಜ್ಞ, ಮಿಗಿಲಾಗಿ ಭಾರತೀಯ ಚಿಂತನೆಯನ್ನು ನಮ್ಮ ನೆಲದಲ್ಲಿ ಬಿತ್ತಿದ ಮಹಾನ್ ಚೇತನ ಎಂಬುದನ್ನು ಧ್ವನಿಸುತ್ತದೆ ಈ ಪುಸ್ತಕ.ಫರ್ಡಿನೆಂಡ್ ಕಿಟೆಲ್‌ರ ಅಪ್ರಕಟಿತ ಕೃತಿ ಕ್ರಿಸ್ತ ಕಥನ ಕಾವ್ಯವನ್ನು ಡಾ.ಎ.ವಿ.ನಾವಡ ಸಂಪಾದಿಸಿದ್ದಾರೆ.

ಇದು ಬೈಬಲ್ ಕಥಾಸೂತ್ರ ಬಳಸಿ ಬರೆದ ಸ್ವತಂತ್ರ ಕಾವ್ಯ. ಯೇಸುವಿನ ಬದುಕಿನ ಸುತ್ತ ಹೆಣೆದ ಕಥೆಗಳೇ ಇದರ ಸಾರ. ಮೂಲ ಬೈಬಲ್ ಇದಕ್ಕೆ ಆಕರವಷ್ಟೆ. ಅದಕ್ಕಿಂತ ತುಸು ಭಿನ್ನವಾದ, ಸ್ಥಳೀಯ ದೇಸೀ ಭಾಷಾ ಸೊಗಡನ್ನು ಬಳಸಿ ಜನಸಾಮಾನ್ಯರಿಗೆ ಅದರಲ್ಲೂ ಕ್ರೈಸ್ತೇತರರಿಗೆ ನಿಲುಕುವಂತಹ, ಸರಳವಾಗಿ ಅರ್ಥೈಸಿಕೊಳ್ಳಲು ನೆರವಾಗುವಂತಹ ಅಕ್ಷರ ರೂಪ ಪುಸ್ತಕದ ವಿಶೇಷೆ. ಜರ್ಮನಿಯ ಬಾಸೆಲ್ ಮಿಷನ್, ಧರ್ಮ ಪ್ರಚಾರದ ಏಕೈಕ ಕಾರಣಕ್ಕೆ ಕಿಟೆಲ್‌ರನ್ನು ಭಾರತಕ್ಕೆ ಕಳುಹಿಸಿತ್ತು. ಆದರೆ ಕಿಟೆಲ್ ಇದಕ್ಕೆ ವಿರುದ್ಧವಿದ್ದರು. ಧರ್ಮಾದಂತೆ, ಮತಪ್ರಚಾರ ಸಲ್ಲ; ಸುವಾರ್ತಾ ಪ್ರಚಾರಕ್ಕೆ ಭಾರತೀಯರೊಳಗೆ ಒಬ್ಬನಾಗಬೇಕೆಂಬ ತತ್ವಕ್ಕೆ ಅಂಟಿ, ಅಪ್ಪಟ ಕನ್ನಡಿಗರಾಗಲು ಹವಣಿಸಿದವರು. ಅಂತೆಯೇ ಕನ್ನಡ ಸಾಹಿತ್ಯ, ಕೃತಿ, ಕವಿ, ಗದ್ಯ–ಪದ್ಯಗಳನ್ನು ಆಳವಾಗಿ ಅಭ್ಯಸಿಸಿದರು. ಪರಿಣಾಮ ಅವರ ಈ ಕಥಾಮಾಲೆಯಲ್ಲಿ ಕನ್ನಡ ಕಾವ್ಯದ ಬಹುಪಾಲು ಲಕ್ಷಣಗ‌ಳು ಮೇಳೈಸಿವೆ.

ಕಿಟೆಲ್‌ರ ಈ ಕಥಾಮಾಲೆ ‘ಆಧುನಿಕ ಕನ್ನಡದ ಮೊತ್ತಮೊದಲ ಖಂಡಕಾವ್ಯ’ ಎಂಬ ಡಾ. ಶ್ರೀನಿವಾಸ ಹಾವನೂರರ ಮಾತು ಉಲ್ಲೇಖಾರ್ಹ. ಯೇಸುಕ್ರಿಸ್ತನ ಜನನದಿಂದ ಹಿಡಿದು ದಿವಾರೋಹಣದವರೆಗಿನ ಕಥೆ ಈ ಕಾವ್ಯದಲ್ಲಿ ಬಿತ್ತರಗೊಂಡಿದೆ. ಕಥಾಮಾಲೆಯೊಳಗೆ ಒಟ್ಟು 453 ಒಳಭಾಗಗಳಿದ್ದು 206 ಭಾಮಿನಿ ಷಟ್ಪದಿ, 73 ವಾರ್ಧಕ ಷಟ್ಪದಿ ಹಾಗೂ 174 ಪೂರ್ವರಾಗ, ಮಟ್ಟತಾಳದಲ್ಲಿ ರಚನೆಯಾದ ಕೀರ್ತನೆಯ ರೂಪದ ಹಾಡುಗಳಿವೆ. ಕಿಟೆಲ್‌ರನ್ನು ಅರಿಯುವಲ್ಲಿ ನೆರವಾಗುವ ಉಪಯುಕ್ತವಾದ ಹಾಗೂ ಇಂದಿನ ಪೀಳಿಗೆ ಓದಲೇಬೇಕಾದ ಕೃತಿಯಿದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT